Skip to content
Opens in a new window
Listen to this chapter • 1:52

[1] ಮರುವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ಯೋವಾಬನು ಬಲವಾದ ಸೈನ್ಯವನ್ನು ಯುದ್ಧಕ್ಕೆ ಮುನ್ನಡೆಸಿ, ಅಮ್ಮೋನಿಯರ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ರಬ್ಬಕ್ಕೆ ಹೋಗಿ ಮುತ್ತಿಗೆ ಹಾಕಿದನು. ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.

[2] ದಾವೀದನು ಮಲ್ಕಾಮ್ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು. ಅದು ನಾಲ್ಕು ಸಾವಿರ ತೊಲಾ ತೂಕದ್ದು. ಅದರಲ್ಲಿದ್ದ ಅಮೂಲ್ಯವಾದ ರತ್ನಗಳನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಅವನು ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದನು.

[3] ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಮಾಡುವ ಕೆಲಸಕ್ಕೆ ನೇಮಿಸಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಸರ್ವಸೈನಿಕರೊಡನೆ ಯೆರೂಸಲೇಮಿಗೆ ಬಂದನು.

[4] ಅನಂತರ ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷ ಊರಿನವನಾದ ಸಿಬ್ಬೆಕೈ ಎಂಬುವವನು ರೆಫಾಯನಾದ ಸಿಪ್ಪೈ ಎಂಬುವವನನ್ನು ಕೊಲ್ಲಲು ಫಿಲಿಷ್ಟಿಯರು ಕುಗ್ಗಿಹೋದರು.

[5] ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮನಾದ ಲಹ್ಮೀಯನನ್ನು ಕೊಂದನು. ಲಹ್ಮೀಯನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯಷ್ಟು ಗಾತ್ರವಿತ್ತು.

[6] ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು ಅವನ ಕೈಕಾಲುಗಳಿಗೆ ಆರಾರು ಬೆರಳುಗಳಿದ್ದವು. ಅವನೂ ರೆಫಾಯನು.

[7] ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.

[8] ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.

1 ಪೂರ್ವಕಾಲವೃತ್ತಾಂತ — Chapters