[1] ಆತನು ಸಬ್ಬತ್ ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಿದ್ದರು.
[2] ಆಗ ಯೇಸು ತನ್ನೆದುರಿಗೆ ಜಲೋದರವುಳ್ಳ ಒಬ್ಬ ಮನುಷ್ಯನಿರುವುದನ್ನು ನೋಡಿ,
[3] “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಸರಿಯೋ ಅಥವಾ ಸರಿಯಲ್ಲವೋ?” ಎಂದು ಧರ್ಮೋಪದೇಶಕರನ್ನೂ ಫರಿಸಾಯರನ್ನೂ ಕೇಳಿದನು.
[4] ಅವರು ಸುಮ್ಮನೇ ಇರಲು ಆತನು ಅವನ ಕೈ ಹಿಡಿದು ಅವನನ್ನು ವಾಸಿಮಾಡಿ ಕಳುಹಿಸಿ,
[5] “ನಿಮ್ಮಲ್ಲಿ ಯಾವನೊಬ್ಬನ ಮಗನಾಗಲಿ ಎತ್ತಾಗಲಿ ಬಾವಿಯಲ್ಲಿ ಬಿದ್ದರೆ ಅವನು ತಡಮಾಡದೆ ಸಬ್ಬತ್ ದಿನದಲ್ಲಾದರೂ ಮೇಲಕ್ಕೆ ತೆಗೆಯುವುದಿಲ್ಲವೇ?” ಎಂದು ಅವರನ್ನು ಕೇಳಿದನು.
[6] ಅವರು ಅದಕ್ಕೆ ಉತ್ತರಕೊಡಲಾರದೆ ಇದ್ದರು.
[7] ಊಟಕ್ಕೆ ಕರಿಸಿಕೊಂಡವರು ಪಂಕ್ತಿಯ ಮುಖ್ಯ ಸ್ಥಾನವನ್ನು ಆರಿಸಿಕೊಳ್ಳುವುದನ್ನು ನೋಡಿ ಯೇಸು ಒಂದು ಸಾಮ್ಯವನ್ನು ಹೇಳಿದನು.
[8] ಅದೇನೆಂದರೆ, “ಯಾವನಾದರೂ ನಿನ್ನನ್ನು ಮದುವೆ ಊಟಕ್ಕೆ ಕರೆದರೆ ಪಂಕ್ತಿಯೊಳಗೆ ಮುಖ್ಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಒಂದು ವೇಳೆ ನಿನಗಿಂತ ಗೌರವವುಳ್ಳವನನ್ನು ಅವನು ಕರೆದಿರಬಹುದು
[9] ಮತ್ತು ನಿನ್ನನ್ನೂ ಅವನನ್ನೂ ಕರೆದವನು ಬಂದು, ‘ಇವನಿಗೆ ಸ್ಥಳ ಬಿಡು’ ಎಂದು ನಿನಗೆ ಹೇಳುವಾಗ ನೀನು ನಾಚಿಕೊಂಡು ಕಡೆಯ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ಹೋಗುವಿ.
[10] ಆದರೆ ಯಾವನಾದರೂ ನಿನ್ನನ್ನು ಕರೆದಾಗ ನೀನು ಹೋಗಿ ಕಡೆಯ ಸ್ಥಾನದಲ್ಲಿ ಕುಳಿತುಕೋ. ಹೀಗೆ ಮಾಡಿದರೆ ನಿನ್ನನ್ನು ಕರೆದವನು ಬಂದು ನಿನ್ನನ್ನು ನೋಡಿ, ‘ಸ್ನೇಹಿತನೇ, ಇನ್ನೂ ಮೇಲಕ್ಕೆ ಬಾ’ ಅನ್ನುವನು. ಆಗ ನಿನ್ನ ಸಂಗಡ ಕುಳಿತಿರುವವರೆಲ್ಲರ ಮುಂದೆ ನಿನಗೆ ಗೌರವ ದೊರಕುವುದು.
[11] ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.
[12] ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನೆಂದರೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ, ನಿನ್ನ ಅಣ್ಣತಮ್ಮಂದಿರನ್ನಾಗಲಿ, ನಿನ್ನ ಬಂಧುಬಾಂಧವರನ್ನಾಗಲಿ, ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವುದು.
[13] ಆದರೆ ನೀನು ಔತಣ ಮಾಡಿಸುವಾಗ ಬಡವರು, ಅಂಗಹೀನವಾದವರು, ಕುಂಟರು, ಕುರುಡರು ಇಂಥವರನ್ನು ಕರೆ,
[14] ಆಗ ನೀನು ಧನ್ಯನಾಗುವಿ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ನೀತಿವಂತರು ಪುನರುತ್ಥಾನ ಹೊಂದುವಾಗ ನಿನಗೆ ಪ್ರತಿಫಲ ದೊರಕುವುದು.”
