Skip to content
Opens in a new window
Listen to this chapter • 4:04

[1] ಘಟಸರ್ಪವು ಸಮುದ್ರತೀರದ ಮರಳಿನ ಮೇಲೆ ನಿಂತನು. ಸಮುದ್ರದೊಳಗೆ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಕೊಂಬುಗಳ ಮೇಲೆ ಹತ್ತು ಮುಕುಟಗಳೂ ತಲೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು.

[2] ನಾನು ಕಂಡ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟನು.

[3] ಮೃಗದ ತಲೆಗಳಲ್ಲಿ ಒಂದು ಮರಣಾಂತಿಕ ಗಾಯ ಹೊಂದಿದಂತಿರುವುದನ್ನು ನೋಡಿದೆನು. ಆದರೆ ಆ ಮರಣಕರವಾದ ಗಾಯವು ವಾಸಿಯಾಯಿತು. ಭೂಲೋಕವೆಲ್ಲಾ ಆ ಮೃಗವನ್ನು ಕಾಣುತ್ತಾ ಆಶ್ಚರ್ಯಪಟ್ಟಿತು.

[4] ಜನರು ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟಿದ್ದರಿಂದ, ಆ ಘಟಸರ್ಪನನ್ನು ಆರಾಧಿಸಿದರು. ಇದಲ್ಲದೆ ಆ ಮೃಗವನ್ನೂ ಆರಾಧಿಸಿ, “ಈ ಮೃಗಕ್ಕೆ ಸಮಾನರು ಯಾರು? ಇದರೊಡನೆ ಯುದ್ಧಮಾಡಬಲ್ಲವರು ಯಾರು?” ಎಂದರು.

[5] ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಕೊಡಲಾಯಿತು. ನಲವತ್ತೆರಡು ತಿಂಗಳುಗಳವರೆಗೆ ಕಾರ್ಯಸಾಧಿಸುವ ಅಧಿಕಾರವನ್ನೂ ಅದಕ್ಕೆ ಕೊಡಲಾಯಿತು.

[6] ಆ ಮೃಗವು ತನ್ನ ಬಾಯಿತೆರೆದು, ದೇವರಿಗೆ ವಿರುದ್ಧವಾಗಿ ದೂಷಿಸಿ, ಅವರ ನಾಮವನ್ನೂ ಅವರ ನಿವಾಸವನ್ನೂ ಮತ್ತು ಪರಲೋಕ ನಿವಾಸಿಗಳನ್ನೂ ದೂಷಿಸಿತು.

[7] ಇದಲ್ಲದೆ ಅದಕ್ಕೆ ಪರಿಶುದ್ಧರ ಮೇಲೆ ಯುದ್ಧಮಾಡಿ, ಅವರನ್ನು ಜಯಿಸುವುದಕ್ಕೆ ಬಲವು ಕೊಡಲಾಯಿತು ಮತ್ತು ಸಕಲ ಕುಲ, ಪ್ರಜೆ, ಭಾಷೆ, ರಾಷ್ಟ್ರಗಳ ಮೇಲೆ ಅದಕ್ಕೆ ಅಧಿಕಾರವು ಸಹ ಕೊಡಲಾಯಿತು.

[8] ಜಗದುತ್ಪತ್ತಿಗೆ ಮೊದಲೇ ಕೊಯ್ಯಲಾದ ಕುರಿಮರಿಯವರ ಜೀವಗ್ರಂಥದಲ್ಲಿ ಯಾರ‍್ಯಾರ ಹೆಸರುಗಳು ಬರೆದಿರುವುದಿಲ್ಲವೋ, ಆ ಭೂನಿವಾಸಿಗಳೆಲ್ಲರೂ ಆ ಮೃಗವನ್ನು ಆರಾಧಿಸುವರು.

[9] ಕಿವಿಯುಳ್ಳವನು ಕೇಳಲಿ.

[10] “ಸೆರೆಹಿಡಿಯುವವನು ತಾನೇ ಸೆರೆಯಾಗಿ ಹೋಗುವನು. ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗುವನು.” ಇದರಲ್ಲಿ ದೇವಜನರ ಸೈರಣೆಯೂ ನಂಬಿಕೆಯೂ ಇವೆ.

[11] ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಅದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು ಆದರೆ ಘಟಸರ್ಪದಂತೆ ಮಾತನಾಡಿತು.

[12] ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಎದುರಿನಲ್ಲಿ ಚಲಾಯಿಸಿತು. ಇದು ಮರಣಕರವಾದ ಗಾಯದಿಂದ ವಾಸಿಯಾದ ಮೊದಲನೆಯ ಮೃಗವನ್ನು ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು.

[13] ಎರಡನೆಯ ಮೃಗವೂ ಮಹಾಸೂಚಕಕಾರ್ಯಗಳನ್ನು ನಡೆಸಿತು ಮತ್ತು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಬೀಳುವಂತೆ ಮಾಡಿತು.

[14] ಆ ಮೊದಲನೆಯ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವನ್ನು ಕೊಡಲಾಗಿದ್ದರಿಂದ ಭೂನಿವಾಸಿಗಳನ್ನು ಮೋಸಗೊಳಿಸುತ್ತದೆ. ಭೂಮಿಯ ಮೇಲೆ ವಾಸಿಸುವವರು, ಕತ್ತಿಯಿಂದ ಗಾಯಹೊಂದಿ, ಸಾಯದೆ ಬದುಕಿದ ಮೃಗದ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಹೇಳುತ್ತದೆ.

[15] ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಕೊಡಲಾಗಿದ್ದರಿಂದ, ಆ ವಿಗ್ರಹವು ಮಾತನಾಡುವಂತೆಯೂ ತನ್ನನ್ನು ಆರಾಧನೆ ಮಾಡದವರನ್ನು ಕೊಲ್ಲುವಂತೆಯೂ ಮಾಡುತ್ತದೆ.

[16] ಅದು ಚಿಕ್ಕವರು, ದೊಡ್ಡವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ಗುಲಾಮರು, ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತು ಹೊಂದಬೇಕೆಂದೂ

[17] ಆ ಗುರುತಾಗಲಿ, ಮೃಗದ ಹೆಸರಾಗಲಿ, ಅದರ ಹೆಸರಿನ ಸಂಖ್ಯೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುವುದು.

[18] ಇದರಲ್ಲಿ ಜ್ಞಾನವಿದೆ. ಬುದ್ಧಿಯುಳ್ಳವನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆಯು 666.

ಪ್ರಕಟನೆ — Chapters