Skip to content
Opens in a new window
Listen to this chapter • 9:41

[1] ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಆತನನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋಗಿ,

[2] “ಇವನು ತಾನೇ ಕ್ರಿಸ್ತನು, ಅರಸನಾಗಿದ್ದೇನೆಂದು ಹೇಳುತ್ತಾ, ಕೈಸರನಿಗೆ ಸುಂಕ ಕೊಡಬಾರದೆಂದು ಬೋಧಿಸುತ್ತಾ, ನಮ್ಮ ದೇಶದವರ ಮನಸ್ಸು ಕೆಡಿಸುವುದನ್ನು ನಾವು ಕಂಡಿದ್ದೇವೆ” ಎಂಬುದಾಗಿ ಆತನ ಮೇಲೆ ದೂರು ಹೇಳುವುದಕ್ಕೆ ತೊಡಗಿದರು.

[3] ಪಿಲಾತನು ಯೇಸುವನ್ನು “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು, ಆತನು, “ನೀನೇ ಹೇಳಿದ್ದೀ” ಎಂದು ಉತ್ತರ ಕೊಟ್ಟನು.

[4] ಪಿಲಾತನು ಮುಖ್ಯಯಾಜಕರಿಗೂ, ಜನರ ಗುಂಪಿಗೂ, “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುತ್ತಿಲ್ಲವೆಂದು” ಹೇಳಿದನು.

[5] ಅದಕ್ಕೆ ಅವರು, “ಗಲಿಲಾಯದಿಂದ ಮೊದಲುಗೊಂಡು ಇಲ್ಲಿಯವರೆಗೂ ಯೂದಾಯ ಸೀಮೆಯಲ್ಲೆಲ್ಲಾ ಇವನು ಬೋಧನೆ ಮಾಡುತ್ತಾ ಜನರ ಮನಸ್ಸನ್ನು ಕದಲಿಸುತ್ತಾನೆ” ಎಂದು ಇನ್ನೂ ಒತ್ತಿ ಹೇಳಿದರು.

[6] ಇದನ್ನು ಪಿಲಾತನು ಕೇಳಿ, ಈ ಮನುಷ್ಯನು ಗಲಿಲಾಯದವನೋ ಎಂದು ವಿಚಾರಿಸಿ,

[7] ಈತನು ಹೆರೋದನ ಅಧಿಕಾರಕ್ಕೆ ಒಳಪಟ್ಟವನು ಎಂದು ತಿಳಿದುಕೊಂಡು ಯೇಸುವನ್ನು ಹೆರೋದನ ಬಳಿಗೆ ಕಳುಹಿಸಿದನು. ಹೆರೋದನು ಆ ದಿನಗಳಲ್ಲಿ ಯೆರೂಸಲೇಮಿನಲ್ಲೇ ಇದ್ದನು.

[8] ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ಕಾಣಬೇಕೆಂದು ಬಹು ಕಾಲದಿಂದ ಅಪೇಕ್ಷಿಸಿದ್ದನು. ಆತನಿಂದ ಯಾವುದಾದರೂ ಒಂದು ಸೂಚಕ ಕಾರ್ಯವಾಗುವುದನ್ನು ನೋಡಬೇಕೆಂದು ನಿರೀಕ್ಷಿಸಿದನು.

[9] ಹೆರೋದನು ಅನೇಕ ಮಾತುಗಳಿಂದ ಯೇಸುವನ್ನು ಪ್ರಶ್ನೆ ಮಾಡಿದಾಗ್ಯೂ ಆತನು ಅವನಿಗೆ ಏನೂ ಉತ್ತರ ಕೊಡಲಿಲ್ಲ.

[10] ಮುಖ್ಯಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಆತನ ಕುರಿತು ಬಹು ತೀವ್ರವಾಗಿ ಆರೋಪಿಸುತ್ತಿದ್ದರು.

[11] ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಯೇಸುವನ್ನು ಅವಮಾನಗೊಳಿಸಿ, ಅಪಹಾಸ್ಯ ಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು.

[12] ಅದೇ ದಿನ ಹೆರೋದನು ಪಿಲಾತನೂ ಒಬ್ಬರಿಗೊಬ್ಬರು ಸ್ನೇಹಿತರಾದರು. ಅದಕ್ಕಿಂತ ಮೊದಲು ಅವರಿಬ್ಬರೂ ವೈರಿಗಳಾಗಿದ್ದರು.

