[1] ಅವರು ದೇವರ ಮಂಜೂಷವನ್ನು ತಂದು ದಾವೀದನು ಅದಕ್ಕೋಸ್ಕರ ಮಾಡಿಸಿದ್ದ ಗುಡಾರದಲ್ಲಿಟ್ಟು ದೇವರಿಗೋಸ್ಕರ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.
[2] ಆ ಯಜ್ಞಗಳು, ಹೋಮಗಳು ಸಮರ್ಪಣೆಯಾದ ನಂತರ ದಾವೀದನು ಇಸ್ರಾಯೇಲರನ್ನು ಯೆಹೋವನ ಹೆಸರಿನಿಂದ ಆಶೀರ್ವದಿಸಿದನು.
[3] ಹಾಗೂ ಅವರಲ್ಲಿ ಪ್ರತಿಯೊಬ್ಬ ಪುರುಷ ಹಾಗು ಸ್ತ್ರೀಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಬೇಯಿಸಿದ ಮಾಂಸವನ್ನೂ ಮತ್ತು ದ್ರಾಕ್ಷಿಹಣ್ಣಿನ ಒಂದು ಗೊಂಚಲನ್ನೂ ಕೊಡಿಸಿದನು.
[4] ಯೆಹೋವನ ಮಂಜೂಷದ ಮುಂದೆ ದೇವರಾಧನೆ ನಡಿಸುವುದಕ್ಕೋಸ್ಕರ ದಾವೀದನು ಕೆಲವು ಲೇವಿಯರನ್ನು ನೇಮಿಸಿದನು. ಇಸ್ರಾಯೇಲಿನ ದೇವರಾದ ಯೆಹೋವನನ್ನು ಸ್ತುತಿಸುವುದೂ, ಹಾಡಿ ಹರಸುವುದೂ ಅವರ ಕರ್ತವ್ಯವಾಗಿತ್ತು.
[5] ಅವರಲ್ಲಿ ಆಸಾಫನು ಪ್ರಧಾನನು. ಜೆಕರ್ಯನು ಎರಡನೆಯವನು. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್, ಯೆಗೀಯೇಲ್ ಇವರು ಸ್ವರಮಂಡಲ, ಕಿನ್ನರಿ ಮೊದಲಾದ ವಾದ್ಯಗಳನ್ನು ನುಡಿಸುವವರು, ಆಸಾಫನು ಕೈತಾಳ ಹಾಕುವುದಕ್ಕೆ ನೇಮಿಸಲಾಯಿತು.
[6] ಬೆನಾಯ, ಯೆಹಜೀಯೇಲ್ ಎಂಬ ಯಾಜಕರು ದೇವರ ಒಡಂಬಡಿಕೆ ಮಂಜೂಷದ ಮುಂದೆ ನಿತ್ಯವೂ ತುತ್ತೂರಿಗಳನ್ನು ಊದುವುದಕ್ಕೆ ನೇಮಕವಾದರು.
[7] ದಾವೀದನು ಆಸಾಫನನ್ನೂ, ಅವನ ಸಹೋದರರನ್ನೂ ಯೆಹೋವನನ್ನು ಕೊಂಡಾಡಿ ಕೀರ್ತಿಸುವುದಕ್ಕಾಗಿ ಸ್ತೋತ್ರಗೀತೆಗಳನ್ನು ಹಾಡುವುದಕ್ಕಾಗಿ ಆ ದಿನದಲ್ಲೇ ಮೊದಲು ನೇಮಿಸಿದನು. ಅವರು ಹಾಡಿದ್ದೇನಂದರೆ;
[8] “ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನ ನಾಮದ ಮಹತ್ವವನ್ನು ವರ್ಣಿಸಿರಿ. ಜನಾಂಗಗಳಲ್ಲಿ ಆತನ ಸತ್ಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.
[9] ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.
[10] ಆತನ ಪರಿಶುದ್ಧನಾಮದಲ್ಲಿ ಸಂತೋಷಪಡಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ನಿತ್ಯವೂ ಅಪೇಕ್ಷಿಸಿ ಹರ್ಷಿಸಲಿ.
[11] ಯೆಹೋವನನ್ನೂ ಮತ್ತು ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.
