[1] ಕ್ರಿಸ್ತ ಯೇಸುವಿನ ದಾಸನೂ ಯಾಕೋಬನ ಸಹೋದರನೂ ಆಗಿರುವ ಯೂದನು, ತಂದೆಯಾದ ದೇವರಿಗೆ ಪ್ರಿಯರಾದವವರಿಗೂ ಕ್ರಿಸ್ತ ಯೇಸು ಸುರಕ್ಷತೆಯನ್ನೂ ಅವರ ಕರೆಯುವಿಕೆಯನ್ನೂ ಹೊಂದಿದವರಿಗೆ ಬರೆಯುವ ಪತ್ರ:
[2] ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
[3] ಪ್ರಿಯ ಸ್ನೇಹಿತರೇ, ನಾವು ಹಂಚಿಕೊಳ್ಳುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಜಾಗ್ರತೆಯಿಂದ ಪ್ರಯತ್ನ ಮಾಡುತ್ತಿದ್ದಾಗ, ಪರಿಶುದ್ಧರಿಗೆ ಒಂದೇ ಸಾರಿ ಒಪ್ಪಿಸಲಾದ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
[4] ಏಕೆಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆಪಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡೆಸುವವರೂ ನಮ್ಮ ಒಬ್ಬರೇ ಕರ್ತ ಆಗಿರುವ ದೇವರನ್ನು ಮತ್ತು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಲ್ಲಗಳೆಯುವ ಕೆಲವು ಜನರೂ ರಹಸ್ಯವಾಗಿ ಸಭೆಯೊಳಗೆ ಹೊಕ್ಕಿದ್ದಾರೆ. ಇವರು ದಂಡನೆಗೋಸ್ಕರ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ.
[5] ಇದನ್ನು ನೀವು ಈಗಾಗಲೇ ಒಂದು ಸಾರಿ ತಿಳಿದವರಾಗಿದ್ದೀರಿ. ಆದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವುದೆಂದರೆ: ಕರ್ತದೇವರು ತಮ್ಮ ಪ್ರಜೆಯನ್ನು ಈಜಿಪ್ಟ್ ದೇಶದೊಳಗಿಂದ ರಕ್ಷಿಸಿದರೂ ತರುವಾಯ ಅವರೊಳಗೆ ನಂಬದೆ ಹೋದವರನ್ನು ಸಂಹಾರ ಮಾಡಿದರು.
[6] ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ಅವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿಟ್ಟಿದ್ದಾರೆ.
[7] ಸೊದೋಮ ಗೊಮೋರದವರೂ ಹಾಗೆಯೇ ಅವುಗಳ ಸುತ್ತಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಅನೈತಿಕತೆಗೆ ಒಪ್ಪಿಸಿಕೊಟ್ಟರು. ಅವರು ಸ್ವಭಾವಕ್ಕೆ ವಿರುದ್ಧ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲಾಗಿದ್ದಾರೆ.
[8] ಹಾಗೆಯೇ ಈ ದುಃಸ್ವಪ್ನದವರೂ ಶರೀರವನ್ನು ಮಲಿನಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆಮಾಡುವವರೂ ದೇವದೂತರುಗಳನ್ನು ದೂಷಿಸುವವರೂ ಆಗಿದ್ದಾರೆ.
[9] ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು, ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ, ಅವನು ಸೈತಾನನನ್ನು ದೂಷಿಸುವುದಕ್ಕೆ ಧೈರ್ಯಗೊಳ್ಳದೆ, “ಕರ್ತದೇವರು ನಿನ್ನನ್ನು ಗದರಿಸಲಿ!” ಎಂದನು.
[10] ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ. ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
[11] ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವುದಕ್ಕಾಗಿ ಬಿಳಾಮನ ದೋಷವನ್ನು ಮಾಡುವುದಕ್ಕೆ ದುರಾಶೆಯಿಂದ ಓಡುವವರಾಗಿದ್ದಾರೆ. ಅವರು ಕೋರಹನಂತೆ ಎದುರು ಮಾತನಾಡಿ ನಾಶವಾಗುವವರಾಗಿದ್ದಾರೆ. ಆದ್ದರಿಂದ ಅವರ ಗತಿ ಏನೆಂದು ಹೇಳಲಿ!
