[1] ತರುವಾಯ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ,
[2] ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಮಂದಿ ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರೆಂದರೆ, ಏಳು ದುರಾತ್ಮಗಳಿಂದ ಬಿಡುಗಡೆ ಹೊಂದಿದ್ದ ಮಗ್ದಲದ ಮರಿಯಳು,
[3] ಹೆರೋದನ ಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಹೆಂಡತಿ ಯೋಹಾನಳು, ಸುಸನ್ನಳು, ಇನ್ನು ಬೇರೆ ಅನೇಕರು. ಇವರು ತಮ್ಮ ಸ್ವಂತ ಆಸ್ತಿಯಿಂದ ಅವರಿಗೆ ಉಪಚಾರಮಾಡುತ್ತಿದ್ದರು.
[4] ಬಹುಜನರು ಗುಂಪುಗುಂಪಾಗಿ ಬೇರೆ ಬೇರೆ ಪಟ್ಟಣಗಳಿಂದ ಆತನ ಬಳಿಗೆ ಬರುತ್ತಿರಲು ಯೇಸು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನೆಂದರೆ,
[5] “ಬಿತ್ತುವವನು ಬೀಜವನ್ನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು.
[6] ಬೇರೆ ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವು ಮೊಳೆತು ಬಂದರೂ ತೇವವಿಲ್ಲದ ಕಾರಣ ಒಣಗಿಹೋದವು.
[7] ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳೊಳಗೆ ಬಿದ್ದವು. ಮುಳ್ಳುಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅದುಮಿಬಿಟ್ಟವು.
[8] ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು, ಮೊಳೆತು, ನೂರರಷ್ಟು ಫಲವನ್ನು ಕೊಟ್ಟವು.” ಈ ಮಾತುಗಳನ್ನು ಹೇಳಿ ಆತನು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಕೂಗಿ ಹೇಳಿದನು.
[9] ಯೇಸುವಿನ ಶಿಷ್ಯರು ಈ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಿದಾಗ,
[10] ಆತನು, “ದೇವರ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೆ ಕೊಡಲಾಗಿದೆ, ಉಳಿದವರಿಗೆ ‘ಕಣ್ಣಿದ್ದರೂ ನೋಡದಂತೆಯೂ, ಕೇಳಿಸಿಕೊಂಡರೂ ಗ್ರಹಿಸದಂತೆಯೂ’ ಸಾಮ್ಯರೂಪವಾಗಿ ಹೇಳಲಾಗುತ್ತದೆ.
[11] ಈ ಸಾಮ್ಯದ ಅರ್ಥವೇನಂದರೆ, ಆ ಬೀಜವೆಂದರೆ ದೇವರ ವಾಕ್ಯ.
[12] ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿದ್ದಿರುವ ಬೀಜಗಳು.
[13] ಕೆಲವರು ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ; ಇವರಿಗೆ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರವೇ ನಂಬಿಕೊಂಡಿದ್ದು ಶೋಧನೆಯ ಕಾಲದಲ್ಲಿ ಬಿದ್ದು ಹೋಗುತ್ತಾರೆ. ಇವರೇ ಬಂಡೆಯ ಮೇಲೆ ಬೀಳಲ್ಪಟ್ಟ ಬೀಜಗಳು.
[14] ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು.
[15] ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ತಮ್ಮ ಒಳ್ಳೆಯ ಹೃದಯದಲ್ಲಿ ಅದನ್ನು ಸಂಗ್ರಹಿಸಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ. ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳು.
[16] “ಇದಲ್ಲದೆ ಯಾರೂ ದೀಪವನ್ನು ಹಚ್ಚಿ ಪಾತ್ರೆಯಿಂದ ಮುಚ್ಚುವುದಿಲ್ಲ, ಮಂಚದ ಕೆಳಗೂ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
[17] ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ ಮತ್ತು ಪ್ರಕಟವಾಗದೆ ಇರುವಂಥ ಒಂದು ಗುಟ್ಟೂ ಇರುವುದಿಲ್ಲ, ಅದು ಬಟ್ಟಬಯಲಾಗುವುದು.
[18] ಆದುದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ, ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವುದು” ಅಂದನು.
