[1] ಇದಾದನಂತರ ಅಮ್ಮೋನಿಯರ ಅರಸನಾದ ನಾಹಾಷನು ಸತ್ತನು. ಅವನಿಗೆ ಬದಲಾಗಿ ಅವನ ಮಗನು ಅರಸನಾದನು.
[2] ದಾವೀದನು, “ನಾಹಾಷನು ನನಗೆ ದಯೆತೋರಿಸಿದ್ದರಿಂದ ನಾನೂ ಅವನ ಮಗನಾದ ಹಾನೂನನಿಗೆ ದಯೆತೋರಿಸುವೆನು” ಅಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವುದಕ್ಕೋಸ್ಕರ ದೂತರನ್ನು ಕಳುಹಿಸಿದನು. ದಾವೀದನ ಸೇವಕರು ಹಾನೂನನನ್ನು ಸಂತೈಸುವುದಕ್ಕೋಸ್ಕರ ಅಮ್ಮೋನಿಯರ ದೇಶಕ್ಕೆ ಬಂದರು.
[3] ಆಗ ಅಮ್ಮೋನ್ ಪ್ರಭುಗಳು ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದರಿಂದ ಅವನು ನಿನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದಾನೆಂದು ನೆನಸುತ್ತೀಯೋ? ಅವನ ಆಳುಗಳು ದೇಶವನ್ನು ಸಂಚರಿಸಿ ನೋಡಿ, ಅದನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಬಂದಿದ್ದಾರೆ” ಎಂದು ಹೇಳಿದರು.
[4] ಆದುದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ, ಗಡ್ಡದ ಅರ್ಧ ಭಾಗವನ್ನು ಬೋಳಿಸಿ, ಅವರ ಸೊಂಟದ ಕೆಳಭಾಗದ ನಿಲುವಂಗಿಗಳನ್ನು ಕತ್ತರಿಸಿ ಕಳುಹಿಸಿಬಿಟ್ಟನು.
[5] ಅವರು ಹೋಗಿ ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದಾಗ ಅವನು ಬಹಳ ಅವಮಾನಹೊಂದಿ ಅವರಿಗೆ ಆಳುಗಳ ಮುಖಾಂತರವಾಗಿ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿದ್ದು ಅನಂತರ ಬನ್ನಿರಿ” ಎಂದು ಹೇಳಿಸಿದನು.
[6] ತಾವು ದಾವೀದನಿಗೆ ಅಸಹ್ಯರಾದೆವೆಂದು ಹಾನೂನನೂ ಮತ್ತು ಅಮ್ಮೋನಿಯರೂ ತಿಳಿದು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ಸೀಮೆಯಿಂದಲೂ, ಮಾಕದಿಂದಲೂ, ಚೋಬಾ ರಾಜ್ಯದಿಂದಲೂ ರಥಗಳನ್ನೂ, ರಾಹುತರನ್ನು ತರಿಸುವುದಕ್ಕೋಸ್ಕರ ಸಾವಿರ ತಲಾಂತು ಬೆಳ್ಳಿಯನ್ನೂ ಕಳುಹಿಸಿದರು.
[7] ಆಗ ಮೂವತ್ತೆರಡು ಸಾವಿರ ರಥಬಲದವರೂ, ಮಾಕದ ಅರಸನೂ ಮತ್ತು ಅವನ ದಂಡಾಳುಗಳು ಬಂದು ಅವರ ಸಹಾಯಕ್ಕೋಸ್ಕರ ಮೇದೆಬ ಊರಿನ ಮುಂದೆ ಪಾಳೆಯ ಮಾಡಿಕೊಂಡರು. ಅಮ್ಮೋನಿಯರೂ ತಮ್ಮ ಪಟ್ಟಣಗಳಿಂದ ಯುದ್ಧಕ್ಕೆ ಕೂಡಿಬಂದರು.
[8] ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಯೋವಾಬನನ್ನೂ, ಎಲ್ಲಾ ಶೂರಸೈನಿಕರನ್ನೂ ಕಳುಹಿಸಿದನು.
