[1] ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡಿದರು. ಇಸ್ರಾಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಸತ್ತುಹೋದರು.
[2] ಫಿಲಿಷ್ಟಿಯರು ಸೌಲನನ್ನೂ, ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ, ಅವನ ಮಕ್ಕಳಾದ ಯೋನಾತಾನನ್ನೂ, ಅಬೀನಾದಾಬನನ್ನೂ ಮತ್ತು ಮಲ್ಕೀಷೂವನನ್ನೂ ಕೊಂದರು.
[3] ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹು ಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು.
[4] ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು, ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನಗೆ ಅಪಕೀರ್ತಿ ತಂದಾರು” ಎಂದು ಹೇಳಲು ಅವನು ಹೆದರಿ ಹಿಂಜರಿದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು, ಅದರ ಮೇಲೆ ಬಿದ್ದನು.
[5] ಸೌಲನು ಸತ್ತದ್ದನ್ನು ಅವನ ಆಯುಧ ಹೊರುವವನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಸತ್ತನು.
[6] ಹೀಗೆ ಸೌಲನೂ, ಅವನ ಮೂರು ಮಕ್ಕಳೂ, ಅವನ ಮನೆಯವರೆಲ್ಲರೂ ಅದೇ ದಿನದಲ್ಲಿ ಸತ್ತರು.
[7] ಇಸ್ರಾಯೇಲರು ಸೋತು ಹೋದರು. ಸೌಲನೂ, ಅವನ ಮಕ್ಕಳು ಸತ್ತರು ಎಂಬ ವರ್ತಮಾನವನ್ನು ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರೂ ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಮಾಡಿದರು.
[8] ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕಾಗಿ ಬಂದಾಗ, ಸೌಲನೂ ಅವನ ಮೂರು ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವುದನ್ನು ಕಂಡರು.
[9] ಫಿಲಿಷ್ಟಿಯರು ಸೌಲನಿಗಿರುವುದೆಲ್ಲವನ್ನು ಸುಲಿದುಕೊಂಡು ಅವನ ತಲೆಯನ್ನೂ, ಆಯುಧಗಳನ್ನೂ ತಮ್ಮ ದೇಶದ ಎಲ್ಲಾ ಕಡೆಗೆ ಕಳುಹಿಸಿ, ತಮ್ಮ ದೇವತೆಗಳಿಗೂ, ಜನರಿಗೂ ಜಯವಾರ್ತೆಯನ್ನು ಮುಟ್ಟಿಸಿದರು.
[10] ಅವನ ಆಯುಧಗಳನ್ನು ತಮ್ಮ ದೇವಸ್ಥಾನದಲ್ಲಿಟ್ಟರು. ಅವನ ತಲೆಯನ್ನು ದಾಗೋನನ ಗುಡಿಯಲ್ಲಿ ನೇತುಹಾಕಿದರು.
[11] ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನವು ಯಾಬೇಷ್ ಗಿಲ್ಯಾದವರಿಗೆ ಮುಟ್ಟಿತು.
[12] ಆಗ ಅವರಲ್ಲಿರುವ ಶೂರರೆಲ್ಲರೂ ಹೊರಟುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಯಾಬೇಷಿಗೆ ತೆಗೆದುಕೊಂಡು ಬಂದು, ಅವರ ಎಲುಬುಗಳನ್ನು ಅಲ್ಲಿದ್ದ ಏಲಾ ಮರದ ಕೆಳಗೆ ಸಮಾಧಿ ಮಾಡಿ, ಏಳು ದಿನಗಳ ವರೆಗೆ ಉಪವಾಸ ಮಾಡಿದರು.
[13] ಸೌಲನು ಯೆಹೋವನ ಮಾತು ಕೇಳದೆ ಆತನಿಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದಲೂ, ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೇ, ಭೂತ, ಪ್ರೇತಗಳನ್ನು ನಂಬಿ ದೇವ ದ್ರೋಹಿಯಾದುದರಿಂದ ಅವನಿಗೆ ಇಂಥ ಮರಣವಾಯಿತು.
[14] ಯೆಹೋವನು ಅವನನ್ನು ಕೊಲ್ಲಿಸಿ, ರಾಜ್ಯವನ್ನು ಇಷಯನ ಮಗನಾದ ದಾವೀದನಿಗೆ ಒಪ್ಪಿಸಿದನು.