[19] ಯೇಸುವಿನ ತಾಯಿಯೂ ತಮ್ಮಂದಿರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು.
[20] ಜನರು ಆತನಿಗೆ, “ನಿನ್ನ ತಾಯಿಯು, ನಿನ್ನ ಸಹೋದರರು ನಿನ್ನನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ” ಎಂದು ಹೇಳಿದಾಗ,
[21] ಆತನು ಅವರಿಗೆ, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿಯು ಸಹೋದರರು ಆಗಿದ್ದಾರೆ” ಎಂದು ಉತ್ತರಕೊಟ್ಟನು.
[22] ಒಂದು ದಿನ ಯೇಸು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ, “ಸಮುದ್ರದ ಆಚೇ ದಡಕ್ಕೆ ಹೋಗೋಣ” ಎಂದು ಹೇಳಲು, ಅವರು ದೋಣಿಯನ್ನು ಸಾಗಿಸಿ ಹೊರಟರು.
[23] ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು, ಅಷ್ಟರಲ್ಲಿ ಬಿರುಗಾಳಿ ಸಮುದ್ರದಲ್ಲಿ ಬೀಸಿ ದೋಣಿಯೊಳಗೆ ನೀರು ತುಂಬಿಕೊಂಡದ್ದರಿಂದ ಅವರೆಲ್ಲರು ಅಪಾಯಕ್ಕೆ ಗುರಿಯಾದರು.
[24] ಹೀಗಿರಲಾಗಿ ಅವರು ಆತನ ಹತ್ತಿರ ಬಂದು, “ಗುರುವೇ, ಗುರುವೇ, ನಾವು ಸಾಯುತ್ತಿದ್ದೇವೆ” ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರಿನ ಅಲೆಗಳನ್ನೂ ಗದರಿಸಿದನು. ಆಗ ಅವು ನಿಂತು, ಶಾಂತವಾಯಿತು.
[25] ತರುವಾಯ ಆತನು, “ನಿಮ್ಮ ನಂಬಿಕೆ ಎಲ್ಲಿ?” ಎಂದು ಅವರನ್ನು ಕೇಳಿದನು. ಅವರು ಭಯಪಟ್ಟು, “ಈತನು ಯಾರಿರಬಹುದು? ಗಾಳಿಗೂ ನೀರಿಗೂ ಅಪ್ಪಣೆ ಕೊಡುತ್ತಾನೆ. ಅವು ಕೂಡ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ?” ಎಂದು ಆಶ್ಚರ್ಯಪಟ್ಟು ಒಬ್ಬರಿಗೊಬ್ಬರು ಮಾತನಾಡಿಕೊಂಡು.
[26] ಆ ಮೇಲೆ ಅವರು ಗಲಿಲಾಯಕ್ಕೆ ಎದುರಾಗಿರುವ ಗೆರಸೇನರ ಸೀಮೆಯನ್ನು ತಲುಪಿದರು.
[27] ಯೇಸು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಅವನು ಬಹುಕಾಲದಿಂದ ವಸ್ತ್ರವನ್ನೇ ಧರಿಸದೆ ಮನೆಯಲ್ಲಿ ವಾಸಿಸದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು.
[28] ಇವನು ಯೇಸುವನ್ನು ಕಂಡು ಆರ್ಭಟಿಸಿ ಆತನ ಮುಂದೆ ಅಡ್ಡಬಿದ್ದು ಮಹಾಶಬ್ದದಿಂದ, “ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಅಂದನು.
[29] ಏಕೆಂದರೆ, ಈ ಮನುಷ್ಯನನ್ನು ಬಿಟ್ಟುಹೋಗಬೇಕೆಂದು ಆತನು ಆ ದೆವ್ವಕ್ಕೆ ಅಪ್ಪಣೆ ಕೊಟ್ಟಿದ್ದನು. ಅದು ಬಹು ಕಾಲದಿಂದ ಅವನನ್ನು ಹಿಡಿದಿತ್ತು; ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು.
[30] ಯೇಸುವು ಅವನಿಗೆ, “ನಿನ್ನ ಹೆಸರೇನೆಂದು?” ಕೇಳಲು ಅವನು, “ನನ್ನ ಹೆಸರು ದಂಡು” ಅಂದನು, ಏಕೆಂದರೆ ಬಹಳ ದೆವ್ವಗಳು ಅವನೊಳಗೆ ಹೊಕ್ಕಿದವು.