[12] ಕಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು, ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಚದುರಿ ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತು, ಹಣ್ಣು ಬಿಡದೆ ಒಣಗಿ ಹೋಗಿ ಬೇರುಸಹಿತ ಕಿತ್ತು ಬಿದ್ದ ಮರಗಳೂ
[13] ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲಕ್ಕೆ ಇಡಲಾಗಿದೆ.
[14] ಇಂಥವರ ವಿಷಯದಲ್ಲಿಯೇ ಆದಾಮನಿಂದ ಏಳನೆಯವನಾದ ಹನೋಕನು ಸಹ, “ಇಗೋ, ಕರ್ತದೇವರು ತಮ್ಮ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು
[15] ಎಲ್ಲರಿಗೆ ನ್ಯಾಯತೀರಿಸುವುದಕ್ಕೆ ಬರುವರು. ಮಾತ್ರವಲ್ಲದೆ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರೋಧವಾಗಿ ಆಡಿದ ಎಲ್ಲಾ ದೂಷಣೆಗಳ ವಿಷಯವಾಗಿ ಅವರನ್ನು ಖಂಡಿಸಲು ಬರುವರು,” ಎಂಬುದಾಗಿ ಪ್ರವಾದಿಸಿದನು.
[16] ಇವರು ಗೊಣಗುಟ್ಟುವವರೂ ದೂರುವವರೂ ತಮ್ಮ ದುರಾಶೆಗಳನ್ನು ಅನುಸರಿಸಿ ನಡೆಯುವವರೂ ಆಗಿದ್ದಾರೆ. ಇವರ ಬಾಯಿಂದ ದೊಡ್ಡ ದೊಡ್ಡ ಮಾತುಗಳು ಉದುರುತ್ತವೆ. ಇವರು ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುತ್ತಾರೆ.
[17] ಪ್ರಿಯ ಸ್ನೇಹಿತರೇ, ನೀವಾದರೋ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
[18] “ಭಕ್ತಿಗೆ ವಿರುದ್ಧವಾದ ತಮ್ಮ ಆಶೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರು,” ಎಂದು ಅಪೊಸ್ತಲರು ನಿಮಗೆ ಹೇಳಿದರು.
[19] ಇವರು ನಿಮ್ಮಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುವವರೂ ಪ್ರಾಪಂಚಿಕ ಮನುಷ್ಯರೂ ಪವಿತ್ರಾತ್ಮ ದೇವರಿಲ್ಲದವರೂ ಆಗಿದ್ದಾರೆ.
[20] ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ನಂಬಿಕೆಯಲ್ಲಿ ನಿಮ್ಮನ್ನು ನಿರ್ಮಿಸಿಕೊಂಡವರಾಗಿ ಪರಿಶುದ್ಧಾತ್ಮ ದೇವರಲ್ಲಿ ಪ್ರಾರ್ಥಿಸಿರಿ.
[21] ನಿತ್ಯಜೀವಕ್ಕಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕರುಣೆಗೋಸ್ಕರ ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.
[22] ಸಂಶಯಪಡುವ ಕೆಲವರಿಗೆ ಕನಿಕರವನ್ನು ತೋರಿಸಿರಿ.
[23] ಬೇರೆಯವರನ್ನು ಬೆಂಕಿಯಿಂದ ಎಳೆದು ರಕ್ಷಿಸಿರಿ. ಭಯದಿಂದ ಕರುಣೆ ತೋರಿಸಿರಿ. ಪಾಪ ಕೃತ್ಯಗಳಿಂದ ಮೈಲಿಗೆಯಾದ ಅವರ ಜೀವನವನ್ನು ಸಹ ಹಗೆ ಮಾಡಿರಿ.
[24] ಎಡವಿಬೀಳದಂತೆ ನಿಮ್ಮನ್ನು ಕಾಪಾಡುವುದಕ್ಕೂ ತಮ್ಮ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ಅತ್ಯಂತ ಹರ್ಷದೊಡನೆ ನಿರ್ದೋಷಿಗಳನ್ನಾಗಿ ನಿಲ್ಲಿಸುವುದಕ್ಕೂ ಶಕ್ತರಾಗಿರುವ
[25] ನಮ್ಮ ರಕ್ಷಕರಾದ ಒಬ್ಬರೇ ದೇವರಿಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಬಲವು, ಅಧಿಕಾರಗಳು ಎಂದೂ ಇದ್ದಂತೆ ಈಗಲೂ ಯಾವಾಗಲೂ ಇರಲಿ. ಆಮೆನ್.