[1] ಆ ದಿನಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮುಖ್ಯಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಸಿಕೊಂಡು ಫಕ್ಕನೆ ಬಂದು,
[2] “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ಹೇಳು” ಎಂದು ಆತನನ್ನು ಕೇಳಲು,
[3] ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ನನಗೆ ಹೇಳಿರಿ.
[4] ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಎಂದು ಅವರನ್ನು ಕೇಳಿದನು.
[5] ಆಗ ಅವರು, “‘ಪರಲೋಕದಿಂದ ಬಂದಿತೆಂದು ನಾವು ಹೇಳಿದರೆ ಮತ್ತೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು,
[6] ಮನುಷ್ಯರಿಂದ ಬಂದಿತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು’” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡು,
[7] ಅದು ಎಲ್ಲಿಂದ ಬಂದಿತೋ ನಾವರಿಯೆವು ಎಂದು ಉತ್ತರಕೊಟ್ಟರು.
[8] ಆಗ ಯೇಸು ಅವರಿಗೆ, “ಇದನ್ನೆಲ್ಲಾ ಯಾವ ಅಧಿಕಾರದಿಂದ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವುದಿಲ್ಲ” ಎಂದು ಹೇಳಿದನು.
[9] ಆಗ ಆತನು ಜನರಿಗೆ ಒಂದು ಸಾಮ್ಯವನ್ನು ಹೇಳುವುದಕ್ಕೆ ತೊಡಗಿದನು. ಅದೇನೆಂದರೆ, “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ, ಆದನ್ನು ಒಕ್ಕಲಿಗರಿಗೆ ಗುತ್ತಿಗೆಗೆ ಕೊಟ್ಟು, ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು.
[10] ಫಲಕಾಲ ಬಂದಾಗ ದ್ರಾಕ್ಷಿಯ ತೋಟದ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಆಳನ್ನು ಒಕ್ಕಲಿಗರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು.
[11] ಆ ಧಣಿಯು ಬೇರೊಬ್ಬ ಆಳನ್ನು ಕಳುಹಿಸಲಾಗಿ ಅವರು ಅವನನ್ನೂ ಹೊಡೆದು ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.
[12] ಆ ಮೇಲೆ ಮೂರನೆಯವನನ್ನು ಕಳುಹಿಸಲು ಅವರು ಅವನನ್ನೂ ಗಾಯಗೊಳಿಸಿ ಹೊರಕ್ಕೆ ಅಟ್ಟಿದರು.
[13] ಆಗ ಆ ದ್ರಾಕ್ಷಿಯ ತೋಟದ ಧಣಿಯು, ‘ನಾನೇನು ಮಾಡಲಿ? ನನ್ನ ಮುದ್ದುಮಗನನ್ನು ಕಳುಹಿಸುತ್ತೇನೆ, ಒಂದು ವೇಳೆ ಅವನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡನು.
[14] ಆದರೆ ಆ ಒಕ್ಕಲಿಗರು ದ್ರಾಕ್ಷಿಯ ತೋಟದ ಯಜಮಾನನ ಮಗನನ್ನು ಕಂಡು, ‘ಇವನೇ ಬಾಧ್ಯಸ್ಥನು; ಇವನನ್ನು ಕೊಂದು ಹಾಕೋಣ, ಇವನ ಪಿತ್ರಾರ್ಜಿತವೆಲ್ಲಾ ನಮ್ಮದಾಗುವುದು’ ಎಂದು ಒಬ್ಬರ ಸಂಗಡಲೊಬ್ಬರು ಮಾತನಾಡಿಕೊಂಡು,
[15] ಅವನನ್ನು ದ್ರಾಕ್ಷಿಯ ತೋಟದಿಂದ ಹೊರಕ್ಕೆ ದೊಬ್ಬಿ, ಕೊಂದು ಹಾಕಿದರು. ಹಾಗಾದರೆ ದ್ರಾಕ್ಷಿಯ ತೋಟದ ಧಣಿಯು ಅವರಿಗೆ ಏನು ಮಾಡಿಯಾನು?
