Skip to content
Opens in a new window
Listen to this chapter • 4:09

[1] ಐದನೆಯ ದೇವದೂತನು ತನ್ನ ತುತೂರಿಯನ್ನು ಊದಲು; ಆಕಾಶದಿಂದ ಒಂದು ನಕ್ಷತ್ರವು ಭೂಮಿಗೆ ಬಿದ್ದದ್ದನ್ನು ಕಂಡೆನು. ಅದಕ್ಕೆ ಪಾತಾಳ ಸುರಂಗದ ಬೀಗದ ಕೈ ಕೊಡಲಾಗಿತ್ತು.

[2] ಆತನು ಆ ಪಾತಾಳವನ್ನು ತೆರೆಯಲು, ಅದರೊಳಗಿಂದ ಹೊಗೆಯು ಮಹಾ ಕುಲುಮೆಯಿಂದ ಬರುವ ಹೊಗೆಯಂತೆ ಏರಿತು. ಪಾತಾಳದ ಆ ಹೊಗೆಯಿಂದ ಸೂರ್ಯ ಮತ್ತು ಆಕಾಶಕ್ಕೆ ಕತ್ತಲು ಕವಿಯಿತು.

[3] ಆ ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಬಂದವು. ಅವುಗಳಿಗೆ ಭೂಮಿಯ ಮೇಲಿನ ಚೇಳುಗಳಿಗೆ ಇರುವಂತೆ ಶಕ್ತಿಯನ್ನು ಕೊಡಲಾಗಿತ್ತು.

[4] ಅವುಗಳಿಗೆ ಹಣೆಯ ಮೇಲೆ ದೇವರ ಮುದ್ರೆಯನ್ನು ಹಾಕಿಸಿಕೊಳ್ಳದ ಮನುಷ್ಯರನ್ನು ಬಿಟ್ಟು, ಭೂಮಿಯ ಮೇಲಿನ ಹುಲ್ಲು ಅಥವಾ ಯಾವುದೇ ಪಲ್ಯ ಅಥವಾ ಮರ, ಈ ಯಾವುದಕ್ಕೂ ತೊಂದರೆ ಕೊಡಬಾರದೆಂಬುದಾಗಿ ಹೇಳಲಾಯಿತು.

[5] ಅವುಗಳು ಅವರನ್ನು ಕೊಲ್ಲದೆ, ಐದು ತಿಂಗಳುಗಳವರೆಗೆ ಯಾತನೆಪಡಿಸುವುದಕ್ಕೆ ಅಧಿಕಾರ ಕೊಡಲಾಯಿತು. ಅವರ ಯಾತನೆಯು, ಚೇಳು ತನ್ನ ಕೊಂಡಿಯಿಂದ ಮನುಷ್ಯರನ್ನು ಕುಟುಕಿಹಾಕಿದಾಗ ಆಗುವ ನೋವಿನಂತಿತ್ತು.

[6] ಆ ದಿನಗಳಲ್ಲಿ ಜನರು ಮರಣವನ್ನು ಹುಡುಕುವರು, ಆದರೆ ಅದನ್ನು ಯಾವ ರೀತಿಯಿಂದಲೂ ಕಾಣರು; ಅವರು ಸಾಯಲು ಹಾರೈಸುವರು, ಆದರೆ ಮರಣವು ಅವರಿಂದ ಓಡಿ ಹೋಗುವುದು.

[7] ಆ ಮಿಡತೆಗಳು ಯುದ್ಧಕ್ಕೆ ಸನ್ನದ್ಧವಾದ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದಂತಿರುವ ಕಿರೀಟಗಳಿದ್ದವು. ಅವುಗಳ ಮುಖವು ಮಾನವರ ಮುಖಗಳಂತೆ ಇದ್ದವು.

[8] ಅವುಗಳ ಕೂದಲು ಸ್ತ್ರೀಯರ ಕೂದಲಿನಂತಿದ್ದು, ಅವುಗಳಿಗೆ ಸಿಂಹಗಳಿಗಿದ್ದಂತೆ ಹಲ್ಲುಗಳಿದ್ದವು.

[9] ಅವುಗಳಿಗೆ ಕಬ್ಬಿಣದ ಕವಚದಂಥ ಕವಚಗಳಿದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳಂತಿತ್ತು.

[10] ಅವುಗಳಿಗೆ ಚೇಳಿನಂತೆ ಬಾಲವೂ ಕೊಂಡಿಯೂ ಇದ್ದವು. ಅವುಗಳಿಗೆ ಮನುಷ್ಯರನ್ನು ಐದು ತಿಂಗಳುಗಳ ಕಾಲ ತಮ್ಮ ಬಾಲಗಳಿಂದ ಬಾಧಿಸುವ ಸಾಮರ್ಥ್ಯವಿತ್ತು.

