Skip to content
Opens in a new window
Listen to this chapter • 4:23

[1] ಆಮೇಲೆ ದೂತನು ಸ್ಪಟಿಕದಂತೆ ಹೊಳೆಯುವ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಕುರಿಮರಿಯಾದವರ ಸಿಂಹಾಸನದಿಂದ ಹೊರಟು,

[2] ಪಟ್ಟಣದ ಪ್ರಧಾನ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳಿಗೂ ಫಲವನ್ನು ಫಲಿಸುತ್ತಾ ಹನ್ನೆರಡು ಸಾರಿ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವಂಥದ್ದಾಗಿದ್ದವು.

[3] ಇನ್ನು ಯಾವ ಶಾಪವೂ ಇರುವುದಿಲ್ಲ. ಅದರಲ್ಲಿ ದೇವರ ಮತ್ತು ಕುರಿಮರಿಯಾದವರ ಸಿಂಹಾಸನವಿರುವುದು. ದೇವರ ದಾಸರು ಅವರಿಗೆ ಸೇವೆಮಾಡುವರು.

[4] ದೇವರ ಮುಖವನ್ನು ಅವರು ಕಾಣುವರು. ಅವರ ಹಣೆಗಳ ಮೇಲೆ ದೇವರ ಹೆಸರು ಇರುವುದು.

[5] ಇನ್ನು ರಾತ್ರಿ ಇರುವುದಿಲ್ಲ. ದೀಪದ ಬೆಳಕೂ ಸೂರ್ಯನ ಬೆಳಕೂ ಅವಶ್ಯವಿಲ್ಲ. ಕರ್ತದೇವರೇ ಅವರಿಗೆ ಬೆಳಕನ್ನು ಕೊಡುವರು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು.

[6] ಆಮೇಲೆ ದೇವದೂತನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ!” ಎಂದನು. ಪ್ರವಾದಿಗಳಿಗೆ ಆತ್ಮಪ್ರೇರಣೆಯನ್ನು ನೀಡುವ ಕರ್ತದೇವರು ಬೇಗನೆ ಸಂಭವಿಸತಕ್ಕ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿಯೇ ತಮ್ಮ ದೇವದೂತನನ್ನು ಕಳುಹಿಸಿದರು.

[7] ಆಗ, “ಇಗೋ, ಬೇಗನೆ ಬರುತ್ತೇನೆ! ಈ ಗ್ರಂಥದ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವರು ಧನ್ಯರು,” ಎಂದು ಕರ್ತ ಆಗಿರುವ ಯೇಸು ಹೇಳಿದರು.

[8] ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.

[9] ಅವನು ನನಗೆ, “ನೋಡು, ನೀನು ಹಾಗೆ ಮಾಡಬೇಡ. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಳ್ಳುವವರಿಗೂ ಜೊತೆಯ ದಾಸನಾಗಿದ್ದೇನೆ. ದೇವರನ್ನೇ ಆರಾಧಿಸು!” ಎಂದು ಹೇಳಿದನು.

[10] ಇದಲ್ಲದೆ ಅವನು, “ನನಗೆ ಈ ಪುಸ್ತಕದಲ್ಲಿರುವ ಪ್ರವಾದನಾ ವಾಕ್ಯಗಳಿಗೆ ಮುದ್ರೆ ಹಾಕಬೇಡ. ಏಕೆಂದರೆ ಸಮಯವು ಸಮೀಪವಾಗಿದೆ.

[11] ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ, ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ. ನೀತಿವಂತನು ಇನ್ನೂ ನೀತಿಯನ್ನು ಮಾಡಲಿ. ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ!” ಎಂದನು.

[12] ಆಗ ಕರ್ತ ಯೇಸು, “ಇಗೋ, ನಾನು ಬೇಗ ಬರುತ್ತೇನೆ. ಪ್ರತಿಯೊಬ್ಬರಿಗೂ ಅವರವರ ಕೆಲಸಕ್ಕೆ ತಕ್ಕಂತೆ ಕೊಡುವ ಪ್ರತಿಫಲವು ನನ್ನಲ್ಲಿದೆ.

[13] ನಾನೇ ಆಲ್ಫಾ ಮತ್ತು ಒಮೆಗಾ, ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಆರಂಭವೂ ಸಮಾಪ್ತಿಯೂ ಆಗಿದ್ದೇನೆ.

[14] “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡವರು ಧನ್ಯರು. ಹೀಗೆ ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ದ್ವಾರಗಳ ಮೂಲಕ ಆ ಪಟ್ಟಣದೊಳಕ್ಕೆ ಸೇರುವರು.

[15] ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳನ್ನು ಪ್ರೀತಿಸಿ ಅನುಸರಿಸುವರೆಲ್ಲರೂ ಹೊರಗಿರುವರು.

[16] “ಯೇಸುವೆಂಬ ನಾನು ನಮ್ಮ ಸಭೆಗಳಲ್ಲಿ ಈ ಸಂಗತಿಗಳ ವಿಷಯವಾಗಿ ನಿಮಗೆ ಸಾಕ್ಷಿ ನೀಡುವಂತೆ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ವಂಶದ ಕುಡಿ, ಅವನ ಸಂತತಿಯೂ ಉದಯದ ಪ್ರಕಾಶಮಾನ ತಾರೆಯೂ ಆಗಿದ್ದೇನೆ!” ಎಂದರು.

[17] ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.

[18] ಈ ಗ್ರಂಥದ ಪ್ರವಾದನೆಯನ್ನು ಕೇಳುವ ಪ್ರತಿಯೊಬ್ಬರಿಗೂ ನಾನು ಸಾಕ್ಷಿ ಕೊಡುವುದೇನೆಂದರೆ: ಯಾರಾದರೂ ಹೆಚ್ಚು ಮಾತುಗಳನ್ನು ಇವುಗಳಿಗೆ ಕೂಡಿಸಿದರೆ, ದೇವರು ಅವರ ಮೇಲೆ ಈ ಗ್ರಂಥದಲ್ಲಿ ಬರೆದಿರುವ ಉಪದ್ರವಗಳನ್ನು ಕೂಡಿಸುವರು.

[19] ಯಾರಾದರೂ ಈ ಪ್ರವಾದನಾ ಗ್ರಂಥದಲ್ಲಿರುವ ಮಾತುಗಳನ್ನು ತೆಗೆದುಬಿಟ್ಟರೆ, ಈ ಗ್ರಂಥದಲ್ಲಿ ಬರೆದಿರುವ ಜೀವವೃಕ್ಷದಲ್ಲಿಯೂ ಪವಿತ್ರ ನಗರದಲ್ಲಿಯೂ ಅವರಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.

[20] ಈ ವಿಷಯಗಳಲ್ಲಿ ಸಾಕ್ಷಿ ನೀಡುವವರು, “ಹೌದು, ನಾನು ಬೇಗ ಬರುತ್ತೇನೆ!” ಎಂದು ಹೇಳುತ್ತಾರೆ. ಆಮೆನ್. ಕರ್ತ ಯೇಸುವೇ ಬಾ.

[21] ನಮ್ಮ ಕರ್ತ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್!

ಪ್ರಕಟನೆ — Chapters