[1] ಇವುಗಳಾದ ಮೇಲೆ ಪರಲೋಕದಲ್ಲಿ ದೊಡ್ಡ ಸಮೂಹದ ಮಹಾಸ್ವರವನ್ನು ಕೇಳಿದೆನು. ಅವರು: “ಹಲ್ಲೆಲೂಯಾ! ರಕ್ಷಣೆಯೂ ಮಹಿಮೆಯೂ ಶಕ್ತಿಯೂ ನಮ್ಮ ದೇವರದಾಗಿವೆ!
[2] ಏಕೆಂದರೆ ದೇವರ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ. ಏಕೆಂದರೆ ತನ್ನ ಅನೈತಿಕತೆಯಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ದೇವರು ನ್ಯಾಯತೀರಿಸಿ, ಆಕೆಯು ದೇವರ ದಾಸರನ್ನು ಹಿಂಸಿಸಿ, ಚೆಲ್ಲಿಸಿದ ರಕ್ತಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾರೆ.”
[3] ಎಂದೂ ದ್ವಿತೀಯ ಬಾರಿ: “ಹಲ್ಲೆಲೂಯಾ! ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತದೆ!” ಎಂದು ಘೋಷಿಸಿದರು.
[4] ಆಗ ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು, ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿ: “ಆಮೆನ್, ಹಲ್ಲೆಲೂಯಾ!” ಎಂದರು.
[5] ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು: “ದೇವರ ಎಲ್ಲಾ ದಾಸರೇ, ದೇವರಿಗೆ ಭಯಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಸ್ತುತಿಸಿರಿ!” ಎಂದು ಹೇಳಿತು.
[6] ತರುವಾಯ ಜನರ ದೊಡ್ಡ ಗುಂಪಿನ ಶಬ್ದವನ್ನು ಕೇಳಿದೆನು. ಅದು ಹೀಗೆ ಹೇಳಿತು: “ಹಲ್ಲೆಲೂಯಾ! ಸರ್ವಶಕ್ತ ಆಗಿರುವ ನಮ್ಮ ಕರ್ತದೇವರು ಆಳುತ್ತಾರೆ.
[7] ಕುರಿಮರಿ ಆಗಿರುವವರ ವಿವಾಹ ಕಾಲವು ಬಂತು. ಅವರಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ. ಸಂತೋಷಪಡೋಣ, ಹರ್ಷಗೊಳ್ಳೋಣ, ಅವರನ್ನು ಮಹಿಮೆಪಡಿಸೋಣ!”
[8] ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ತೊಟ್ಟುಕೊಳ್ಳುವುದಕ್ಕೆ ಆಕೆಗೆ ಅನುಗ್ರಹಿಸಲಾಗಿತ್ತು. ಏಕೆಂದರೆ ಆ ನಾರುಮಡಿಯು ಪರಿಶುದ್ಧರ ನೀತಿಕೃತ್ಯಗಳೇ.
[9] ಇದಲ್ಲದೆ ಅವನು ನನಗೆ, “ಕುರಿಮರಿ ಆಗಿರುವವರ ವಿವಾಹದ ಔತಣಕ್ಕೆ ಕರೆಯಲಾದವರು ಧನ್ಯರು ಮತ್ತು ಅವರು ಹೀಗೆ ಹೇಳಿದರು, ದೇವರ ಈ ಮಾತುಗಳು ಸತ್ಯವಾಗಿವೆ!” ಎಂದನು.
[10] ಆಗ ನಾನು ಅವನನ್ನು ಆರಾಧಿಸಬೇಕೆಂದು ಅವನ ಪಾದಗಳಿಗೆ ಬೀಳಲು ಅವನು, “ಹಾಗೆ ಮಾಡಬೇಡ, ನಾನು ನಿನಗೂ ಯೇಸುವಿನ ಸಾಕ್ಷಿಯುಳ್ಳ ನಿನ್ನ ಸಹೋದರರಿಗೂ ಜೊತೆಯ ದಾಸನಾಗಿದ್ದೇನೆ. ದೇವರನ್ನೇ ಆರಾಧಿಸು. ಏಕೆಂದರೆ ಯೇಸುವಿನ ಸಾಕ್ಷಿಯೇ ಪ್ರವಾದನೆಯ ಆತ್ಮವಾಗಿದೆ!” ಎಂದನು.
