[1] ನಾವು ಸುರಕ್ಷಿತವಾಗಿ ದಡ ಸೇರಿದ ಮೇಲೆ, ಆ ದ್ವೀಪವು ಮಾಲ್ಟ ದ್ವೀಪವೆಂದು ಕಂಡುಕೊಂಡೆವು.
[2] ಆ ದ್ವೀಪದ ನಿವಾಸಿಗಳು ನಮಗೆ ಅಸಾಧಾರಣವಾದ ದಯೆತೋರಿಸಿದರು. ಆಗ ಮಳೆ ಬರುತ್ತಿದ್ದು ಬಹಳ ಚಳಿಯಿದ್ದುದರಿಂದ ಅವರು ಬೆಂಕಿಹೊತ್ತಿಸಿ ನಮ್ಮನ್ನು ಬರಮಾಡಿಕೊಂಡರು.
[3] ಪೌಲನು ಕಟ್ಟಿಗೆ ಕೂಡಿಸಿ ಹೊರೆಯನ್ನು ತಂದು ಬೆಂಕಿಯಲ್ಲಿ ಹಾಕಲು ಶಾಖದಿಂದ ಒಂದು ಸರ್ಪವು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.
[4] ಸರ್ಪವು ಪೌಲನ ಕೈಗೆ ಸುತ್ತಿಕೊಂಡಿರುವುದನ್ನು ದ್ವೀಪ ನಿವಾಸಿಗಳು ಕಂಡಾಗ, “ನಿಶ್ವಯವಾಗಿ ಈ ಮನುಷ್ಯನು ಕೊಲೆಗಾರನಾಗಿರಬೇಕು. ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಅವನನ್ನು ಜೀವಿಸಲಿಕ್ಕೆ ಬಿಡಲಿಲ್ಲ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[5] ಆದರೆ ಪೌಲನು ಸರ್ಪವನ್ನು ಬೆಂಕಿಯೊಳಗೆ ಝಾಡಿಸಿ ಬಿಟ್ಟನು. ಅವನಿಗೆ ಯಾವ ಕೇಡೂ ಆಗಲಿಲ್ಲ.
[6] ಅವನು ಬಾತುಹೋಗುತ್ತಾನೆ ಅಥವಾ ಇದ್ದಕ್ಕಿದ್ದಂತೆ ಸತ್ತು ಹೋಗುತ್ತಾನೆ ಎಂದು ಜನರು ಕಾದಿದ್ದರು. ಆದರೆ ಬಹಳ ಹೊತ್ತು ಕಾದು ನೋಡಿದ ಮೇಲೆ, ಅವನಿಗೆ ಕೆಟ್ಟದ್ದೇನೂ ಆಗದಿರುವುದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು, “ಇವನೊಬ್ಬ ದೇವರು” ಎಂದು ಹೇಳಿಕೊಂಡರು.
[7] ದ್ವೀಪದ ಮುಖ್ಯ ಅಧಿಕಾರಿ ಪೊಪ್ಲಿಯನೆಂಬುವನಿಗೆ ಸೇರಿದ ಹೊಲವು ಸಮೀಪದಲ್ಲಿಯೇ ಇತ್ತು. ಅವನು ನಮ್ಮನ್ನು ತನ್ನ ಮನೆಗೆ ಆಮಂತ್ರಿಸಿ ಮೂರು ದಿನ ನಮ್ಮನ್ನು ಉಪಚರಿಸಿದನು.
[8] ಪೊಪ್ಲಿಯನ ತಂದೆ ಅಸ್ವಸ್ಥತೆಯಿಂದ ಮಲಗಿದ್ದನು. ಅವನು ಜ್ವರ ಮತ್ತು ರಕ್ತ ಭೇದಿಯಿಂದ ಬಾಧೆಗೊಳಗಾಗಿದ್ದನು. ಪೌಲನು ಅವನನ್ನು ಸಂದರ್ಶಿಸಿ, ಪ್ರಾರ್ಥನೆಮಾಡಿ, ಅವನ ಮೇಲೆ ತನ್ನ ಹಸ್ತಗಳನ್ನಿಟ್ಟು ಅವನನ್ನು ಗುಣಪಡಿಸಿದನು.
[9] ಹೀಗಾದ ತರುವಾಯ ಆ ದ್ವೀಪದಲ್ಲಿಯೇ ಉಳಿದ ರೋಗಿಗಳು ಸಹ ಬಂದು ಗುಣಹೊಂದಿದರು.
[10] ಅವರು ಅನೇಕ ವಿಧವಾಗಿ ನಮ್ಮನ್ನು ಗೌರವಿಸಿದರು. ನಾವು ಪ್ರಯಾಣಕ್ಕೆ ಸಿದ್ಧರಾದಾಗ ನಮಗೆ ಅಗತ್ಯವಿದ್ದವುಗಳನ್ನೆಲ್ಲಾ ತಂದು ಒದಗಿಸಿಕೊಟ್ಟರು.
