[1] ಸಿಂಹಾಸನದ ಮೇಲೆ ಕುಳಿತಿದ್ದವರ ಬಲಗೈಯಲ್ಲಿ ಒಂದು ಚರ್ಮದ ಸುರುಳಿಯನ್ನು ಕಂಡೆನು. ಅದರ ಒಳಗೂ ಹಿಂಭಾಗದಲ್ಲಿಯೂ ಬರೆಯಲಾಗಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
[2] ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು, “ಈ ಸುರುಳಿಯ ಮುದ್ರೆಗಳನ್ನು ಬರೆಯುವುದಕ್ಕೂ ಅದನ್ನು ಬಿಚ್ಚುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಧ್ವನಿಯಿಂದ ಕೂಗುವುದನ್ನು ಕಂಡೆನು.
[3] ಆದರೆ ಆ ಸುರುಳಿಯನ್ನು ಬಿಚ್ಚಲು ಇಲ್ಲವೆ ಅದರಲ್ಲಿ ನೋಡಲು ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾವ ವ್ಯಕ್ತಿಗೂ ಆಗಲಿಲ್ಲ.
[4] ಆಗ ಸುರುಳಿಯನ್ನು ಬಿಚ್ಚುವುದಕ್ಕಾಗಲಿ, ಅದರಲ್ಲಿ ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅತ್ತೆನು.
[5] ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜರೂ ಆಗಿರುವವರು ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನು ಬಿಚ್ಚುವುದಕ್ಕೆ ಜಯವೀರರಾಗಿದ್ದಾರೆ,” ಎಂದು ಹೇಳಿದನು.
[6] ಆಗ ನಾನು, ಸಿಂಹಾಸನದ ಮಧ್ಯದಲ್ಲಿಯೂ ನಾಲ್ಕು ಜೀವಿಗಳು ಮತ್ತು ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ಬಲಿಗೋಸ್ಕರ ವಧೆಯಾಗಿದ್ದಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಭೂಮಿಯ ಮೇಲೆಲ್ಲಾ ಕಳುಹಿಸಲಾದ ದೇವರ ಏಳು ಆತ್ಮಗಳು.
[7] ಆ ಕುರಿಮರಿ ಆಗಿರುವವರು ಬಂದು ಸಿಂಹಾಸನದ ಮೇಲೆ ಕುಳಿತಿದ್ದವರ ಬಲಗೈಯೊಳಗಿಂದ ಸುರುಳಿಯನ್ನು ತೆಗೆದುಕೊಂಡರು.
[8] ಸುರುಳಿಯನ್ನು ತೆಗೆದುಕೊಂಡಾಗ, ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿ ಆಗಿರುವವರ ಮುಂದೆ ಅಡ್ಡಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.
[9] ಅವರು ಹೊಸಹಾಡನ್ನು ಹಾಡುತ್ತಾ, “ನೀವು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ನೀವು ವಧಿತರಾಗಿ, ನಿಮ್ಮ ರಕ್ತದಿಂದ ಸಕಲ ಕುಲ, ಭಾಷೆ, ಪ್ರಜೆ, ರಾಷ್ಟ್ರಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿರುವಿರಿ.
[10] ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿರಿ, ಅವರು ಭೂಮಿಯ ಮೇಲೆ ಆಳುವರು!” ಎಂದು ಹೇಳಿದರು.
[11] ಇದಲ್ಲದೆ ನಾನು ನೋಡಲಾಗಿ, ಸಿಂಹಾಸನದ ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
[12] ಅವರು, ಮಹಾಧ್ವನಿಯಿಂದ: “ವಧಿತರಾದ ಕುರಿಮರಿ ಆಗಿರುವವರು ಶಕ್ತಿ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, ಗೌರವ, ಮಹಿಮೆ, ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯರು!” ಎಂದು ಹೇಳಿದರು.
[13] ಇದಲ್ಲದೆ ಆಕಾಶದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗಡೆಯೂ ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಹೀಗೆ ಹೇಳುವುದನ್ನು ಕೇಳಿದೆನು: “ಸಿಂಹಾಸನದ ಮೇಲೆ ಕುಳಿತಿರುವವರಿಗೂ ಕುರಿಮರಿ ಆಗಿರುವವರಿಗೂ ಸ್ತೋತ್ರ, ಗೌರವ, ಮಹಿಮೆ, ಶಕ್ತಿ, ಯುಗಯುಗಾಂತರಗಳಲ್ಲಿಯೂ ಇರಲಿ!”
[14] ಆಗ ನಾಲ್ಕು ಜೀವಿಗಳು, “ಆಮೆನ್,” ಎಂದವು. ಹಿರಿಯರು ಅಡ್ಡಬಿದ್ದು ಆರಾಧಿಸಿದರು.