[1] ದೇವಾಲಯದ ದ್ವಾರಪಾಲಕ ವರ್ಗಗಳ ವಿಷಯ: ಕೋರಹೀಯನಾದ ಮೆಷೆಲೆಮ್ಯ ಎಂಬವನು, ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ.
[2] ಮೆಷೆಲೆಮ್ಯನ ಮಕ್ಕಳಲ್ಲಿ ಜೆಕೆರ್ಯನು ಚೊಚ್ಚಲ ಮಗ, ಎದೀಯಯೇಲನು ಎರಡನೆಯವನು, ಜೆಬೆದ್ಯನು ಮೂರನೆಯವನು, ಯೆತ್ನಿಯೇಲನು ನಾಲ್ಕನೆಯವನು.
[3] ಏಲಾಮನು ಐದನೆಯವನು, ಯೆಹೋಹಾನಾನನು ಆರನೆಯವನು, ಎಲ್ಯೆಹೋಯೇನೈ ಏಳನೆಯವನು.
[4] ಓಬೇದೆದೋಮನ ಮಕ್ಕಳಲ್ಲಿ ಶೆಮಾಯನು ಚೊಚ್ಚಲನು, ಯೆಹೋಜಾಬಾದನು ಎರಡನೆಯವನು. ಯೋವಾಹನು ಮೂರನೆಯವನು, ಸಾಕಾರನು ನಾಲ್ಕನೆಯವನು, ನೆತನೇಲನು ಐದನೆಯವನು,
[5] ಅಮ್ಮೀಯೇಲನು ಆರನೆಯವನು, ಇಸ್ಸಾಕಾರನು ಏಳನೆಯವನು, ಪೆಯುಲ್ಲೆತೈಯು ಎಂಟನೆಯವನು. ಓಬೇದೆದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನಷ್ಟೆ.
[6] ಅವನ ಮಗನಾದ ಶೆಮಾಯನ ಮಕ್ಕಳು ಗೋತ್ರಪ್ರಧಾನರೂ ಮಹಾಸಮರ್ಥರೂ ಆಗಿದ್ದರು.
[7] ಅವರು ಯಾರೆಂದರೆ: ಒತ್ನೀ, ರೆಫಾಯೇಲ್, ಓಬೇದ್ ಮತ್ತು ಎಲ್ಜಾಬಾದ್. ಇವರೂ ಬಹುಸಮರ್ಥರಾದ ಎಲೀಹು, ಸೆಮಕ್ಯ ಎಂಬುವವರು ಇವರ ಸಹೋದರರು.
[8] ಇವರೆಲ್ಲರೂ ಓಬೇದೆದೋಮನ ಸಂತಾನದವರು. ಇವರು, ಇವರ ಮಕ್ಕಳು ಸಮರ್ಥರೂ, ಸೇವೆಯಲ್ಲಿ ಗಟ್ಟಿಗರೂ ಆಗಿದ್ದವರೂ. ಇವರೂ ಇವರ ಸಹೋದರರೂ ಕೂಡಿ ಅರವತ್ತೆರಡು ಜನರು.
[9] ಮೆಷೆಲೆಮ್ಯನ ಮಕ್ಕಳೂ ಮತ್ತು ಸಹೋದರರೂ ಹದಿನೆಂಟು ಜನರು. ಇವರೂ ಸಮರ್ಥರಾಗಿದ್ದರು.
[10] ಮೆರಾರೀಯನಾದ ಹೋಸನಿಗೂ ಮಕ್ಕಳಿದ್ದರು; ಅವರಲ್ಲಿ ಶಿಮ್ರಿ ಎಂಬುವವನು ಪ್ರಧಾನನಾಗಿದ್ದನು. ಇವನು ಚೊಚ್ಚಲ ಮಗನಲ್ಲದಿದ್ದರೂ ಅವನ ತಂದೆಯು ಅವನನ್ನೇ ಪ್ರಧಾನನನ್ನಾಗಿ ನೇಮಿಸಿದನು.
