Skip to content
Opens in a new window
Listen to this chapter • 3:25

[1] ದಾವೀದನು ಫಿಲಿಷ್ಟಿಯರನ್ನು ಮುತ್ತಿಗೆಹಾಕಿ, ಅವರನ್ನು ಸೋಲಿಸಿ, ಅವರಿಂದ ಗತ್ ಪಟ್ಟಣವನ್ನೂ ಮತ್ತು ಅದರ ಗ್ರಾಮಗಳನ್ನೂ ತೆಗೆದುಕೊಂಡನು.

[2] ಇದಲ್ಲದೆ ಅವನು ಮೋವಾಬ್ಯರನ್ನು ಸೋಲಿಸಿದನು. ಅವರು ದಾವೀದನಿಗೆ ದಾಸರಾಗಿ ಕಪ್ಪಕೊಡಬೇಕಾಯಿತು.

[3] ದಾವೀದನು ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ಚೋಬದ ಅರಸನಾದ ಹದರೆಜರನನ್ನು ಹಮಾತಿನ ಬಳಿಯಲ್ಲಿ ಸೋಲಿಸಿದನು.

[4] ದಾವೀದನು ಅವನ ಸಾವಿರ ರಥಗಳನ್ನೂ, ಏಳುಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಸೆರೆಹಿಡಿದು, ನೂರು ಕುದುರೆಗಳನ್ನಿಟ್ಟುಕೊಂಡು, ಉಳಿದ ಕುದುರೆಗಳ ಹಿಂಗಾಲಿನ ನರಗಳನ್ನು ಕತ್ತರಿಸಿ ಬಿಟ್ಟನು.

[5] ದಮಸ್ಕದ ಅರಾಮ್ಯರು ಚೋಬದ ಅರಸನಾದ ಹದದೆಜರನನ್ನು ರಕ್ಷಿಸಲು ಬಂದಾಗ ದಾವೀದನು ಅವರನ್ನೂ ಸೋಲಿಸಿ, ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದನು.

[6] ಇದಲ್ಲದೆ ಅವನು ದಮಸ್ಕದ ಅರಾಮ್ಯ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಹೀಗೆ ಅರಾಮ್ಯರು ಅವನ ಸೇವಕರಾಗಿ ಅವನಿಗೆ ಕಪ್ಪ ಕೊಡುವವರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ವಿಜಯ ದೊರಕಿತು.

[7] ದಾವೀದನು ಹದರೆಜರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರೂಸಲೇಮಿಗೆ ತೆಗೆದುಕೊಂಡು ಹೋದನು.

[8] ಇದಲ್ಲದೆ ದಾವೀದನು ಹದರೆಜರನ ಟಿಭತ್ ಮತ್ತು ಕೂನ್ ಎಂಬ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು. ಸೊಲೊಮೋನನು ಆ ತಾಮ್ರದಿಂದ ಕಂಚಿನ ಕಡಲೆಂಬ ಪಾತ್ರೆಯನ್ನೂ, ಕಂಬಗಳನ್ನೂ ಮತ್ತು ಬೇರೆ ಸಾಮಾನುಗಳನ್ನು ಇದೇ ತಾಮ್ರದಿಂದ ಮಾಡಿಸಿದನು.

[9] ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯವನ್ನೆಲ್ಲಾ ಸೋಲಿಸಿದನೆಂಬ ವರ್ತಮಾನವು ಹಮಾತಿನ ಅರಸನಾದ ತೋವಿಗೆ ಮುಟ್ಟಿತು.

[10] ತೋವಿಗೂ ಹದರೆಜನಿಗೂ ವಿರೋಧವಿತ್ತು. ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದರಿಂದ, ತೋವು ದಾವೀದನನ್ನು ವಂದಿಸುವುದಕ್ಕೂ, ಹಾರೈಸುವುದಕ್ಕೂ ತನ್ನ ಮಗನಾದ ಹದೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ವಿಧವಿಧವಾದ ತಾಮ್ರ, ಬೆಳ್ಳಿ, ಬಂಗಾರಗಳ ಪಾತ್ರೆಗಳನ್ನು ತಂದನು.

[11] ಅರಸನಾದ ದಾವೀದನು ಇವುಗಳನ್ನೂ ಎದೋಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಮತ್ತು ಅಮಾಲೇಕ್ಯರು ಎಂಬೀ ಸುತ್ತಲಿನ ಜನಾಂಗಗಳಿಂದ ವಶಪಡಿಸಿಕೊಂಡ ಬೆಳ್ಳಿ ಬಂಗಾರವನ್ನು ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು.

[12] ಇದಲ್ಲದೆ ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಸೈನಿಕರನ್ನು ಸೋಲಿಸಿದನು.

[13] ದಾವೀದನು ಎದೋಮಿನಲ್ಲಿ ಕಾವಲುದಂಡುಗಳನ್ನಿರಿಸಿದನು. ಎದೋಮ್ಯರೆಲ್ಲರೂ ದಾವೀದನ ದಾಸರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು.

[14] ದಾವೀದನು ಇಸ್ರಾಯೇಲರೆಲ್ಲರ ಅರಸನಾಗಿ ಎಲ್ಲಾ ಪ್ರಜೆಗಳಿಗೂ ಧರ್ಮತಪ್ಪದೆ ನೀತಿ ಮತ್ತು ನ್ಯಾಯದಿಂದ ಕಾರ್ಯ ನಿರ್ವಹಿಸುತ್ತಿದ್ದನು.

[15] ಚೆರೂಯಳ ಮಗನಾದ ಯೋವಾಬನು ಅವನ ಸೇನಾಧಿಪತಿಯೂ, ಅಹೀಲೂದನ ಮಗನಾದ ಯೆಹೋಷಾಫಾಟನು ಮಂತ್ರಿಯೂ ಆಗಿದ್ದರು.

[16] ಅಹೀಟೂಬನ ಮಗನಾದ ಚಾದೋಕನೂ ಮತ್ತು ಅಬೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು. ಶವ್ಷನು ಲೇಖಕನು.

[17] ಯೆಹೋಯಾದನ ಮಗನಾದ ಬೆನಾಯನು, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳ ಮುಖ್ಯಸ್ಥನಾದನು. ದಾವೀದನ ಮಕ್ಕಳು ಅರಸನ ಒಡ್ಡೋಲಗದಲ್ಲಿ ಪ್ರಧಾನರಾಗಿದ್ದರು.

1 ಪೂರ್ವಕಾಲವೃತ್ತಾಂತ — Chapters