[13] ತರುವಾಯ ಪಿಲಾತನು ಮುಖ್ಯಯಾಜಕರನ್ನೂ, ಅಧಿಕಾರಿಗಳನ್ನೂ, ಪ್ರಜೆಗಳನ್ನೂ ಒಟ್ಟಾಗಿ ಕರೆಯಿಸಿ,

[14] ಅವರಿಗೆ, “ಈ ಮನುಷ್ಯನು ಪ್ರಜೆಗಳನ್ನು ತಿರಿಗಿ ಬೀಳುವಂತೆ ಮಾಡುವವನು ಎಂದು ಈತನನ್ನು ನನ್ನ ಬಳಿಗೆ ಕರೆತಂದಿರಲ್ಲಾ. ನೀವು ಈತನ ಮೇಲೆ ಮಾಡಿದ ದೂರುಗಳ ವಿಷಯವಾಗಿ ನಾನು ನಿಮ್ಮ ಮುಂದೆಯೇ ವಿಚಾರಣೆ ಮಾಡಿದರೂ ಈತನಲ್ಲಿ ಒಂದು ತಪ್ಪಾದರೂ ನನಗೆ ಕಾಣಲಿಲ್ಲ.

[15] ಹೆರೋದನಿಗೂ ಸಹ ಕಾಣಲಿಲ್ಲ. ಅದಕಾರಣ ಈತನನ್ನು ಹಿಂತಿರುಗಿ ನಮ್ಮ ಬಳಿಗೆ ಕಳುಹಿಸಿದನಲ್ಲಾ. ಆದುದರಿಂದ ಈತನು ಮರಣದಂಡನೆಗೆ ಯೋಗ್ಯವಾದದ್ದೇನೂ ಮಾಡಿದವನಲ್ಲವೆಂದಾಯಿತು.

[16] ಆದುದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ” ಎಂದು ಹೇಳಿದನು.

[17] (ಪ್ರತಿ ಪಸ್ಕ ಹಬ್ಬದ ಸಂದರ್ಭದಲ್ಲಿ ಪಿಲಾತನು ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವ ರೂಢಿಯಿತ್ತು.)

[18] ಆದರೆ ಅವರು, “ಅವನನ್ನು ಕೊಲ್ಲಿಸು, ನಮಗೆ ಬರಬ್ಬನನ್ನು ಬಿಟ್ಟುಕೊಡು” ಎಂದು ಒಟ್ಟಾಗಿ ಕೂಗಿಕೊಂಡರು.

[19] ಈ ಬರಬ್ಬನನ್ನು ಆ ಪಟ್ಟಣದಲ್ಲಿ ನಡೆದ ಒಂದು ದಂಗೆಯ ನಿಮಿತ್ತವಾಗಿಯೂ ಕೊಲೆಯ ನಿಮಿತ್ತವಾಗಿಯೂ ಸೆರೆಮನೆಯಲ್ಲಿ ಹಾಕಿದ್ದರು.

[20] ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿದ್ದು ಪುನಃ ಅವರ ಸಂಗಡ ಮಾತನಾಡಿದನು.

[21] ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗುತ್ತಿದ್ದರು.

[22] ಅವನು ಮೂರನೆಯ ಸಾರಿ, “ಯಾಕೆ? ಕೆಟ್ಟದ್ದೇನು ಮಾಡಿದನು? ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ ಆದುದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ” ಎಂದು ಅವರಿಗೆ ಹೇಳಿದನು.

[23] ಆದರೆ ಅವರು ಜೋರಾಗಿ ಕೂಗುತ್ತಾ, ಅವನನ್ನು ಶಿಲುಬೆಗೆ ಹಾಕಿಸಬೇಕೆಂದು ಕೇಳಿಕೊಂಡು ಬಲವಂತ ಮಾಡಿದರು. ಅವರ ಕೂಗಾಟವು ಗೆದ್ದಿತು.

[24] ಆಗ ಪಿಲಾತನು, ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿ,

[25] ದಂಗೆ ಕೊಲೆಗಳ ನಿಮಿತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು, ಯೇಸುವನ್ನು ಅವರ ಚಿತ್ತಾನುಸಾರ ದಂಡಿಸಲು ಒಪ್ಪಿಸಿದನು.

[26] ಅವರು ಯೇಸುವನ್ನು ಕರೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ, ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕರೆದು, ಶಿಲುಬೆಯನ್ನು ಅವನ ಮೇಲೆ ಹೊರಿಸಿ ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು.

