Skip to content
Opens in a new window
Listen to this chapter • 5:58

[1] ಸೈತಾನನು ಇಸ್ರಾಯೇಲರಿಗೆ ವಿರುದ್ಧ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.

[2] ದಾವೀದನು ಯೋವಾಬನನ್ನೂ ಮತ್ತು ಜನಾಧಿಪತಿಗಳನ್ನೂ ಕರೆದು, “ನನಗೆ ಜನರ ಲೆಕ್ಕ ಗೊತ್ತಾಗುವ ಹಾಗೆ ನೀವು ಬೇರ್ಷೆಬದಿಂದ ದಾನ್ ಊರಿನವರೆಗೂ ಸಂಚರಿಸಿ, ಇಸ್ರಾಯೇಲರನ್ನು ಲೆಕ್ಕ ಮಾಡಿಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.

[3] ಆಗ ಯೋವಾಬನು, “ನನ್ನ ಒಡೆಯನಾದ ಅರಸನೇ, ಯೆಹೋವನು ತನ್ನ ಪ್ರಜೆಗಳನ್ನು ನೂರರಷ್ಟು ಹೆಚ್ಚಿಸಲಿ. ಅವರೆಲ್ಲರೂ ನನ್ನ ಒಡೆಯನ ದಾಸರಷ್ಟೆ. ಒಡೆಯನು ಇಂಥದ್ದನ್ನು ಅಪೇಕ್ಷಿಸುವುದೇನು? ಇಸ್ರಾಯೇಲರನ್ನು ಅಪರಾಧಕ್ಕೆ ಗುರಿಮಾಡುವುದೇಕೆ” ಎಂದನು.

[4] ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ನಡೆಸಿದ್ದರಿಂದ ಅವನು ಹೊರಟುಹೋಗಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿದನು.

[5] ಯೋವಾಬನು ದಾವೀದನಿಗೆ ಒಪ್ಪಿಸಿದ ಜನಗಣತಿಯ ಸಂಖ್ಯೆಯು ಇಸ್ರಾಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಹನ್ನೊಂದು ಲಕ್ಷ ಮತ್ತು ಯೆಹೂದ್ಯರಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ.

[6] ಅರಸನ ಅಪ್ಪಣೆಯು ಯೋವಾಬನಿಗೆ ಅಸಹ್ಯವಾಗಿದ್ದುದರಿಂದ ಅವನು ಲೇವಿ ಮತ್ತು ಬೆನ್ಯಾಮೀನ್ ಕುಲಗಳವರ ಜನಗಣತಿಯನ್ನು ಮಾಡಲಿಲ್ಲ.

[7] ಜನಗಣತಿ ಮಾಡಿದ್ದು ದೇವರಿಗೆ ಕೆಟ್ಟದ್ದೆಂದು ಕಂಡದ್ದರಿಂದ ಆತನು ಇಸ್ರಾಯೇಲರನ್ನು ಬಾಧಿಸಿದನು.

[8] ಆಗ ದಾವೀದನು, “ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾಗಿದ್ದೇನೆ. ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು” ಎಂದು ದೇವರನ್ನು ಪ್ರಾರ್ಥಿಸಿದನು.

[9] ಯೆಹೋವನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನೆಂದರೆ,

[10] ಯೆಹೋವನು ಇಂತೆನ್ನುತ್ತಾನೆ, “ನಾನು ಮೂರು ವಿಧವಾದ ಶಿಕ್ಷೆಯನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂಬುದಾಗಿ ದಾವೀದನಿಗೆ ಹೇಳು” ಎಂದನು.

