[1] ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ ಆತನ ಶಿಷ್ಯರು ತೆನೆಗಳನ್ನು ಮುರಿದು ಕೈಗಳಲ್ಲಿ ಹೊಸಕಿಕೊಂಡು ತಿನ್ನುತ್ತಿದ್ದರು.
[2] ಆದರೆ ಫರಿಸಾಯರಲ್ಲಿ ಕೆಲವರು, “ಸಬ್ಬತ್ ದಿನದಲ್ಲಿ ನಿಷಿದ್ಧವಾದ ಕೆಲಸವನ್ನು ನೀವು ಯಾಕೆ ಮಾಡುತ್ತೀರಿ?” ಎಂದು ಕೇಳಿದ್ದಕ್ಕೆ,
[3] ಯೇಸು ಅವರಿಗೆ, “ದಾವೀದನು ಮತ್ತು ಆತನ ಸಂಗಡ ಇದ್ದವರೂ ಹಸಿದಿದ್ದಾಗ, ಆತನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ?
[4] ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತೆಗೆದುಕೊಂಡು ತಾನೂ ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ಉತ್ತರಿಸಿ,
[5] “ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದಾನೆ” ಎಂದು ಅವರಿಗೆ ಹೇಳಿದನು.
[6] ಮತ್ತೊಂದು ಸಬ್ಬತ್ ದಿನದಲ್ಲಿ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿರುವಾಗ, ಅಲ್ಲಿ ಬಲಗೈ ಬತ್ತಿದವನೊಬ್ಬನು ಇದ್ದನು.
[7] ಶಾಸ್ತ್ರಿಗಳೂ ಫರಿಸಾಯರೂ ಆತನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣ ಸಿಕ್ಕಬೇಕೆಂದು ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವನೋ ಇಲ್ಲವೋ ಎಂದು ಆತನನ್ನು ಹೊಂಚಿನೋಡುತ್ತಿದ್ದರು.
[8] ಆದರೆ ಆತನು ಅವರ ಯೋಚನೆಗಳನ್ನು ತಿಳಿದು ಕೈ ಬತ್ತಿಹೋಗಿದ್ದ ಆ ಮನುಷ್ಯನಿಗೆ, “ಎದ್ದು ನಡುವೆ ಬಂದು ನಿಂತುಕೋ” ಎಂದು ಹೇಳಿದನು. ಅವನು ಎದ್ದುಬಂದು ನಿಂತುಕೊಂಡನು.
[9] ಆಗ ಯೇಸು ಅವರಿಗೆ, “ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ಸಬ್ಬತ್ ದಿನದಲ್ಲಿ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ ಅಥವಾ ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ಹಾಳುಮಾಡುವುದೋ?” ಎಂದು ಕೇಳಿ,
[10] ಸುತ್ತಲೂ ಇದ್ದವರೆಲ್ಲರನ್ನೂ ನೋಡಿ ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು, ಕೈ ವಾಸಿಯಾಯಿತು.
[11] ಆದರೆ ಅವರು ಕ್ರೋಧಭರಿತರಾಗಿದ್ದರಿಂದ, ಈ ಯೇಸುವಿಗೆ ಏನು ಮಾಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[12] ಆ ದಿನಗಳಲ್ಲಿ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋಗಿ ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದನು.
[13] ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ ಅಪೊಸ್ತಲರೆಂದು ಹೆಸರಿಟ್ಟನು.
[14] ಅವರು ಯಾರಾರೆಂದರೆ, ಆತನಿಂದ ಪೇತ್ರನೆಂಬ ಹೆಸರನ್ನು ಹೊಂದಿದ ಸೀಮೋನ, ಅವನ ತಮ್ಮನಾದ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ,
[15] ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿ ಅನ್ನಿಸಿಕೊಂಡ ಸೀಮೋನ,
[16] ಯಾಕೋಬನ ಮಗನಾದ ಯೂದ, ಆತನನ್ನು ಹಿಡಿದುಕೊಡುವ ದ್ರೋಹಿಯಾದ ಇಸ್ಕರಿಯೋತ ಯೂದ.
