Skip to content
Opens in a new window
Listen to this chapter • 7:22

[1] ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನಗೆ ರಕ್ತಸಂಬಂಧಿಗಳಾಗಿದ್ದೇವೆ.

[2] ಸೌಲನ ಆಳ್ವಿಕೆಯಲ್ಲಿ ಇಸ್ರಾಯೇಲರ ದಳಾಧಿಪತಿಯಾಗಿ ಇದ್ದವನು ನೀನೇ. ನಿನ್ನ ಕುರಿತು ನಿನ್ನ ದೇವರಾದ ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ, ಪಾಲಕನೂ ಆಗಿರುವಿ’ ಎಂದು ವಾಗ್ದಾನ ಮಾಡಿದ್ದಾನೆ.” ಎಂದು ಹೇಳಿದರು.

[3] ಆಗ ಅರಸನಾದ ದಾವೀದನು ತನ್ನ ಜೊತೆಯಲ್ಲಿ ಹೆಬ್ರೋನಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆಮಾಡಿಕೊಂಡನು. ಅವರು ಸಮುವೇಲನಿಗೆ ಯೆಹೋವನ ವಾಕ್ಯಾನುಸಾರವಾಗಿ ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.

[4] ದಾವೀದನು ಇಸ್ರಾಯೇಲರನ್ನು ಕರೆದುಕೊಂಡು ಅಂದಿನಕಾಲದಲ್ಲಿ ಯೆಬೂಸೆನಿಸಿಕೊಂಡಿದ್ದ ಯೆರೂಸಲೇಮಿಗೆ ಮುತ್ತಿಗೆ ಹಾಕಲು ಹೊರಟನು. ಆ ಪ್ರಾಂತ್ಯದ ಮೂಲನಿವಾಸಿಗಳು ಯೆಬೂಸಿಯರು.

[5] ಯೆಬೂಸಿಯರು ದಾವೀದನಿಗೆ, “ನೀನು ಒಳಗೆ ಬರಲು ಸಾಧ್ಯವಿಲ್ಲ” ಎಂದು ಹೇಳಿದರು. ಆದರೂ ಅವನು ದಾವೀದನಗರವೆನಿಸಿಕೊಳ್ಳುವ ಚೀಯೋನ್ ಕೋಟೆಯನ್ನು ಸ್ವಾಧೀನಮಾಡಿಕೊಂಡನು.

[6] ಆ ದಿನ ದಾವೀದನು ತನ್ನೊಂದಿಗೆ ಬಂದಿದ್ದ ಇಸ್ರಾಯೇಲರನ್ನು ಕುರಿತು “ಯಾರು ಯೆಬೂಸಿಯರನ್ನು ಮೊದಲು ಸೋಲಿಸುವನೋ ಅವನು ದಳಾಧಿಪತಿ ಆಗುವನು” ಎಂದು ಹೇಳಿದನು. ಚೆರೂಯಳ ಮಗನಾದ ಯೋವಾಬನು ಮೊದಲು ದಾಳಿ ಮಾಡಿದ್ದರಿಂದ ಅವನೇ ದಳಾಧಿಪತಿ ಆದನು.

[7] ದಾವೀದನು ಆ ಕೋಟೆಯನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರಿಂದ ಅದಕ್ಕೆ ದಾವೀದನಗರ ಎಂದು ಹೆಸರಾಯಿತು.

[8] ಅವನು ಮಿಲ್ಲೋವಿನಿಂದ ಪ್ರಾರಂಭಿಸಿ ಸುತ್ತಲೂ ಪಟ್ಟಣವನ್ನು ಭದ್ರಪಡಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಭದ್ರಪಡಿಸಿದನು.

[9] ಸೇನಾಧೀಶ್ವರನಾದ ಯೆಹೋವನು ದಾವೀದನ ಸಂಗಡ ಇದ್ದುದರಿಂದ ಅವನು ಅಭಿವೃದ್ಧಿಯಾಗುತ್ತಾ ಹೋದನು.