[11] ಆಗ ಗಾದನು ದಾವೀದನ ಬಳಿಗೆ ಹೋಗಿ ಅವನಿಗೆ, “ಯೆಹೋವನು ಹೇಳುವುದೇನೆಂದರೆ,

[12] ‘ಮೂರು ವರ್ಷಗಳ ವರೆಗೆ ಬರಗಾಲ ಉಂಟಾಗಬೇಕೋ, ಇಲ್ಲವೆ ನೀನು ಮೂರು ತಿಂಗಳು ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ, ಇಲ್ಲವೆ ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರದೂತನಿಂದ ಉಂಟಾಗುವ ಮೂರು ದಿನಗಳ ಘೋರವ್ಯಾಧಿಯ ರೂಪವಾದ ಯೆಹೋವನ ಶಿಕ್ಷೆ ಬೇಕೋ, ಈ ಮೂರರಲ್ಲಿ ಒಂದನ್ನು ಆರಿಸಿಕೊ’ ಎಂಬುದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು ಆಲೋಚಿಸಿ ಹೇಳು” ಎಂದು ಹೇಳಿದನು.

[13] ಅದಕ್ಕೆ ದಾವೀದನು ಗಾದನಿಗೆ, “ನಾನು ಬಲು ಇಕ್ಕಟ್ಟಿನಲ್ಲಿರುತ್ತೇನೆ. ಮನುಷ್ಯರ ಕೈಯಲ್ಲಿ ಬೀಳುವುದಕ್ಕಿಂತ ಯೆಹೋವನ ಹಸ್ತದಲ್ಲಿ ಬೀಳುವುದು ಮೇಲು. ಆತನು ಕೃಪಾಪೂರ್ಣನು” ಎಂದು ಹೇಳಿದನು.

[14] ಆಗ ಯೆಹೋವನು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದನು. ಅವರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.

[15] ದೇವರು ಯೆರೂಸಲೇಮನ್ನು ನಾಶಪಡಿಸುವುದಕ್ಕೆ ದೂತರನ್ನು ಕಳುಹಿಸಿದನು. ಆದರೆ ಆ ದೂತನು ನಾಶಪಡಿಸುವುದಕ್ಕಿದ್ದಾಗ ಯೆಹೋವನು ಅದನ್ನು ಕಂಡು ಆ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಟ್ಟು ಸಂಹಾರ ದೂತನಿಗೆ, “ಸಾಕು ನಿನ್ನ ಕೈಯನ್ನು ಹಿಂದೆಗೆ” ಎಂದು ಆಜ್ಞಾಪಿಸಿದನು. ಆಗ ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತನು.

[16] ದಾವೀದನು ಕಣ್ಣೆತ್ತಿ ನೋಡಿ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನೂ, ಚಾಚಿದ ಕೈಯಲ್ಲಿ ಯೆರೂಸಲೇಮಿಗೆ ವಿರುದ್ಧವಾಗಿ ಹಿರಿದ ಕತ್ತಿಯಿರುವುದನ್ನೂ ಕಂಡಾಗ ಅವನೂ, ಹಿರಿಯರೂ ಗೋಣಿತಟ್ಟನ್ನು ಹೊದ್ದುಕೊಂಡು ಬೋರಲು ಬಿದ್ದರು.

[17] ಮತ್ತು ದಾವೀದನು ದೇವರಿಗೆ, “ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೋ. ಮಹಾಪಾಪಮಾಡಿದವನು ನಾನೇ. ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಯೆಹೋವನೇ, ನನ್ನ ದೇವರೇ, ನಿನ್ನ ಹಸ್ತವು ನಿನ್ನ ಜನರನ್ನು ಬಾಧಿಸುವುದಕ್ಕೆ ಅವರಿಗೆ ವಿರುದ್ಧವಾಗಿರದೆ ನನಗೂ ನನ್ನ ಮನೆಯವರಿಗೂ ವಿರುದ್ಧವಾಗಿರಲಿ” ಎಂದು ಬೇಡಿಕೊಂಡನು.

[18] ಆಗ ಯೆಹೋವನ ದೂತನು ಗಾದನಿಗೆ, “ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುವುದಕ್ಕೆ ಹೋಗಬೇಕು ಎಂದು ದಾವೀದನಿಗೆ ಹೇಳು” ಎಂದು ಆಜ್ಞಾಪಿಸಿದನು.

[19] ದಾವೀದನು ಗಾದನ ಮುಖಾಂತರವಾಗಿ ತನಗಾದ ಯೆಹೋವನ ಅಪ್ಪಣೆಯಂತೆ ಹೊರಟನು.

