[1] ಇಸ್ರಾಯೇಲನ ಮಕ್ಕಳು ಯಾರೆಂದರೆ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,
[2] ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
[3] ಯೆಹೂದನಿಗೆ ಏರ್, ಓನಾನ್ ಮತ್ತು ಶೇಲಾಹ ಎಂಬ ಮೂರು ಮಕ್ಕಳು ಶೂನನ ಮಗಳಾದ ಕಾನಾನಳಿಂದ ಹುಟ್ಟಿದರು. ಯೆಹೂದನ ಚೊಚ್ಚಲ ಮಗನಾದ ಏರನು ಯೆಹೋವನ ಚಿತ್ತಕ್ಕೆ ವಿರೋಧವಾಗಿ ನಡೆದುಕೊಂಡದ್ದರಿಂದ ಯೆಹೋವನು ಅವನನ್ನು ಕೊಂದು ಹಾಕಿದನು.
[4] ಯೆಹೂದನ ಸೊಸೆಯಾದ ತಾಮಾರಳು ಅವನಿಂದ ಪೆರೆಚ್ ಮತ್ತು ಜೆರಹ ಎಂಬವರನ್ನು ಹೆತ್ತಳು.
[5] ಯೆಹೂದನಿಗೆ ಐದು ಮಕ್ಕಳು. ಪೆರೆಚನ ಮಕ್ಕಳು ಹೆಚ್ರೋನ್ ಮತ್ತು ಹಮೂಲ್.
[6] ಜೆರಹನ ಐದು ಮಕ್ಕಳು ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ.
[7] ಯೆಹೋವನಿಗೆ ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲ್ಯರನ್ನು ಆಪತ್ತಿಗೆ ಗುರಿಮಾಡಿದ ಆಕಾರನು ಕರ್ಮೀಯನ ಮಗನು.
[8] ಏತಾನನ ಮಗನು ಅಜರ್ಯನು.
[9] ಹೆಚ್ರೋನನ ಮಕ್ಕಳು ಯೆರಹ್ಮೇಲನು, ರಾಮ್ ಮತ್ತು ಕೆಲೂಬಾಯ್ ಎಂಬುವರು.
[10] ರಾಮನು ಅಮ್ಮೀನಾದಾಬನನ್ನು ಪಡೆದನು; ಅಮ್ಮಿನಾದಾಬನು ಯೆಹೂದ ಕುಲದ ಪ್ರಭುವಾದ ನಹಶೋನನ್ನು ಪಡೆದನು.
[11] ನಹಶೋನನು ಸಲ್ಮನನ್ನು ಪಡೆದನು; ಸಲ್ಮನು ಬೋವಜನನ್ನು ಪಡೆದನು.
[12] ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು.
[13] ಇಷಯನ ಚೊಚ್ಚಲ ಮಗನು ಎಲೀಯಾಬ್, ಎರಡನೆಯ ಮಗ ಅಬೀನಾದಾಬ್,
[14] ಮೂರನೆಯವನು ಶಿಮ್ಮ, ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ.
[15] ಆರನೆಯವನು ಓಚೆಮ್, ಏಳನೆಯವನು ದಾವೀದ್.
[16] ಚೆರೂಯ ಮತ್ತು ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ ಮತ್ತು ಅಸಾಹೇಲ್ ಎಂಬವರು ಚೆರೂಯಳ ಮಕ್ಕಳು.
[17] ಅಬೀಗೈಲಳು ಅಮಾಸನ ತಾಯಿ. ಇಷ್ಮಾಯೇಲನಾದ ಯೆತೆರ್ ಎಂಬವನು ಅವನ ತಂದೆ.
[18] ಹೆಚ್ರೋನನ ಮಗ ಕಾಲೇಬ. ಇವನು ತನ್ನ ಹೆಂಡತಿ ಅಜೂಬಳಿಂದಲೂ ಮತ್ತು ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಆಕೆಯಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯೇಷೆರ್, ಶೋಬಾಬ್ ಮತ್ತು ಅರ್ದೋನ್ ಎಂಬವರು.
[19] ಅಜೂಬಳು ಸತ್ತ ಮೇಲೆ ಕಾಲೇಬನು ಎಫ್ರಾತಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ಹೂರನು ಹುಟ್ಟಿದನು.
[20] ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲನನ್ನು ಪಡೆದನು.
[21] ಹೆಚ್ರೋನನು ಅರವತ್ತು ವರ್ಷದವನಾದಾಗ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಮಗಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಂದ ಸೆಗೂಬನನ್ನು ಪಡೆದಳು.
[22] ಸೆಗೂಬನು ಯಾಯೀರನನ್ನು ಪಡೆದನು; ಇವನಿಗೆ ಗಿಲ್ಯಾದ್ ದೇಶದಲ್ಲಿ ಇಪ್ಪತ್ತ್ಮೂರು ಪಟ್ಟಣಗಳು ಇದ್ದವು.