[16] ಅವನು ಬಂದು ಆ ಒಕ್ಕಲಿಗರನ್ನು ಸಂಹರಿಸಿ ತನ್ನ ತೋಟವನ್ನು ಬೇರೆ ಜನರಿಗೆ ಮಾಡುವುದಕ್ಕೆ ಕೊಡುವನು” ಅಂದನು. ಇದನ್ನು ಜನರು ಕೇಳಿ, “ಹಾಗಾಗಬಾರದು” ಅಂದರು.
[17] ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, ಹಾಗಾದರೆ “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು’ ಎಂದು ಬರೆದಿರುವ ಮಾತೇನು?
[18] “ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ಯಾರ ಮೇಲೆ ಬೀಳುವುದೋ ಅದು ಅವನನ್ನು ಪುಡಿಪುಡಿ ಮಾಡುವುದು” ಅಂದನು.
[19] ಶಾಸ್ತ್ರಿಗಳೂ ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದನು ಎಂದು ತಿಳಿದುಕೊಂಡು ಅದೇ ಗಳಿಗೆಯಲ್ಲಿ ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡಿದರು. ಆದರೆ ಜನರಿಗೆ ಭಯಪಟ್ಟರು.
[20] ಆಮೇಲೆ ಅವರು ಯೇಸುವನ್ನು ಅಧಿಪತಿಯ ವಶಕ್ಕೂ ಅಧಿಕಾರಿಗಳಿಗೂ ಒಪ್ಪಿಸಬೇಕೆಂದು ಹೊಂಚು ಹಾಕುತ್ತಾ, ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನ ಮಾತಿನಲ್ಲಿ ಏನನ್ನಾದರೂ ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ (ಆತನ ಬಳಿಗೆ) ಕಳುಹಿಸಿದರು.
[21] ಗೂಢಚಾರರು, “ಬೋಧಕನೇ, ನೀನು ಸರಿಯಾಗಿ ಮಾತನಾಡುತ್ತಾ ಉಪದೇಶಮಾಡುತ್ತೀ, ನೀನು ಮುಖದಾಕ್ಷಿಣ್ಯವಿಲ್ಲದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದು ಬಲ್ಲೆವು.
[22] ಕೈಸರನಿಗೆ ಕಂದಾಯ ಕೊಡುವುದು ಸರಿಯೋ ಸರಿಯಲ್ಲವೋ?” ಎಂದು ಆತನನ್ನು ಕೇಳಿದರು.
[23] ಯೇಸು ಅವರ ಕುಯುಕ್ತಿಯನ್ನು ಅರಿತುಕೊಂಡು,
[24] ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಇದರಲ್ಲಿ ಯಾರ ತಲೆ ಹಾಗು ಮುದ್ರೆಯದೆ?” ಎಂದು ಕೇಳಿದ್ದಕ್ಕೆ ಅವರು, “ಕೈಸರನದು” ಅಂದರು.
[25] ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.
[26] ಯೇಸು ಜನರ ಮುಂದೆ ಹೇಳಿದ ಮಾತಿನಲ್ಲಿ ಅವರು ಯಾವ ತಪ್ಪನ್ನೂ ಹಿಡಿಯಲಾಗದೆ, ಆತನು ಕೊಟ್ಟ ಉತ್ತರಕ್ಕೆ ಆಶ್ಚರ್ಯಪಟ್ಟು ಸುಮ್ಮನಾದರು.
[27] ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವವರಾದ ಸದ್ದುಕಾಯರಲ್ಲಿ ಕೆಲವರು ಬಂದು ಆತನಿಗೆ ಪ್ರಶ್ನೆಮಾಡಿದ್ದೇನಂದರೆ,
[28] “ಬೋಧಕನೇ, ಅಣ್ಣನಾದವನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ತಮ್ಮನು ಆಕೆಯನ್ನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ.
[29] ಒಳ್ಳೆಯದು, ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು.
