Skip to content
Opens in a new window
Listen to this chapter • 2:38

[1] ಆಗ ನಾನು ಮತ್ತೊಬ್ಬ ಬಲಿಷ್ಠನಾದ ದೇವದೂತನು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಮೇಲೆ ಮುಗಿಲ ಬಿಲ್ಲು ಇತ್ತು. ಅವನ ಮುಖವು ಸೂರ್ಯನಂತಿದ್ದು, ಅವನ ಕಾಲುಗಳು ಅಗ್ನಿಸ್ತಂಭಗಳಂತಿದ್ದವು.

[2] ಅವನು ತನ್ನ ಕೈಯಲ್ಲಿ ತೆರೆದಿದ್ದ ಒಂದು ಚಿಕ್ಕ ಸುರುಳಿಯನ್ನು ಹಿಡಿದುಕೊಂಡಿದ್ದನು. ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೂ ತನ್ನ ಎಡಗಾಲನ್ನು ಭೂಮಿಯ ಮೇಲೂ ಇಟ್ಟುಕೊಂಡು,

[3] ಸಿಂಹದ ಘರ್ಜನೆಯಂತೆ ಮಹಾ ಸ್ವರದಿಂದ ಕೂಗಿದನು. ಅವನು ಕೂಗಿದಾಗ, ಏಳು ಗುಡುಗುಗಳು ಮಾತನಾಡಿದವು.

[4] ಏಳು ಗುಡುಗುಗಳು ಮಾತನಾಡಿದಾಗ, ನಾನು ಬರೆಯಬೇಕೆಂದಿದ್ದೆನು. ಆದರೆ ಪರಲೋಕದಿಂದ ಬಂದ ಶಬ್ದವು, “ನೀನು ಆ ಏಳು ಗುಡುಗುಗಳು ಹೇಳಿರುವುದನ್ನು ಮುದ್ರೆಹಾಕಿ ಮುಚ್ಚಿಡು. ಅದನ್ನು ಬರೆಯಬೇಡ,” ಎಂದು ಹೇಳುವುದನ್ನು ಕೇಳಿದೆನು.

[5] ಆಗ ಸಮುದ್ರದ ಮೇಲೂ ಭೂಮಿಯ ಮೇಲೂ ನಿಂತಿರುವ ದೇವದೂತನು ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ,

[6] ಯುಗಯುಗಾಂತರಕ್ಕೂ ಜೀವಿಸುವವರೂ ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿದವರ ಮೇಲೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಇನ್ನು ಆಲಸ್ಯವಾಗುವುದಿಲ್ಲ!

[7] ಆದರೆ ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಬೇಕೆಂದಿರುವ ದಿನಗಳಲ್ಲಿ ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ಪ್ರಕಟಿಸಿದಂತೆಯೇ, ದೇವರ ರಹಸ್ಯವು ನೆರವೇರುವುದು.”

[8] ಆಗ ಪರಲೋಕದಿಂದ ನಾನು ಕೇಳಿದ್ದ ಧ್ವನಿಯು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, “ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿರುವ ದೇವದೂತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ಹೇಳಿತು.

[9] ಆಗ ನಾನು ದೇವದೂತನ ಬಳಿ ಹೋಗಿ, ಅವನನ್ನು, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಅವನು ನನಗೆ, “ಇದನ್ನು ತೆಗೆದುಕೊಂಡು ತಿನ್ನು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು. ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು,” ಎಂದು ಹೇಳಿದನು.

[10] ನಾನು ದೇವದೂತನ ಕೈಯಿಂದ ಆ ಚಿಕ್ಕ ಸುರುಳಿಯನ್ನು ತೆಗೆದುಕೊಂಡು ತಿಂದೆನು. ಇದರ ರುಚಿಯು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಾಗ, ನನ್ನ ಹೊಟ್ಟೆ ಕಹಿಯಾಯಿತು.

[11] ಆಗ ನನಗೆ, “ನೀನು ಅನೇಕ ಪ್ರಜೆ, ರಾಷ್ಟ್ರ, ಜನಾಂಗ, ಭಾಷೆ ಮತ್ತು ಅರಸರ ಮುಂದೆ ಪುನಃ ಪ್ರವಾದಿಸಬೇಕು,” ಎಂದು ಹೇಳಲಾಯಿತು.

ಪ್ರಕಟನೆ — Chapters