Skip to content
Opens in a new window
Listen to this chapter • 2:57

[1] ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.

[2] ಕೂಡಲೇ ನಾನು ಆತ್ಮವಶನಾದೆನು. ಆಗ ನನ್ನೆದುರಿನಲ್ಲಿ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬರು ಕುಳಿತಿದ್ದರು.

[3] ಆಸೀನರಾದವರು ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದರು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆಬಿಲ್ಲು ಹೊಳೆಯುತ್ತಿತ್ತು.

[4] ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು.

[5] ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹರಡಿದವು. ಸಿಂಹಾಸನದ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಬೆಳಗುತ್ತಿದ್ದವು.

[6] ಇದಲ್ಲದೆ ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ, ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.

[7] ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯದು ಮನುಷ್ಯನಂತಿತ್ತು, ನಾಲ್ಕನೆಯದು ಹಾರುವ ಹದ್ದಿನಂತಿತ್ತು.

[8] ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು: “ ‘ದೇವರು ಆಗಿರುವ ಕರ್ತ ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು, ಅವರು ಸರ್ವಶಕ್ತರು,’ ಗತಕಾಲ, ವರ್ತಮಾನ ಭವಿಷ್ಯತ್ಕಾಲಗಳಲ್ಲಿ ಇರುವವರು.”

[9] ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ,

[10] ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ,

[11] “ನಮ್ಮ ಕರ್ತ ಆಗಿರುವ ದೇವರೇ, ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ. ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು, ನಿಮ್ಮ ಚಿತ್ತದಿಂದಲೇ ಇದ್ದವು,” ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.

ಪ್ರಕಟನೆ — Chapters