[12] ಆತನ ಸೇವಕನಾದ ಇಸ್ರಾಯೇಲಿನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ಆತನ ಅದ್ಭುತ ಕಾರ್ಯಗಳನ್ನು,
[13] ಮಹತ್ಕಾರ್ಯಗಳನ್ನು, ನ್ಯಾಯ ನಿರ್ಣಯಗಳನ್ನು ಸ್ಮರಿಸಿರಿ.
[14] ಯೆಹೋವನೆಂಬಾತನು ನಮ್ಮ ದೇವರು, ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
[15] ಆತನು ಸಾವಿರಾರು ತಲೆಮಾರಿನವರೆಗೂ ಇರುವಂತೆ ಮಾಡಿದ ವಾಗ್ದಾನ ಮತ್ತು ಆತನ ಒಡಂಬಡಿಕೆ ಇವುಗಳನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳಿರಿ.
[16] ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು ಮತ್ತು ಇಸಾಕನಿಗಾಗಿ ವಾಗ್ದಾನ ಮಾಡಿ ಭರವಸೆ ನೀಡಿದನು.
[17] ಅದು ರಾಜಶಾಸನದಂತಿರುವುದು ಎಂದು ಯಾಕೋಬನಿಗೂ ಶಾಶ್ವತವಾದ ಒಡಂಬಡಿಕೆಯಾಗಿರುವುದೆಂದು ಇಸ್ರಾಯೇಲರಿಗೂ ಮಾತುಕೊಟ್ಟನು.
[18] ನೀವು ಇನ್ನೂ ಬಹು ಜನರು ಕಾನಾನ್ ದೇಶದಲ್ಲಿ ಪ್ರವಾಸಿಗಳು ಆಗಿರುವಾಗಲೇ
[19] ಆತನು, ‘ನಿಮಗೆ ಈ ದೇಶವನ್ನು ಕೊಡುವೆನು ಅದು ನಿಮ್ಮ ಸಂತತಿಯವರಿಗೆ ಸ್ವತ್ತಾಗಿರುವುದು’ ಎಂದು ವಾಗ್ದಾನ ಮಾಡಿದನು.
[20] ಅವರು ದೇಶದಿಂದ ದೇಶಕ್ಕೂ ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಲ್ಲಿ
[21] ಅವರಿಗೆ ಯಾರಿಂದಲೂ ಅನ್ಯಾಯವಾಗಲಿ, ಅಪಾಯವಾಗಲಿ ಆಗಲು ಬಿಡಲಿಲ್ಲ. ಆತನು ಅವರ ವಿಷಯದಲ್ಲಿ ಅರಸನನ್ನು ಗದರಿಸಿ,
[22] ‘ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು. ನನ್ನ ಪ್ರವಾದಿಗಳಿಗೆ ಯಾವ ಕೇಡನ್ನು ಮಾಡಬಾರದು’ ಎಂದು ಹೇಳಿದನು.
[23] ಎಲ್ಲಾ ಭೂನಿವಾಸಿಗಳೇ ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ.
[24] ಜನಾಂಗಗಳಲ್ಲಿ ಆತನ ಘನತೆಯನ್ನು ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಿಪಡಿಸಿರಿ.
[25] ಯೆಹೋವನು ದೊಡ್ಡವನು, ಬಹಳವಾಗಿ ಸ್ತುತಿಗೆ ಪಾತ್ರನು ಆಗಿದ್ದಾನೆ. ಎಲ್ಲಾ ದೇವತೆಗಳಲ್ಲಿ ಆತನೇ ಅದ್ಭುತನಾದವನು.
[26] ಜನಾಂಗಗಳ ದೇವತೆಗಳೆಲ್ಲಾ ಬರೀ ಬೊಂಬೆಗಳೇ. ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದವನು.
[27] ಆತನ ಸಾನ್ನಿಧ್ಯದಲ್ಲಿ ಮಾನ ಮಹಿಮೆಗಳು ಆತನ ಪವಿತ್ರಾಲಯದಲ್ಲಿ ಮಹಿಮೆ, ಸ್ತುತಿಸ್ತೋತ್ರಗಳು, ಸಂತೋಷಗಳೂ ಇರುತ್ತವೆ.
[28] ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ.
[29] ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ. ಕಾಣಿಕೆ ಸಹಿತ ಆತನ ಸನ್ನಿಧಿಗೆ ಬನ್ನಿರಿ. ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ.