[17] ಆ ಮೇಲೆ ಯೇಸು ಅವರೊಂದಿಗೆ ಬೆಟ್ಟದಿಂದ ಇಳಿದು ಸಮಭೂಮಿಯಲ್ಲಿ ಬಂದು ನಿಂತನು. ಆತನ ಶಿಷ್ಯರ ದೊಡ್ಡಗುಂಪು ಮತ್ತು ಎಲ್ಲಾ ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ತೂರ್, ಸೀದೋನ್ ಪಟ್ಟಣಗಳ ಕರಾವಳಿತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದಿತು.
[18] ಆ ಜನರು ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಡಿಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಪೀಡಿತರು ಸಹ ಬಂದು ಸ್ವಸ್ಥರಾದರು.
[19] ಮತ್ತು ಆತನಿಂದ ಶಕ್ತಿ ಹೊರಟು ಎಲ್ಲರನ್ನೂ ವಾಸಿಮಾಡುತ್ತಿದ್ದುದರಿಂದ, ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವುದಕ್ಕೆ ಪ್ರಯತ್ನಪಟ್ಟರು.
[20] ತರುವಾಯ ಆತನು ತನ್ನ ಶಿಷ್ಯರ ಕಡೆಗೆ ಕಣ್ಣೆತ್ತಿನೋಡಿ ಹೇಳಿದ್ದೇನಂದರೆ, “ಬಡವರಾದ ನೀವು ಧನ್ಯರು; ದೇವರ ರಾಜ್ಯವು ನಿಮ್ಮದೇ.
[21] ಈಗ ಹಸಿದಿರುವವರಾದ ನೀವು ಧನ್ಯರು; ನಿಮಗೆ ತೃಪ್ತಿಯಾಗುವುದು. ಈಗ ಅಳುವವರಾದ ನೀವು ಧನ್ಯರು; ನೀವು ನಗುವಿರಿ.
[22] “ಮನುಷ್ಯಕುಮಾರನ ನಿಮಿತ್ತವಾಗಿ ಜನರು ನಿಮ್ಮನ್ನು ಹಗೆಮಾಡಿ ನಿಮಗೆ ಬಹಿಷ್ಕಾರ ಹಾಕಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದೆಂದು ತೆಗೆದುಹಾಕಿದರೆ ನೀವು ಧನ್ಯರು.
[23] ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.
[24] “ಆದರೆ ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮ ಸುಖವು ಈಗಾಗಲೇ ನಿಮಗೆ ಬಂದದೆ.
[25] ಈಗ ಹೊಟ್ಟೆತುಂಬಿದವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ಈಗ ನಗುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಟ್ಟು ಅಳುವಿರಿ.
[26] “ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪೂರ್ವಿಕರು ಸುಳ್ಳುಪ್ರವಾದಿಗಳನ್ನು ಹಾಗೆಯೇ ಹೊಗಳಿದ್ದರು.
[27] “ಕೇಳುವವರಾದ ನಿಮಗೆ ನಾನು ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ;
[28] ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ.
[29] ನಿನ್ನ ಒಂದು ಕೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡ.
[30] ನಿನ್ನನ್ನು ಬೇಡುವವರೆಲ್ಲರಿಗೂ ಕೊಡು; ನಿನ್ನ ಸೊತ್ತನ್ನು ಕಸಿದುಕೊಳ್ಳುವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ.
[31] ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.
[32] “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ.
[33] ನಿಮಗೆ ಉಪಕಾರ ಮಾಡುವವರಿಗೇ ನೀವು ಉಪಕಾರ ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ.
[34] ಸಾಲತೀರಿಸುವುರೆಂದು ನಿರೀಕ್ಷಿಸಿ ನೀವು ಅಂಥವರಿಗೆ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರೂ ಸಹ ತಾವು ಕೊಟ್ಟಷ್ಟು ತಮಗೆ ತಿರುಗಿ ಸಿಕ್ಕೀತೆಂದು ಸಾಲ ಕೊಡುತ್ತಾರಲ್ಲಾ.
[35] ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಏನನ್ನೂ ನಿರೀಕ್ಷಿಸದೆ ಸಾಲಕೊಡಿರಿ. ಹೀಗೇ ಮಾಡಿದರೆ, ನಿಮಗೆ ಬಹಳ ಫಲಸಿಕ್ಕುವುದು ಮತ್ತು ನೀವು ಪರಾತ್ಪರನಾದ ದೇವರ ಮಕ್ಕಳಾಗುವಿರಿ. ದೇವರು ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ.