[31] ಪಾತಾಳಕ್ಕೆ ಹೋಗಿಬಿಡುವಂತೆ ನಮಗೆ ಆಜ್ಞೆಮಾಡಬೇಡವೆಂದು ಅವು ಆತನನ್ನು ಬೇಡಿಕೊಂಡವು.
[32] ಅಲ್ಲಿಯ ಗುಡ್ಡದ ಮೇಲೆ ಹಂದಿಗಳ ಹಿಂಡು ಮೇಯುತ್ತಿತ್ತು. ಆ ದೆವ್ವಗಳು, ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮಗೆ ಅಪ್ಪಣೆಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು. ಆತನು ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು,
[33] ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು. ಆ ಹಂದಿಗಳು ಉಗ್ರವಾಗಿ ಓಡಿ ಕಡಿದಾದ ಸ್ಥಳದಿಂದ ಕೆರೆಯೊಳಗೆ ಬಿದ್ದು ಉಸಿರುಕಟ್ಟಿ ಸತ್ತು ಹೋದವು.
[34] ಮೇಯಿಸುವವರು ನಡೆದದ್ದನ್ನು ಕಂಡು ಓಡಿ ಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ಅದನ್ನು ತಿಳಿಸಲು,
[35] ಜನರು ನಡೆದ ಸಂಗತಿಯನ್ನು ನೋಡುವುದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದಾಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯಿಂದ ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿರುವುದನ್ನು ಕಂಡು ಹೆದರಿದರು.
[36] ನಡೆದ ಸಂಗತಿಯನ್ನು ನೋಡಿದವರು ಆ ದೆವ್ವಹಿಡಿದಿದ್ದವನಿಗೆ ಬಿಡುಗಡೆಯಾದ ರೀತಿಯನ್ನು ಅವರಿಗೆ ತಿಳಿಸಲು,
[37] ಗೆರಸೇನರ ಸುತ್ತಲಿರುವ ಸೀಮೆಯವರಿಗೆಲ್ಲಾ ಮಹಾ ಭಯ ಉಂಟಾದದ್ದರಿಂದ ಅವರು ಆತನನ್ನು, ನೀನು ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು. ಆತನು ದೋಣಿಯನ್ನು ಹತ್ತಿ ಹಿಂತಿರುಗಿ ಹೋದನು.
[38] ಹೊರಡುವಾಗ ದೆವ್ವಗಳಿಂದ ಬಿಡುಗಡೆಯಾದ ಆ ಮನುಷ್ಯನು, ನಾನು ನಿನ್ನ ಜೊತೆಯಲ್ಲಿಯೇ ಇರುತ್ತೇನೆ ಎಂದು ಆತನನ್ನು ಬೇಡಿಕೊಂಡಾಗ,
[39] ಆತನು, “ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಏನೇನು ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ನಿನ್ನವರಿಗೆ ವಿವರವಾಗಿ ಹೇಳು” ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.
[40] ಯೇಸು ಹಿಂತಿರುಗಿ ಬಂದಾಗ ಜನರೆಲ್ಲರೂ ಆತನಿಗಾಗಿ ಕಾಯುತ್ತಿದ್ದು ಅವನನ್ನು ಸಂತೋಷದಿಂದ ಸ್ವೀಕರಿಸಿದರು.
[41] ಆಗ ಸಭಾಮಂದಿರದ ಅಧಿಕಾರಿಯಾದ ಯಾಯೀರನೆಂಬ ಒಬ್ಬ ಮನುಷ್ಯನು ಬಂದು ಯೇಸುವಿನ ಪಾದಗಳಿಗೆ ಅಡ್ಡಬಿದ್ದನು. ಏಕೆಂದರೆ ಹೆಚ್ಚುಕಡಿಮೆ ಹನ್ನೆರಡು ವರ್ಷದವಳಾದ ಅವನ ಒಬ್ಬಳೇ ಮಗಳು ಸಾಯುವ ಸ್ಥಿತಿಯಲ್ಲಿದ್ದ ಕಾರಣ ಆತನನ್ನು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. ಯೇಸು ಹೋಗುತ್ತಿರುವಲ್ಲಿ ಜನಸಮೂಹವು ಸುತ್ತಲಿನಿಂದಲೂ ಆತನನ್ನು ನೂಕಾಡುತ್ತಿತ್ತು.
