[1] ಇದಾದನಂತರ ನಾಲ್ಕು ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿರುವುದನ್ನು ಕಂಡೆನು. ಅವರು ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ತಡೆಹಿಡಿದಿದ್ದರು.
[2] ಆಗ ಮತ್ತೊಬ್ಬ ದೂತನು, ಜೀವಸ್ವರೂಪರಾದ ದೇವರ ಮುದ್ರೆಯನ್ನು ಹಿಡಿದು ಪೂರ್ವದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಭೂಮಿ ಮತ್ತು ಸಮುದ್ರವನ್ನು ಬಾಧಿಸುವ ಶಕ್ತಿ ಹೊಂದಿದ ನಾಲ್ಕು ದೂತರಿಗೆ ಅವನು ಮಹಾಶಬ್ದದಿಂದ,
[3] “ನಾವು ನಮ್ಮ ದೇವರ ದಾಸರ ಹಣೆಗಳ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ಹಾನಿಪಡಿಸಬೇಡ!” ಎಂದು ಹೇಳಿದನು.
[4] ಆಗ ಮುದ್ರೆ ಹೊಂದಿರುವವರ ಸಂಖ್ಯೆಯು ನನಗೆ ಕೇಳಿಸಿತು. ಇಸ್ರಾಯೇಲಿನ ಎಲ್ಲಾ ಕುಲಗಳಿಂದ ಮುದ್ರೆಹಾಕಿಸಿಕೊಂಡವರು 1,44,000 ಜನರು.
[5] ಯೂದ ಕುಲದಿಂದ ಮುದ್ರೆಹಾಕಿಸಿಕೊಂಡವರು 12,000, ರೂಬೇನ್ ಕುಲದಿಂದ 12,000, ಗಾದ್ ಕುಲದಿಂದ 12,000,
[6] ಆಶೇರ್ ಕುಲದಿಂದ 12,000, ನಫ್ತಲೀಮ ಕುಲದಿಂದ 12,000, ಮನಸ್ಸೆ ಕುಲದಿಂದ 12,000,
[7] ಸಿಮೆಯೋನ್ ಕುಲದಿಂದ 12,000, ಲೇವಿ ಕುಲದಿಂದ 12,000, ಇಸ್ಸಾಕರ್ ಕುಲದಿಂದ 12,000,
[8] ಜೆಬುಲೋನ್ ಕುಲದಿಂದ 12,000, ಯೋಸೇಫನ ಕುಲದಿಂದ 12,000, ಬೆನ್ಯಾಮೀನ್ ಕುಲದಿಂದ ಮುದ್ರೆಹಾಕಿಸಿಕೊಂಡವರು 12,000 ಜನರು.
[9] ಇದಾದನಂತರ ಯಾರೂ ಎಣಿಸಲಾಗದಂಥ ಮಹಾ ಜನಸಮೂಹವನ್ನು ಕಂಡೆನು. ಅವರು ಪ್ರತಿ ರಾಷ್ಟ್ರ, ಕುಲ, ಜನ ಮತ್ತು ಭಾಷೆಯವರಾಗಿದ್ದು, ಯಜ್ಞದ ಕುರಿಮರಿ ಆಗಿರುವವರ ಮುಂದೆಯೂ ಸಿಂಹಾಸನದ ಮುಂದೆಯೂ ನಿಂತಿದ್ದರು. ಅವರು ಬಿಳಿ ನಿಲುವಂಗಿಗಳನ್ನು ಧರಿಸಿದ್ದವರಾಗಿ, ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು.
[10] ಅವರು ಮಹಾಧ್ವನಿಯಿಂದ ಹೀಗೆ ಕೂಗಿದರು: “ಸಿಂಹಾಸನದಲ್ಲಿ ಕೂತಿರುವ ನಮ್ಮ ದೇವರಿಗೂ, ಕುರಿಮರಿ ಆಗಿರುವವರಿಗೂ, ರಕ್ಷಣೆಯು ಸೇರತಕ್ಕದ್ದಾಗಿದೆ.”
[11] ಸಿಂಹಾಸನ, ಹಿರಿಯರು ಮತ್ತು ನಾಲ್ಕು ಜೀವಿಗಳ ಸುತ್ತಲೂ ದೇವದೂತರು ನಿಂತಿದ್ದರು. ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು ದೇವರನ್ನು ಆರಾಧಿಸಿ,
[12] “ಆಮೆನ್! ಸ್ತೋತ್ರ, ಮಹಿಮೆ, ಜ್ಞಾನ, ಕೃತಜ್ಞತೆ, ಗೌರವ, ಶಕ್ತಿ, ಬಲ ನಮ್ಮ ದೇವರಿಗೆ ಯುಗಯುಗಾಂತರಕ್ಕೂ ಉಂಟಾಗಲಿ. ಆಮೆನ್!” ಎಂದು ಹೇಳುತ್ತಿದ್ದರು.
[13] ಆಗ ಹಿರಿಯರಲ್ಲೊಬ್ಬನು ನನ್ನನ್ನು, “ಈ ಬಿಳಿ ನಿಲುವಂಗಿಯನ್ನು ತೊಟ್ಟ ಇವರು ಯಾರು? ಎಲ್ಲಿಂದ ಬಂದವರು?” ಎಂದು ಕೇಳಿದನು.
[14] ಅದಕ್ಕೆ ನಾನು, “ನನ್ನ ಒಡೆಯನೆ ನೀನೇ ಬಲ್ಲೆ!” ಎಂದು ಉತ್ತರಿಸಿದೆನು. ಅವನು ನನಗೆ, “ಇವರು ಆ ಮಹಾಸಂಕಟದಿಂದ ಹೊರಬಂದವರು. ಇವರು ತಮ್ಮ ನಿಲುವಂಗಿಗಳನ್ನು ಕುರಿಮರಿ ಆಗಿರುವವರ ರಕ್ತದಲ್ಲಿ ಅವುಗಳನ್ನು ಬೆಳ್ಳಗೆ ಮಾಡಿಕೊಂಡಿದ್ದಾರೆ!”
[15] ಆದ್ದರಿಂದ, “ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು, ದೇವರ ಆಲಯದಲ್ಲಿ ಹಗಲಿರುಳೂ ದೇವರನ್ನು ಸೇವೆಮಾಡುವರು. ಸಿಂಹಾಸನದ ಮೇಲೆ ಕೂತಿದ್ದವರು ಅವರನ್ನು ಆವರಿಸಿ ಸಂರಕ್ಷಿಸಿದರು.
[16] ‘ಇವರಿಗೆ ಇನ್ನೆಂದಿಗೂ ಹಸಿವೆಯಾಗಲಿ; ಬಾಯಾರಿಕೆಯಾಗಲಿ ಆಗುವುದಿಲ್ಲ. ಇದಲ್ಲದೆ ಸೂರ್ಯನ ಬಿಸಿಲಾದರೂ,’ ಯಾವ ಝಳವಾದರೂ ಇವರಿಗೆ ತಟ್ಟುವುದಿಲ್ಲ.
[17] ಏಕೆಂದರೆ, ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿ ಆಗಿರುವವರು ಇವರನ್ನು ಮೇಯಿಸಿ; ‘ಜೀವಜಲದ ಒರತೆಗಳ ಬಳಿ ನಡೆಸುವರು.’ ‘ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವರು,’” ಎಂದು ಹೇಳಿದನು.