[1] ನಾನು ನೋಡಲಾಗಿ, ಕುರಿಮರಿ ಆಗಿರುವವರು ಚೀಯೋನ್ ಪರ್ವತದ ಮೇಲೆ ನಿಂತಿದ್ದರು. ಕುರಿಮರಿಯವರ ಜೊತೆಯಲ್ಲಿ ಒಂದು ಲಕ್ಷ ನಲವತ್ನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಕುರಿಮರಿಯವರ ಹೆಸರೂ ಕುರಿಮರಿಯವರ ತಂದೆಯ ಹೆಸರೂ ಬರೆಯಲಾಗಿದ್ದವು.
[2] ಇದಲ್ಲದೆ ಪರಲೋಕದಿಂದ ಜಲ ಪ್ರವಾಹದಂತೆಯೂ ಮಹಾ ಗುಡುಗಿನ ಶಬ್ದದಂತೆಯೂ ಇದ್ದ ಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ಕಿನ್ನರಿಗಳನ್ನು ನುಡಿಸುತ್ತಿರುವ ಕಿನ್ನರರ ಶಬ್ದದಂತಿತ್ತು.
[3] ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲಾದ ಆ ಒಂದು ಲಕ್ಷ ನಲವತ್ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
[4] ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ. ಏಕೆಂದರೆ ಇವರು ಕನ್ಯೆಯರಂತೆ ನಿಷ್ಕಳಂಕರು. ಕುರಿಮರಿ ಆಗಿರುವವರು ಹೋದಡೆಯಲ್ಲೆಲ್ಲಾ ಅವರ ಹಿಂದೆ ಹೋಗುವವರು ಇವರೇ. ಇವರು ಮನುಷ್ಯರೊಳಗಿಂದ ಕೊಂಡುಕೊಳ್ಳಲಾಗಿ ದೇವರಿಗೂ ಕುರಿಮರಿಯಾಗಿರುವವರಿಗೂ ಪ್ರಥಮಫಲದಂತಾದರು.
[5] ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ. ಇವರು ನಿರ್ದೋಷಿಗಳಾಗಿದ್ದಾರೆ.
[6] ಮತ್ತೊಬ್ಬ ದೇವದೂತನು ಆಕಾಶದ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ರಾಷ್ಟ್ರ, ಹಿನ್ನಲೆ, ಭಾಷೆ ಹಾಗೂ ಪ್ರಜೆಗಳವರಿಗೂ ಸಾರಿ ಹೇಳುವುದಕ್ಕೆ ನಿತ್ಯ ಸುವಾರ್ತೆಯು ಅವನಲ್ಲಿತ್ತು.
[7] ಅವನು, “ನೀವು ದೇವರಿಗೆ ಭಯಪಟ್ಟು ಅವರಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಅವರು ನ್ಯಾಯತೀರ್ಪು ಮಾಡುವ ಸಮಯ ಬಂದಿದೆ. ಭೂಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದ ದೇವರನ್ನೇ ಆರಾಧಿಸಿರಿ!” ಎಂದು ಮಹಾಧ್ವನಿಯಿಂದ ಹೇಳಿದನು.
[8] ಅವನ ಹಿಂದೆ ಎರಡನೆಯವನಾದ ಒಬ್ಬ ದೇವದೂತನು ಬಂದು, “ ‘ಬಿದ್ದಳು, ಬಾಬಿಲೋನ್ ಮಹಾನಗರಿಯು ಬಿದ್ದಳು!’ ಆಕೆಯು ಸಕಲ ಜನಾಂಗಗಳಿಗೆ ತನ್ನ ಅತ್ಯಾಸಕ್ತಿಯ ಅನೈತಿಕತೆವೆಂಬ ದ್ರಾಕ್ಷಾರಸವನ್ನು ಕುಡಿಸಿದಳು,” ಎಂದು ಹೇಳಿದನು.
[9] ಅವರ ಹಿಂದೆ ಮೂರನೆಯವನಾದ ಒಬ್ಬ ದೇವದೂತನು ಬಂದು, “ಯಾವುದಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ, ಕೈಯ ಮೇಲಾಗಲಿ ಗುರುತು ಹಾಕಿಸಿಕೊಂಡರೆ,
[10] ಅವನೂ ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರೆಸದೆ ಹಾಕಿದ ಅವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಕುರಿಮರಿಯಾಗಿರುವವರ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.
