Skip to content
Opens in a new window
Listen to this chapter • 6:56

[1] ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಕಾಣಿಕೆಯ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡನು.

[2] ಆಗ ಒಬ್ಬ ಬಡ ವಿಧವೆಯು ಬಂದು ತಾಮ್ರದ ಚಿಕ್ಕ ನಾಣ್ಯಗಳನ್ನು ಹಾಕುವುದನ್ನು ಯೇಸು ಗಮನಿಸಿ,

[3] “ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ.

[4] ಹೇಗೆಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆ ಕೊಟ್ಟರು. ಈಕೆಯೋ ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕಿದ್ದುದ್ದೆಲ್ಲವನ್ನೂ ಕೊಟ್ಟುಬಿಟ್ಟಳು” ಅಂದನು.

[5] ಕೆಲವರು ದೇವಾಲಯದ ವಿಷಯದಲ್ಲಿ ಅದು ಅಂದವಾದ ಕಲ್ಲುಗಳಿಂದಲೂ ಕಾಣಿಕೆಯ ವಸ್ತುಗಳಿಂದಲೂ ಅಲಂಕಾರವಾಗಿದೆ ಎಂದು ಹೇಳುತ್ತಿರುವಾಗ,

[6] ಯೇಸು, “ನೀವು ಇವುಗಳನ್ನು ನೋಡುತ್ತಿದ್ದೀರಲ್ಲಾ, ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿನಗಳು ಬರುವವು” ಅಂದನು.

[7] ಅವರು, “ಬೋಧಕನೇ, ಅದು ಯಾವಾಗ ಆಗುವುದು? ಅದು ಸಂಭವಿಸುವಾಗ ಯಾವ ಸೂಚನೆಗಳುಂಟಾಗುವುವು?” ಎಂದು ಆತನನ್ನು ಕೇಳಲು,

[8] ಯೇಸು ಹೇಳಿದ್ದೇನಂದರೆ, “ನೀವು ಮೋಸಹೋಗದಂತೆ ಎಚ್ಚರವಾಗಿರಿ. ಏಕೆಂದರೆ ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು ‘ನಾನೇ ಕ್ರಿಸ್ತನು, ನಾನೇ ಕ್ರಿಸ್ತನು’ ಎಂತಲೂ ‘ಆ ಕಾಲ ಹತ್ತಿರವಾಯಿತು’ ಎಂತಲೂ ಹೇಳುವರು. ಅವರ ಹಿಂದೆ ಹೋಗಬೇಡಿರಿ.

[9] ಇದಲ್ಲದೆ ಯುದ್ಧಗಳೂ ಗಲಭೆಗಳೂ ಆಗುವುದನ್ನು ನೀವು ಕೇಳುವಾಗ, ನೋಡುವಾಗ ಭಯಭೀತರಾಗಬೇಡಿರಿ, ಏಕೆಂದರೆ ಇದೆಲ್ಲಾ ಮೊದಲು ಆಗುವುದು ಅಗತ್ಯ. ಆದರೂ ಕೂಡಲೆ ಅಂತ್ಯ ಬರುವುದಿಲ್ಲ” ಅಂದನು.

[10] ಮತ್ತು ಯೇಸು ಅವರಿಗೆ ಹೇಳಿದ್ದೇನಂದರೆ, “ಜನಕ್ಕೆ ವಿರೋಧವಾಗಿ ಜನರೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.

[11] ಮತ್ತು ಮಹಾಭೂಕಂಪಗಳಾಗುವವು, ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು, ಭಯಾನಕ ಘಟನೆಗಳೂ ಮಹಾ ಸೂಚನೆಗಳೂ ಆಕಾಶದಲ್ಲಿ ತೋರುವವು.

[12] ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು, ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು.

[13] ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು.

[14] ಆದುದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನೀವು ಮುಂದಾಗಿ ಯೋಚಿಸುವುದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ.

[15] ಏಕೆಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರು ನಿಲ್ಲುವುದಕ್ಕೂ ಎದುರು ಮಾತನಾಡುವುದಕ್ಕೂ ಆಗದಂಥ ಬಾಯನ್ನೂ, ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ.

[16] ಆದರೆ ತಂದೆತಾಯಿಗಳೂ, ಅಣ್ಣತಮ್ಮಂದಿರೂ, ಬಂಧುಬಾಂಧವರೂ. ಸ್ನೇಹಿತರೂ ನಿಮ್ಮನ್ನು ಅವರಿಗೆ ಒಪ್ಪಿಸಿಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು.

[17] ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.

[18] ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವುದಿಲ್ಲ.

[19] ನೀವು ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡೆದುಕೊಳ್ಳುವಿರಿ.