[11] ಹಿಲ್ಕೀಯನು ಎರಡನೆಯವನು, ಟೆಬಲ್ಯನು ಮೂರನೆಯವನು, ಜೆಕರ್ಯನು ನಾಲ್ಕನೆಯವನು. ಹೋಸನ ಮಕ್ಕಳು ಸಹೋದರರೂ ಒಟ್ಟಿಗೆ ಹದಿಮೂರು ಜನರು.
[12] ಈ ದ್ವಾರಪಾಲಕರ ವರ್ಗಗಳು ಪ್ರಧಾನಪುರುಷರು ತಮ್ಮ ಕುಲಬಂಧುಗಳಂತೆ ಯೆಹೋವನ ಆಲಯದಲ್ಲಿ ಸೇವೆಮಾಡುವವರಾಗಿದ್ದರು.
[13] ಅವರು ಕನಿಷ್ಠ ಕುಟುಂಬವೆಂದೂ, ಶ್ರೇಷ್ಠ ಕುಟುಂಬವೆಂದೂ ವ್ಯತ್ಯಾಸ ಮಾಡದೆ ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಂಡರು.
[14] ಪೂರ್ವ ದಿಕ್ಕಿನ ಕಾವಲಿಗೆ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತು. ಬಹು ವಿವೇಕವುಳ್ಳ ಸಲಹೆಗಾರನಾಗಿರುವ ಅವನ ಮಗನಾದ ಜೆಕೆರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತು.
[15] ಓಬೇದೆದೋಮನಿಗೆ ದಕ್ಷಿಣದ ಬಾಗಿಲು, ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ,
[16] ಶುಪ್ಪೀಮ್ ಮತ್ತು ಹೋಸ ಎಂಬುವರಿಗೆ ಪಶ್ಚಿಮದ ಬಾಗಿಲೂ ಅದರ ಸಮೀಪದಲ್ಲಿರುವ ಶಲ್ಲೆಕೆತ್ ಎಂಬ ಬಾಗಿಲು ಚೀಟಿನಿಂದ ನೇಮಕವಾದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.
[17] ಲೇವಿಯರಲ್ಲಿ ಪ್ರತಿದಿನವೂ ಪೂರ್ವದಿಕ್ಕಿನ ಬಾಗಿಲನ್ನು ಆರು ಜನರು, ದಕ್ಷಿಣ ಬಾಗಿಲನ್ನು ನಾಲ್ಕು ಜನರು, ಉಗ್ರಾಣ ಮಂದಿರದ ಎರಡು ಬಾಗಿಲನ್ನು ಇಬ್ಬಿಬ್ಬರು,
[18] ಪರ್ಬರೆಂಬ ಕಟ್ಟಡವಿರುವ ಪಶ್ಚಿಮ ದಿಕ್ಕಿನ ದಾರಿ ಬಾಗಿಲನ್ನು ನಾಲ್ಕು ಜನರು, ಪರ್ಬರನ್ನು ಇಬ್ಬರು ಕಾಯುತ್ತಿದ್ದರು.
[19] ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕರ ವರ್ಗಗಳು ಇವೇ.
[20] ಲೇವಿಯನಾದ ಅಹೀಯನು ಮೇಲೆ ಹೇಳಿರುವವರ ಕುಲಬಂಧುಗಳೂ, ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುತ್ತಿದ್ದರು.
[21] ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಪ್ರಧಾನರಲ್ಲಿ ಯೆಹೀಯೇಲೀ ಮತ್ತು ಅವನ ಮಕ್ಕಳು,
[22] ಯೆಹೀಯೇಲ್ಯರಾದ ಜೇತಾಮನೂ ಮತ್ತು ಅವನ ತಮ್ಮನಾದ ಯೋವೇಲನು ಯೆಹೋವನ ಆಲಯದ ಭಂಡಾರಗಳನ್ನು ಕಾಯುವವರಾಗಿದ್ದರು.
[23] ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್,
[24] ಇವರ ಸಂತಾನದವರಲ್ಲಿ ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನಾಗಿದ್ದನು.