[15] ಊಟಕ್ಕೆ ಕುಳಿತವರಲ್ಲಿ ಒಬ್ಬನು ಈ ಮಾತುಗಳನ್ನು ಕೇಳಿ, “ದೇವರ ರಾಜ್ಯದಲ್ಲಿ ಊಟಮಾಡುವವನೇ ಧನ್ಯನು” ಎಂದು ಹೇಳಲು,
[16] ಯೇಸು ಅವನಿಗೆ ಹೇಳಿದ್ದೇನಂದರೆ, “ಒಬ್ಬ ಮನುಷ್ಯನು ಮಹಾ ಔತಣ ಮಾಡಿಸಿ ಅನೇಕರನ್ನು ಆಮಂತ್ರಿಸಿದನು.
[17] ಊಟವು ಸಿದ್ಧವಾದಾಗ, ಅವನು ಊಟಕ್ಕೆ ಆಹ್ವಾನಿಸಲ್ಪಟ್ಟವರ ಬಳಿಗೆ ಬಂದು, ‘ಈಗ ಔತಣವು ಸಿದ್ಧವಾಗಿದೆ ಊಟಕ್ಕೆ ಬರಬೇಕು’ ಎಂದು ಹೇಳುವುದಕ್ಕೆ ತನ್ನ ಆಳನ್ನು ಕಳುಹಿಸಿದನು.
[18] ಆದರೆ ಅವರೆಲ್ಲರೂ ಒಂದೇ ಮನಸ್ಸಿನಿಂದ ನೆವ ಹೇಳುವುದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ, ‘ನಾನು ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ, ಅದನ್ನು ಹೋಗಿ ನೋಡಬೇಕಾಗಿದೆ. ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು.
[19] ಮತ್ತೊಬ್ಬನು, ‘ನಾನು ಐದು ಜೋಡಿ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವುದಕ್ಕೆ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು.
[20] ಇನ್ನೊಬ್ಬನು, ‘ನಾನು ಮದುವೆಮಾಡಿಕೊಂಡಿದ್ದೇನೆ, ಆದುದರಿಂದ ನಾನು ಬರುವುದಕ್ಕಾಗುವುದಿಲ್ಲ’ ಅಂದನು.
[21] ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೆಯ ಯಜಮಾನನು ಸಿಟ್ಟುಗೊಂಡು ಆಳಿಗೆ, ‘ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು, ಅಂಗಹೀನರು, ಕುರುಡರು, ಕುಂಟರು, ಇಂಥವರನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.
[22] ಬಳಿಕ ಆ ಆಳು, ‘ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು. ಆದರೂ ಇನ್ನೂ ಸ್ಥಳ ಉಳಿದಿದೆ’ ಅಂದನು.
[23] ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದೇನೆಂದರೆ, ‘ನೀನು ಹಾದಿಗಳಿಗೂ ಬೀದಿಗಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರೆದುಕೊಂಡು ಬಾ, ನನ್ನ ಮನೆ ತುಂಬಲಿ.
[24] ಆದರೆ ಔತಣಕ್ಕೆ ಮೊದಲು ಆಮಂತ್ರಿಸಲ್ಪಟ್ಟವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ರುಚಿಯನ್ನು ಸವಿಯಬಾರದು’ ಎಂದು ನಿಮಗೆ ಹೇಳುತ್ತೇನೆ” ಅಂದನು.
[25] ಬಹು ಜನರು ಗುಂಪುಗುಂಪಾಗಿ ಯೇಸುವಿನ ಸಂಗಡ ಹೋಗುತ್ತಾ ಇರಲು ಆತನು ತಿರುಗಿಕೊಂಡು ಅವರಿಗೆ ಹೇಳಿದ್ದೇನಂದರೆ,
[26] “ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
[27] ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.
[28] ನಿಮ್ಮಲ್ಲಿ ಯಾವನಾದರೂ ಒಂದು ಗೋಪುರವನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕುಳಿತುಕೊಂಡು, ಅದಕ್ಕೆ ಎಷ್ಟು ಖರ್ಚು ಆದೀತು, ಅದನ್ನು ತೀರಿಸುವುದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಇದೆಯೋ ಎಂದು ಲೆಕ್ಕಮಾಡುವುದಿಲ್ಲವೇ?
[29] ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು,
[30] ‘ಈ ಮನುಷ್ಯನು ಕಟ್ಟಿಸುವುದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆ ಹೋದನು’ ಎಂದು ಅವನನ್ನು ಹಾಸ್ಯಮಾಡಾರು.
[31] ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವುದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವುದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕುಳಿತುಕೊಂಡು ಆಲೋಚಿಸುವುದಿಲ್ಲವೇ?
[32] ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಮಾಡಿಕೊಳ್ಳುವನು.
[33] ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವುದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.
[34] “ಉಪ್ಪಂತೂ ಒಳ್ಳೆಯ ಪದಾರ್ಥವೇ. ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ರುಚಿಬರಿಸಲು ಸಾಧ್ಯ?
[35] ಅದು ಭೂಮಿಗಾದರೂ ತಿಪ್ಪೆಗಾದರೂ ಉಪಯೋಗಕ್ಕೆ ಬರುವುದಿಲ್ಲ, ಅದನ್ನು ಹೊರಗೆ ಬಿಸಾಡುತ್ತಾರೆ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.