Skip to content
Opens in a new window
Listen to this chapter • 4:09

[1] ಏಳು ಬೋಗುಣಿಗಳನ್ನು ಹಿಡಿದಿದ್ದ ಏಳು ದೂತರಲ್ಲೊಬ್ಬನು ನನಗೆ, “ಬಾ, ಬಹಳ ನೀರುಗಳ ಮೇಲೆ ಕುಳಿತಿರುವ ಮಹಾಜಾರಸ್ತ್ರೀಗಾಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.

[2] ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು,” ಎಂದು ಹೇಳಿದನು.

[3] ಅನಂತರ ಅವನು ನನ್ನನ್ನು ಆತ್ಮನಲ್ಲಿ ಅರಣ್ಯಕ್ಕೆ ಒಯ್ದನು. ಅಲ್ಲಿ ಒಬ್ಬ ಸ್ತ್ರೀಯು, ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದು, ದೇವದೂಷಣೆಯ ಹೆಸರುಗಳಿಂದ ತುಂಬಿರುವ ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿರುವುದನ್ನು ಕಂಡೆನು.

[4] ಆ ಸ್ತ್ರೀಯು ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ, ಅಮೂಲ್ಯವಾದ ಹರಳು, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದ ವಸ್ತುಗಳಿಂದಲೂ ಮತ್ತು ತನ್ನ ಅಶುದ್ಧ ಅನೈತಿಕತೆಯಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.

[5] ಆಕೆಯ ಹಣೆಯ ಮೇಲೆ: “ಮಹಾ ಬಾಬಿಲೋನ್, ಜಾರ ಸ್ತ್ರೀಯರಿಗೂ ಭೂಮಿಯ ಎಲ್ಲಾ ಅಸಹ್ಯವಾದವುಗಳಿಗೂ ತಾಯಿ!” ಎಂದು ನಿಗೂಢ ಹೆಸರು ಬರೆದಿತ್ತು.

[6] ಆ ಸ್ತ್ರೀಯು ಪರಿಶುದ್ಧರ ರಕ್ತವನ್ನೂ ಮತ್ತು ಯೇಸುವಿನ ಸಾಕ್ಷಿಗಳಾಗಿದ್ದವರ ರಕ್ತವನ್ನೂ ಕುಡಿದಿರುವುದನ್ನು ನಾನು ಕಂಡೆನು. ಆಕೆಯನ್ನು ನಾನು ಕಂಡಾಗ, ಬಹು ಆಶ್ಚರ್ಯಗೊಂಡೆನು.

[7] ಆಗ ದೂತನು ನನಗೆ: “ನೀನೇಕೆ ಆಶ್ಚರ್ಯಪಟ್ಟೆ? ನಾನು ನಿನಗೆ ಆ ಸ್ತ್ರೀಯ ವಿಷಯವಾಗಿಯೂ ಅವಳು ಹೊತ್ತುಕೊಂಡಿದ್ದ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದ ಮೃಗದ ವಿಷಯವಾಗಿಯೂ ಇರುವ ಗೂಡಾರ್ಥವನ್ನು ನಿನಗೆ ತಿಳಿಸುವೆನು.

[8] ನೀನು ಕಂಡ ಮೃಗವು ಒಮ್ಮೆ ಇತ್ತು, ಈಗ ಇಲ್ಲ, ಪಾತಾಳದೊಳಗಿನಿಂದ ಮೇಲೆ ಬಂದು ವಿನಾಶಕ್ಕೆ ಹೊರಡಲಿದೆ. ಲೋಕದ ಸೃಷ್ಟಿಯಾದ ದಿನದಿಂದ ಯಾರ ಯಾರ ಹೆಸರುಗಳು ಜೀವಗ್ರಂಥದಲ್ಲಿ ಬರೆದಿರುವುದಿಲ್ಲವೋ, ಆ ಭೂನಿವಾಸಿಗಳು ಮೃಗವನ್ನು ನೋಡಿ ಆ ಮೃಗವು ಹಿಂದೆ ಇತ್ತು, ಈಗ ಇಲ್ಲ, ಇನ್ನು ಮೇಲೆ ಬರಲಿದೆ ಎಂದು ಆಶ್ಚರ್ಯಗೊಳ್ಳುವರು.

