Skip to content
Opens in a new window
Listen to this chapter • 4:20

[1] ಆಗ ದಾವೀದನು, “ಇದೇ ದೇವರಾದ ಯೆಹೋವನ ಆಲಯ. ಇದೇ ಇಸ್ರಾಯೇಲರು ಯಜ್ಞವನ್ನು ಅರ್ಪಿಸತಕ್ಕ ಯಜ್ಞವೇದಿ” ಎಂದು ಹೇಳಿದನು.

[2] ಅನಂತರ ದಾವೀದನು ಇಸ್ರಾಯೇಲ್ ದೇಶದಲ್ಲಿದ್ದ ಅನ್ಯಜನಗಳನ್ನು ಒಟ್ಟುಗೂಡಿಸುವುದಕ್ಕೆ ಆಜ್ಞಾಪಿಸಿ, ಅವರಲ್ಲಿದ್ದ ಕಲ್ಲುಕುಟಿಗರನ್ನು ದೇವಾಲಯದ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವುದಕ್ಕೆ ನೇಮಿಸಿದನು.

[3] ಇದಲ್ಲದೆ ದಾವೀದನು ದ್ವಾರಗಳ ಮೂಲಕ ಹೋಗುವ ಬಾಗಿಲುಗಳಿಗೆ ಬೇಕಾದ ಮೊಳೆಗಳನ್ನೂ, ಪಟ್ಟಿಗಳನ್ನೂ ಮಾಡುವುದಕ್ಕೆ ಬಹಳ ಕಬ್ಬಿಣಗಳನ್ನೂ,

[4] ಲೆಕ್ಕವಿಲ್ಲದ್ದಷ್ಟು ತಾಮ್ರವನ್ನೂ, ಎಣಿಸಲಾರದಷ್ಟು ದೇವದಾರುಮರಗಳನ್ನೂ ಸಿದ್ಧಪಡಿಸಿದನು. ಚೀದೋನ್ಯರು ಮತ್ತು ತೂರ್ಯರೂ ಅವನಿಗೆ ದೇವದಾರುಮರಗಳನ್ನು ತಂದುಕೊಟ್ಟರು.

[5] ದಾವೀದನು ತನ್ನ ಮನಸ್ಸಿನಲ್ಲಿ ತನ್ನ ಮಗನಾದ ಸೊಲೊಮೋನನು ಎಳೆ ಪ್ರಾಯದವನಾಗಿದ್ದಾನೆ. ಯೆಹೋವನಿಗೋಸ್ಕರ ಕಟ್ಟಿಸತಕ್ಕ ಆಲಯದ ಕೀರ್ತಿಯು ಎಲ್ಲಾ ದೇಶಗಳಲ್ಲಿ ಘನತೆಯನ್ನು ಹೊಂದಬೇಕಾದರೆ ಅದು ಅಧಿಕ ಶೋಭಾಯಮಾನವಾಗಿರಬೇಕು. ಆದುದರಿಂದ ಅದಕ್ಕೆ ಬೇಕಾಗುವುದನ್ನೆಲ್ಲಾ ಸಿದ್ಧಪಡಿಸುವೆನು ಅಂದುಕೊಂಡು ಸಾಯುವುದಕ್ಕೆ ಮೊದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿದನು.

[6] ಆ ಮೇಲೆ ಅವನು ತನ್ನ ಮಗನಾದ ಸೊಲೊಮೋನನನ್ನು ಕರೆಯಿಸಿ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಅವನಿಗೆ ಆಜ್ಞಾಪಿಸಿದನು.

[7] ದಾವೀದನು ಸೊಲೊಮೋನನಿಗೆ, “ನಾನು ನನ್ನ ದೇವರಾದ ಯೆಹೋವನ ಹೆಸರಿಗೋಸ್ಕರ ಅಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದ್ದೆನು.

[8] ಆದರೆ ಯೆಹೋವನು ನನಗೆ, ‘ನೀನು ಬಹಳ ರಕ್ತವನ್ನು ಸುರಿಸಿದವನೂ, ಮಹಾ ಯುದ್ಧಗಳನ್ನು ನಡಿಸಿದವನೂ ಆಗಿರುತ್ತೀ. ನೀನು ನನ್ನೆದುರಿನಲ್ಲಿ ಬಹಳ ರಕ್ತವನ್ನು ಸುರಿಸಿದ್ದರಿಂದ ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು.

[9] ನಿನಗೆ ಒಬ್ಬ ಮಗನು ಹುಟ್ಟುವನು, ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಡಗಿಸಿ, ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಾಯೇಲರಿಗೆ ಸಮಾಧಾನವನ್ನೂ ಮತ್ತು ಸೌಭಾಗ್ಯವನ್ನೂ ದಯಪಾಲಿಸುವೆನು.

[10] ಅವನೇ ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು. ಅವನು ನನಗೆ ಮಗನಾಗಿರುವನು. ನಾನು ಅವನಿಗೆ ತಂದೆಯಾಗಿರುವೆನು. ಇಸ್ರಾಯೇಲರಲ್ಲಿ ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು ಎಂಬುದಾಗಿ ಹೇಳಿದನು’.