[11] ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು.
[12] ಸುರಕೂಸ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ಮೂರು ದಿನ ಇದ್ದೆವು.
[13] ಅಲ್ಲಿಂದ ಸಮುದ್ರ ಪ್ರಯಾಣ ಮುಂದುವರಿಸಿ ರೇಗಿಯ ಪಟ್ಟಣಕ್ಕೆ ಬಂದೆವು. ಮರುದಿನ ದಕ್ಷಿಣ ಗಾಳಿ ಬೀಸುತ್ತಿದ್ದುದರಿಂದ ಎರಡನೆಯ ದಿನ ಪೊತಿಯೋಲ ರೇವನ್ನು ತಲುಪಿದೆವು.
[14] ಅಲ್ಲಿ ಕೆಲವು ಸಹೋದರರು ನಮ್ಮನ್ನು ಕಂಡು ಒಂದು ವಾರ ತಮ್ಮೊಂದಿಗೆ ಕಳೆಯಬೇಕೆಂದು ಆಮಂತ್ರಿಸಿದರು. ಕೊನೆಗೆ ನಾವು ರೋಮ್ ಸೇರಿದೆವು.
[15] ಅಲ್ಲಿದ್ದ ಸಹೋದರರು ನಾವು ಬರುತ್ತೇವೆಂಬ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ಅಪ್ಪಿಯ ಪೇಟೆಗೂ ತ್ರಿಛತ್ರದ ಬಳಿಗೂ ಬಂದರು. ಪೌಲನು ಅವರನ್ನು ನೋಡಿ ದೇವರ ಸ್ತುತಿ ಮಾಡಿ ಧೈರ್ಯ ತಂದುಕೊಂಡನು.
[16] ನಾವು ರೋಮ್ ಪಟ್ಟಣಕ್ಕೆ ಬಂದಾಗ, ತನ್ನ ಕಾವಲುಗಾರನಾಗಿದ್ದ ಸೈನಿಕನೊಂದಿಗೆ ಪ್ರತ್ಯೇಕವಾಗಿ ಇರಲು ಪೌಲನಿಗೆ ಅನುಮತಿ ದೊರೆಯಿತು.
[17] ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ನಾಯಕರನ್ನು ಕರೆಯಿಸಿದನು. ಅವರೆಲ್ಲರೂ ಬಂದಾಗ ಅವರಿಗೆ, “ನನ್ನ ಸಹೋದರರೇ, ನಮ್ಮ ಜನರಿಗೂ ನಮ್ಮ ಪೂರ್ವಜರಿಗೂ ವಿರೋಧವಾಗಿ ನಾನು ಏನನ್ನೂ ಮಾಡಲಿಲ್ಲ. ಆದರೂ ನನ್ನನ್ನು ಯೆರೂಸಲೇಮಿನಲ್ಲಿ ಬಂಧಿಸಿ ರೋಮನ್ನರ ವಶಕ್ಕೆ ಒಪ್ಪಿಸಲಾಯಿತು.
[18] ಅವರು ನನ್ನನ್ನು ವಿಚಾರಣೆ ಮಾಡಿ, ನಾನು ಮರಣಶಿಕ್ಷೆ ಹೊಂದಲು ಯಾವ ಅಪರಾಧವೂ ಇಲ್ಲದಿರುವುದನ್ನು ಕಂಡು ನನ್ನನ್ನು ಬಿಡುಗಡೆ ಮಾಡಲಿದ್ದರು.
[19] ಆದರೆ ಯೆಹೂದ್ಯರು ಅದನ್ನು ವಿರೋಧಿಸಿದಾಗ, ನಾನು ನೇರವಾಗಿ ಕೈಸರನಿಗೆ ಮನವಿ ಮಾಡಿಕೊಳ್ಳಲೇಬೇಕಾಯಿತು. ನನಗೆ ಸ್ವದೇಶದವರ ವಿರೋಧವಾಗಿ ಹೊರಿಸಲು ಯಾವ ಆಪಾದನೆಯೂ ಇಲ್ಲ.
[20] ಈ ಕಾರಣದಿಂದಲೇ ನಾನು ನಿಮ್ಮನ್ನು ಭೇಟಿಯಾಗಿ ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲರ ನಿರೀಕ್ಷೆಯ ನಿಮಿತ್ತವಾಗಿಯೇ ನಾನು ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
[21] ಅದಕ್ಕೆ ಅವರು, “ನಿನ್ನ ವಿಷಯದಲ್ಲಿ ಯೂದಾಯದಿಂದ ನಮಗೆ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರಲ್ಲಿ ಯಾರೂ ನಿನ್ನ ವಿಷಯದಲ್ಲಿ ಏನನ್ನೂ ವರದಿ ಮಾಡಿಲ್ಲ. ನಿನ್ನ ಬಗ್ಗೆ ಯಾವ ಕೆಟ್ಟದ್ದನ್ನೂ ಹೇಳಿಲ್ಲ.