[10] ರಾಜ್ಯಸಂಬಂಧವಾಗಿ ದಾವೀದನಿಗೆ ವಿಶೇಷ ಸಹಾಯಕರಾಗಿದ್ದು, ಯೆಹೋವನ ವಾಕ್ಯಾನುಸಾರವಾಗಿ ಇಸ್ರಾಯೇಲರೆಲ್ಲರೊಡನೆ ಅವನನ್ನು ಅರಸನನ್ನಾಗಿ ಮಾಡಿದ ಮುಖ್ಯಸ್ಥರನ್ನು ಕುರಿತದ್ದು.

[11] ದಾವೀದನ ಯುದ್ಧವೀರರ ಪಟ್ಟಿ: ಹಕ್ಮೋನಿಯನಾದ ಯಾಷೊಬ್ಬಾಮನು ಮೂವತ್ತು ಶೂರರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಒಂದೇ ಸಾರಿ ಮುನ್ನೂರು ಜನರನ್ನು ಕೊಂದನು.

[12] ಎರಡನೆಯವನು ಅಹೋಹ್ಯನಾದ ದೋದೋ ಎಂಬುವವನ ಮಗನಾಗಿರುವ ಎಲ್ಲಾಜಾರನು. ಇವನೂ ಆ ಮೂವರು ಶೂರರಲ್ಲಿ ಒಬ್ಬನು.

[13] ಫಿಲಿಷ್ಟಿಯರು ಪಸ್ದಮ್ಮೀಮಿನಲ್ಲಿ ಯುದ್ಧಕ್ಕೆ ಬಂದಾಗ ಇವನು ದಾವೀದನ ಜೊತೆಯಲ್ಲಿದ್ದನು. ಅಲ್ಲಿ ಒಂದು ಜವೆಗೋದಿಯ ಹೊಲವಿತ್ತು. ಇಸ್ರಾಯೇಲರು ಫಿಲಿಷ್ಟಿಯರಿಗೆ ಹೆದರಿ ಓಡಿಹೋಗಲು ಪ್ರಯತ್ನಿಸಿದಾಗ,

[14] ಆ ವೀರರು ಹೊಲದ ಮಧ್ಯದಲ್ಲೇ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದು, ಹೊಲವನ್ನು ಕಾಪಾಡಿದರು. ಹೀಗೆ ಯೆಹೋವನು ಅವನಿಗೆ ಮಹಾ ಜಯವನ್ನುಂಟುಮಾಡಿದನು.

[15] ದಾವೀದನು ಅದುಲ್ಲಾಮ್ ಗಿರಿಯ ಗವಿಯಲ್ಲಿದ್ದಾಗ ಅವನ ಮೂವತ್ತು ಜನ ಪ್ರಸಿದ್ಧಶೂರರಲ್ಲಿ ಮೂವರು ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯೀಮ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡಿರುವುದನ್ನು ಕಂಡರು.

[16] ಫಿಲಿಷ್ಟಿಯರು ಬೇತ್ಲೆಹೇಮಿನಲ್ಲಿ ಒಂದು ಕಾವಲು ದಂಡನ್ನು ಇಟ್ಟಿದ್ದರು. ಆಗ ದಾವೀದನು ದುರ್ಗದಲ್ಲಿದ್ದನು.

[17] ದಾವೀದನು ಲವಲವಿಕೆಯಿಂದ, “ಬೇತ್ಲೆಹೇಮ್ ಊರಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದು ಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದು ಹೇಳಿದನು.

[18] ಕೂಡಲೆ ಆ ಮೂವರು ವೀರರು ಫಿಲಿಷ್ಟಿಯರ ದಂಡಿನೊಳಗೆ ನುಗ್ಗಿ ಹೋಗಿ, ಬೇತ್ಲೆಹೇಮ್ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತಂದು ಕೊಟ್ಟರು.

[19] ಆದರೆ ದಾವೀದನು “ತಮ್ಮ ಜೀವವನ್ನು ಪರಿಗಣಿಸದೆ ಪರಾಕ್ರಮದಿಂದ ಈ ನೀರನ್ನು ತಂದು ಕೊಟ್ಟಿದ್ದಾರೆ. ಈ ನೀರನ್ನು ಕುಡಿದರೆ ಈ ಪರಾಕ್ರಮಶಾಲಿ ವೀರರ ರಕ್ತವನ್ನು ಕುಡಿದಂತೆ ಆಗುವುದು. ಇಂತಹ ಕಾರ್ಯವನ್ನು ನನ್ನಿಂದ ಆಗದಂತೆ ನನ್ನ ದೇವರು ತಡೆಯಲಿ” ಎಂದು ಹೇಳುತ್ತಾ, ಆ ನೀರನ್ನು ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು.