[27] ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಆ ಗುಂಪಿನಲ್ಲಿ ಕೆಲವು ಸ್ತ್ರೀಯರು ಎದೆಬಡಿದುಕೊಳ್ಳುತ್ತಾ ಯೇಸುವಿಗಾಗಿ ಗೋಳಾಡುತ್ತಾ ಇದ್ದರು.

[28] ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಸ್ತ್ರೀಯರೇ ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ.

[29] ಏಕೆಂದರೆ ‘ಬಂಜೆಯರೂ, ಬಸುರಾಗದವರೂ, ಮೊಲೆಕುಡಿಸದವರೂ ಧನ್ಯರು’ ಎಂದು ಜನರು ಹೇಳುವ ದಿನಗಳು ಬರುತ್ತವೆ.

[30] ಆ ಕಾಲದಲ್ಲಿ ಜನರು, ‘ಬೆಟ್ಟಗಳೇ ನಮ್ಮ ಮೇಲೆ ಬೀಳಿರಿ. ಗುಡ್ಡಗಳೇ ನಮ್ಮನ್ನು ಮುಚ್ಚಿಕೊಳ್ಳಿರಿ’ ಅನ್ನುವರು.

[31] ಹಸಿ ಮರಕ್ಕೆ ಇಷ್ಟೆಲ್ಲಾ ಮಾಡಿದರೆ ಒಣ ಮರದ ಗತಿ ಏನಾಗಬಹುದು?” ಅಂದನು.

[32] ಆತನ ಸಂಗಡ ಶಿಲುಬೇಗೆರಿಸುವುದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ಕರೆದುಕೊಂಡು ಹೋದರು.

[33] ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಯೇಸುವನ್ನೂ ದುಷ್ಕರ್ಮಿಗಳನ್ನೂ ಶಿಲುಬೆಗೆ ಹಾಕಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯಲ್ಲಿಯೂ ಹಾಕಿದರು.

[34] ಆಗ ಯೇಸು, “ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು” ಅಂದನು. ಆ ಮೇಲೆ ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ಪಾಲು ಮಾಡಿದರು.

[35] ಜನರೆಲ್ಲರೂ ನೋಡುತ್ತಾ ನಿಂತರು. ಇದಲ್ಲದೆ ಅಧಿಕಾರಿಗಳು “ಅವನು ಮತ್ತೊಬ್ಬರನ್ನು ರಕ್ಷಿಸಿದನು, ಅವನು ದೇವರು ಆರಿಸಿಕೊಂಡ ಕ್ರಿಸ್ತನೇ ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ” ಎಂದು ಗೇಲಿಮಾಡಿದರು.

[36] ಸಿಪಾಯಿಗಳೂ ಆತನನ್ನು ಪರಿಹಾಸ್ಯ ಮಾಡಿದರು. ಅವರು ಯೇಸುವಿನ ಹತ್ತಿರ ಬಂದು ಹುಳಿಮದ್ಯವನ್ನು ನೀಡಿ,

[37] “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನು ರಕ್ಷಿಸಿಕೋ” ಅಂದರು.

[38] ಇದಲ್ಲದೆ ಆತನ ಶಿಲುಬೆಯ ಮೇಲೆ “ಇವನು ಯೆಹೂದ್ಯರ ಅರಸನು” ಎಂಬುದಾಗಿ ಲಿಖಿತವಾದ ಸೂಚನೆಯನ್ನು ಹಾಕಲಾಗಿತ್ತು.

[39] ಶಿಲುಬೇಗೆರಿಸಿದ್ದ ಆ ದುಷ್ಕರ್ಮಿಗಳಲ್ಲಿ ಒಬ್ಬನು ಯೇಸುವನ್ನು ದೂಷಿಸುತ್ತಾ, “ನೀನು ಬರಬೇಕಾದ ಕ್ರಿಸ್ತನಲ್ಲವೇ? ನಿನ್ನನ್ನು ರಕ್ಷಿಸಿಕೋ, ನಮ್ಮನ್ನು ರಕ್ಷಿಸು” ಎಂದು ಹೇಳಿದನು.

[40] ಅದಕ್ಕೆ ಎರಡನೆಯವನು ಅವನನ್ನು ಗದರಿಸಿ, “ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವುದಿಲ್ಲವೋ?

