Skip to content
Opens in a new window
Listen to this chapter • 4:26

[1] ಆಗ ದೇವಾಲಯದಿಂದ ಬಂದ ಗಟ್ಟಿಯಾದ ಧ್ವನಿಯು, ಏಳು ದೇವದೂತರಿಗೂ, “ಹೋಗಿರಿ, ಏಳು ಬೋಗುಣಿಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿರಿ!” ಎಂದು ಹೇಳುವುದನ್ನು ನಾನು ಕೇಳಿದೆನು.

[2] ಮೊದಲನೆಯ ದೂತನು ಹೋಗಿ ತನ್ನ ಬೋಗುಣಿಯೊಳಗಿರುವುದನ್ನು ಭೂಮಿಯ ಮೇಲೆ ಸುರಿಯಲು, ಮೃಗದ ಗುರುತನ್ನು ಹಾಕಿಸಿಕೊಂಡು ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.

[3] ಎರಡನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಸಮುದ್ರದ ಮೇಲೆ ಸುರಿಯಲು, ಅದು ಸತ್ತ ಮನುಷ್ಯನ ರಕ್ತದಂತಾಯಿತು, ಸಕಲ ಜೀವಿಗಳೂ ಸತ್ತವು.

[4] ಮೂರನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ನದಿಗಳ ಮೇಲೂ ನೀರಿನ ಬುಗ್ಗೆಗಳ ಮೇಲೂ ಸುರಿಯಲು, ಅವು ರಕ್ತವಾದವು.

[5] ಆಗ ಜಲಾಶಯದ ಜಲಗಳ ದೂತನು: “ನೀವು ಇದ್ದವರೂ, ಇರುವವರೂ ಆಗಿರುವ ಪರಿಶುದ್ಧರು. ನೀವು ನೀತಿವಂತರಾಗಿದ್ದೀರಿ. ಏಕೆಂದರೆ, ನೀವು ಇವುಗಳಿಗೆ ನ್ಯಾಯತೀರಿಸುವಿರಿ.

[6] ಅವರು ನಿಮ್ಮ ಭಕ್ತರ ಮತ್ತು ನಿಮ್ಮ ಪ್ರವಾದಿಗಳ ರಕ್ತವನ್ನು ಸುರಿಸಿದ್ದಾರೆ. ನೀವು ಅವರಿಗೆ ಕುಡಿಯುವುದಕ್ಕೆ ರಕ್ತವನ್ನೇ ಕೊಟ್ಟಿರುವಿರಿ. ಅವರು ಅದಕ್ಕೆ ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.

[7] ಆಗ ಬಲಿಪೀಠವು ಹೀಗೆ ಮಾತನಾಡುವುದನ್ನು ಕೇಳಿದೆನು: “ಕರ್ತಾ, ಸರ್ವಶಕ್ತರಾದ ದೇವರೇ, ನಿಮ್ಮ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ.”

[8] ನಾಲ್ಕನೆಯ ದೇವದೂತನು ತನ್ನ ಬೋಗುಣಿಯೊಳಗಿರುವುದನ್ನು ಸೂರ್ಯನ ಮೇಲೆ ಸುರಿಯಲು, ಸೂರ್ಯನಿಗೆ ಮನುಷ್ಯರನ್ನು ಬೆಂಕಿಯಿಂದ ಕಂದಿಸುವ ಅಧಿಕಾರ ಕೊಡಲಾಯಿತು.

[9] ಮನುಷ್ಯರು ಬಲವಾದ ಕಾವಿನಿಂದ ಕಂದಿ ಹೋದಾಗ್ಯೂ, ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದರು. ಆದರೆ ಅವರು ದೇವರಿಗೆ ಮಹಿಮೆಯನ್ನು ಸಲ್ಲಿಸುವ ಹಾಗೆ ಪಶ್ಚಾತ್ತಾಪ ಪಡಲಿಲ್ಲ.

[10] ಐದನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು, ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು,

[11] ತಮ್ಮ ನೋವುಗಳಿಗಾಗಿಯೂ ಹುಣ್ಣುಗಳಿಗಾಗಿಯೂ ಪರಲೋಕದ ದೇವರನ್ನು ದೂಷಿಸಿದರು. ಆದರೆ ಅವರು, ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡಲಿಲ್ಲ.

[12] ಆರನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಸುರಿಯಲು, ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ ಅದರ ನೀರು ಬತ್ತಿಹೋಯಿತು.

