[1] ಇದಾದನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಕೆಳಗೆ ಇಳಿದು ಬರುವುದನ್ನು ಕಂಡೆನು. ಅವನ ತೇಜಸ್ಸಿನಿಂದ ಭೂಮಿಯು ಬೆಳಗಿತು.
[2] ಅವನು ಮಹಾಧ್ವನಿಯಿಂದ: “ ‘ಬಿದ್ದಳು! ಬಾಬಿಲೋನ್ ಮಹಾನಗರಿಯು ಬಿದ್ದಳು!’ ಆಕೆಯು ದೆವ್ವಗಳಿಗೆ ವಾಸಸ್ಥಾನವೂ ಎಲ್ಲಾ ದುರಾತ್ಮಗಳಿಗೂ ಅಶುದ್ಧವಾದ ಹಾಗೂ ಅಸಹ್ಯವಾದ ಪ್ರತಿಯೊಂದು ಪ್ರಾಣಿಪಕ್ಷಿಗಳಿಗೂ ನಿವಾಸವಾಗಿದ್ದಾಳೆ.
[3] ಏಕೆಂದರೆ ಎಲ್ಲಾ ದೇಶಗಳೂ ಆಕೆಯ ಜಾರತ್ವಗಳೆಂಬ ಅತ್ಯಾಸಕ್ತಿಯ ದ್ರಾಕ್ಷಾರಸವನ್ನು ಕುಡಿದಿವೆ. ಭೂಲೋಕದ ಅರಸರು ಆಕೆಯೊಂದಿಗೆ ವ್ಯಭಿಚಾರ ಮಾಡಿದರು, ಭೂಲೋಕದ ವರ್ತಕರು ಆಕೆಯ ಭೋಗ ವಸ್ತುಗಳಿಂದ ಸಿರಿವಂತರಾದರು,” ಎಂದು ಕೂಗಿದನು.
[4] ಅನಂತರ ಪರಲೋಕದಿಂದ ಇನ್ನೊಂದು ಧ್ವನಿಯು: “ ‘ನನ್ನ ಜನರೇ, ಆಕೆಯನ್ನು ಬಿಟ್ಟು ಬನ್ನಿರಿ, ನೀವು ಆಕೆಯ ಪಾಪಗಳಲ್ಲಿ ಪಾಲುಗಾರರಾಗಬಾರದು, ಆಕೆಯ ಉಪದ್ರವಗಳಿಗೆ ಗುರಿಯಾಗಬಾರದು.’
[5] ಏಕೆಂದರೆ ಆಕೆಯ ಪಾಪಗಳು ಒಂದಕ್ಕೊಂದು ಸೇರಿ ಆಕಾಶದಷ್ಟಾಗಿವೆ. ದೇವರು ಆಕೆಯ ಅಪರಾಧಗಳನ್ನು ಜ್ಞಾಪಿಸಿಕೊಂಡಿದ್ದಾರೆ.
[6] ಆಕೆಯು ನಿಮಗೆ ಕೊಟ್ಟಿದ್ದಕ್ಕೆ ಸರಿಯಾಗಿ ಹಿಂದಕ್ಕೆ ಕೊಡಿರಿ. ಕೃತ್ಯಗಳಿಗೆ ಸರಿಯಾಗಿ ಎರಡರಷ್ಟು ಅವಳಿಗೆ ಕೊಡಿರಿ. ಆಕೆಯ ಬಟ್ಟಲಿನಿಂದಲೇ ಎರಡರಷ್ಟು ಆಕೆಗೆ ಕಲಸಿ ಕೊಡಿರಿ.
[7] ಆಕೆಯು ಯಾವುದರಿಂದ ತನ್ನನ್ನು ಘನಪಡಿಸಿಕೊಂಡು ಭೋಗಿನಿಯಾಗಿದ್ದಳೋ ಅದಕ್ಕೆ ತಕ್ಕಂತೆ ನೀವು ಆಕೆಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ. ಏಕೆಂದರೆ ಆಕೆ ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ. ನಾನು ವಿಧವೆಯಲ್ಲ, ಎಂದೆಂದಿಗೂ ದುಃಖಿಸುವುದಿಲ್ಲ!’ ಎಂದುಕೊಳ್ಳುತ್ತಾಳೆ.
[8] ಆದ್ದರಿಂದ ಒಂದೇ ದಿನದಲ್ಲಿ ಆಕೆಯ ಉಪದ್ರವಗಳಾಗಿರುವ ಮರಣ, ಗೋಳಾಟ ಮತ್ತು ಕ್ಷಾಮವು ಬರುವುವು. ಆಕೆಯನ್ನು ತೀರ್ಪುಮಾಡುವ ಕರ್ತದೇವರು ಶಕ್ತರಾಗಿರುವುದರಿಂದ ಆಕೆಯು ಬೆಂಕಿಯಿಂದ ನಾಶವಾಗುವಳು.”