[23] ಗೆಷೂರ್ಯರು ಮತ್ತು ಅರಾಮ್ಯರು ಯಾಯೀರನ ಸಂತಾನದವರಿಂದ ಯಾಯೀರಿನ ಗ್ರಾಮಗಳನ್ನೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನು, ಒಟ್ಟು ಅರವತ್ತು ಸಂಸ್ಥಾನಗಳನ್ನು ಗೆದ್ದುಕೊಂಡರು. ಈ ಸಂಸ್ಥಾನದವರೆಲ್ಲರೂ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಗೋತ್ರದವರು.
[24] ಹೆಚ್ರೋನನು ಕಾಲೇಬನ ಎಫ್ರಾತದಲ್ಲಿ ಮರಣಹೊಂದಿದ ನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲಪುರುಷನು.
[25] ಹೆಚ್ರೋನನ ಚೊಚ್ಚಲಮಗನಾದ ಯೆರಹ್ಮೇಲನಿಗೆ ಐದು ಮಕ್ಕಳು: ರಾಮ್ ಚೊಚ್ಚಲು ಮಗನು ಹಾಗೆಯೇ ಬೂನ, ಓರೆನ್, ಓಚೆಮ್, ಅಹೀಯ ಎಂಬುವರು ಅನಂತರ ಹುಟ್ಟಿದವರು.
[26] ಯೆರಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಈಕೆಯು ಓನಾಮನ ತಾಯಿ.
[27] ಯೆರಹ್ಮೇಲನ ಚೊಚ್ಚಲ ಮಗನಾದ ರಾಮನ ಮಕ್ಕಳು ಮಾಚ್, ಯಾಮೀನ್ ಮತ್ತು ಏಕೆರ್ ಇವರೇ.
[28] ಓನಾಮನ ಮಕ್ಕಳು ಶಮ್ಮೈ ಮತ್ತು ಯಾದ ಎಂಬುವವರು. ಶಮ್ಮೈನ ಮಕ್ಕಳು ನಾದಾಬ್ ಮತ್ತು ಅಬಿಷೂರ್.
[29] ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ್. ಈಕೆಯಲ್ಲಿ ಅಹ್ಬಾನ್ ಮತ್ತು ಮೊಲೀದ್ ಎಂಬುವವರು ಹುಟ್ಟಿದರು.
[30] ನಾದಾಬನ ಮಕ್ಕಳು ಸೆಲೆದ್ ಮತ್ತು ಅಪ್ಪಯಿಮ್ ಎಂಬುವವರು. ಸೇಲೆದನು ಮಕ್ಕಳಿಲ್ಲದೆ ಸತ್ತುಹೋದನು.
[31] ಅಪ್ಪಯಿಮನ ಮಗ ಇಷ್ಷೀ. ಇಷ್ಷೀಯನ ಮಗ ಶೇಷಾನ್. ಶೇಷಾನನ ಮಗ ಅಹ್ಲೈ.
[32] ಶಮ್ಮೈಯ ತಮ್ಮನಾದ ಯಾದನ ಮಕ್ಕಳು ಯೆತೆರ್ ಮತ್ತು ಯೋನಾತಾನ್ ಇವರೇ. ಯೆತೆರನು ಮಕ್ಕಳಿಲ್ಲದೆ ಸತ್ತನು.
[33] ಯೋನಾತಾನನ ಮಕ್ಕಳು ಪೆಲೆತ್ ಮತ್ತು ಜಾಜ ಎಂಬುವವರು. ಇವರೆಲ್ಲರೂ ಯೆರಹ್ಮೇಲನ ಸಂತಾನದವರು.
[34] ಶೇಷಾನನಿಗೆ ಹೆಣ್ಣು ಮಕ್ಕಳಿದ್ದರೇ ಹೊರತು ಗಂಡು ಮಕ್ಕಳಿರಲಿಲ್ಲ. ಇದಲ್ಲದೆ ಅವನಿಗೆ ಯರ್ಹನೆಂಬ ಒಬ್ಬ ಐಗುಪ್ತ ಸೇವಕನಿದ್ದನು.
[35] ಶೇಷಾನನು ತನ್ನ ಮಗಳನ್ನು ಸೇವಕನಾದ ಯರ್ಹನಿಗೆ ಮದುವೆಮಾಡಿಕೊಟ್ಟನು. ಆಕೆಯು ಅವನಿಂದ ಅತ್ತೈಯನ್ನು ಹೆತ್ತಳು.
[36] ಅತ್ತೈ ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.
[37] ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು.
[38] ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು.
[39] ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು.