[41] ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತೇವೆ. ಈತನಾದರೋ ಅಂತಹದ್ದೇನನ್ನೂ ಮಾಡಲಿಲ್ಲ” ಎಂದು ಹೇಳಿ,

[42] “ಯೇಸುವೇ ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಪಿಸಿಕೋ” ಅಂದನು.

[43] ಅದಕ್ಕೆ ಯೇಸು, “ಈ ಹೊತ್ತೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದು ಉತ್ತರಕೊಟ್ಟನು.

[44] ಇಷ್ಟರಲ್ಲಿ ಸುಮಾರು ನಡುಮಧ್ಯಾಹ್ನವಾಯಿತು. ಸೂರ್ಯನು ಕಾಂತಿಗುಂದಿ, ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. ಇದಲ್ಲದೆ ದೇವಾಲಯದ ಪರದೆಯು ನಡುವೆ ಹರಿದು ಹೋಯಿತು.

[46] ಆ ಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂದು ಮಹಾಧ್ವನಿಯಿಂದ ಕೂಗಿದನು. ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.

[47] ಶತಾಧಿಪತಿಯು ನಡೆದ ಸಂಗತಿಯನ್ನು ನೋಡಿ, “ಈ ಮನುಷ್ಯನು ನಿಜವಾಗಲೂ ನೀತಿವಂತನೇ” ಆಗಿದ್ದನು ಎಂದು ದೇವರನ್ನು ಕೊಂಡಾಡಿದನು.

[48] ಇದನ್ನು ನೋಡಲು ಸೇರಿ ಬಂದಿದ್ದ ಜನರೆಲ್ಲರು ನಡೆದ ಘಟನೆಯನ್ನು ನೋಡಿ ಎದೆಬಡಿದುಕೊಳ್ಳುತ್ತಾ ಹಿಂತಿರುಗಿ ಹೋದರು.

[49] ಇದಲ್ಲದೆ ಆತನ ಪರಿಚಿತರೆಲ್ಲರೂ, ಗಲಿಲಾಯದಿಂದ ಆತನ ಹಿಂದೆ ಬಂದಿದ್ದ ಸ್ತ್ರೀಯರೂ ದೂರದಲ್ಲಿ ನಿಂತು ಈ ಸಂಗತಿಗಳನ್ನು ನೋಡುತ್ತಿದ್ದರು.

[50] ಅರಿಮಥಾಯ ಎಂಬ ಯೆಹೂದ್ಯರದೊಂದು ಪಟ್ಟಣದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಸೇಫನ. ಆತನು ಹಿರೀಸಭೆಯವನು, ಉತ್ತಮನು, ಸತ್ಪುರುಷನು ಹಾಗೂ ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನೂ ಆಗಿದ್ದನಲ್ಲದೆ ಮಂತ್ರಿಯೂ ಆಗಿದ್ದನು. ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಗಳಿಗೂ ಅನುಮತಿಸಿರಲಿಲ್ಲ.

[52] ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡು,

[53] ಅದನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ, ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಅದರಲ್ಲಿ ಅದುವರೆಗೆ ಯಾರನ್ನು ಇಟ್ಟಿರಲಿಲ್ಲ.

[54] ಆ ದಿನವು ಸಿದ್ಧತೆಯ ದಿನವಾಗಿತ್ತು. ಮತ್ತು ಸಬ್ಬತ್ ದಿನ ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು.

[55] ಹೀಗಿರುವಲ್ಲಿ ಗಲಿಲಾಯದಿಂದ ಯೇಸುವಿನ ಸಂಗಡ ಬಂದಿದ್ದ ಸ್ತ್ರೀಯರು, ಯೋಸೇಫನ ಹಿಂದೆಯೇ ಹೋಗಿ ಆ ಸಮಾಧಿಯನ್ನೂ, ಯೇಸುವಿನ ದೇಹವನ್ನಿಟ್ಟ ರೀತಿಯನ್ನೂ ನೋಡಿ,

[56] ಹಿಂತಿರುಗಿ ಬಂದು ಪರಿಮಳದ್ರವ್ಯಗಳನ್ನೂ ಸುಗಂಧ ತೈಲವನ್ನೂ ಸಿದ್ಧಮಾಡಿಕೊಂಡರು. ಆ ಸ್ತ್ರೀಯರು ಸಬ್ಬತ್ ದಿನದಲ್ಲಿ ಧರ್ಮನಿಯಮದ ಪ್ರಕಾರ ವಿಶ್ರಮಿಸಿಕೊಂಡರು.

ಲೂಕನು — Chapters