[9] “ಆಕೆಯೊಂದಿಗೆ ಜಾರತ್ವ ಮಾಡಿರುವ ಭೂರಾಜರು, ಆಕೆಯ ದಹನದಿಂದ ಏರುವ ಹೊಗೆಯನ್ನು ಕಂಡಾಗೆಲ್ಲಾ ಆಕೆಗಾಗಿ ಅಳುತ್ತಾ ಗೋಳಾಡುವರು.
[10] ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು: “ ‘ಅಯ್ಯೋ! ಅಯ್ಯೋ! ಮಹಾನಗರಿಯೇ, ಬಲಿಷ್ಠನಗರಿ ಬಾಬಿಲೋನೇ! ಒಂದೇ ತಾಸಿನಲ್ಲಿ ನಿನಗೆ ತೀರ್ಪಾಯಿತಲ್ಲಾ?’ ಎಂದು ಶೋಕಿಸುವರು.
[11] “ಭೂಮಿಯ ವರ್ತಕರು ಆಕೆಗಾಗಿ ದುಃಖಿಸಿ ಗೋಳಾಡುತ್ತಾ ತಮ್ಮ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ದುಃಖಿಸುವರು.
[12] ಅವರ ಸರಕುಗಳಾದ ಚಿನ್ನ, ಬೆಳ್ಳಿ, ಬೆಲೆಬಾಳುವ ಕಲ್ಲು ಹಾಗೂ ಮುತ್ತುಗಳು, ನಯವಾದ ನಾರುಮಡಿ, ಕಡುಗೆಂಪು ವಸ್ತ್ರ, ರೇಷ್ಮೆ, ಊದಾವರ್ಣದ ವಸ್ತ್ರ, ಅಗಿಲು ಮರ ಮತ್ತು ದಂತ ಪಾತ್ರೆಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ,
[13] ಸರಕುಗಳಾದ ದಾಲ್ಚಿನ್ನಿ ಮತ್ತು ಮಸಾಲೆ, ಧೂಪ, ಸುಗಂಧ ತೈಲ, ರಕ್ತಬೋಳ, ದ್ರಾಕ್ಷಾರಸ ಮತ್ತು ಓಲಿವ್ ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು ಮತ್ತು ಕುರಿಗಳು, ಕುದುರೆಗಳು, ವಾಹನಗಳು, ಗುಲಾಮರು ಹಾಗೂ ಮನುಷ್ಯರು ಇವುಗಳನ್ನೆಲ್ಲಾ ಆ ವರ್ತಕರು ಅವಳಿಗೆ ಮಾರುತ್ತಿದ್ದರು.
[14] “ನೀನು ಬಯಸಿದ ನಿನ್ನ ಪ್ರಾಣ ಫಲವು ನಿನ್ನಿಂದ ತೊಲಗಿಹೋಗಿದೆ. ನಿನ್ನ ಎಲ್ಲಾ ವೈಭವವು ಹಾಗೂ ನಿನ್ನ ಶೋಭೆಯ ಸೊಗಸುಗಳೆಲ್ಲಾ ನಿನ್ನಿಂದ ನಾಶವಾದವು. ಅವರು ಅವುಗಳನ್ನು ಇನ್ನೆಂದೂ ಕಾಣಲಾರರು.
[15] ಆಕೆಯಿಂದ ಸಿರಿವಂತರಾದ ಆ ಸರಕುಗಳ ವರ್ತಕರು ದೂರದಲ್ಲಿ ನಿಂತು ಆಕೆಯ ಯಾತನೆಯ ದೆಸೆಯಿಂದ ಭಯಪಟ್ಟು, ದುಃಖಿಸಿ,
[16] “ ‘ಅಯ್ಯೋ! ಅಯ್ಯೋ! ಶೋಕಭರಿತ ಮಹಾನಗರಿಯೇ, ನೀನು ನೇರಳೆ, ಕಡುಗೆಂಪು ನಾರುಮಡಿಯನ್ನು ಧರಿಸಿ, ಚಿನ್ನ, ಬೆಲೆಬಾಳುವ ಕಲ್ಲು ಮತ್ತು ಮುತ್ತುಗಳಿಂದ ಬೆಳಗುತ್ತಿದ್ದೆ.