[40] ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.
[41] ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನನು ಎಲೀಷಾಮನನ್ನು ಪಡೆದನು.
[42] ಯೆರಹೇಲ್ಮನ ಸಹೋದರನಾದ ಕಾಲೇಬನ ಸಂತಾನದವರು: ಚೊಚ್ಚಲನು ಜೀಫ್ಯರ ಮೂಲಪುರುಷನಾದ ಮೇಷನು, ಎರಡನೆಯವನು ಮಾರೇಷನು.
[43] ಮಾರೇಷನು ಹೆಬ್ರೋನ್ಯರ ಮೂಲಪುರುಷನು. ಹೆಬ್ರೋನ್ಯರ ಮಕ್ಕಳು ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ.
[44] ಶೆಮ್ಯರಿಂದ ರಹಮ್ಯರು, ರಹಮ್ಯರಿಂದ ಯೊರ್ಕೆಯಾಮ್ಯರು ಹುಟ್ಟಿದರು.
[45] ರೆಕೆಮನು ಶಮ್ಮೈನನ್ನು ಪಡೆದನು. ಶಮ್ಮೈನಿಂದ ಮವೋನ್ಯರು, ಮವೋನ್ಯರಿಂದ ಬೇತ್‌ಚೂರಿನವರು ಹುಟ್ಟಿದರು.
[46] ಕಾಲೇಬನ ಉಪಪತ್ನಿಯಾದ ಏಫಳಲ್ಲಿ ಹಾರಾನ್, ಮೋಚ ಮತ್ತು ಗಾಜೇಜ್ ಎಂಬುವವರು ಹುಟ್ಟಿದರು.
[47] ಹಾರಾನನು ಗಾಜೇಜನನ್ನು ಪಡೆದನು. ಯಾದೈಯಳಲ್ಲಿ ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಫ ಮತ್ತು ಶಾಫ್ ಎಂಬುವವರು ಹುಟ್ಟಿದರು.
[48] ಕಾಲೇಬನ ಉಪಪತ್ನಿಯಾದ ಮಾಕಳಲ್ಲಿ ಶೆಬೆರ್ ಮತ್ತು ತಿರ್ಹನ್ ಎಂಬುವವರು ಹುಟ್ಟಿದರು.
[49] ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್; ಮಕ್ಬೇನಾ ಮತ್ತು ಗಿಬ್ಯ ಪಟ್ಟಣದವರ ಮೂಲಪುರುಷನಾದ ಶೆವ ಇವರು ಹುಟ್ಟಿದರು. ಕಾಲೇಬನ ಮಗಳು ಅಕ್ಷಾ.
[50] ಕಾಲೇಬನ ಹೆಂಡತಿಯಾದ ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಕ್ಕಳು ಕಿರ್ಯತ್ಯಾರೀಮರ ಮೂಲಪುರುಷನಾದ ಶೋಬಾಲ್,
[51] ಬೇತ್ಲೆಹೇಮ್ಯರ ಮೂಲಪುರುಷನಾದ ಸಲ್ಮ ಮತ್ತು ಬೇತ್ಗಾದೇರಿನ ಮೂಲಪುರುಷನಾದ ಹಾರೇಫ್.
[52] ಕಿರ್ಯತ್ಯಾರೀಮಿನ ಮೂಲಪುರುಷನಾದ ಶೋಬಾಲನ ಸಂತಾನದವರು ಹಾರೋಯೆ, ಮಾನಹತಿಯರ ಅರ್ಧ ಜನರು,
[53] ಕಿರ್ಯತ್ಯಾರೀಮ್ ಕುಟುಂಬಗಳವರು, ಯೆತೆರಿನವರು, ಪೂತ್ಯರು, ಶುಮಾತ್ಯರು ಮತ್ತು ಮಿಷ್ರಾಗ್ಯರು ಇವರೇ. ಇವರಿಂದ ಹುಟ್ಟಿದ ಜನಾಂಗ ಚೊರ್ರಾತ್ಯರೂ ಮತ್ತು ಎಷ್ಟಾವೋಲ್ಯರೂ.
[54] ಸಲ್ಮನಿಂದ ಬೇತ್ಲೆಹೇಮ್, ನೆಟೋಫಾ, ಅಟರೋತ್, ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಹುಟ್ಟಿದರು.
[55] ಯಾಬೇಚಿನಲ್ಲಿ ವಾಸಿಸುವ ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ಬರೆಯುವುದರಲ್ಲೂ ಮತ್ತು ಪ್ರತಿಗಳನ್ನು ಮಾಡುವುದರಲ್ಲೂ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು ಮತ್ತು ಸೂಕಾತ್ಯರು, ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮತನಿಂದ ಹುಟ್ಟಿದ ಕೇನ್ಯರು.