[20] ಯೋವಾಬನ ತಮ್ಮನಾದ ಅಬ್ಷೈಯು ಬೇರೆ ಮೂರು ಜನರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಜನರನ್ನು ಕೊಂದದ್ದರಿಂದ ಈ ಮೂವರಲ್ಲಿ ಕೀರ್ತಿಗೊಂಡನು.

[21] ಉಳಿದ ಇಬ್ಬರಿಗಿಂತ ಇವನೇ ಘನತೆಯುಳ್ಳವನಾಗಿದ್ದು ಅವರ ನಾಯಕನಾದನು. ಆದರೂ ಇವನು ಮೊದಲಿನ ಮೂರು ಜನರಿಗೆ ಸಮಾನನಾಗಿರಲಿಲ್ಲ.

[22] ಅನೇಕ ಶೂರಕೃತ್ಯಗಳನ್ನು ನಡಿಸಿದ ಕಬ್ಜಯೇಲನವನಾದ ಪರಾಕ್ರಮಶಾಲಿಯ ಮೊಮ್ಮಗನೂ, ಯೆಹೋಯಾದನ ಮಗನೂ ಆದ ಬೆನಾಯನು ಇನ್ನೊಬ್ಬನು. ಇವನು ಒಂದು ಸಾರಿ ಮೋವಾಬ್ಯನಾದ ಅರೀಯೇಲನ ಇನ್ನೂರು ಮಕ್ಕಳನ್ನು ಕೊಂದನು. ಇನ್ನೊಮ್ಮೆ ಹಿಮಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು, ಇವನು ಆ ಗುಂಡಿಗೆ ಇಳಿದು ಹೋಗಿ ಅದನ್ನು ಕೊಂದನು.

[23] ಮತ್ತೊಮ್ಮೆ ಏಳುವರೆ ಅಡಿ ಎತ್ತರದ ಅತಿ ಬಲವಾದ ಈಟಿಯನ್ನು ಹೊಂದಿದ್ದ ಒಬ್ಬ ಐಗುಪ್ತ್ಯನನ್ನು ಕೊಂದನು. ಆ ಐಗುಪ್ತ್ಯನ ಕೈಯಲ್ಲಿದ್ದ ಈಟಿಯು ನೇಕಾರರ ಕುಂಟೆಯಂತಿತ್ತು. ಆದರೆ ಇವನ ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದ ಅವನನ್ನು ಕೊಂದನು.

[24] ಈ ಪರಾಕ್ರಮ ಕೃತ್ಯದಿಂದ ಯೆಹೋಯಾದನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುವಾಸಿಯಾದನು.

[25] ಮೂವತ್ತು ಜನರಲ್ಲಿ ಇವನು ವಿಶೇಷ ಕೀರ್ತಿಯನ್ನು ಹೊಂದಿದರೂ ಮೊದಲಿನ ಮೂವರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ಮಾಡಿದನು.

[26] ಯುದ್ಧವೀರರ ಇನ್ನೊಂದು ಪಟ್ಟಿ: ಯೋವಾಬನ ತಮ್ಮನಾದ ಅಸಾಹೇಲನು, ಬೇತ್ಲೆಹೇಮಿನ ದೋದೋವಿನ ಮಗನಾದ ಎಲ್ಖಾನಾನ್,