[30] ಎರಡನೆಯವನೂ ಅವನ ತರುವಾಯ ಮೂರನೆಯವನೂ ಆಕೆಯನ್ನು ಮದುವೆಮಾಡಿಕೊಂಡರು. ಇದೇ ರೀತಿಯಾಗಿ ಏಳು ಮಂದಿಯೂ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು.
[32] ಕಡೆಯಲ್ಲಿ ಆ ಹೆಂಗಸೂ ಸತ್ತಳು.
[33] ಹಾಗಾದರೆ ಪುನರುತ್ಥಾನದಲ್ಲಿ ಆ ಸ್ತ್ರೀಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳು ಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ” ಅಂದರು.
[34] ಯೇಸು ಅವರಿಗೆ, “ಈ ಲೋಕದ ಜನರು ಮದುವೆಮಾಡಿಕೊಳ್ಳುತ್ತಾರೆ ಹಾಗೂ ಮದುವೆಮಾಡಿಕೊಡುತ್ತಾರೆ.
[35] ಆದರೆ ಮುಂಬರುವ ಲೋಕವನ್ನೂ, ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವುದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ.
[36] ಅವರು ಇನ್ನು ಮರಣಕ್ಕೆ ಗುರಿಯಾಗುವುದೇ ಇಲ್ಲ. ಏಕೆಂದರೆ ಅವರು ದೇವದೂತರಿಗೆ ಸರಿಸಮಾನರೂ, ಪುನರುತ್ಥಾನವನ್ನು ಹೊಂದಿದವರಾಗಿವುದ್ದರಿಂದ ಅವರು ದೇವರ ಮಕ್ಕಳೂ ಆಗಿರುತ್ತಾರೆ.
[37] ಸತ್ತವರು ಬದುಕಿ ಏಳುತ್ತಾರೆಂಬುದನ್ನು ಮೋಶೆಯೂ ಸೂಚಿಸಿದ್ದಾನೆ. ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಕರ್ತನನ್ನು ‘ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು’ ಎಂದು ಹೇಳಿದ್ದಾನೆ.
[38] ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ” ಎಂದು ಹೇಳಿದನು.
[39] ಶಾಸ್ತ್ರಿಗಳಲ್ಲಿ ಕೆಲವರು, “ಬೋಧಕನೇ, ಚೆನ್ನಾಗಿ ಹೇಳಿದಿ” ಅಂದರು.
[40] ಆತನನ್ನು ಇನ್ನೇನು ಕೇಳುವುದಕ್ಕೂ ಅವರಿಗೆ ಧೈರ್ಯವಿಲ್ಲದೆ ಹೋಯಿತು.
[41] ಆಗ ಯೇಸು, “ಬರಬೇಕಾದ ಕ್ರಿಸ್ತನು ದಾವೀದನ ಮಗನೆಂದು ಹೇಳುತ್ತಾರಲ್ಲಾ, ಅದು ಹೇಗಾದೀತು?
[42] “‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ಕೀರ್ತನೆಗಳ ಗ್ರಂಥದಲ್ಲಿ ದಾವೀದನೇ ಹೇಳುತ್ತಾನಲ್ಲಾ.
[44] “ದಾವೀದನು ಆತನನ್ನು ‘ಒಡೆಯನೆಂದು’ ಹೇಳಿದ ಮೇಲೆ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಅವರನ್ನು ಕೇಳಿದನು.
[45] ಜನರೆಲ್ಲರು ಕೇಳುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ,
[46] “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವುದರಲ್ಲಿ ಮನಸ್ಸುಳ್ಳವರೂ, ಅಂಗಡಿಬೀದಿಗಳಲ್ಲಿ ನಮಸ್ಕಾರಗಳು, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಔತಣಕೂಟಗಳಲ್ಲಿ ಪ್ರಥಮಸ್ಥಾನ, ಇವುಗಳನ್ನು ಬಯಸುವವರೂ ಆಗಿದ್ದಾರೆ.
[47] ಅವರು ವಿಧವೆಯರ ಮನೆಗಳನ್ನು ನುಂಗಿ, ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು” ಅಂದನು.