Skip to content
Opens in a new window
Listen to this chapter • 8:24

[1] ಯೇಸು ಪವಿತ್ರಾತ್ಮಭರಿತನಾಗಿ ಯೊರ್ದನ್ ಹೊಳೆಯಿಂದ ಹಿಂತಿರುಗಿ ಬಂದು ದೇವರಾತ್ಮನಿಂದ,

[2] ನಲವತ್ತು ದಿನ ಮರುಭೂಮಿಯಲ್ಲಿ ನಡಿಸಲ್ಪಡುತ್ತಾ, ಸೈತಾನನಿಂದ ಶೋಧಿಸಲ್ಪಟ್ಟನು. ಆ ದಿನಗಳಲ್ಲಿ ಆತನು ಏನನ್ನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಆತನಿಗೆ ಹಸಿವಾಯಿತು.

[3] ಆಗ ಸೈತಾನನು ಆತನಿಗೆ, “ನೀನು ದೇವರ ಮಗನಾಗಿದ್ದರೆ ಈ ಕಲ್ಲನ್ನು ರೊಟ್ಟಿಯಾಗುವಂತೆ ಅಪ್ಪಣೆ ಕೊಡು” ಎಂದು ಹೇಳಲು,

[4] ಯೇಸು ಅವನಿಗೆ, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ’ ಎಂದು ಬರೆದದೆ” ಎಂದು ಉತ್ತರಕೊಟ್ಟನು.

[5] ಬಳಿಕ ಸೈತಾನನು ಆತನನ್ನು ಎತ್ತರಕ್ಕೆ ಕರೆದುಕೊಂಡು ಹೋಗಿ, ಕ್ಷಣಮಾತ್ರದಲ್ಲಿ ಲೋಕದ ಎಲ್ಲಾ ರಾಜ್ಯಗಳನ್ನು ಆತನಿಗೆ ತೋರಿಸಿ,

[6] “ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಡಲ್ಪಟ್ಟಿದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;

[7] ನೀನು ನನ್ನ ಮುಂದೆ ಅಡ್ಡಬಿದ್ದರೆ ಇದೆಲ್ಲಾ ನಿನ್ನದಾಗುವುದು” ಎಂದು ಆತನಿಗೆ ಹೇಳಿದನು.

[8] ಅದಕ್ಕೆ ಯೇಸು, “‘ನಿನ್ನ ದೇವರಾಗಿರುವ ಕರ್ತನನ್ನು ಆರಾಧಿಸಿ, ಆತನೊಬ್ಬನನ್ನೇ ಸೇವಿಸಬೇಕು’ ಎಂಬುದಾಗಿ ಬರೆದದೆ” ಎಂದು ಉತ್ತರಕೊಟ್ಟನು.

[9] ಇದಲ್ಲದೆ ಸೈತಾನನು ಆತನನ್ನು ಯೆರೂಸಲೇಮಿಗೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ತುದಿಯಲ್ಲಿ ನಿಲ್ಲಿಸಿ ಆತನಿಗೆ, “ನೀನು ದೇವರ ಮಗನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು.

[10] ‘ನಿನ್ನನ್ನು ಕಾಯುವುದಕ್ಕೆ ಕರ್ತನು ತನ್ನ ದೂತರಿಗೆ ಅಪ್ಪಣೆ ಕೊಡುವನು;

[11] ಮತ್ತು ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದದೆಯಲ್ಲಾ” ಎಂದು ಹೇಳಿದನು.

[12] ಅದಕ್ಕೆ ಆತನು, “‘ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದೆಂದು’ ಹೇಳಿದೆ” ಎಂದು ಉತ್ತರ ಕೊಟ್ಟನು.

[13] ಹೀಗೆ ಸೈತಾನನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕ ಸಮಯ ಬರುವ ತನಕ ಆತನನ್ನು ಬಿಟ್ಟು ಹೊರಟುಹೋದನು.

[14] ತರುವಾಯ ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿದನು; ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಹರಡಿತು.

[15] ಆತನು ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಿದ್ದನು; ಎಲ್ಲರೂ ಆತನನ್ನು ಹೊಗಳಿದರು.

[16] ಹೀಗಿರಲಾಗಿ ಆತನು ತಾನು ಬೆಳೆದುಬಂದ ಊರಾದ ನಜರೇತಿಗೆ ಬಂದು, ತನ್ನ ವಾಡಿಕೆಯ ಪ್ರಕಾರ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಗೆ ಹೋಗಿ ಪವಿತ್ರಗ್ರಂಥವನ್ನು ಓದುವುದಕ್ಕಾಗಿ ಎದ್ದು ನಿಂತನು.