[27] ಹರೋರಿನವನಾದ ಶಮ್ಮೋತ್, ಪೆಲೋನ್ಯನಾದ ಹೆಲೆಚ್,

[28] ತೆಕೋವದ ಇಕ್ಕೇಷನ ಮಗನಾದ ಈರ, ಅನತೋತಿನವನಾದ ಅಬೀಯೆಜೆರ,

[29] ಹುಷ ಊರಿನವನಾದ ಸಿಬ್ಬೆಕೈ, ಅಹೋಹಿನವನಾದ ಈಲೈ,

[30] ನೆಟೋಫದವನಾದ ಮಹರೈ ಮತ್ತು ಬಾಣನ ಮಗನಾದ ಹೇಲೆದ್,

[31] ಬೆನ್ಯಾಮೀನ ದೇಶದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಈತೈ. ಪಿರಾತೋನ್ಯನಾದ ಬೆನಾಯ,

[32] ಹಲೇಗಾಷಿನವನಾದ ಹೂರೈ, ಅರಾಬಾ ತಗ್ಗಿನವನಾದ ಅಬೀಯೇಲ್,

[33] ಬಹರೂಮ್ಯನಾದ ಅಜ್ಮಾವೆತ್, ಶಾಲ್ಬೋನ್ಯನಾದ ಎಲೆಯಖ್ಬ.

[34] ಗೀಜೋನ್ಯನಾದ ಹಾಷೇಮನ ಮಕ್ಕಳು, ಹರಾರ್ಯನಾದ ಶಾಗೇಯನ ಮಗ, ಯೋನಾತಾನ,

[35] ಹರಾರ್ಯನಾದ ಶಾಕಾರನ ಮಗ ಅಹೀಯಾಮ್, ಊರನ ಮಗನಾದ ಎಲೀಫಲ್,

[36] ಮೆಕೆರಾತ್ಯನಾದ ಹೇಫೆರ್, ಪೆಲೋನ್ಯನಾದ ಅಹೀಯ,

[37] ಕರ್ಮೆಲ್ಯನಾದ ಹಚ್ರೋ, ಎಜ್ಬೈಯ ಮಗನಾದ ನಾರೈ,

[38] ನಾತಾನನ ತಮ್ಮನಾದ ಯೋವೇಲ್, ಹಗ್ರೀಯನ ಮಗನಾದ ಮಿಬ್ಹಾರ,

[39] ಅಮ್ಮೋನಿಯನಾದ ಚೆಲೆಕ್ ಬೇರೋತ್ಯನೂ ಚೆರೂಯಳ ಮಗನಾದ ಯೋವಾಬನೂ ಆಯುಧ ಹೊರುವವನು ಆಗಿದ್ದ ನಹರೈ,

[40] ಇತ್ರೀಯರಾದ ಈರ, ಗಾರೇಬರು,

[41] ಹಿತ್ತಿಯನಾದ ಊರೀಯ, ಅಹ್ಲೈಯ ಮಗನಾದ ಜಾಬಾದ್,

[42] ರೂಬೇನ್ಯನೂ ತನ್ನ ಜೊತೆಯಲ್ಲಿ ಬಂದ ಮೂವತ್ತು ಜನರು. ರೂಬೇನ್ಯರ ಮುಖ್ಯಸ್ಥನೂ ಶೀಜನ ಮಗನೂ ಆದ ಅದೀನ

[43] ಮಾಕನ ಮಗನಾದ ಹಾನಾನ್, ಮೆತೆನ ಊರಿನವನಾದ ಯೋಷಾಫಾಟ್,

[44] ಅಷ್ಟೆರಾತ್ಯನಾದ ಉಜ್ಜೀಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾ ಯೆಗೀಯೇಲರು,

[45] ಶಿಮ್ರಿಯ ಮಗನಾದ ಎದೀಗಯೇಲ್, ಎದೀಗೇಲನ ತಮ್ಮನೂ ತೀಚೀಯನೂ ಆದ ಯೋಹ,

[46] ಎಲ್ನಾಮನ ಮಕ್ಕಳಾದ ಮಹವೀಯನಾದ ಎಲೀಯೇಲ್, ಯೆರೀಬೈ ಮತ್ತು ಯೋಷವ್ಯರು. ಮೋವಾಬ್ಯನಾದ ಇತ್ಮ,

[47] ಎಲೀಯೇಲ್ ಓಬೇದರು, ಮೆಚೋಬಾಯದವನಾದ ಯಾಸೀಯೇಲನು ಇವರೇ.

1 ಪೂರ್ವಕಾಲವೃತ್ತಾಂತ — Chapters