[20] ಅಷ್ಟರಲ್ಲಿ ಗೋದಿಯನ್ನು ತುಳಿಸುತ್ತಿದ್ದ ಒರ್ನಾನನು ತಿರುಗಿಕೊಂಡು ದೂತನನ್ನು ನೋಡಿದ್ದನು. ಅವನ ಜೊತೆಯಲ್ಲಿದ್ದ ಅವನ ನಾಲ್ಕು ಮಕ್ಕಳು ಅಡಗಿಕೊಂಡಿದ್ದರು.

[21] ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡು ಕಣವನ್ನು ಬಿಟ್ಟು ಹೋಗಿ ಅವನಿಗೆ ಅಡ್ಡ ಬಿದ್ದನು.

[22] ದಾವೀದನು ಅವನಿಗೆ, “ನಿನ್ನ ಕಣವನ್ನೂ ಮತ್ತು ಭೂಮಿಯನ್ನು ನನಗೆ ಕೊಡು, ವ್ಯಾಧಿಯು ಜನರನ್ನು ಬಿಟ್ಟು ಹೋಗುವಂತೆ ನಾನು ಅದರಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುತ್ತೇನೆ. ಪೂರ್ಣಕ್ರಯ ತೆಗೆದುಕೊಂಡು ಅದನ್ನು ಕೊಡು” ಎಂದು ಹೇಳಿದನು.

[23] ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ, ಸೌದೆಗೆ ಹಂತೀಕುಂಟೆಗಳೂ, ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ. ಇವೆಲ್ಲವನ್ನೂ ಕೊಡುತ್ತೇನೆ” ಎಂದು ಹೇಳಿದನು.

[24] ಅರಸನಾದ ದಾವೀದನು ಒರ್ನಾನನಿಗೆ “ಹಾಗಲ್ಲ ನಾನು ನಿನ್ನಿಂದ ಪೂರ್ಣ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ ನಿನಗೆ ಸೇರಿದ್ದನ್ನು ಕ್ರಯವಿಲ್ಲದೆ ತೆಗೆದುಕೊಂಡು ಯೆಹೋವನಿಗೆ ಯಜ್ಞವಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.

[25] ದಾವೀದನು ಆ ಭೂಮಿಗೋಸ್ಕರ ಅವನಿಗೆ ಆರುನೂರು ಶೆಕಲ್ ಬಂಗಾರವನ್ನು ಕೊಟ್ಟನು.

[26] ಅಲ್ಲಿ ದಾವೀದನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ, ಅದರ ಮೇಲೆ ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಅರ್ಪಿಸಿ, ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ, ಆಕಾಶದಿಂದ ಯಜ್ಞವೇದಿಯ ಮೇಲೆ ಬೆಂಕಿಯನ್ನು ಸುರಿಸಿ,

[27] ಕತ್ತಿಯನ್ನು ಒರೆಯಲ್ಲಿ ಹಾಕಬೇಕೆಂದು ದೂತನಿಗೆ ಆಜ್ಞಾಪಿಸಿದನು. ಅವನು ಹಾಗೆಯೇ ಮಾಡಿದನು.

[28] ಮೋಶೆಯು ಅರಣ್ಯದಲ್ಲಿ ಮಾಡಿಸಿದ ಯೆಹೋವನ ಗುಡಾರ ಮತ್ತು ಯಜ್ಞವೇದಿಯು ಆ ಕಾಲದಲ್ಲಿ ಗಿಬ್ಯೋನಿನ ಪೂಜಾಸ್ಥಳದಲ್ಲಿದ್ದವು.

[29] ಆದರೂ ದಾವೀದನು ಯೆಹೋವನ ದೂತನ ಕತ್ತಿಗೆ ಹೆದರಿ ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಯಜ್ಞವನ್ನು ಅರ್ಪಿಸಿದನು.

[30] ಆ ಕಾಲದಲ್ಲಿ ದಾವೀದನಿಗೆ ಯೆಹೋವನಿಂದ ಸದುತ್ತರ ದೊರಕಿತು.

1 ಪೂರ್ವಕಾಲವೃತ್ತಾಂತ — Chapters