[11] ನನ್ನ ಮಗನೇ, ನೀನು ಸಫಲನಾಗಿರುವಂತೆಯೂ, ನಿನ್ನ ದೇವರಾದ ಯೆಹೋವನು ನಿನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟುವಂತೆಯೂ ಆತನು ನಿನ್ನ ಸಂಗಡ ಇರಲಿ.

[12] ನೀನು ನಿನ್ನ ದೇವರಾದ ಯೆಹೋವನ ಧರ್ಮಶಾಸ್ತ್ರವನ್ನು ಕೈಕೊಳ್ಳುವಂತೆ ಆತನು ನಿನಗೆ ಜ್ಞಾನವಿವೇಕಗಳನ್ನು ದಯಪಾಲಿಸಿ, ಇಸ್ರಾಯೇಲರನ್ನು ಆಳುವುದಕ್ಕೆ ನಿನ್ನನ್ನು ನೇಮಿಸಲಿ.

[13] ಯೆಹೋವನು ಮೋಶೆಯ ಮುಖಾಂತರವಾಗಿ ಇಸ್ರಾಯೇಲರಿಗೆ ಕೊಟ್ಟ ವಿಧಿನ್ಯಾಯಗಳನ್ನು ನೀನು ಕೈಕೊಳ್ಳುವುದಾದರೆ ಸಫಲನಾಗುವಿ. ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ.

[14] ಇಗೋ, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕೋಸ್ಕರ ಒಂದು ಲಕ್ಷ ತಲಾಂತು ಬಂಗಾರವನ್ನೂ, ಹತ್ತು ಲಕ್ಷ ತಲಾಂತು ಬೆಳ್ಳಿಯನ್ನೂ, ಲೆಕ್ಕವಿಲ್ಲದಷ್ಟು ತಾಮ್ರ, ಕಬ್ಬಿಣ ಇವುಗಳನ್ನೂ ಕಲ್ಲು ಮತ್ತು ಮರಗಳನ್ನೂ ಕೂಡಿಸಿದ್ದೇನೆ. ನೀನು ಇದಕ್ಕೆ ಇನ್ನೂ ಹೆಚ್ಚು ಕೂಡಿಸಬೇಕು.

[15] ಇದಲ್ಲದೆ ಕಟ್ಟುವ ಕೆಲಸಕ್ಕಾಗಿ ಬೇಕಾದಷ್ಟು ಕಲ್ಲುಕುಟಿಗರೂ, ಶಿಲ್ಪಿಗಳೂ,

[16] ಬಡಗಿಗಳೂ, ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣಗಳ ಎಲ್ಲಾ ತರಹದ ಕೆಲಸವನ್ನು ಮಾಡುವುದರಲ್ಲಿ ಜಾಣರು ನಿನ್ನೊಂದಿಗಿರುತ್ತಾರೆ. ಅವರನ್ನು ಎಣಿಸಲು ಸಾಧ್ಯವಿಲ್ಲ. ಎದ್ದು ಸಿದ್ಧನಾಗಿ ಕೆಲಸಕ್ಕೆ ಕೈ ಹಾಕು, ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿದನು.

[17] ಆಮೇಲೆ ತನ್ನ ಮಗನಾದ ಸೊಲೊಮೋನನಿಗೆ ನೆರವಾಗಬೇಕೆಂದು ದಾವೀದನು ಇಸ್ರಾಯೇಲರ ಎಲ್ಲಾ ಅಧಿಪತಿಗಳಿಗೂ ಆಜ್ಞಾಪಿಸಿದನು.

[18] ಆತನು ಅವರಿಗೆ, “ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇದ್ದು ಎಲ್ಲಾ ಕಡೆಗಳಲ್ಲಿಯೂ ನಿಮಗೆ ವಿಶ್ರಾಂತಿಯನ್ನು ಅನುಗ್ರಹಿಸಿದ್ದಾನಲ್ಲಾ. ಆತನು ಈ ದೇಶದ ಮೂಲನಿವಾಸಿಗಳನ್ನು ನನ್ನ ಕೈಗೆ ಒಪ್ಪಿಸಿದ್ದಾನೆ. ದೇಶವು ಯೆಹೋವನಿಗೂ ಆತನ ಪ್ರಜೆಗಳಿಗೂ ಸ್ವಾಧೀನವಾಯಿತು ನೋಡಿರಿ.

[19] ಆದುದರಿಂದ ನೀವು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವನ ದರ್ಶನವನ್ನು ಬಯಸಿರಿ. ಏಳಿರಿ, ನಿಮ್ಮ ದೇವರಾದ ಯೆಹೋವನ ಪವಿತ್ರಾಲಯವನ್ನು ಕಟ್ಟಿರಿ. ಯೆಹೋವನ ಒಡಂಬಡಿಕೆ ಮಂಜೂಷವನ್ನೂ, ದೇವಾರಾಧನೆಯ ಪವಿತ್ರ ಸಾಮಗ್ರಿಗಳನ್ನೂ ಯೆಹೋವನ ಹೆಸರಿಗೋಸ್ಕರ ಕಟ್ಟಲ್ಪಡುವ ಮಂದಿರದಲ್ಲಿ ಇಡಿರಿ” ಎಂದು ಹೇಳಿದನು.

1 ಪೂರ್ವಕಾಲವೃತ್ತಾಂತ — Chapters