[1] ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬುದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.
[2] ಅದೇನೆಂದರೆ, “ಒಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು.
[3] ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು, ‘ನ್ಯಾಯವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು’ ಎಂದು ಕೇಳಿಕೊಳ್ಳುತ್ತಿದ್ದಳು.
[4] ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು, ‘ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯ ಮಾಡುವವನಲ್ಲ,
[5] ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುತ್ತಿರುವುದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು. ಇಲ್ಲವಾದರೆ ಈಕೆ ಪದೇಪದೇ ಬಂದು ನನ್ನನ್ನು ದಣಿಸಾಳು’ ಎಂದು ತನ್ನೊಳಗೆ ಅಂದುಕೊಂಡನು.”
[6] ಕರ್ತನು ಈ ಸಾಮ್ಯವನ್ನು ಹೇಳಿದ ಮೇಲೆ, “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ.
[7] ದೇವರು ಆರಿಸಿಕೊಂಡವರು ಆತನಿಗೆ ಹಗಲುರಾತ್ರಿ ಮೊರೆಯಿಡುವಲ್ಲಿ, ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯವನ್ನು ತೀರಿಸದೆ ಇರುವನೇ?
[8] ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ. ಹೀಗಿದ್ದರೂ ಮನುಷ್ಯಕುಮಾರನು ಬರುವಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣಲು ಸಾಧ್ಯವೋ?” ಅಂದನು.
[9] ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ತಿರಸ್ಕಾರ ಮಾಡುವಂತಹ ಕೆಲವರಿಗೆ ಒಂದು ಸಾಮ್ಯವನ್ನು ಯೇಸು ಹೇಳಿದನು.
[10] ಅದೇನೆಂದರೆ, “ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು. ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕದವನು.
[11] ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ, ‘ದೇವರೇ, ದರೋಡೆಕೋರರೂ, ಅನ್ಯಾಯಗಾರರೂ, ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ, ಆದುದರಿಂದ ನಿನಗೆ ಸ್ತೋತ್ರಮಾಡುತ್ತೇನೆ.
[12] ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸಿದ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ’ ಎಂದು ಪ್ರಾರ್ಥಿಸಿದನು.
[13] ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಆಗದೇ, ‘ದೇವರೇ, ಪಾಪಿಯಾದ ನನ್ನನ್ನು ಕರುಣಿಸು’ ಅಂದನು.
[14] ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.
[15] ಕೆಲವರು ತಮ್ಮ ಕೂಸುಗಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು, ಶಿಷ್ಯರು ಕಂಡು ಅವರನ್ನು ಗದರಿಸಿದರು.
[16] ಆದರೆ ಯೇಸು ಆ ಕೂಸುಗಳನ್ನು ತನ್ನ ಬಳಿಗೆ ಕರೆತರಿಸಿ, “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ದೇವರ ರಾಜ್ಯವು ಇಂಥವರದೇ.
[17] ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಅಂದನು.
[18] ಒಬ್ಬ ಅಧಿಕಾರಿಯು ಬಂದು, “ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು?” ಎಂದು ಆತನನ್ನು ಕೇಳಲಾಗಿ,
[19] ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.
[20] ‘ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.
[21] ಅದಕ್ಕವನು, “ನಾನು ಬಾಲ್ಯದಿಂದಲೂ ಇವೆಲ್ಲನ್ನು ಸರಿಯಾಗಿ ಪಾಲಿಸುತ್ತಾ ಬಂದಿದ್ದೇನೆ” ಎಂದು ಹೇಳಿದನು.
[22] ಯೇಸು ಅದನ್ನು ಕೇಳಿ ಅವನಿಗೆ, “ಇನ್ನೂ ನಿನಗೆ ಒಂದು ಕೊರತೆಯಿದೆ. ನಿನಗಿರುವುದನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು, ಪರಲೋಕದಲ್ಲಿ ನಿನಗೆ ಸಂಪತ್ತುಂಟಾಗುವುದು. ತರುವಾಯ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
[23] ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ದುಃಖಪಟ್ಟನು.
[24] ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ.
[25] ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಅಂದನು.
[26] ಈ ಮಾತನ್ನು ಕೇಳಿದವರು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು?” ಎಂದು ಕೇಳಲು,
[27] ಆತನು, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಅಂದನು.
[28] ಆಗ ಪೇತ್ರನು, “ಇಗೋ, ನಾವು ನಮ್ಮ ನಮ್ಮ ಮನೆ ಮಾರುಗಳನ್ನು ಬಿಟ್ಟು ನಿನ್ನ ಹಿಂಬಾಲಿಸಿದೆವು” ಎಂದು ಹೇಳಲು,
[29] ಆತನು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯಕ್ಕಾಗಿ ಮನೆಯನ್ನಾಗಲಿ, ಹೆಂಡತಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಗಳನ್ನಾಗಲಿ, ಮಕ್ಕಳನ್ನಾಗಲಿ ತ್ಯಜಿಸುತ್ತಾನೋ,
[30] ಅವನಿಗೆ ಈ ಲೋಕದಲ್ಲಿ ಅನೇಕ ಪಾಲು ಹೆಚ್ಚಾಗಿ ಸಿಕ್ಕೇ ಸಿಕ್ಕುತ್ತವೇ. ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು” ಎಂದು ಹೇಳಿದನು.
[31] ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವುದು.
[32] ಹೇಗೆಂದರೆ, ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು, ಅವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು,
[33] ಕೊರಡೆಗಳಿಂದ ಹೊಡೆಯುವರು, ಕೊಲ್ಲುವರು ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.
[34] ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಆತನು ಏನು ಹೇಳುತ್ತಿದ್ದಾನೆಂದು ಅವರಿಗೆ ತಿಳಿಯಲಿಲ್ಲ.
[35] ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಬಳಿಯಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು,
[36] ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು.
[37] ಅವರು ಅವನಿಗೆ, ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ,
[38] ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಂಡನು.
[39] ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಮತ್ತಷ್ಟು ಬೇಡಿಕೊಂಡನು.
[40] ಆಗ ಯೇಸು ನಿಂತು, ಅವನನ್ನು ತನ್ನ ಬಳಿಗೆ ಕರೆತರುವುದಕ್ಕೆ ಅಪ್ಪಣೆಕೊಟ್ಟನು. ಅವನು ಹತ್ತಿರಕ್ಕೆ ಬಂದಾಗ,
[41] ಆತನು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?” ಎಂದು ಕೇಳಲು, ಅವನು, “ನನಗೆ ಕಣ್ಣುಕಾಣುವಂತೆ ಮಾಡು ಕರ್ತನೇ” ಅಂದನು.
[42] ಯೇಸು ಅವನಿಗೆ, “ನಿನಗೆ ಕಣ್ಣುಕಾಣುವಂತಾಗಲಿ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ” ಎಂದು ಹೇಳಿದನು.
[43] ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು, ಅವನು ದೇವರನ್ನು ಕೊಂಡಾಡುತ್ತಾ ಯೇಸುವಿನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.