Skip to content
Opens in a new window
Listen to this chapter • 4:55

[1] ಇದು ಕ್ರಿಸ್ತ ಯೇಸುವಿನ ಪ್ರಕಟನೆ. ಶೀಘ್ರವೇ ಸಂಭವಿಸಲಿಕ್ಕಿರುವ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟನೆಯನ್ನು ಹೊಂದಿದರು. ಇದಲ್ಲದೆ ದೇವರು ತಮ್ಮ ದೇವದೂತನನ್ನು ಕಳುಹಿಸಿ, ಅವನ ಮುಖಾಂತರ ಆ ಸಂಗತಿಗಳನ್ನು ತಮ್ಮ ದಾಸನಾದ ಯೋಹಾನನಿಗೆ ತಿಳಿಸಿದರು.

[2] ಯೋಹಾನನು ತಾನು ಕಂಡ ಎಲ್ಲಾ ಸಂಗತಿಗಳನ್ನು ಅಂದರೆ ದೇವರ ವಾಕ್ಯದ ವಿಷಯವಾಗಿಯೂ ಕ್ರಿಸ್ತ ಯೇಸುವಿನ ವಿಷಯವಾಗಿಯೂ ತಿಳಿಸಿ ಸಾಕ್ಷಿಕೊಟ್ಟನು.

[3] ಈ ಪ್ರವಾದನೆಯ ವಾಕ್ಯಗಳನ್ನು ಓದುವಂಥವರೂ ಕೇಳುವಂಥವರೂ ಈ ಪ್ರವಾದನೆಯ ವಾಕ್ಯಗಳಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಏಕೆಂದರೆ ಸಮಯವು ಸಮೀಪವಾಗಿದೆ.

[4] ಯೋಹಾನನು, ಅಂದಿನ ಏಷ್ಯಾ ಪ್ರಾಂತದಲ್ಲಿರುವ ಏಳು ಸಭೆಗಳಿಗೆ ಬರೆಯುವುದೇನೆಂದರೆ, ಗತಕಾಲ, ವರ್ತಮಾನ, ಭವಿಷ್ಯತ್ ಕಾಲಗಳಲ್ಲಿರುವ ದೇವರಿಂದ ಮತ್ತು ತಮ್ಮ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ,

[5] ನಂಬಿಗಸ್ತ ಸಾಕ್ಷಿಯೂ ಸತ್ತವರೊಳಗಿಂದ ಪ್ರಥಮವಾಗಿ ಜೀವಂತವಾಗಿ ಎದ್ದು ಬಂದವರೂ ಭೂರಾಜರಿಗೆ ಒಡೆಯರೂ ಆಗಿರುವ ಕ್ರಿಸ್ತ ಯೇಸುವಿನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಅವರೇ ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವರೂ ಆಗಿದ್ದಾರೆ.

[6] ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತಮ್ಮ ತಂದೆಯಾದ ದೇವರಿಗೆ ಸೇವೆ ಸಲ್ಲಿಸುವ ಯಾಜಕರನ್ನಾಗಿಯೂ ಮಾಡಿರುವ ಕ್ರಿಸ್ತ ಯೇಸುವಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು, ಬಲವು ಇರಲಿ ಆಮೆನ್.

[7] “ಇಗೋ, ಯೇಸು ಮೇಘಗಳೊಂದಿಗೆ ಬರುತ್ತಾರೆ,” ಮತ್ತು “ಎಲ್ಲರ ಕಣ್ಣುಗಳು ಅವರನ್ನು ಕಾಣುವವು, ಅವರನ್ನು ಇರಿದವರು ಸಹ ಕಾಣುವರು.” ಭೂಲೋಕದಲ್ಲಿರುವ ಎಲ್ಲಾ ಜನರು, “ಅವರ ದೆಸೆಯಿಂದ ಗೋಳಾಡುವರು.” ಹೌದು, ಹಾಗೆಯೇ ಆಗುವುದು! ಆಮೆನ್.