[13] ಆಗ ಕಪ್ಪೆಗಳಂತೆ ಕಾಣುವ ಮೂರು ಅಶುದ್ಧಾತ್ಮಗಳು ಘಟಸರ್ಪನ ಬಾಯೊಳಗಿಂದಲೂ ಮತ್ತು ಸುಳ್ಳು ಪ್ರವಾದಿಯ ಬಾಯೊಳಗಿಂದಲೂ ಮೃಗದ ಬಾಯೊಳಗಿಂದಲೂ ಬರುವುದನ್ನು ಕಂಡೆನು.

[14] ಅವು ಸೂಚಕಕಾರ್ಯಗಳನ್ನು ನಡೆಸುವ ದೆವ್ವಗಳ ಆತ್ಮಗಳಾಗಿದ್ದು, ಭೂಲೋಕದ ರಾಜರುಗಳನ್ನು ಸರ್ವಶಕ್ತರಾದ ದೇವರ ಮಹಾದಿನದ ಯುದ್ಧಕ್ಕಾಗಿ ಕೂಡಿಸುವುದಕ್ಕಾಗಿ ಹೊರಟವು.

[15] “ಇಗೋ, ನಾನು ಕಳ್ಳನು ಬರುವಂತೆ ಬರುತ್ತೇನೆ. ಬೆತ್ತಲೆಯಾಗಿ ತಿರುಗಾಡಿ, ಜನರಿಂದ ಅವಮಾನಗೊಳ್ಳದಂತೆ ಎಚ್ಚರವಾಗಿದ್ದು ತನ್ನ ವಸ್ತ್ರವನ್ನು ಯಾವನು ಕಾಪಾಡಿಕೊಳ್ಳುತ್ತಾನೋ ಅವನು ಧನ್ಯನು.”

[16] ಆಗ ಅವು ಅವರನ್ನು ಹೀಬ್ರೂ ಭಾಷೆಯಲ್ಲಿ ಹರ್ಮಗೆದೋನ್ ಎಂಬ ಹೆಸರಿನ ಸ್ಥಳಕ್ಕೆ ಸೇರಿಸಿದವು.

[17] ಏಳನೆಯ ದೂತನು ತನ್ನ ಬೋಗುಣಿಯಲ್ಲಿರುವುದನ್ನು ವಾಯುಮಂಡಲದ ಮೇಲೆ ಸುರಿಯಲು, ಆ ದೇವಾಲಯದೊಳಗಿನ ಸಿಂಹಾಸನದಿಂದ ಬಂದ ಮಹಾಧ್ವನಿಯು, “ಸಂಭವಿಸಿದ್ದಾಯಿತು” ಎಂದು ಹೇಳುವುದನ್ನು ಕೇಳಿದೆನು.

[18] ಆಗ ಅಲ್ಲಿ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಮತ್ತು ಮಹಾಭೂಕಂಪವೂ ಸಂಭವಿಸಿದವು. ಮನುಷ್ಯನು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.

[19] ಮಹಾ ಪಟ್ಟಣವು ಮೂರು ಭಾಗಗಳಾಗಿ ಹೋಯಿತು ಮತ್ತು ರಾಷ್ಟ್ರಗಳ ನಗರಗಳು ಬಿದ್ದವು. ಇದಲ್ಲದೆ ಮಹಾ ಬಾಬಿಲೋನಿಗೆ ರೋಷವೆಂಬ ದ್ರಾಕ್ಷಾರಸದ ಬಟ್ಟಲನ್ನು ಕೊಡುವಂತೆ ದೇವರಿಗೆ ಅದು ಜ್ಞಾಪಕಕ್ಕೆ ಬಂತು.

[20] ಆಗ ಪ್ರತಿಯೊಂದು ದ್ವೀಪಗಳು ಮರೆಯಾಗಿ ಹೋದವು, ಬೆಟ್ಟಗಳು ಕಾಣದಂತಾದವು.

[21] ಆಕಾಶದಿಂದ ಒಂದೊಂದು ಸುಮಾರು ನಲವತ್ತೈದು ಕಿಲೋಗ್ರಾಂ ತೂಕದ ಬಹುದೊಡ್ಡ ಆಲಿಕಲ್ಲುಗಳು ಮನುಷ್ಯರ ಮೇಲೆ ಬಿದ್ದವು. ಆಲಿಕಲ್ಲಿನ ಉಪದ್ರವವು ಬಹು ಹೆಚ್ಚಾಗಿದ್ದರಿಂದಲೂ ಮನುಷ್ಯರು ದೇವರನ್ನು ದೂಷಿಸಿದರು.

ಪ್ರಕಟನೆ — Chapters