[1] ಇಸ್ರಾಯೇಲರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳೂ, ಅರಸನ ವಿಧವಿಧವಾದ ಸೇವೆಯನ್ನು ಮಾಡಬೇಕಾದ ವರ್ಗಗಳ ಅಧಿಪತಿಗಳ ವಿವರ: ವರ್ಷದ ಎಲ್ಲಾ ತಿಂಗಳುಗಳಲ್ಲಿ ತಿಂಗಳಿಗೆ ಒಂದು ವರ್ಗದಂತೆ ಸರದಿಯ ಪ್ರಕಾರ ಕೆಲಸಕ್ಕಾಗಿ ಬರುವ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು ಇದ್ದರು.
[2] ಪೆರೆಚನ ಸಂತಾನದವನೂ, ಜಬ್ದೀಯೇಲನ ಮಗನೂ ಆದ ಯಾಷೊಬ್ಬಾಮನು ಮೊದಲನೆಯ ವರ್ಗದ ನಾಯಕನು.
[3] ಇವನು ಮೊದಲನೆಯ ತಿಂಗಳಿನ ಸೈನ್ಯಾಧಿಪತಿಯ ಮುಖ್ಯಸ್ಥನು. ಮೊದಲನೆಯ ತಿಂಗಳಿನಲ್ಲಿ ಸೇವೆ ಮಾಡತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತ್ನಾಲ್ಕು ಸಾವಿರ.
[4] ಅಹೋಹಿಯನಾದ ದೋದೈಯು ಎರಡನೆಯ ತಿಂಗಳಿನ ವರ್ಗದ ನಾಯಕನು. ಆ ವರ್ಗದಲ್ಲಿ ಮಿಕ್ಲೋತನೆಂಬವನು ನಾಯಕನು. ಅವನ ವರ್ಗದವರ ಸಂಖ್ಯೆ ಇಪ್ಪತ್ತ್ನಾಲ್ಕು ಸಾವಿರ.
[5] ಯಾಜಕನಾದ ಯೆಹೋಯಾದನ ಮಗನೂ ಪ್ರಧಾನನೂ ಆದ ಬೆನಾಯನು ಮೂರನೆಯ ವರ್ಗದ ನಾಯಕನು. ಮೂರನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
[6] ಈ ಬೆನಾಯನು ಮೂವತ್ತು ಜನರಲ್ಲಿ ಪ್ರಸಿದ್ಧನಾದ ಯುದ್ಧವೀರನೂ ಅವರ ಮುಖ್ಯಸ್ಥನೂ ಆಗಿದ್ದನು. ಅವನ ವರ್ಗದಲ್ಲಿ ಅವನ ಮಗನಾದ ಅಮ್ಮೀಜಾಬಾದನು ಇದ್ದನು.
[7] ಯೋವಾಬನ ತಮ್ಮನಾದ ಅಸಾಹೇಲನು. ಅವನು ಸತ್ತ ನಂತರ ಅವನ ಮಗನಾದ ಜೆಬದ್ಯನು ನಾಲ್ಕನೆಯ ವರ್ಗದ ನಾಯಕನು. ನಾಲ್ಕನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[8] ಇಜ್ರಾಹ್ಯನಾದ ಶಮ್ಹೂತನು ಐದನೆಯ ವರ್ಗದ ನಾಯಕನು. ಐದನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[9] ತೆಕೋವಿನ ಇಕ್ಕೇಷನ ಮಗನಾದ ಈರ ಎಂಬುವನು ಆರನೆಯ ವರ್ಗದ ನಾಯಕನು. ಆರನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[10] ಎಫ್ರಾಯೀಮ್ ಕುಲದ ಪೆಲೋನ್ಯನಾದ ಹೆಲೆಚನು ಏಳನೆಯ ವರ್ಗದ ನಾಯಕನು. ಏಳನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[11] ಹುಷ ಊರಿನ ಜೆರಹೀಯನಾದ ಸಿಬ್ಬೆಕೈಯು ಎಂಟನೆಯ ವರ್ಗದ ನಾಯಕನು. ಎಂಟನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[12] ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬೀಯೆಜೆರನು ಒಂಬತ್ತನೆಯ ವರ್ಗದ ನಾಯಕನು. ಒಂಬತ್ತನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[13] ನೆಟೋಫ ಊರಿನವನಾದ ಜೆರಹೀಯನಾದ ಮಹರೈಯು ಹತ್ತನೆಯ ವರ್ಗದ ನಾಯಕನು. ಹತ್ತನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[14] ಎಫ್ರಾಯೀಮ್ ಕುಲದ ಪಿರ್ರಾತೋನ್ಯನಾದ ಬೆನಾಯನು ಹನ್ನೊಂದನೆಯ ವರ್ಗದ ನಾಯಕನು. ಹನ್ನೊಂದನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[15] ನೆಟೋಫ ಊರಿನವನಾದ ಒತ್ನೀಯೇಲನ ಸಂತಾನದವನಾದ ಹೆಲ್ದೈಯು ಹನ್ನೆರಡನೆಯ ವರ್ಗದ ನಾಯಕನು. ಹನ್ನೆರಡನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
[16] ಇಸ್ರಾಯೇಲಿನ ಕುಲ ಪ್ರಭುಗಳು: ರೂಬೇನ್ಯರಲ್ಲಿ ಜಿಕ್ರೀಯ ಮಗನಾದ ಎಲೀಯೆಜೆರನು; ಸಿಮೆಯೋನ್ಯರಲ್ಲಿ ಮಾಕನ ಮಗನಾದ ಶೆಪಟ್ಯನು;
[17] ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ; ಆರೋನ್ಯರಲ್ಲಿ ಚಾದೋಕ್;
[18] ಯೆಹೂದ್ಯರಲ್ಲಿ ದಾವೀದನ ಅಣ್ಣನಾದ ಎಲೀಹು; ಇಸ್ಸಾಕಾರ್ಯರಲ್ಲಿ ಮೀಕಾಯೇಲನ ಮಗನಾದ ಒಮ್ರಿ;
[19] ಜೆಬುಲೂನ್ಯರಲ್ಲಿ ಓಬದ್ಯನ ಮಗನಾದ ಇಷ್ಮಾಯ; ನಫ್ತಾಲ್ಯರಲ್ಲಿ ಅಜ್ರೀಯೇಲನ ಮಗನಾದ ಯೆರೀಮೋತ್;
[20] ಎಫ್ರಾಯೀಮ್ಯರಲ್ಲಿ ಅಜಜ್ಯನ ಮಗನಾದ ಹೊಷೇಯ; ಮನಸ್ಸೆಯ ಅರ್ಧ ಕುಲದವರಲ್ಲಿ ಪೆದಾಯನ ಮಗನಾದ ಯೋವೇಲ್;
[21] ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಕುಲದವರಲ್ಲಿ ಜೆಕರ್ಯಯನ ಮಗನಾದ ಇದ್ದೋ; ಬೆನ್ಯಾಮೀನ್ಯರಲ್ಲಿ ಅಬ್ನೇರನ ಮಗನಾದ ಯಗಸೀಯೇಲ್;
[22] ದಾನ್ಯರಲ್ಲಿ ಯೆರೋಹಾಮನ ಮಗನಾದ ಅಜರೇಲನು ಇವರೇ.
[23] ಇಸ್ರಾಯೇಲರನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡುವೆನೆಂಬುದಾಗಿ ಯೆಹೋವನು ಕೊಟ್ಟ ಮಾತನ್ನು ದಾವೀದನು ನಂಬಿ ಇಪ್ಪತ್ತು ವರ್ಷಕ್ಕಿಂತ ಕಡಿಮೆ ವಯಸ್ಸುಳ್ಳವರನ್ನು ಪರಿಗಣಿಸಲಿಲ್ಲ.