[30] ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಸಾಷ್ಟಾಂಗವೆರಗಿ ನಮಸ್ಕರಿಸಿರಿ. ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ,
[31] ಗಗನಮಂಡಲವು ಹರ್ಷಿಸಲಿ; ಭೂಲೋಕವು ಸಂತೋಷಿಸಲಿ; ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
[32] ಭೂನಿವಾಸಿಗಳಿಗೆ ನ್ಯಾಯತೀರಿಸುವುದಕ್ಕೆ ಬರುವನೆಂದು ಯೆಹೋವನ ಮುಂದೆ ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ.
[33] ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ; ಮತ್ತು ವನದ ಮರಗಳು ಉತ್ಸಾಹ ಧ್ವನಿ ಮಾಡಲಿ.
[34] ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು; ಆತನ ಕೃಪೆಯು ಶಾಶ್ವತವಾಗಿರುವುದು.
[35] ನಮ್ಮ ಸಹಾಯಕನಾಗಿರುವ ದೇವರೇ, ನಮ್ಮನ್ನು ರಕ್ಷಿಸು; ಅನ್ಯಜನಗಳಲ್ಲಿ ಚದುರಿಹೋಗಿರುವ ನಮ್ಮನ್ನು ಬಿಡಿಸಿ ಒಟ್ಟುಗೂಡಿಸು; ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು ಅನ್ನಿರಿ.
[36] ಇಸ್ರಾಯೇಲ್ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ” ಎಂದು ಹಾಡಿದರು. ಅವರು ಹೀಗೆ ಹಾಡಿದಾಗ ಸರ್ವಜನರೂ ಆಮೆನ್ ಎಂದು ಯೆಹೋವನನ್ನು ಸ್ತುತಿಸಿದರು.
[37] ದಾವೀದನು ಯೆಹೋವನ ಒಡಂಬಡಿಕೆ ಮಂಜೂಷದ ಮುಂದೆ ಪ್ರತಿದಿನವೂ ಆರಾಧನೆ ನಡಿಸುವುದಕ್ಕೆ ಆಸಾಫನನ್ನೂ, ಅವನ ಸಹೋದರರನ್ನೂ ಬಾಗಿಲನ್ನು ಕಾಯುವುದಕ್ಕಾಗಿ,
[38] ಯೆದುತೂನನ ಮಗನಾದ ಓಬೇದೆದೋಮ್ ಮತ್ತು ಹೋಸ ಇವರನ್ನು, ಅವರ ಆರುವತ್ತೆಂಟು ಸಹೋದರರನ್ನೂ ಅಲ್ಲೇ ಇರಿಸಿದನು.
[39] ಯಾಜಕನಾದ ಚಾದೋಕನನ್ನೂ, ಅವನ ಸಹೋದರರನ್ನೂ ಗಿಬ್ಯೋನಿನ ಪೂಜಾಸ್ಥಳಗಳಲ್ಲಿದ್ದ ಯೆಹೋವನ ಗುಡಾರದ ಬಳಿಯಲ್ಲಿ ಇರಿಸಿದನು.
[40] ಅವರು ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಯೆಹೋವನಿಗೋಸ್ಕರ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು ಮಾಡಿ ಯೆಹೋವನ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲರಿಗೆ ವಿಧಿತವಾದದ್ದೆಲ್ಲವನ್ನೂ ನೆರವೇರಿಸಬೇಕಾಯಿತು.
[41] ಅವರ ಬಳಿಯಲ್ಲಿ ಯೆಹೋವನನ್ನು, ಆತನ ಶಾಶ್ವತವಾದ ಕೃಪೆಗೋಸ್ಕರ ಸ್ತುತಿಸುವುದಕ್ಕೆ ಹೇಮಾನ್, ಯೆದುತೂನ ಮತ್ತು ಹೆಸರು ಹೆಸರಾಗಿ ನೇಮಿಸಲ್ಪಟ್ಟ ಬೇರೆ ಜನರೂ ಇದ್ದರು.
[42] ಹೇಮಾನ್ ಮತ್ತು ಯೆದುತೂನರ ಹತ್ತಿರ ವಾದ್ಯಗಾರರಿಗಾಗಿ ತುತ್ತೂರಿ, ತಾಳ ಮೊದಲಾದ ವಾದ್ಯಗಳೂ ಮತ್ತು ದೇವಕೀರ್ತನಾ ಸಾಹಿತ್ಯಗಳಿದ್ದವು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿ ನೇಮಿಸಲ್ಪಟ್ಟರು.
[43] ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸುವುದಕ್ಕಾಗಿ ಹೋದನು.