[8] “ನಾನೇ ಆದಿಯೂ ಅಂತ್ಯವೂ ಗತಕಾಲ, ವರ್ತಮಾನ, ಭವಿಷ್ಯತ್ಕಾಲಗಳಲ್ಲಿರುವವನೂ ಮತ್ತು ಸರ್ವಶಕ್ತನೂ ಆಗಿದ್ದೇನೆ,” ಎಂದು ಕರ್ತದೇವರು ಹೇಳುತ್ತಾರೆ.

[9] ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಆಗುವ ಬಾಧೆಯಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.

[10] ನಾನು ಕರ್ತ ಯೇಸುವಿನ ದಿನದಲ್ಲಿ ಆತ್ಮಭರಿತನಾಗಿರಲು ನನ್ನ ಹಿಂದೆ ತುತೂರಿಯ ಶಬ್ದದಂತಿರುವ ಮಹಾಧ್ವನಿಯನ್ನು ಕೇಳಿದೆನು.

[11] ಅದು, “ಕಾಣುತ್ತಿರುವುದನ್ನು ಸುರುಳಿಯಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯದಲ್ಲಿರುವ ಏಳು ಸಭೆಗಳಿಗೆ ಕಳುಹಿಸಬೇಕು,” ಎಂದು ನುಡಿಯಿತು.

[12] ನನ್ನೊಂದಿಗೆ ಮಾತನಾಡುತ್ತಿದ್ದ ಧ್ವನಿಯು ಯಾರದೆಂದು ನೋಡುವುದಕ್ಕೆ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ

[13] ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಪುತ್ರ ಇವರ ಹಾಗೆ ಒಬ್ಬ ವ್ಯಕ್ತಿ ಇರುವವರನ್ನೂ ಕಂಡೆನು. ಅವರು ಪಾದದವರೆಗೆ ಮುಚ್ಚುವ ನಿಲುವಂಗಿಯನ್ನು ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದರು.

[14] ಅವರ ತಲೆ ಕೂದಲುಗಳು ಬಿಳಿಯ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿದ್ದವು. ಅವರ ನೇತ್ರಗಳು ಬೆಂಕಿಯ ಜ್ವಾಲೆಯಂತೆಯೂ

[15] ಅವರ ಪಾದಗಳು ಕುಲುಮೆಯಲ್ಲಿ ಹೊಳೆಯುವ ತಾಮ್ರದಂತೆಯೂ ಅವರ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.

[16] ಅವರು ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿದ್ದರು. ಅವರ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಅವರ ಮುಖವು ಸೂರ್ಯನ ತೇಜಸ್ಸಿನಂತೆ ಪ್ರಕಾಶಿಸುವಂತಿತ್ತು.

[17] ನಾನು ಅವರನ್ನು ಕಂಡಾಗ ಸತ್ತವನ ಹಾಗೆ ಅವರ ಪಾದಗಳ ಮೇಲೆ ಬಿದ್ದೆನು. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, “ಭಯಪಡಬೇಡ, ನಾನು ಮೊದಲನೆಯವನೂ ಕಡೆಯವನೂ

[18] ಸದಾ ಜೀವಿಸುವವನೂ ಆಗಿದ್ದೇನೆ. ಮರಣ ಹೊಂದಿದ್ದೆನು, ಇಗೋ, ಯುಗಯುಗಾಂತರಗಳಲ್ಲಿಯೂ ನಾನು ಬದುಕುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನ ಬಳಿ ಇವೆ.

[19] “ಆದ್ದರಿಂದ ನೀನು ಕಂಡದ್ದವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಸಂಭವಿಸುವವುಗಳನ್ನೂ ಬರೆ.

[20] ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ರಹಸ್ಯ ಏನೆಂದರೆ: ಆ ಏಳು ನಕ್ಷತ್ರಗಳು, ಆ ಏಳು ಸಭೆಗಳ ಸಂದೇಶಕರು, ಆ ಏಳು ದೀಪಸ್ತಂಭಗಳು, ಆ ಏಳು ಸಭೆಗಳಾಗಿರುತ್ತವೆ.

ಪ್ರಕಟನೆ — Chapters