[24] ಚೆರೂಯಳ ಮಗನಾದ ಯೋವಾಬನು ಅವರನ್ನು ಲೆಕ್ಕಿಸಲಾರಂಭಿಸಿದರೂ, ಇದರ ನಿಮಿತ್ತ ಇಸ್ರಾಯೇಲರ ಮೇಲೆ ದೇವರ ಕೋಪವುಂಟಾದ್ದರಿಂದ ಅದನ್ನು ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. ಈ ಜನಗಣತಿಯು ದಾವೀದನ ರಾಜ್ಯದ ವೃತ್ತಾಂತ ಗ್ರಂಥದಲ್ಲಿ ಲಿಖಿತವಾಗಲಿಲ್ಲ.
[25] ಅರಸನಾದ ದಾವೀದನ ಸೊತ್ತಿನ ಮೇಲೆ ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟವರು ಯಾರೆಂದರೆ: ಅರಸನ ಭಂಡಾರಗಳ ಮೇಲೆ ಅದೀಯೇಲನ ಮಗನಾದ ಅಜ್ಮಾವೆತ್, ಹೊಲಗಳಲ್ಲಿಯೂ, ಪಟ್ಟಣಗಳಲ್ಲಿಯೂ, ಹಳ್ಳಿಗಳಲ್ಲಿಯೂ, ಬುರುಜಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗನಾದ ಯೋನಾತಾನನು,
[26] ಹೊಲಗಳನ್ನು ವ್ಯವಸಾಯ ಮಾಡುವ ಆಳುಗಳ ಮೇಲೆ ಕೆಲೂಬನ ಮಗನಾದ ಎಜ್ರೀ,
[27] ದ್ರಾಕ್ಷಿ ತೋಟಗಳ ಮೇಲೆ ರಾಮಾ ಊರಿನ ಶಿಮ್ಮೀ, ದ್ರಾಕ್ಷಿ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ,
[28] ಎಣ್ಣೇ ಮರದ ತೋಪುಗಳ ಮೇಲೆಯೂ ಇಳುಕಲಿನ ಪ್ರದೇಶದಲ್ಲಿರುವ ಅತ್ತಿಮರಗಳ ತೋಪುಗಳ ಮೇಲೆಯೂ ಗೆದೇರಾ ಊರಿನವನಾದ ಬಾಳ್ಹಾನಾನ್ ಮತ್ತು ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷ್,
[29] ಶಾರೋನಿನಲ್ಲಿ ಮೇಯುವ ಹಸುಗಳ ಮೇಲೆ ಶಾರೋನ್ಯನಾದ ಶಿಟ್ರೈ, ತಗ್ಗುಗಳಲ್ಲಿ ಮೇಯುವ ಹಸುಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು,
[30] ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ್, ಹೆಣ್ಣುಕತ್ತೆಗಳ ಮೇಲೆ ಮೇರೊನೋತ್ಯನಾದ ಯೆಹ್ದೆಯ,
[31] ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ್.
[32] ವಿವೇಕಿಯೂ, ಶಾಸ್ತ್ರಜ್ಞನೂ ಆದ ಯೋನಾತಾನನೆಂಬ ದಾವೀದನ ಚಿಕ್ಕಪ್ಪನು, ಮಂತ್ರಿಯೂ ಹಕ್ಮೋನಿಯ ಮಗನಾದ ಯೆಹೀಯೇಲನು ರಾಜಪುತ್ರಪಾಲಕನೂ ಆಗಿದ್ದರು.
[33] ಅಹೀತೋಫೆಲನು ಅರಸನ ಮಂತ್ರಿಯೂ, ಅರ್ಕೀಯನಾದ ಹೂಷೈಯು ಅವನ ಮಿತ್ರನಾಗಿದ್ದನು.
[34] ಬೆನಾಯನ ಮಗನಾದ ಯೆಹೋಯಾದಾವನೂ, ಎಬ್ಯಾತಾರನೂ, ಅಹೀತೋಫೆಲನ ಉತ್ತರಾಧಿಕಾರಿಗಳಾದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.