[43] ಆಗ ಹನ್ನೆರಡು ವರ್ಷದಿಂದ ರಕ್ತಸ್ರಾವ ರೋಗವಿದ್ದ ಒಬ್ಬ ಹೆಂಗಸು ಅಲ್ಲಿಗೆ ಬಂದಿದ್ದಳು. ಆಕೆಯು ತನ್ನ ಬಳಿ ಇದ್ದ ಹಣವನ್ನೆಲ್ಲಾ ವೆಚ್ಚಮಾಡಿದರೂ ಒಬ್ಬ ವೈದ್ಯರಿಂದಲೂ ಗುಣಹೊಂದಲಾರದೆ ಇದ್ದಳು.
[44] ಆಕೆಯು ಹಿಂದಿನಿಂದ ಬಂದು ಆತನ ಅಂಗಿಯ ಅಂಚನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತಸ್ರಾವವಾಗುವುದು ನಿಂತಿತು.
[45] ಆಗ ಯೇಸುವು, “ನನ್ನನ್ನು ಮುಟ್ಟಿದವರಾರು?” ಎಂದು ಕೇಳಲು ಎಲ್ಲರೂ, ನಾನಲ್ಲ, ನಾನಲ್ಲ ಅನ್ನಲು ಪೇತ್ರನು, “ಗುರುವೇ, ಎಷ್ಟೋ ಜನರು ನಿನ್ನನ್ನು ಮೈಮೇಲೆ ಬೀಳುತ್ತಾ ನೂಕುತ್ತಿದ್ದಾರಲ್ಲಾ” ಅಂದನು.
[46] ಆದರೆ ಯೇಸುವು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು” ಅಂದಾಗ,
[47] ಆ ಹೆಂಗಸು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಯೇಸುವಿಗೆ ಅಡ್ಡಬಿದ್ದು ತಾನು ಇಂಥ ಕಾರಣದಿಂದ ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂದೂ ಎಲ್ಲರ ಮುಂದೆ ತಿಳಿಸಿದಳು.
[48] ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು” ಎಂದು ಹೇಳಿದನು.
[49] ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು, “ನಿನ್ನ ಮಗಳು ಸತ್ತುಹೋದಳು, ಗುರುವಿಗೆ ತೊಂದರೆ ಕೊಡಬೇಡ” ಅಂದನು.
[50] ಆದರೆ ಯೇಸು ಅದನ್ನು ಕೇಳಿ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು” ಎಂದು ಉತ್ತರಕೊಟ್ಟನು.
[51] ತರುವಾಯ ಆತನು ಆ ಅಧಿಕಾರಿಯ ಮನೆಗೆ ಹೋಗಿ, ಪೇತ್ರ ಯೋಹಾನ ಯಾಕೋಬ ಮತ್ತು ಆ ಹುಡುಗಿಯ ತಂದೆತಾಯಿಯರನ್ನು ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಿಸಲಿಲ್ಲ.
[52] ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡಿದುಕೊಳ್ಳುತ್ತಾ ಇದ್ದರು. ಯೇಸು ಅವರಿಗೆ, “ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಅನ್ನಲು,
[53] ಜನರು ಆಕೆ ಸತ್ತಳೆಂದು ತಿಳಿದುಕೊಂಡಿದ್ದರಿಂದ ಆತನನ್ನು ಪರಿಹಾಸ್ಯಮಾಡಿದರು.
[54] ಆದರೆ ಆತನು ಆಕೆಯ ಕೈ ಹಿಡಿದು, “ಮಗಳೇ, ಎದ್ದೇಳು” ಎಂದು ಕೂಗಿ ಹೇಳಿದನು.
[55] ಆಕೆಯ ಆತ್ಮವು ತಿರುಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು, ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆಕೊಟ್ಟನು.
[56] ಆಕೆಯ ತಂದೆತಾಯಿಗಳು ಬೆರಗಾದರು. ಆತನು, ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಅವರಿಗೆ ಆಜ್ಞಾಪಿಸಿದನು.