[1] ದಂಡದಂತಿದ್ದ ಒಂದು ಅಳತೆ ಕೋಲು ನನಗೆ ಕೊಡಲಾಯಿತು. ನನಗೆ ಹೀಗೆ ಹೇಳಲಾಯಿತು: “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆಮಾಡಿ, ಆಲಯದಲ್ಲಿ ಆರಾಧನೆ ಮಾಡುವವರನ್ನು ಎಣಿಸು.
[2] ಆಲಯಕ್ಕೆ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು. ಏಕೆಂದರೆ ಅದು ಯೆಹೂದ್ಯರಲ್ಲದವರಿಗಾಗಿ ಬಿಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು.
[3] ನನ್ನ ಇಬ್ಬರು ಸಾಕ್ಷಿಗಳಿಗೆ ಗೋಣಿತಟ್ಟುಗಳನ್ನು ಹೊದ್ದುಕೊಂಡು, ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವಂತೆ ಮಾಡುವೆನು,”
[4] ಇವರು, “ಎಣ್ಣೆಯ ಮರಗಳೂ ಭೂಲೋಕದ ಒಡೆಯ ಆಗಿರುವವರ ಮುಂದೆ ನಿಂತಿರುವ ಎರಡು ದೀಪಸ್ತಂಭಗಳೂ ಆಗಿದ್ದಾರೆ.”
[5] ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಇವರ ಬಾಯೊಳಗಿಂದ ಬೆಂಕಿ ಹೊರಟು, ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬಯಸಿದರೆ, ಅವನಿಗೂ ಅದೇ ರೀತಿಯಾಗಿ ಕೊಲೆಯಾಗಬೇಕು.
[6] ತಾವು ಪ್ರವಾದಿಸುತ್ತಿರುವ ದಿನಗಳಲ್ಲಿ, ಮಳೆ ಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಇರುವುದು. ಇದಲ್ಲದೆ ಇವರಿಗೆ ಬಯಸಿದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಬಾಧಿಸುವುದಕ್ಕೂ ಅಧಿಕಾರ ಇರುತ್ತದೆ.
[7] ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ, ಪಾತಾಳದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ, ಇವರನ್ನು ಜಯಿಸಿ ಕೊಲ್ಲುವುದು.
[8] ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಗಳು ಸಾಂಕೇತಿಕವಾಗಿ ಸೊದೋಮ್ ಹಾಗೂ ಈಜಿಪ್ಟ್ ಎಂದೂ ಹೆಸರುಗಳಿರುವುದು. ಇವರ ಒಡೆಯ ಆಗಿರುವವರನ್ನು ಸಹ ಅಲ್ಲಿಯೇ ಶಿಲುಬೆಗೆ ಹಾಕಲಾಗಿತ್ತು.
[9] ಆಗ ಸಕಲ ಪ್ರಜೆ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು, ಇವರ ಶವಗಳನ್ನು ಸಮಾಧಿಯಲ್ಲಿಡಲು ಅನುಮತಿಸದೆ, ಮೂರುವರೆ ದಿನಗಳವರೆಗೂ ನೋಡುತ್ತಾ ಇರುವರು.
[10] ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ್ದರಿಂದ, ಇದರ ವಿಷಯವಾಗಿ ಭೂನಿವಾಸಿಗಳು ಸಂತೋಷಿಸಿ, ಹರ್ಷಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.
[11] ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮವು ಬಂದು, ಆ ಶವಗಳಲ್ಲಿ ಪ್ರವೇಶಿಸಲು, ಅವು ಕಾಲೂರಿ ನಿಂತವು. ಅವರನ್ನು ಕಂಡವರಿಗೆ ಮಹಾ ಭಯವುಂಟಾಯಿತು.
[12] ಆಗ ಅವರಿಗೆ, “ಇಲ್ಲಿ ಮೇಲಕ್ಕೆ ಬನ್ನಿರಿ,” ಎಂದು ಮಹಾಧ್ವನಿಯು ಕೇಳಿಸಿತು. ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.
[13] ಅದೇ ಗಳಿಗೆಯಲ್ಲಿ, ಮಹಾ ಭೂಕಂಪ ಉಂಟಾಗಿ ಆ ಪಟ್ಟಣದ ಹತ್ತರಲ್ಲೊಂದು ಭಾಗವು ಬಿದ್ದುಹೋಯಿತು. ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಸತ್ತುಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು.
[14] ಎರಡನೆಯ ವಿಪತ್ತು ಕಳೆದುಹೋಯಿತು. ಮೂರನೆಯ ವಿಪತ್ತು ಬೇಗನೆ ಬರಲಿದೆ.
[15] ಏಳನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾ ಧ್ವನಿಗಳುಂಟಾಗಿ, ಹೀಗೆ ಹೇಳಿದವು: “ಲೋಕದ ರಾಜ್ಯವು ನಮ್ಮ ದೇವರ ಮತ್ತು ಅವರಿಗೆ ಸೇರಿದ ಕ್ರಿಸ್ತ ಯೇಸುವಿನ ರಾಜ್ಯವಾಯಿತು, ಈ ಕ್ರಿಸ್ತ ಯೇಸುವೇ ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವರು.”
[16] ತರುವಾಯ ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ದೇವರಿಗೆ ಅಡ್ಡಬಿದ್ದು,
[17] ಹೀಗೆ ಹೇಳಿದರು: “ಕರ್ತ ಆಗಿರುವ, ಸರ್ವಶಕ್ತರಾದ ದೇವರೇ, ಮೊದಲು ಇದ್ದು ಈಗಲೂ ಇರುವವರೂ, ನೀವು ನಿಮ್ಮ ಮಹಾ ಅಧಿಕಾರವನ್ನು ಪಡೆದು ಆಳಿದ್ದರಿಂದ ನಿಮಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
[18] ರಾಷ್ಟ್ರಗಳು ಕೋಪಗೊಂಡವು, ನಿಮ್ಮ ರೋಷವು ಈಗ ಬಂದಿದೆ. ಸತ್ತವರು ತೀರ್ಪು ಹೊಂದುವ ಸಮಯ ಬಂದಿದೆ. ನೀವು ನಿಮ್ಮ ಸೇವಕರಾದ ಪ್ರವಾದಿಗಳಿಗೂ ದೇವಜನರಿಗೂ ನಿಮ್ಮ ನಾಮಕ್ಕೆ ಭಯಪಡುವ ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲವನ್ನು ಕೊಟ್ಟು, ಲೋಕ ನಾಶಕರನ್ನು ದಂಡಿಸುವಿರಿ.”
[19] ಆಗ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ ಮಿಂಚುಗಳೂ ಸಪ್ಪಳಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಉಂಟಾದವು.