Skip to content
Opens in a new window
Listen to this chapter • 6:06

[1] ತರುವಾಯ, “ನೂತನ ಆಕಾಶವನ್ನೂ ನೂತನ ಭೂಮಿಯನ್ನೂ” ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಇಲ್ಲದಂತಾದವು. ಇನ್ನು ಸಮುದ್ರವು ಇರಲಿಲ್ಲ.

[2] ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ನೂತನ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾದ ವಧುವಿನಂತೆ ಶೃಂಗರಿಸಲಾಗಿತ್ತು.

[3] ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, “ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು.

[4] ‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’ ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!” ಎಂದು ಹೇಳಿತು.

[5] ಆಗ ಸಿಂಹಾಸನದ ಮೇಲೆ ಕುಳಿತಿದ್ದವರು, “ಇಗೋ, ನಾನು ಎಲ್ಲವನ್ನೂ ನೂತನಗೊಳಿಸುತ್ತೇನೆ!” ಎಂದರು ಮತ್ತು ನನಗೆ, “ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ ಸತ್ಯವಾದವೂ ಆಗಿವೆ!” ಎಂದು ಹೇಳಿದನು.

[6] ಆಗ ಸಿಂಹಾಸನದ ಮೇಲೆ ಕುಳಿತಿದ್ದವರು, “ಎಲ್ಲಾ ನೆರವೇರಿತು, ನಾನು ಆದಿಯೂ ಅಂತ್ಯವೂ ಆರಂಭವೂ ಸಮಾಪ್ತಿಯೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವಜಲದ ಬುಗ್ಗೆಯಿಂದ ಉಚಿತವಾಗಿ ಕೊಡುವೆನು.

[7] ಜಯಹೊಂದುವವರು ಇವುಗಳಿಗೆ ಬಾಧ್ಯನಾಗುವರು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಮಕ್ಕಳಾಗಿರುವರು.

[8] ಆದರೆ ಹೇಡಿಗಳು, ನಂಬದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ, ಗಂಧಕಗಳುರಿಯುವ ಕೆರೆಯೇ, ಅದು ಎರಡನೆಯ ಮರಣವು!” ಎಂದು ನನಗೆ ಹೇಳಿದರು.

[9] ಅಂತಿಮ ಏಳು ಉಪದ್ರವಗಳಿಂದ ತುಂಬಿದ ಏಳು ಬೋಗುಣಿಗಳನ್ನು ಹಿಡಿದಿದ್ದ ಏಳುಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ, ಯಜ್ಞದ ಕುರಿಮರಿಯಾದವವರಿಗೆ ಹೆಂಡತಿಯಾಗತಕ್ಕ ವಧುವನ್ನು ನಿನಗೆ ತೋರಿಸುವೆನು!” ಎಂದು ಹೇಳಿ,

[10] ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಪರಿಶುದ್ಧ ಪಟ್ಟಣವಾದ ಯೆರೂಸಲೇಮು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದು ಬರುವುದನ್ನು ನನಗೆ ತೋರಿಸಿದನು.

[11] ಅದು ದೇವರ ಮಹಿಮೆಯಿಂದ ಕೂಡಿತ್ತು. ಪಟ್ಟಣದ ಪ್ರಕಾಶವು ಸೂರ್ಯಕಾಂತದಂತೆ ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು. ಅದು ಸ್ವಚ್ಛವಾದ ಸ್ಪಟಿಕದಂತೆ ಕಾಣಿಸಿತು.

[12] ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ ಪುತ್ರರ ಹನ್ನೆರಡು ಕುಲಗಳ ಹೆಸರುಗಳು ಬರೆದಿದ್ದವು.

[13] ಪೂರ್ವದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು.

[14] ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಕುರಿಮರಿಯಾದವರ ಹನ್ನೆರಡು ಜನ ಅಪೊಸ್ತಲರ ಹೆಸರುಗಳಿದ್ದವು.

[15] ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಗೋಡೆಯನ್ನೂ ಅಳತೆ ಮಾಡುವುದಕ್ಕಾಗಿ ತನ್ನ ಕೈಯಲ್ಲಿ ಚಿನ್ನದ ಅಳತೆಗೋಲನ್ನು ಹಿಡಿದಿದ್ದನು.