[11] ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಇಗೋ, ಬಿಳಿಯ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವರ ಹೆಸರು, ನಂಬಿಗಸ್ತರು ಮತ್ತು ಸತ್ಯವಂತರು ಎಂಬುದು. ಅವರ ನೀತಿಯಿಂದ ನ್ಯಾಯವಿಚಾರಿಸುತ್ತಾ ಯುದ್ಧಮಾಡುತ್ತಾರೆ.
[12] ಆತನ ನೇತ್ರಗಳು ಬೆಂಕಿಯ ಜ್ವಾಲೆಯಂತಿದ್ದವು. ಆತನ ತಲೆಯ ಮೇಲೆ ಅನೇಕ ಮುಕುಟಗಳಿದ್ದವು. ಆತನಿಗೆ ಒಂದು ಹೆಸರು ಬರೆದು ಕೊಟ್ಟಿದೆ. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು.
[13] ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದಾನೆ. ಆತನ ಹೆಸರು ದೇವರ ವಾಕ್ಯವೆಂಬುದೇ.
[14] ಪರಲೋಕದ ಸೈನ್ಯದವರು ಶುಭ್ರ ಹಾಗೂ ಬಿಳಿಯ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳಿಯ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದರು.
[15] ರಾಷ್ಟ್ರಗಳನ್ನು ಹೊಡೆಯಲು ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. “ಆತನು ಕಬ್ಬಿಣದ ದಂಡದಿಂದ ಅವರನ್ನು ಪಾಲಿಸುವನು.” ಆತನು ಸರ್ವಶಕ್ತ ಆಗಿರುವ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ತುಳಿಯುತ್ತಾನೆ.
[16] ಆತನ ತೊಡೆಯ ಮೇಲಣ ವಸ್ತ್ರದಲ್ಲಿ: ರಾಜಾಧಿರಾಜನೂ ಕರ್ತರ ಕರ್ತನೂ. ಎಂಬ ಹೆಸರು ಬರೆದಿದೆ.
[17] ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾಧ್ವನಿಯಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, “ಬನ್ನಿರಿ, ದೇವರು ಏರ್ಪಡಿಸುವ ಮಹಾಭೋಜನಕ್ಕೆ ಕೂಡಿಬನ್ನಿರಿ.
[18] ರಾಜರು, ಸಹಸ್ರಾಧಿಪತಿಗಳು, ಪರಾಕ್ರಮಶಾಲಿಗಳು, ಅಶ್ವಗಳು, ಅಶ್ವಾರೂಢರು, ಸ್ವತಂತ್ರರು, ದಾಸರು, ದೊಡ್ಡವರು, ಚಿಕ್ಕವರು, ಇವರೆಲ್ಲರ ಮಾಂಸವನ್ನು ತಿನ್ನುವುದಕ್ಕೆ ಬನ್ನಿರಿ!” ಎಂದು ಹೇಳಿದನು.
[19] ತರುವಾಯ ಆ ಮೊದಲನೆಯ ಮೃಗವೂ ಭೂರಾಜರೂ ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವರ ಮೇಲೆಯೂ ಅವರ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿ ಬಂದಿರುವುದನ್ನು ನಾನು ಕಂಡೆನು.
[20] ಆಗ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಸುಳ್ಳು ಪ್ರವಾದಿ ಸಹ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲಾಯಿತು.
[21] ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಬಂದ ಕತ್ತಿಯಿಂದ ಹತರಾದರು ಮತ್ತು ಪಕ್ಷಿಗಳೆಲ್ಲಾ ಅವರ ಮಾಂಸದಿಂದ ಹೊಟ್ಟೆ ತುಂಬಿಸಿಕೊಂಡವು.