[11] ಹೀಬ್ರೂ ಭಾಷೆಯಲ್ಲಿ, ಅಬದ್ದೋನ್ ಎಂದೂ ಗ್ರೀಕ್ ಭಾಷೆಯಲ್ಲಿ, ಅಪೊಲ್ಲುವೋನ್ ಎಂಬ ಹೆಸರಿನ ಪಾತಾಳ ಲೋಕದ ದೂತನು ಅವರ ಅರಸನು.

[12] ಮೊದಲನೆಯ ವಿಪತ್ತು ಕಳೆದುಹೋಯಿತು; ಇಗೋ, ಇವುಗಳ ನಂತರ ಇನ್ನೂ ಎರಡು ವಿಪತ್ತುಗಳು ಬರಲಿವೆ.

[13] ಆರನೆಯ ದೇವದೂತನು ತನ್ನ ತುತೂರಿಯನ್ನು ಊದಲು, ದೇವರ ಮುಂದೆ ಇರುವ ಚಿನ್ನದ ಬಲಿಪೀಠದ ನಾಲ್ಕು ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು.

[14] ಅದು ತುತೂರಿಯನ್ನು ಹೊಂದಿರುವ ಆರನೆಯ ದೇವದೂತನಿಗೆ, “ಯೂಫ್ರೇಟೀಸ್ ಮಹಾನದಿಯ ಬಳಿ ಕಟ್ಟಿರುವ ನಾಲ್ಕು ದೇವದೂತರನ್ನು ಬಿಚ್ಚಿಬಿಡು,” ಎಂದು ಹೇಳಿತು.

[15] ಮಾನವಕುಲದ ಮೂರರಲ್ಲೊಂದು ಭಾಗವನ್ನು ಕೊಲ್ಲುವುದಕ್ಕಾಗಿ ಆ ಗಳಿಗೆ, ದಿನ, ತಿಂಗಳು ಮತ್ತು ವರ್ಷಕ್ಕಾಗಿಯೇ ಸಿದ್ಧವಾಗಿದ್ದ ನಾಲ್ಕು ದೇವದೂತರನ್ನು ಬಿಡುಗಡೆ ಮಾಡಲಾಯಿತು.

[16] ಕುದುರೆ ಸೈನಿಕರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.

[17] ನಾನು ನನ್ನ ದರ್ಶನದಲ್ಲಿ ಕುದುರೆಗಳನ್ನೂ ಸವಾರರನ್ನೂ ಕಂಡೆನು. ಅವರ ಕವಚಗಳು ಬೆಂಕಿಯ ಕೆಂಪು, ನೀಲಮಣಿ ಹಾಗೂ ಹಳದಿ ಬಣ್ಣದಂತೆಯೂ ಇದ್ದವು. ಕುದುರೆಗಳ ತಲೆಗಳು ಸಿಂಹದ ತಲೆಗಳಂತಿದ್ದವು. ಅವುಗಳ ಬಾಯೊಳಗಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬಂದವು.

[18] ಅವುಗಳ ಬಾಯೊಳಗಿಂದ ಬಂದ ಬೆಂಕಿ ಹೊಗೆ ಮತ್ತು ಗಂಧಕಗಳೆಂಬ ಮೂರು ಉಪದ್ರವಗಳಿಂದ ಮಾನವಕುಲದ ಮೂರರಲ್ಲೊಂದು ಭಾಗದ ಜನರು ಹತರಾದರು.

[19] ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲದಲ್ಲಿಯೂ ಇತ್ತು. ಏಕೆಂದರೆ ಅವುಗಳ ಬಾಲಗಳು ತಲೆಗಳನ್ನು ಹೊಂದಿದ್ದ ಸರ್ಪಗಳಂತಿದ್ದವು. ಅವುಗಳಿಂದ ಅವು ಕೇಡನ್ನುಂಟು ಮಾಡುತ್ತವೆ.

[20] ಈ ಉಪದ್ರವಗಳಿಂದ ಸಾಯದೆ ಉಳಿದ ಮನುಷ್ಯರು ಇನ್ನೂ ತಮ್ಮ ದುಷ್ಟಕೃತ್ಯಗಳನ್ನು ಬಿಟ್ಟು ಪಶ್ಚಾತ್ತಾಪ ಪಡಲಿಲ್ಲ. ಅವರು ದೆವ್ವಗಳನ್ನೂ, ನೋಡಲು, ಕೇಳಲು, ನಡೆಯಲು ಆಗದ ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳ ವಿಗ್ರಹಗಳನ್ನು ಆರಾಧಿಸುವುದನ್ನೂ ನಿಲ್ಲಿಸಲಿಲ್ಲ.

[21] ಇದಲ್ಲದೆ ಅವರು ಕೊಲೆ, ಮಾಟ, ಜಾರತ್ವ ಮತ್ತು ಕಳ್ಳತನಗಳಿಗಾಗಿಯೂ ಪಶ್ಚಾತ್ತಾಪ ಪಡಲಿಲ್ಲ.

ಪ್ರಕಟನೆ — Chapters