[22] ಆದರೆ ನಿನ್ನ ಅಭಿಪ್ರಾಯಗಳೇನೆಂಬುದನ್ನು ಕೇಳಲು ನಮಗೆ ಮನಸ್ಸಿದೆ. ಏಕೆಂದರೆ ಈ ಪಂಥದ ವಿರುದ್ಧವಾಗಿ ಎಲ್ಲಾ ಕಡೆಗಳಲ್ಲಿ ಜನರು ಮಾತನಾಡುತ್ತಿರುವುದನ್ನು ನಾವು ಬಲ್ಲೆವು,” ಎಂದರು.
[23] ಅವರು ಒಂದು ದಿನ ಪೌಲನೊಂದಿಗಿರಲು ಏರ್ಪಡಿಸಿ, ಅವನಿದ್ದ ಸ್ಥಳಕ್ಕೆ ಬಹುಮಂದಿ ಕೂಡಿಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಅವನು ದೇವರ ರಾಜ್ಯದ ಬಗ್ಗೆ ಖಚಿತವಾಗಿ ಸಾಕ್ಷಿ ಕೊಡುತ್ತಾ, ಮೋಶೆಯ ನಿಯಮ ಮತ್ತು ಪ್ರವಾದಿಗಳ ಗ್ರಂಥಗಳಿಂದ ಯೇಸುವಿನ ಬಗ್ಗೆ ವಿವರಿಸಿ ಅವರ ಮನವೊಲಿಸಲು ಪ್ರಯತ್ನಿಸಿದನು.
[24] ಕೆಲವರಿಗೆ ಅವನು ಹೇಳಿದ್ದರ ಬಗ್ಗೆ ಮನದಟ್ಟಾಯಿತು.
[25] ಆದರೆ ಬೇರೆಯವರು ನಂಬಲಿಲ್ಲ. ಅವರು ತಮ್ಮತಮ್ಮಲ್ಲಿಯೇ ಭಿನ್ನಾಭಿಪ್ರಾಯ ಉಳ್ಳವರಾಗಿರಲು ಪೌಲನು ಅವರಿಗೆ, “ಪವಿತ್ರಾತ್ಮ ದೇವರು ನಿಮ್ಮ ಪಿತೃಗಳಿಗೆ ಪ್ರವಾದಿ ಯೆಶಾಯನ ಮುಖಾಂತರ ಈ ಮಾತುಗಳನ್ನು ಸರಿಯಾಗಿಯೇ ಹೇಳಿದ್ದಾರೆ:
[26] “ ‘ಈ ಜನರ ಬಳಿಗೆ ಹೋಗಿ ಹೇಳು, “ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.”
[27] ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ಅವರು ತಮ್ಮ ಕಣ್ಣುಗಳಿಂದ ನೋಡಿ, ಕಿವಿಗಳಿಂದ ಕೇಳಿಸಿಕೊಂಡು, ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.
[28] “ಆದ್ದರಿಂದ ದೇವರ ರಕ್ಷಣೆಯು ಯೆಹೂದ್ಯರಲ್ಲದವರಿಗೆ ಒದಗಿ ಬಂದಿದೆ ಎಂಬುದು ನಿಮಗೆ ತಿಳಿದಿರಲಿ. ಅವರು ಅದಕ್ಕೆ ಕಿವಿಗೊಡುವರು,” ಎಂದನು.
[29] ಪೌಲನು ಇದನ್ನು ಹೇಳಿದ ತರುವಾಯ ಯೆಹೂದ್ಯರು ತಮ್ಮತಮ್ಮಲ್ಲಿಯೇ ಕಟುವಾಗಿ ಚರ್ಚಿಸಿಕೊಳ್ಳುತ್ತಾ ಹೊರಟು ಹೋದರು.
[30] ಪೌಲನು ತಾನು ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಎರಡು ವರ್ಷಗಳ ಕಾಲವಿದ್ದು ತನ್ನ ಬಳಿಗೆ ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದನು.
[31] ಅವನು ಧೈರ್ಯದಿಂದ ಯಾವ ಅಡ್ಡಿ ಆತಂಕಗಳಿಲ್ಲದೇ ದೇವರ ರಾಜ್ಯವನ್ನು ಪ್ರಕಟಿಸುತ್ತಾ, ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿ ಉಪದೇಶ ಮಾಡುತ್ತಾ ಇದ್ದನು.