[17] ಆಗ ಯೆಶಾಯನೆಂಬ ಪ್ರವಾದಿಯು ಬರೆದ ಗ್ರಂಥದ ಸುರುಳಿಯನ್ನು ಆತನ ಕೈಗೆ ಕೊಡಲಾಗಿ ಆತನು ಆ ಸುರುಳಿಯನ್ನು ಬಿಚ್ಚಿದಾಗ ಬರೆದಿರುವ ಈ ಭಾಗವನ್ನು ಕಂಡು ಓದಿದನು; ಅಲ್ಲಿ ಹೀಗೆ ಬರೆದಿತ್ತು,

[18] “ಕರ್ತನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವಾರ್ತೆಯನ್ನು ಸಾರುವುದಕ್ಕಾಗಿ ಅಭಿಷೇಕಿಸಿರುವನು. ಸೆರೆಯಲ್ಲಿರುವವರನ್ನು ಬಿಡುಗಡೆಮಾಡುವುದಕ್ಕೂ, ಮತ್ತು ಕುರುಡರಿಗೆ ಕಣ್ಣು ಬರುವುದಕ್ಕೂ ಹಿಂಸಿಸಲ್ಪಟ್ಟವರನ್ನು ಬಿಡಿಸಿ ಕಳುಹಿಸುವುದಕ್ಕೂ

[19] ಕರ್ತನು ನೇಮಿಸಿರುವ ಶುಭವರ್ಷವನ್ನು ಪ್ರಚಾರಪಡಿಸುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ.”

[20] ಅದನ್ನು ಓದಿದ ಮೇಲೆ ಆತನು ಆ ಸುರುಳಿಯನ್ನು ಸುತ್ತಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಅಲ್ಲಿ ನೆರೆದ್ದಿದವರೆಲ್ಲರ ಕಣ್ಣುಗಳೂ ಆತನ ಮೇಲಿರಲಾಗಿ,

[21] ಆತನು ಅವರಿಗೆ, “ಈ ಹೊತ್ತು ನೀವು ನನ್ನ ಮಾತನ್ನು ಕೇಳುವಲ್ಲಿ ಈ ವೇದೋಕ್ತಿ ನೆರವೇರಿದೆ” ಎಂದು ಹೇಳುತ್ತಿರುವಾಗ,

[22] ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.

[23] ಅದಕ್ಕೆ ಯೇಸು ಅವರಿಗೆ, “‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ’ ಎಂಬ ಗಾದೆಯನ್ನು ನನಗೆ ನಿಸ್ಸಂದೇಹವಾಗಿ ಹೇಳಿ; ಕಪೆರ್ನೌಮಿನಲ್ಲಿ ನೀನು ಮಾಡಿದ ಕಾರ್ಯಗಳನ್ನು ನಾವು ಕೇಳಿದ್ದೇವೆ, ಅಂಥವುಗಳನ್ನು ಈ ನಿನ್ನ ಸ್ವಂತ ಸ್ಥಳದಲ್ಲಿಯೂ ಮಾಡು ಎಂದು ಹೇಳುವಿರಿ.

[24] ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[25] ಕೇಳಿರಿ, ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆಬಾರದೆ ದೇಶದಲ್ಲೆಲ್ಲಾ ದೊಡ್ಡ ಬರಗಾಲ ಉಂಟಾದಾಗ, ಇಸ್ರಾಯೇಲಿನಲ್ಲೇ ಅನೇಕ ವಿಧವೆಯರು ಇದ್ದದ್ದು ನಿಜ;

[26] ಆದರೆ ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ, ಸೀದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಅವನನ್ನು ಕಳುಹಿಸಿದನು.

[27] ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಅನೇಕ ಕುಷ್ಠರೋಗಿಗಳು ಇದ್ದಾಗ್ಯೂ, ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸಿರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು” ಎಂದು ಹೇಳಿದನು.

[28] ಸಭಾಮಂದಿರದಲ್ಲಿದ್ದ ಎಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಸಿಟ್ಟುಗೊಂಡು,

[29] ಎದ್ದು ಆತನನ್ನು ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರು ಕಟ್ಟಲ್ಪಟ್ಟಿದ್ದ ಗುಡ್ಡದ ಅಂಚಿಗೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಿಬಿಡಬೇಕೆಂದಿದ್ದರು.

[30] ಆದರೆ ಆತನು ಅವರ ಮಧ್ಯದಿಂದ ನಡೆದು ತನ್ನ ಪಾಡಿಗೆ ತಾನು ಹೊರಟು ಹೋದನು.

