Skip to content
Opens in a new window
Listen to this chapter • 4:00

[1] ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಮತ್ತು ಸಲೋಮಿಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧ ದ್ರವ್ಯಗಳನ್ನು ಕೊಂಡರು.

[2] ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು.

[3] “ಸಮಾಧಿಯ ಬಾಗಿಲಿನಿಂದ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.

[4] ಸಮಾಧಿಯ ಕಡೆಗೆ ನೋಡಿದಾಗ ಆ ದೊಡ್ಡ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡರು.

[5] ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು.

[6] ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ,

[7] ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ ಆತನು ನಿಮಗೆ ಹೇಳಿದಂತೆ ನಿಮಗಿಂತ ಮೊದಲು ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ” ಎಂದು ಹೇಳಿದನು.

[8] ಅವರು ವಿಸ್ಮಯಗೊಂಡು ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.

[9] ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು.

[10] ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಅವರು ಶೋಕಿಸುತ್ತಾ ಅಳುತ್ತಿದ್ದರು.

[11] “ಆತನು ಬದುಕಿದ್ದಾನೆ ನನಗೆ ಕಾಣಿಸಿಕೊಂಡನು” ಎಂದು ಅವಳು ಹೇಳಿದ ಮಾತನ್ನು ಅವರು ನಂಬಲಿಲ್ಲ.

[12] ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಊರಿಗೆ ಪ್ರಯಾಣ ಮಾಡುತ್ತಿರುವಾಗ ಆತನು ಅವರಿಗೆ ಬೇರೆ ರೂಪದಲ್ಲಿ ಕಾಣಿಸಿಕೊಂಡನು.

[13] ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಶಿಷ್ಯರು ಅವರನ್ನೂ ನಂಬಲಿಲ್ಲ.

[14] ಅನಂತರ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ನೋಡಿದವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು.

[15] ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ.

[16] ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು.

[17] “ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು;

[18] ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು.

[19] ಕರ್ತನಾದ ಯೇಸು ಅವರೊಂದಿಗೆ ಮಾತನಾಡಿದ ಮೇಲೆ ಪರಲೋಕಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು.

[20] ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.

ಮಾರ್ಕನು — Chapters