[17] ಒಂದೇ ತಾಸಿನಲ್ಲಿ ಅಂಥ ಮಹಾ ಐಶ್ವರ್ಯವು ನಾಶವಾಗಿ ಹೋಯಿತಲ್ಲಾ?’ ” ಎಂದು ಗೋಳಾಡುವರು. “ಪ್ರತಿಯೊಂದು ಹಡಗಿನ ಮಾಲೀಕರು ಮತ್ತು ಹಡಗು ಪಯಣಿಗರು, ನಾವಿಕರು ಮತ್ತು ಸಮುದ್ರದಿಂದ ತಮ್ಮ ಜೀವನೋಪಾಯ ಮಾಡುವವರೆಲ್ಲರೂ ದೂರದಲ್ಲಿ ನಿಂತು
[18] ಆಕೆಯ ದಹನದ ಹೊಗೆಯನ್ನು ನೋಡಿ, ‘ಈ ಮಹಾಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಕೂಗುವರು.
[19] ಆಗ ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು ಅಳುತ್ತಾ ದುಃಖಿಸುತ್ತಾ ಹೀಗೆ ಕೂಗುವರು: “ ‘ಅಯ್ಯೋ! ಅಯ್ಯೋ! ದುಃಖಭರಿತ ಮಹಾನಗರಿಯೇ, ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ ಆಕೆಯ ವೈಭವದಿಂದಲೇ ಐಶ್ವರ್ಯವಂತರಾದರಲ್ಲಾ! ಒಂದು ತಾಸಿನಲ್ಲಿ ಆಕೆ ಹಾಳಾದಳಲ್ಲಾ?’
[20] “ಪರಲೋಕವೇ ಸಂಭ್ರಮಿಸಿರಿ, ಪರಿಶುದ್ಧರೇ, ಅಪೊಸ್ತಲರೇ ಹಾಗೂ ಪ್ರವಾದಿಗಳೇ ಆಕೆಯ ನಿಮಿತ್ತ ಹರ್ಷಗೊಳ್ಳಿರಿ! ಏಕೆಂದರೆ ಆಕೆ ನಿಮಗೆ ತೀರ್ಪುಮಾಡಿದ್ದಕ್ಕೆ ಸರಿಯಾಗಿ ದೇವರು ಆಕೆಗೆ ತೀರ್ಪುಮಾಡಿದ್ದಾರೆ!”
[21] ಅನಂತರ ಒಬ್ಬ ಬಲಿಷ್ಠನಾದ ದೂತನು, ಬೀಸುವ ಕಲ್ಲಿನಷ್ಟಿರುವ ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಅದನ್ನು ಸಮುದ್ರದೊಳಗೆ ಬಿಸಾಡಿ: “ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಬಲಾತ್ಕಾರದಿಂದ ಕೆಡವಲಾಗಿ ಎಂದಿಗೂ ಕಾಣಿಸದು.
[22] ಬಾಬಿಲೋನೇ, ನಿನ್ನಲ್ಲಿ ಮತ್ತೆ ತಂತಿವಾದ್ಯ ನುಡಿಸುವವರು, ಸಂಗೀತಗಾರರು, ಕೊಳಲೂದುವವರು, ತುತೂರಿಯವರು, ಮಾಡುವ ಧ್ವನಿ ಎಂದೂ ಕೇಳಿಸದು. ಯಾವುದೇ ವಿಧವಾದ ಕಸಬುಗಾರನೂ ನಿನ್ನಲ್ಲಿ ಎಂದೂ ಕಂಡುಬಾರನು. ಬೀಸುವ ಕಲ್ಲಿನ ಶಬ್ದವು, ನಿನ್ನಲ್ಲಿ ಎಂದೂ ಕೇಳಿಸದು.
[23] ದೀಪದ ಬೆಳಕು ನಿನ್ನಲ್ಲಿ ಎಂದೂ ಪ್ರಕಾಶಿಸದು. ವಧೂವರರ ಸ್ವರವು ಮತ್ತೆ ನಿನ್ನಲ್ಲಿ ಎಂದೂ ಕೇಳಿಬರದು. ಏಕೆಂದರೆ ನಿನ್ನ ವರ್ತಕರು ಭೂಮಿಯ ಮಹಾ ಪುರುಷರಾಗಿದ್ದು, ನಿನ್ನ ಮಾಂತ್ರಿಕ ಶಕ್ತಿಯ ದೆಸೆಯಿಂದ ಎಲ್ಲಾ ದೇಶಗಳವರು ವಂಚಿತರಾದರು.
[24] ಆಕೆಯಲ್ಲಿ ಪ್ರವಾದಿಗಳ ಮತ್ತು ಪರಿಶುದ್ಧರ ರಕ್ತವೂ ಮತ್ತು ಭೂಮಿಯ ಮೇಲೆ ಕೊಲೆಯಾದವರ ರಕ್ತವೂ ಸಿಕ್ಕಿತು,” ಎಂದು ಹೇಳಿದನು.