[36] ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರವೇ ನೀವೂ ಕರುಣೆಯುಳ್ಳವರಾಗಿರಿ.
[37] “ಇದಲ್ಲದೆ ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ; ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ; ಕ್ಷಮಿಸಿರಿ, ಆಗ ನಿಮಗೂ ಕ್ಷಮಿಸಲ್ಪಡುವುದು.
[38] ಕೊಡಿರಿ, ಆಗ ನಿಮಗೂ ಕೊಡಲ್ಪಡುವುದು; ಅದುಮಿ, ಅಲ್ಲಾಡಿಸಿ, ತುಂಬಿತುಳುಕುವಂತೆ, ಅಳೆದು ನಿಮ್ಮ ಸೆರಿಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು” ಅಂದನು.
[39] ಇದಲ್ಲದೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಕುರುಡನು ಕುರುಡನಿಗೆ ದಾರಿ ತೋರಿಸುವುದಕ್ಕಾದೀತೇ? ಅವರಿಬ್ಬರೂ ಹಳ್ಳದಲ್ಲಿ ಬೀಳುವರಲ್ಲವೆ.
[40] ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ; ಆದರೆ ಪೂರ್ಣವಾಗಿ ಕಲಿತವನಾದ ಪ್ರತಿಯೊಬ್ಬನು ತನ್ನ ಗುರುವಿನಂತಾಗಿರುವನು.
[41] “ಇದಲ್ಲದೆ ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ?
[42] ಇಲ್ಲವೆ ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನಿಗೆ, ‘ಅಣ್ಣಾ, ನಿನ್ನ ಕಣ್ಣಿನೊಳಗಿನ ಅಣುವನ್ನು ತೆಗೆಯುತ್ತೇನೆ ಬಾ’ ಎಂದು ಹೇಳುವುದಕ್ಕೆ ಹೇಗಾದೀತು? ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿನಿಂದ ತೊಲೆಯನ್ನು ತೆಗೆದುಹಾಕಿಕೋ, ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿನ ಅಣುವನ್ನು ತೆಗೆಯುವುದಕ್ಕೆ ಚೆನ್ನಾಗಿ ಕಾಣಿಸುವುದು.
[43] ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ, ಹಾಗೆಯೇ ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.
[44] ಪ್ರತಿಯೊಂದು ಮರದ ಗುಣವು ಅದರ ಫಲದಿಂದಲೇ ಗೊತ್ತಾಗುವುದು. ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನು ಕೀಳುವುದಿಲ್ಲ, ಕಳ್ಳಿ ಗಿಡದಲ್ಲಿ ದ್ರಾಕ್ಷಿಹಣ್ಣುಗಳನ್ನು ಕೊಯ್ಯುಲು ಸಾಧ್ಯವಿಲ್ಲ.
[45] ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟಬೊಕ್ಕಸದೊಳಗಿನಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು.
[46] “ಇದಲ್ಲದೆ ನೀವು ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಕರೆದು ನಾನು ಹೇಳುವುದನ್ನು ಮಾಡದೆ ಇರುವುದೇಕೆ?
[47] ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಅಂಥವನಿಗೆ ಸಮಾನನೆಂಬುದನ್ನು ನಿಮಗೆ ತೋರಿಸುತ್ತೇನೆ.
[48] ಅವನು ಆಳವಾಗಿ ಅಗೆದು, ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೇ ಕಟ್ಟಿದವನಿಗೆ ಸಮಾನನು. ಹೊಳೆಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಚೆನ್ನಾಗಿ ಕಟ್ಟಿರುವುದರಿಂದ ಆ ಪ್ರವಾಹವು ಅದನ್ನು ಅಲ್ಲಾಡಿಸಲಾರದೆ ಹೋಯಿತು.
[49] ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದಿರುವವನು ಅಸ್ತಿವಾರವಿಲ್ಲದೆ ಮರಳಿನ ಮೇಲೆ ಮನೇ ಕಟ್ಟಿದವನಿಗೆ ಸಮಾನನು. ಪ್ರವಾಹವು ಅದಕ್ಕೆ ಅಪ್ಪಳಿಸಿ ಬಡಿದ ಕೂಡಲೇ ಅದು ಕುಸಿದುಬಿತ್ತು ಮತ್ತು ಅದರ ನಾಶನವು ವಿಪರೀತವಾಗಿತ್ತು.”