Skip to content
Opens in a new window
Listen to this chapter • 7:05

[1] ಯೇಸು ತನ್ನ ಶಿಷ್ಯರಿಗೆ, “ಶೋಧನೆಗಳು ಬರುವುದು ಸಹಜ, ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ?

[2] ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಮಾಡುವುದಕ್ಕೆ ಕಾರಣನಾಗುವುದಕ್ಕಿಂತ ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದೇ ಲೇಸು.

[3] ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು. ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು.

[4] ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು” ಎಂದು ಹೇಳಿದನು.

[5] ಅಪೊಸ್ತಲರು ಕರ್ತನಿಗೆ, “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಹೇಳಲು,

[6] ಕರ್ತನು, “ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ’ ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು” ಅಂದನು.

[7] “ನಿಮ್ಮಲ್ಲಿ ಯಾವನಿಗಾದರೂ ವ್ಯವಸಾಯ ಮಾಡುವ ಅಥವಾ ಕುರಿಮೇಯಿಸುವ ಆಳಿರಲಾಗಿ, ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ, ‘ನೀನು ತಟ್ಟನೆ ಬಂದು ಊಟಕ್ಕೆ ಕುಳಿತುಕೋ’ ಎಂದು ಹೇಳುವನೇ?

[8] ಹಾಗೆ ಹೇಳದೆ, ‘ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು, ನಾನು ಊಟಮಾಡುವ ತನಕ ನಡುಕಟ್ಟಿಕೊಂಡು ನನಗೆ ಸೇವೆಮಾಡು. ಆ ಮೇಲೆ ನೀನು ಊಟಮಾಡು, ಕುಡಿ’ ಎಂದು ಹೇಳುವನಲ್ಲವೇ.

[9] ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ, ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ.

[10] ನೀವು ನಿಮಗೆ ಅಪ್ಪಣೆಯಾಗಿರುವುದನ್ನೆಲ್ಲಾ ಮಾಡಿದ ಮೇಲೆ ‘ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ’ ಅನ್ನಿರಿ” ಎಂದು ಹೇಳಿದನು.

[11] ಯೇಸು ಯೆರೂಸಲೇಮಿಗೆ ಪ್ರಯಾಣಮಾಡುವಾಗ ಸಮಾರ್ಯ, ಗಲಿಲಾಯ ಸೀಮೆಗಳ ನಡುವೆ ಹಾದುಹೋದನು.

[12] ಒಂದು ಹಳ್ಳಿಗೆ ಬಂದಾಗ ಹತ್ತುಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು,

[13] “ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು” ಎಂದು ಕೂಗಿ ಹೇಳಿದರು.

[14] ಆತನು ಅವರನ್ನು ನೋಡಿ, “ನೀವು ಹೋಗಿ ಯಾಜಕರಿಗೆ ನಿಮ್ಮ ಮೈ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.

[15] ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು,

[16] ಯೇಸುವಿನ ಪಾದಗಳಿಗೆ ಅಡ್ಡಬಿದ್ದು, ಆತನಿಗೆ ಕೃತಜ್ಞತಾಸುತ್ತಿಯನ್ನು ಸಲ್ಲಿಸಿದನು. ಅವನು ಸಮಾರ್ಯದವನು.

[17] ಯೇಸು ಇದನ್ನು ನೋಡಿ, “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ?

[18] ದೇವರನ್ನು ಸ್ತುತಿಸುವುದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ?” ಎಂದು ಹೇಳಿ,

[19] ಅವನಿಗೆ, “ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ” ಎಂದು ಹೇಳಿದನು.

[20] ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ, “ದೇವರ ರಾಜ್ಯವು ನೀವು ಗಮನಿಸುತ್ತಾ ಕಾಯುತ್ತಿರುವಾಗ ಪ್ರತ್ಯಕ್ಷವಾಗಿ ಬರುವಂಥದಲ್ಲ.

[21] ‘ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ’ ಎಂದು ಹೇಳುವುದಕ್ಕಾಗದು. ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಎಂದು ತಿಳಿದುಕೊಳ್ಳಿರಿ” ಎಂದು ಹೇಳಿದನು.

[22] ಮತ್ತು ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ಮನುಷ್ಯಕುಮಾರನ ದಿನಗಳೊಳಗೆ ಒಂದು ದಿನವನ್ನು ನೋಡಬೇಕೆಂದು ಅಪೇಕ್ಷಿಸಿದರೂ ಅದನ್ನು ನೋಡದೆ ಇರುವಿರಿ.

[23] ಜನರು ನಿಮಗೆ, ‘ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ’ ಎಂದು ಹೇಳಿದರೆ ನೀವು ಅವರು ಹೇಳುವಲ್ಲಿಗೆ ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ.

[24] ಏಕೆಂದರೆ ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹೇಗೆ ಹೊಳೆಯುವುದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿರುವನು.

[25] ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಸಂತತಿಯಿಂದ ತಿರಸ್ಕರಿಸಲ್ಪಡಬೇಕು.

[26] ನೋಹನ ದಿನಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿನಗಳಲ್ಲಿಯೂ ನಡೆಯುವುದು.

[27] ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಳಯವು ಬಂದು ಎಲ್ಲರನ್ನು ನಾಶಮಾಡಿತು.

[28] ಮತ್ತು ಲೋಟನ ದಿನಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.

[29] ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿನದಲ್ಲಿ, ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು.

[30] ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿನದಲ್ಲಿ ಅದೇ ರೀತಿಯಾಗಿ ಇರುವುದು.

[31] ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಇಳಿದು ಬರಬಾರದು. ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರುಗಿ ಹಿಂದಕ್ಕೆ ಹೋಗಬಾರದು.

[32] ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ.

[33] ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಪ್ರಾಣವನ್ನು ಕಳೆದುಕೊಂಡವನು ಅದನ್ನು ರಕ್ಷಿಸಿಕೊಳ್ಳುವನು.

[34] ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು. ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಕೈ ಬಿಡಲ್ಪಡುವನು.

[35] ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು. ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು.”

[36] “ಹೊಲದಲ್ಲಿ ಇಬ್ಬರಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಬಿಡಲ್ಪಡುವನು” ಅಂದನು.

[37] ಈ ಮಾತಿಗೆ ಶಿಷ್ಯರು, “ಕರ್ತನೇ, ಅದು ಎಲ್ಲಿ ಆಗುವುದು?” ಎಂದು ಕೇಳಲು ಆತನು ಅವರಿಗೆ, “ಹೆಣ ಎಲ್ಲಿಯೋ ಅಲ್ಲಿಯೇ ರಣಹದ್ದುಗಳು ಬಂದು ಸೇರುವವು” ಎಂದು ಉತ್ತರಕೊಟ್ಟನು.

ಲೂಕನು — Chapters