[9] ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರ ಬಾಗಿಲಿನ ಬಳಿಯಲ್ಲಿ ವ್ಯೂಹಕಟ್ಟಿದರು. ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಮೈದಾನದಲ್ಲಿ ನಿಂತರು.
[10] ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು, ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು.
[11] ಉಳಿದ ಜನರನ್ನು ತನ್ನ ತಮ್ಮನಾದ ಅಬ್ಷೈಯ ವಶಕ್ಕೆ ಕೊಟ್ಟು ಅವನಿಗೆ,
[12] “ಅರಾಮ್ಯರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ, ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುವೆನು.
[13] ಧೈರ್ಯದಿಂದಿರು, ನಮ್ಮ ಜನರಿಗೋಸ್ಕರವೂ, ನಮ್ಮ ದೇವರ ಪಟ್ಟಣಗಳಿಗೋಸ್ಕರವೂ, ನಮ್ಮ ಪೌರುಷವನ್ನು ತೋರಿಸೋಣ. ಯೆಹೋವನು ತನಗೆ ಸರಿಕಾಣುವ ಹಾಗೆ ಮಾಡಲಿ” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರುದ್ಧವಾಗಿ ಕಳುಹಿಸಿದನು.
[14] ಯೋವಾಬನೂ ಅವನ ಜನರೂ ಅರಾಮ್ಯರಿಗೆ ವಿರುದ್ಧವಾಗಿ ಯುದ್ಧಪ್ರಾರಂಭಿಸಿದಾಗ ಅರಾಮ್ಯರು ಓಡಿಹೋದರು.
[15] ಅವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅವನ ತಮ್ಮನಾದ ಅಬ್ಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಪ್ರವೇಶಿಸಿದರು. ಯೋವಾಬನು ಯೆರೂಸಲೇಮಿಗೆ ಹೋದನು.
[16] ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಅಪಜಯ ಹೊಂದಿದ್ದೇವೆಂದು ಗೊತ್ತಾದಾಗ ಅವರು ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಕರೆಕಳುಹಿಸಿದರು. ಹದರೆಜರನ ಸೇನಾಧಿಪತಿಯಾದ ಶೋಫಕನು ಅವರ ನಾಯಕನಾದನು.
[17] ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರಾಯೇಲರನ್ನು ಕೂಡಿಸಿಕೊಂಡು ಯೊರ್ದನ್ ಹೊಳೆಯನ್ನು ದಾಟಿ, ಅರಾಮ್ಯರ ಸಮೀಪಕ್ಕೆ ಬಂದು ಅವರೊಡನೆ ಕಾದಾಡುವುದಕ್ಕೊಸ್ಕರ ವ್ಯೂಹ ಕಟ್ಟಿದನು.
[18] ಅರಾಮ್ಯರು ಯುದ್ಧಕ್ಕೆ ನಿಂತಾಗ ಇಸ್ರಾಯೇಲರ ಮುಂದೆ ಸೋತು ಓಡಿಹೋದರು. ದಾವೀದನು ಅರಾಮ್ಯರ ಏಳುಸಾವಿರ ರಥಗಳನ್ನು ಹಾಳುಮಾಡಿ, ನಲ್ವತ್ತು ಸಾವಿರ ಕಾಲಾಳುಗಳನ್ನು ಕೊಂದುಬಿಟ್ಟನು. ಅವನು ಸೇನಾಧಿಪತಿಯಾದ ಶೋಫಕನನ್ನೂ ಕೊಂದನು.
[19] ಹದರೆಜರನ ದಾಸರು ಇಸ್ರಾಯೇಲರ ಮುಂದೆ ತಮ್ಮ ಕೈ ಸಾಗದೆಂದು ತಿಳಿದು ದಾವೀದನೊಡನೆ ಒಪ್ಪಂದ ಮಾಡಿಕೊಂಡು ಅವನ ದಾಸರಾದರು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯಮಾಡುವುದಕ್ಕೆ ಮನಸ್ಸು ಮಾಡಲ್ಲಿಲ್ಲ.