[11] ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರು ಹಗಲಿರುಳೂ ವಿಶ್ರಾಂತಿ ಪಡುವುದಿಲ್ಲಾ!” ಎಂದು ಮಹಾಶಬ್ದದಿಂದ ಹೇಳಿದನು.
[12] ಇದಕ್ಕಾಗಿಯೇ ದೇವರ ಆಜ್ಞೆಗಳನ್ನೂ ಯೇಸುವಿನಲ್ಲಿ ನಂಬಿಕೆಯನ್ನೂ ಕಾಪಾಡುವ ದೇವಜನರ ತಾಳ್ಮೆಯ ಸಹಿಷ್ಣುತೆ ಇದರಲ್ಲಿದೆ.
[13] ಪರಲೋಕದಿಂದ ಒಂದು ಧ್ವನಿಯು ನನಗೆ, “ಇಂದಿನಿಂದ ಕರ್ತರಲ್ಲಿ ವಿಶ್ವಾಸವುಳ್ಳವರು ಧನ್ಯರು ಎಂಬುದಾಗಿ ಬರೆ!” ಎಂದು ಹೇಳಿತು. ಅದಕ್ಕೆ ಪವಿತ್ರಾತ್ಮ ದೇವರು, “ಹೌದು, ಅವರ ಪ್ರಯಾಸಗಳು ತೀರಿದವು ಅವರಿಗೆ ವಿಶ್ರಾಂತಿಯಾಗುವುದು, ಅವರ ಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ!” ಎಂದು ಹೇಳುತ್ತಾರೆ.
[14] ನಾನು ನೋಡಲಾಗಿ, ಒಂದು ಬಿಳಿ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯಪುತ್ರರಂತೆ ಒಬ್ಬರು ಕುಳಿತಿರುವುದನ್ನು ಕಂಡೆನು. ಅವರ ತಲೆಯ ಮೇಲೆ ಚಿನ್ನದ ಕಿರೀಟವೂ ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
[15] ಆಗ ಮತ್ತೊಬ್ಬ ದೂತನು ದೇವಾಲಯದೊಳಗಿಂದ ಬಂದು ಮೇಘದ ಮೇಲೆ ಕುಳಿತಿದ್ದವರಿಗೆ, “ಭೂಮಿಯ ಪೈರು ಮಾಗಿದೆ. ಕೊಯ್ಯುವ ಕಾಲ ಬಂದಿರುವುದರಿಂದ, ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ!” ಎಂದು ಮಹಾಧ್ವನಿಯಿಂದ ಕೂಗಿದನು.
[16] ಮೇಘದ ಮೇಲೆ ಕುಳಿತಿದ್ದವರು ತಮ್ಮ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದರು. ಆಗ ಭೂಮಿಯ ಪೈರು ಕೊಯ್ಯಲಾಯಿತು.
[17] ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು.
[18] ತರುವಾಯ ಬೆಂಕಿಗೆ ಅಧಿಕಾರಿಯಾದ ಇನ್ನೊಬ್ಬ ದೂತನು ಬಲಿಪೀಠದ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ, ಭೂಮಿಯ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ಯಿ. ಅದರ ಹಣ್ಣುಗಳು ಪೂರ್ತಿಯಾಗಿ ಮಾಗಿವೆ!” ಎಂದು ಮಹಾಧ್ವನಿಯಿಂದ ಕೂಗಿದನು.
[19] ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ, ಭೂಮಿಯ ದ್ರಾಕ್ಷಿಹಣ್ಣನ್ನು ಕೂಡಿಸಿ, ದೇವರ ಕೋಪವೆಂಬ ದೊಡ್ಡ ದ್ರಾಕ್ಷಿಯ ತೊಟ್ಟಿಯಲ್ಲಿ ಹಾಕಿದನು.
[20] ಆಗ ಪಟ್ಟಣದ ಹೊರಗೆ ದ್ರಾಕ್ಷಿಯ ತೊಟ್ಟಿಯನ್ನು ತುಳಿಯಲಾಯಿತು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು, ಕುದುರೆಗಳ ಕಡಿವಾಣವನ್ನು ಮುಟ್ಟುವಷ್ಟು ಮುನ್ನೂರು ಕಿಲೋಮೀಟರ್ ದೂರ ಹರಿಯಿತು.