[16] ಆ ಪಟ್ಟಣವು ಚಚ್ಚೌಕವಾಗಿತ್ತು. ಅದರ ಉದ್ದವು, ಅದರ ಅಗಲದಷ್ಟಿತ್ತು. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು. ಅಳತೆಯು 2,200 ಕಿಲೋಮೀಟರ್ ಆಗಿತ್ತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿದ್ದವು.

[17] ಅವನು ಅದರ ಗೋಡೆಯನ್ನೂ ಅಳತೆ ಮಾಡಿದನು. ಅದು 65 ಮೀಟರ್ ಆಗಿತ್ತು. ಮನುಷ್ಯನ ಅಳತೆಯಂತೆ ದೇವದೂತನು ಅಳೆದನು.

[18] ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲಾಗಿತ್ತು. ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

[19] ಪಟ್ಟಣದ ಗೋಡೆಯು ಮತ್ತು ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿವಾರವು ಸೂರ್ಯಕಾಂತ, ಎರಡನೆಯದು ವೈಡೂರ್ಯ, ಮೂರನೆಯದು ಪಚ್ಚೆ, ನಾಲ್ಕನೆಯದು ಪದ್ಮರಾಗ,

[20] ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಬತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ, ಹನ್ನೆರಡನೆಯದು ನೀಲ ಸ್ಪಟಿಕ.

[21] ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದಾಗಿತ್ತು. ಪಟ್ಟಣದ ಮಹಾ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.

[22] ಪಟ್ಟಣದಲ್ಲಿ ನಾನು ಆಲಯವನ್ನೇ ಕಾಣಲಿಲ್ಲ. ಏಕೆಂದರೆ ಕರ್ತ ಆಗಿರುವ ಸರ್ವಶಕ್ತ ದೇವರೂ, ಕುರಿಮರಿಯಾಗಿರುವವರೂ ಆಲಯವಾಗಿದ್ದಾರೆ.

[23] ಪಟ್ಟಣವನ್ನು ಬೆಳಗಿಸಲು ಸೂರ್ಯನಾಗಲಿ, ಚಂದ್ರನಾಗಲಿ ಅವಶ್ಯವಿಲ್ಲ. ಏಕೆಂದರೆ ದೇವರ ಮಹಿಮೆಯೇ ಅದಕ್ಕೆ ಬೆಳಕಾಗಿತ್ತು. ಕುರಿಮರಿಯಾದಾತನೇ ಅದರ ದೀಪವು.

[24] ಅದರ ಬೆಳಕಿನಲ್ಲಿ ಎಲ್ಲಾ ಜನರು ನಡೆಯುವರು. ಭೂರಾಜರು ತಮ್ಮ ಮಹಿಮೆಯನ್ನು ಅಲ್ಲಿಗೆ ತರುವರು.

[25] ಅದರ ಹೆಬ್ಬಾಗಿಲುಗಳು ಒಂದು ದಿನವೂ ಮುಚ್ಚುವುದೇ ಇಲ್ಲ. ಇರುಳಂತೂ ಇರುವುದೇ ಇಲ್ಲ.

[26] ಜನಾಂಗಗಳ ಮಹಿಮೆಯೂ ಗೌರವವೂ ಅಲ್ಲಿಗೆ ತರಲಾಗುವವು.

[27] ಅಶುದ್ಧವಾದದ್ದು ಅದರಲ್ಲಿ ಸೇರುವುದಿಲ್ಲ. ಅಸಹ್ಯವಾದದ್ದನ್ನೂ ವಂಚಕವಾದದ್ದನ್ನೂ ನಡೆಸುವವನು ಅದರಲ್ಲಿ ಪ್ರವೇಶಿಸಲಾರನು. ಕುರಿಮರಿಯ ಜೀವ ಪುಸ್ತಕದಲ್ಲಿ ಯಾರ ಯಾರ ಹೆಸರುಗಳು ಬರೆದಿವೆಯೋ ಅವರು ಮಾತ್ರ ಸೇರುವರು.

ಪ್ರಕಟನೆ — Chapters