[9] “ಆ ಏಳು ತಲೆಗಳು, ಆ ಸ್ತ್ರೀ ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ. ಅವು ಏಳು ರಾಜರುಗಳಾಗಿರುತ್ತವೆ.

[10] ಅವರಲ್ಲಿ ಐದು ರಾಜರು ಬಿದ್ದಿದ್ದಾರೆ; ಒಬ್ಬನು ಇದ್ದಾನೆ, ಇನ್ನೊಬ್ಬನು ಇನ್ನೂ ಬಂದಿಲ್ಲ. ಅವನು ಬಂದಾಗ ಸ್ವಲ್ಪಕಾಲ ಇರಬೇಕಾಗುತ್ತದೆ.

[11] ಹಿಂದೆ ಇದ್ದು ಈಗ ಇಲ್ಲದ ಆ ಮೃಗವು ಎಂಟನೆಯವನು. ಅವನು ಆ ಏಳು ಜನರಲ್ಲಿ ಸೇರಿದವನಾಗಿದ್ದು, ವಿನಾಶಕ್ಕೆ ಹೋಗುತ್ತಿದ್ದಾನೆ.

[12] “ನೀನು ಕಂಡ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಮೃಗದೊಂದಿಗೆ ಅಧಿಕಾರ ಹೊಂದುವವು.

[13] ಅವರು ಏಕ ಮನಸ್ಸುಳ್ಳವರಾಗಿ, ಮೃಗಕ್ಕೆ ತಮ್ಮ ಬಲ ಮತ್ತು ಅಧಿಕಾರವನ್ನು ಕೊಡುವರು.

[14] ಅವರು ಕುರಿಮರಿಯಾದವರ ಮೇಲೆ ಯುದ್ಧಮಾಡುವರು. ಆದರೆ ಕುರಿಮರಿಯಾದವರು ಕರ್ತರ ಕರ್ತರೂ ರಾಜಾಧಿರಾಜರೂ ಆಗಿರುವುದರಿಂದ ಅವರನ್ನು ಜಯಿಸುವರು. ಅವರೊಂದಿಗಿದ್ದವರು ದೇವರಿಂದ ಕರೆಹೊಂದಿದವರೂ ಆಯ್ದುಕೊಂಡವರೂ ನಂಬಿಗಸ್ತರೂ ಆಗಿರುವರು.”

[15] ಅನಂತರ ದೂತನು ನನಗೆ, “ಜಾರಸ್ತ್ರೀ ಕೂತಿದ್ದ ಕಡೆ ನೀನು ಕಂಡ ನೀರುಗಳು, ಪ್ರಜೆಗಳನ್ನೂ ಸಮೂಹಗಳನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತವೆ.

[16] ನೀನು ಕಂಡ ಆ ಮೃಗ ಮತ್ತು ಹತ್ತು ಕೊಂಬುಗಳು ಆ ಜಾರಸ್ತ್ರೀಯನ್ನು ದ್ವೇಷಿಸಿ, ಆಕೆಯನ್ನು ಗತಿಯಿಲ್ಲದವಳನ್ನಾಗಿಯೂ ಆಕೆಯನ್ನು ಬಟ್ಟೆ ಇಲ್ಲದವಳನ್ನಾಗಿಯೂ ಆಕೆಯ ಮಾಂಸವನ್ನು ತಿಂದು, ಆಕೆಯನ್ನು ಬೆಂಕಿಯಲ್ಲಿ ಸುಟ್ಟುಬಿಡುವವು.

[17] ಏಕೆಂದರೆ, ದೇವರು ತಮ್ಮ ಮನಸ್ಸಿನಲ್ಲಿರುವುದನ್ನು ನಡೆಸುವಂತೆಯೂ ಅವುಗಳ ರಾಜ್ಯವನ್ನು ಮೃಗಕ್ಕೆ ಕೊಡಲು ಒಮ್ಮನಸ್ಸಾಗಿರುವಂತೆಯೂ ಮಾಡಿ, ದೇವರು ತಮ್ಮ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಇದನ್ನು ಅವುಗಳ ಹೃದಯದಲ್ಲಿಟ್ಟಿದ್ದಾರೆ.

[18] ನೀನು ಕಂಡ ಆ ಸ್ತ್ರೀಯು ಭೂರಾಜರನ್ನು ಆಳುವ ಮಹಾನಗರಿಯೇ,” ಎಂದು ಹೇಳಿದನು.

ಪ್ರಕಟನೆ — Chapters