[31] ಬಳಿಕ ಆತನು ಘಟ್ಟಾ ಇಳಿದು ಗಲಿಲಾಯಕ್ಕೆ ಸೇರಿದ ಕಪೆರ್ನೌಮೆಂಬ ಊರಿಗೆ ಬಂದನು. ಅಲ್ಲಿ ಸಬ್ಬತ್ ದಿನದಲ್ಲಿ ಅವರಿಗೆ ಉಪದೇಶಮಾಡುತ್ತಿರಲು,

[32] ಆತನ ಮಾತು ಅಧಿಕಾರವುಳ್ಳದ್ದಾಗಿದ್ದದರಿಂದ ಅವರು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು.

[33] ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಆತನು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನಿನ್ನನ್ನು ಬಲ್ಲೆವು. ನೀನು ದೇವರಿಂದ ಬಂದ ಪರಿಶುದ್ಧನೇ” ಎಂದು ಜೋರಾಗಿ ಕೂಗಿ ಹೇಳಿದನು.

[35] ಯೇಸು ದೆವ್ವವನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ಹೋಗು” ಎನ್ನಲಾಗಿ ಆ ದೆವ್ವವು ಅವನನ್ನು ಎಲ್ಲರ ನಡುವೆ ಬೀಳಿಸಿ ಅವನಿಗೆ ಯಾವ ಕೇಡನ್ನೂ ಮಾಡದೆ ಬಿಟ್ಟುಹೋಯಿತು.

[36] ಅದಕ್ಕೆ ಎಲ್ಲರು ಬೆರಗಾಗಿ, “ಇದೆಂಥ ಮಾತಾಗಿರಬಹುದು? ಈತನು ಅಧಿಕಾರದಿಂದಲೂ, ಬಲದಿಂದಲೂ ದೆವ್ವಗಳಿಗೆ ಅಪ್ಪಣೆಕೊಡುತ್ತಾನೆ, ಅವು ಬಿಟ್ಟು ಹೋಗುತ್ತವೆ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

[37] ಮತ್ತು ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದ ಊರುಗಳಲ್ಲೆಲ್ಲಾ ಹರಡಿತು.

[38] ಆತನು ಸಭಾಮಂದಿರದಿಂದೆದ್ದು ಸೀಮೋನನ ಮನೆಗೆ ಬಂದನು. ಅಲ್ಲಿ ಸೀಮೋನನ ಅತ್ತೆಯು ವಿಪರೀತ ಜ್ವರದಿಂದ ಕಷ್ಟಪಡುತ್ತಿರಲಾಗಿ; ಆಕೆಯ ವಿಷಯದಲ್ಲಿ ಅಲಿದ್ದವರು ಆತನನ್ನು ಬೇಡಿಕೊಂಡರು.

[39] ಆತನು ಆಕೆಯ ಬಳಿ ನಿಂತು ಬಾಗಿ, ಜ್ವರವನ್ನು ಬಿಟ್ಟುಹೋಗೆಂದು ಗದರಿಸಲು; ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೆ ಆಕೆಯು ಎದ್ದು ಅವರೆಲ್ಲರಿಗೆ ಉಪಚಾರಮಾಡಿದಳು.

[40] ಸಂಜೆಯಾದಂತೆ ಜನರು ವಿವಿಧ ರೋಗಗಳಿಂದ ಅಸ್ವಸ್ಥವಾದವರನ್ನೆಲ್ಲಾ ಆತನ ಹತ್ತಿರಕ್ಕೆ ಕರತರಲು; ಆತನು ಪ್ರತಿಯೊಬ್ಬರ ಮೇಲೆಯೂ ಕೈಯಿಟ್ಟು ಅವರನ್ನು ವಾಸಿಮಾಡಿದನು.

[41] ದೆವ್ವಗಳು ಸಹ, ನೀನು ದೇವಕುಮಾರನು ಎಂದು ಅಬ್ಬರಿಸಿ, ಅನೇಕರನ್ನು ಬಿಟ್ಟುಹೋದವು. ಆತನು ಕ್ರಿಸ್ತನೆಂದು ದೆವ್ವಗಳಿಗೆ ಸ್ಪಷ್ಟವಾಗಿ ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡದಂತೆ ಗದರಿಸಿದನು.

[42] ಬೆಳಗಾದ ಮೇಲೆ ಆತನು ಹೊರಟು ನಿರ್ಜನವಾದ ಸ್ಥಳಕ್ಕೆ ಹೋದನು; ಜನರು ಗುಂಪುಗುಂಪಾಗಿ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು, ಆತನು ಅವರನ್ನು ಬಿಟ್ಟುಹೋಗಬಾರದೆಂದು ಅವರು ಆತನನ್ನು ತಡೆದರು.

[43] ಆದರೆ ಆತನು ಅವರಿಗೆ, “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಹೇಳಿದನು.

[44] ಬಳಿಕ ಆತನು ಯೂದಾಯ ದೇಶದ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಇದ್ದನು.

ಲೂಕನು — Chapters