[20] “ಆದರೆ ಸೈನಿಕರ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವುದನ್ನು ನೀವು ಕಾಣುವಾಗ ಅದು ನಾಶವಾಗುವ ಕಾಲ ಸಮೀಪವಾಯಿತೆಂದು ತಿಳಿದುಕೊಳ್ಳಿರಿ.

[21] ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ. ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.

[22] ಏಕೆಂದರೆ ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಅವು ದಂಡನೆಯ ದಿನಗಳಾಗಿವೆ.

[23] ಆ ದಿನಗಳಲ್ಲಿ ಗರ್ಭಿಣಿಯರಿಗೂ ಬಾಣಂತಿಯರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರ ಮೇಲೆ ಕ್ರೋಧವು ಉಂಟಾಗುವವು.

[24] ಅವರು ಕತ್ತಿಯ ಬಾಯಿಗೆ ಗುರಿಯಾಗುವರು. ಅವರು ಸೆರೆಯಾಗಿ ಅನ್ಯದೇಶಗಳಿಗೆಲ್ಲಾ ಹಿಡಿದುಕೊಂಡು ಹೋಗುವರು. ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವುದು.

[25] “ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೋರ್ಗರೆಯುವ ಸಮುದ್ರ ಮತ್ತು ಅಲೆಗಳ ಘೋಷದ ನಿಮಿತ್ತವಾಗಿ ಭೂಮಿಯ ಮೇಲೆ ಜನಗಳಿಗೆ ದಿಕ್ಕುಕಾಣದೆ ಸಂಕಟವು ಉಂಟಾಗುವುದು.

[26] ಆಕಾಶದ ಶಕ್ತಿಗಳು ಕದಲುವುದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವುದೋ ಎಂದು ಎದುರು ನೋಡುತ್ತಾ ಪ್ರಾಣಹೋದಂತಾಗುವರು.

[27] ಆಗ ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಕಾಣುವರು.

[28] ಆದರೆ ಇವು ಸಂಭವಿಸುವುದಕ್ಕೆ ತೊಡಗುವಾಗ, ನಿಮ್ಮ ತಲೆಯೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗಿದೆ” ಅಂದನು.

[29] ಯೇಸು ಅವರಿಗೆ ಒಂದು ಸಾಮ್ಯವಾಗಿ ಹೇಳಿದ್ದೇನಂದರೆ, “ಅಂಜೂರ ಮುಂತಾದ ಮರಗಳನ್ನೂ ನೋಡಿರಿ.

[30] ಅವು ಚಿಗುರಿದ ಕೂಡಲೆ ನೀವು ಅವನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳಿದುಕೊಳ್ಳುತ್ತೀರಲ್ಲಾ.

[31] ಹಾಗೆಯೇ ಇವುಗಳಾಗುವುದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳಿರಿ.

[32] “ಇವೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[33] ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.

[34] “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. ಅತಿ ಭೋಜನದ ಮದದಿಂದಲೂ, ಅಮಲಿನಿಂದಲೂ, ಪ್ರಾಪಂಚಿಕವಾದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿನವು ನಿಮ್ಮ ಮೇಲೆ ಉರುಲಿನಂತೆ ಫಕ್ಕನೆ ಬಂದೀತು.

[35] ಆ ದಿನವು ಭೂನಿವಾಸಿಗಳೆಲ್ಲರ ಮೇಲೆ ಬರುವುದು.

[36] ಆದರೆ ಅಂದು ಬರುವುದಕ್ಕಿರುವ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳುವುದಕ್ಕೂ, ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವುದಕ್ಕೂ, ನೀವು ಪೂರ್ಣ ಶಕ್ತರಾಗುವಂತೆ, ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರಿ” ಅಂದನು.

[37] ಯೇಸು ಹಗಲಿನಲ್ಲಿ ದೇವಾಲಯದಲ್ಲಿ ಉಪದೇಶಮಾಡುತ್ತಾ, ರಾತ್ರಿ ಪಟ್ಟಣದ ಹೊರಗೆ ಹೋಗಿ ಎಣ್ಣೆ ಮರಗಳ ತೋಪು ಎನಿಸಿಕೊಳ್ಳುವ ಗುಡ್ಡದಲ್ಲಿ ರಾತ್ರಿಯನ್ನು ಕಳೆಯುತ್ತಾ ಇದ್ದನು.

[38] ಜನರೆಲ್ಲರು ಆತನ ಉಪದೇಶವನ್ನು ಕೇಳಬೇಕೆಂದು ಬೆಳಗ್ಗೆ ಬೇಗನೆ ಎದ್ದು ದೇವಾಲಯಕ್ಕೆ ಆತನ ಬಳಿಗೆ ಬರುತ್ತಿದ್ದರು.

ಲೂಕನು — Chapters