Skip to content
Opens in a new window
Listen to this chapter • 2:39

[1] ದಾವೀದನು ಸಹಸ್ರಾಧಿಪತಿ, ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಸಮಾಲೋಚನೆ ಮಾಡಿದ ನಂತರ ಇಸ್ರಾಯೇಲ್ಯರ ಸಮಸ್ತ ಸಮೂಹದವರಿಗೆ,

[2] “ನಿಮ್ಮ ಸಮ್ಮತಿಯೂ ಮತ್ತು ನಮ್ಮ ದೇವರಾದ ಯೆಹೋವನ ಚಿತ್ತವೂ ಇರುವುದಾದರೆ, ನಾವು ಎಲ್ಲಾ ಇಸ್ರಾಯೇಲ್ ಪ್ರಾಂತ್ಯಗಳಲ್ಲಿರುವ ನಮ್ಮ ಸಹೋದರರನ್ನೂ ಗೋಮಾಳಸಹಿತವಾದ ತಮ್ಮ ಪಟ್ಟಣಗಳಲ್ಲಿರುವ ಯಾಜಕ ಲೇವಿಯರನ್ನೂ ಬೇಗನೆ ಕರೆಕಳುಹಿಸೋಣ.

[3] ಅವರು ನಮ್ಮ ಬಳಿಗೆ ಕೂಡಿ ಬಂದ ಮೇಲೆ ನಾವು ಸೌಲನ ಕಾಲದಲ್ಲಿ ಅಲಕ್ಷ್ಯಮಾಡಿದ್ದ ನಮ್ಮ ದೇವರ ಮಂಜೂಷವನ್ನು ತೆಗೆದುಕೊಂಡು ಬರೋಣ” ಎಂದು ಹೇಳಿದನು.

[4] ಅವರೆಲ್ಲರೂ ಆ ಮಾತಿಗೆ ಒಪ್ಪಿ ಅದರಂತೆ ಮಾಡಬೇಕೆಂದು ಹೇಳಿದರು.

[5] ಆಗ ದಾವೀದನು ದೇವರ ಮಂಜೂಷವನ್ನು ಕಿರ್ಯತ್ಯಾರೀಮಿನಿಂದ ತರುವುದಕ್ಕೋಸ್ಕರ ಐಗುಪ್ತದ ಶೀಹೋರ್ ಹಳ್ಳದಿಂದ ಹಮಾತಿನ ದಾರಿಯ ವರೆಗೂ ವಾಸಿಸುತ್ತಿದ್ದ

[6] ಎಲ್ಲಾ ಇಸ್ರಾಯೇಲ್ಯರನ್ನು ಒಟ್ಟಿಗೆ ಸೇರಿಸಿ ಅವರೆಲ್ಲರೊಡನೆ, ಯೆಹೂದ ದೇಶದ ಬಾಳಾ ಎನ್ನಿಸಿಕೊಳ್ಳುತ್ತಿದ್ದ ಕಿರ್ಯತ್ಯಾರೀಮಿಗೆ ಹೋದನು. ಆ ಮಂಜೂಷವು ಕೆರೂಬಿಯರ ನಡುವೆ ಆಸೀನನಾಗಿರುವ ಯೆಹೋವ ದೇವರ ನಾಮದಿಂದ ಪ್ರಸಿದ್ಧವಾಗಿತ್ತು.

[7] ಅವರು ದೇವರ ಮಂಜೂಷವನ್ನು ಅಬೀನಾದಾಬನ ಮನೆಯಿಂದ ಹೊರಗೆ ತಂದು, ಒಂದು ಹೊಸ ಬಂಡಿಯ ಮೇಲೆ ಇಟ್ಟರು. ಉಜ್ಜನೂ ಮತ್ತು ಅಹಿಯೋವನೂ ಬಂಡಿಯನ್ನು ಓಡಿಸಿದರು.

[8] ದಾವೀದನೂ ಎಲ್ಲಾ ಇಸ್ರಾಯೇಲರೂ ಕಿನ್ನರಿ, ಸ್ವರಮಂಡಲ, ದಮ್ಮಡಿ, ತಾಳ, ತುತ್ತೂರಿ ಇವುಗಳನ್ನು ಬಾರಿಸುತ್ತಾ ಪೂರ್ಣಾಸಕ್ತಿಯಿಂದ ಗೀತೆಗಳನ್ನು ಹಾಡುತ್ತಾ, ದೇವರ ಮುಂದೆ ನರ್ತನ ಮಾಡುತ್ತಾ ಹೋದರು.

[9] ಅವರು ಕೀದೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈ ಚಾಚಿ ದೇವರ ಮಂಜೂಷವನ್ನು ಹಿಡಿದನು.

[10] ಉಜ್ಜನು ಮಂಜೂಷದ ಮೇಲೆ ಕೈಹಾಕಿದ್ದರಿಂದ ಯೆಹೋವನು ಅವನ ಮೇಲೆ ಕೋಪಗೊಂಡು ಅವನನ್ನು ಹತಮಾಡಿದನು. ಅವನು ಅಲ್ಲೇ ದೇವರ ಸನ್ನಿಧಿಯಲ್ಲಿ ಸತ್ತನು.

[11] ಯೆಹೋವನಿಂದ ಉಜ್ಜನು ಮರಣ ಹೊಂದಿದ್ದರಿಂದ ದಾವೀದನು ಕೋಪಗೊಂಡು ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರಿಟ್ಟನು. ಅದಕ್ಕೆ ಇಂದಿನ ವರೆಗೂ ಇದೇ ಹೆಸರಿರುತ್ತದೆ.

[12] ಆ ದಿನ ದಾವೀದನು ದೇವರಿಗೆ ಭಯಪಟ್ಟು, “ದೇವರ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ” ಎಂದುಕೊಂಡು

[13] ಮಂಜೂಷವನ್ನು ದಾವೀದ ನಗರಕ್ಕೆ ತಾರದೇ, ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.

[14] ದೇವರ ಮಂಜೂಷವು ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ಕಾಲದಲ್ಲಿ ಯೆಹೋವನು ಓಬೇದೆದೋಮನ ಮನೆಯನ್ನೂ ಮತ್ತು ಅವನಿಗಿದ್ದ ಸರ್ವಸ್ವವನ್ನೂ ಆಶೀರ್ವದಿಸಿದನು.

1 ಪೂರ್ವಕಾಲವೃತ್ತಾಂತ — Chapters