[25] ಎಲೀಯೆಜೆರನ ಮಗ ರೆಹಬ್ಯ, ರೆಹಬ್ಯನ ಮಗ ಯೆಶಾಯ ಯೆಶಾಯನ ಮಗ ಯೋರಾಮ ಯೋರಾಮನ ಮಗ ಜಿಕ್ರೀ ಜಿಕ್ರೀಯನ ಮಗ ಶೆಲೋಮೋತನು.
[26] ಶೆಲೋಮೋತನು ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು. ಇವರು ಶೆಬೂವೇಲನ ಗೋತ್ರಬಂಧುಗಳು. ಈ ವಸ್ತುಗಳನ್ನು ಅರಸನಾದ ದಾವೀದನೂ, ಗೋತ್ರ ಪ್ರಧಾನರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಸೇನಾಧಿಪತಿಗಳೂ ಪ್ರತಿಷ್ಠಿಸಿದ್ದರು.
[27] ಇವರು ಯೆಹೋವನ ಆಲಯದ ವೃದ್ಧಿಗೋಸ್ಕರ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಯೆಹೋವನಿಗೆಂದು ಮುಡುಪಾಗಿ ಇಟ್ಟರು.
[28] ಇದಲ್ಲದೆ ದೇವ ದರ್ಶಿಯಾದ ಸಮುವೇಲನೂ, ಕೀಷನ ಮಗನಾದ ಸೌಲನೂ, ನೇರನ ಮಗನಾದ ಅಬ್ನೇರನೂ, ಚೆರೂಯಳ ಮಗನಾದ ಯೋವಾಬನೂ ಹಾಗೆಯೇ ಮಾಡಿದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.
[29] ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಮಕ್ಕಳು ಲೌಕೀಕೋದ್ಯೋಗದಲ್ಲಿದ್ದರು. ಅವರು ಇಸ್ರಾಯೇಲರ ಅಧಿಕಾರಿಗಳೂ ಮತ್ತು ನ್ಯಾಯಾಧಿಪತಿಗಳೂ ಆಗಿದ್ದರು.
[30] ಹೆಬ್ರೋನ್ಯರಲ್ಲಿ ಹಷಬ್ಯನೂ ಅವನ ಸಹೋದರರೂ ಯೊರ್ದನ್ ಹೊಳೆಯ ಪಶ್ಚಿಮ ಪ್ರಾಂತ್ಯಗಳಲ್ಲಿದ್ದ ಇಸ್ರಾಯೇಲ್ಯರೊಳಗೆ ಯೆಹೋವನ ಸೇವೆಯ ಎಲ್ಲಾ ಕಾರ್ಯಗಳನ್ನೂ ಮತ್ತು ರಾಜಕೀಯ ಕಾರ್ಯಗಳನ್ನೂ ನಡೆಸುತ್ತಿದ್ದರು. ಸಮರ್ಥರಾದ ಅವರು ಸಾವಿರದ ಏಳುನೂರು ಜನರು.
[31] ದಾವೀದನ ಆಳ್ವಿಕೆಯ ನಲವತ್ತನೆಯ ವರ್ಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆಸಿದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಿಗೆ ಅನೇಕರು ಅವರ ಗೋತ್ರದವರಾಗಿರುತ್ತಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೆರೀಯನು ಪ್ರಧಾನನು.
[32] ಶ್ರೀಮಂತರೂ ಕುಟುಂಬ ಪ್ರಧಾನರೂ ಆದ ಅವನ ಗೋತ್ರಬಂಧುಗಳು ಎರಡು ಸಾವಿರದ ಏಳುನೂರು ಜನರು. ಅರಸನಾದ ದಾವೀದನು ರೂಬೇನ್, ಗಾದ್ ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲಿಯೂ, ರಾಜಕೀಯ ಕಾರ್ಯಗಳಲ್ಲಿಯೂ ಅಧಿಕಾರಿಗಳನ್ನಾಗಿ ನೇಮಿಸಿದನು.