[1] ಆಗ ಮಹಾಯಾಜಕನು, “ಈ ಸಂಗತಿಗಳು ನಿಜವೋ?” ಎಂದು ಸ್ತೆಫನನನ್ನು ಪ್ರಶ್ನಿಸಿದನು.
[2] ಅದಕ್ಕೆ ಸ್ತೆಫನನು, “ಸಹೋದರರೇ, ತಂದೆಗಳೇ, ನನ್ನ ಮಾತಿಗೆ ಕಿವಿಗೊಡಿರಿ! ನಮ್ಮ ಪಿತೃ ಅಬ್ರಹಾಮನು ಹಾರಾನಿನಲ್ಲಿ ವಾಸಿಸುವುದಕ್ಕಿಂತ ಮೊದಲು ಮೆಸೊಪೊಟೇಮಿಯಾದಲ್ಲಿ ಇದ್ದನು. ಆಗ ಮಹಿಮೆಯ ದೇವರು ಅವನಿಗೆ ದರ್ಶನ ಕೊಟ್ಟು,
[3] ‘ನಿನ್ನ ಸ್ವದೇಶವನ್ನು ಬಂಧುಗಳನ್ನು ಬಿಟ್ಟು, ನಾನು ನಿನಗೆ ತೋರಿಸುವ ನಾಡಿಗೆ ಹೋಗು,’ ಎಂದು ಹೇಳಿದರು.
[4] “ಅದರಂತೆ ಅಬ್ರಹಾಮನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿ ಬಂದು ನೆಲೆಸಿದನು. ಅವನ ತಂದೆಯ ಮರಣದ ನಂತರ ನೀವು ಈಗ ವಾಸಿಸುತ್ತಿರುವ ಈ ನಾಡಿಗೆ ದೇವರು ಅವನನ್ನು ಬರಮಾಡಿದರು.
[5] ದೇವರು ಅವನಿಗೆ ಇಲ್ಲಿ ಕಾಲಿಡುವಷ್ಟು ಸ್ಥಳವನ್ನಾಗಲಿ, ಯಾವುದೇ ಬಾಧ್ಯಸ್ತಿಕೆಯನ್ನಾಗಲಿ ಕೊಡಲಿಲ್ಲ. ಆದರೆ ಅಬ್ರಹಾಮನಿಗೆ ಆ ಸಮಯದಲ್ಲಿ ಮಕ್ಕಳಿಲ್ಲದಿದ್ದರೂ ಅವನೂ ಅವನ ನಂತರ ಅವನ ಸಂತತಿಯವರೂ ದೇಶವನ್ನು ಹೊಂದುವರೆಂದು ದೇವರು ಅವನಿಗೆ ವಾಗ್ದಾನ ಮಾಡಿದರು.
[6] ಇದಲ್ಲದೆ ದೇವರು ಅಬ್ರಹಾಮನೊಂದಿಗೆ ಮಾತನಾಡಿ, ‘ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು. ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು.
[7] ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ಅನಂತರ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು,’ ಎಂದು ದೇವರು ಹೇಳಿದರು.
[8] ಆಮೇಲೆ ದೇವರು ಅಬ್ರಹಾಮನಿಗೆ ಸುನ್ನತಿಯ ಒಡಂಬಡಿಕೆಯನ್ನೂ ಕೊಟ್ಟರು. ಅಬ್ರಹಾಮನಿಗೆ ಇಸಾಕನು ಜನಿಸಿದನು. ಇಸಾಕನು ಜನಿಸಿದ ಎಂಟನೆಯ ದಿನ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿಸಿದನು. ಅನಂತರ ಇಸಾಕನಿಗೆ ಯಾಕೋಬನು ಜನಿಸಿದನು. ಯಾಕೋಬನು ನಮ್ಮ ಹನ್ನೆರಡು ಮಂದಿ ಪಿತೃಗಳಿಗೆ ತಂದೆಯಾದನು.
[9] “ಈ ಪಿತೃಗಳು ಯೋಸೇಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗಿದ್ದು,
[10] ಅವನನ್ನು ಎಲ್ಲಾ ಸಂಕಟಗಳಿಂದ ಬಿಡಿಸಿದರು. ದೇವರು ಯೋಸೇಫನಿಗೆ ಜ್ಞಾನವನ್ನು ಕೊಟ್ಟು ಈಜಿಪ್ಟಿನ ಅರಸನಾದ ಫರೋಹನ ಮೆಚ್ಚುಗೆಗೆ ಪಾತ್ರನಾಗುವಂತೆ ಮಾಡಿದರು. ಹೀಗೆ ಯೋಸೇಫನನ್ನು ಈಜಿಪ್ಟ್ ದೇಶದ ಮೇಲೆಯೂ ತನ್ನ ಅರಮನೆಯ ಮೇಲೆಯೂ ಅಧಿಕಾರಿಯನ್ನಾಗಿ ಫರೋಹನು ನೇಮಿಸಿದನು.
[11] “ಆ ಕಾಲದಲ್ಲಿ ಈಜಿಪ್ಟ್ ಮತ್ತು ಕಾನಾನ್ ದೇಶಗಳ ಎಲ್ಲಾ ಕಡೆಗಳಲ್ಲಿಯೂ ಕ್ಷಾಮ ಬಂದು ಜನರು ಬಹಳ ಬಾಧೆಪಟ್ಟರು, ನಮ್ಮ ಪಿತೃಗಳಿಗೆ ಆಹಾರ ದೊರೆಯದೇ ಹೋಯಿತು.
[12] ಈಜಿಪ್ಟಿನಲ್ಲಿ ದವಸಧಾನ್ಯ ದೊರೆಯುವುದೆಂದು ಯಾಕೋಬನಿಗೆ ತಿಳಿದುಬಂದಾಗ, ಅವನು ನಮ್ಮ ಪಿತೃಗಳನ್ನು ಮೊದಲನೆಯ ಸಾರಿ ಅಲ್ಲಿಗೆ ಕಳುಹಿಸಿದನು.
[13] ಅವರು ಎರಡನೆಯ ಸಾರಿ ಅಲ್ಲಿಗೆ ಹೋದಾಗ, ಯೋಸೇಫನು ತಾನು ಯಾರೆಂಬುದನ್ನು ತನ್ನ ಸಹೋದರರಿಗೆ ತಿಳಿಸಿದನು. ಆಗ ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ಗೊತ್ತಾಯಿತು.
[14] ಇದಾದನಂತರ, ಯೋಸೇಫನು ತನ್ನ ತಂದೆ ಯಾಕೋಬನನ್ನು ಅವನ ಕುಟುಂಬದವರೆಲ್ಲರನ್ನೂ, ಒಟ್ಟು ಎಪ್ಪತ್ತೈದು ಜನರನ್ನು ಕರೆಕಳುಹಿಸಿದನು.
[15] ಆಗ ಯಾಕೋಬನು ಈಜಿಪ್ಟಿಗೆ ಹೋದನು, ಅಲ್ಲಿಯೇ ಅವನೂ ನಮ್ಮ ಪಿತೃಗಳೂ ಮೃತರಾದರು.
[16] ಅವರ ಮೃತಶರೀರವನ್ನು ಶೇಕೆಮಿಗೆ ತಂದರು. ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಕ್ರಯಕೊಟ್ಟು ಕೊಂಡುಕೊಂಡಿದ್ದ ಸಮಾಧಿಯಲ್ಲಿ ಇಟ್ಟರು.
[17] “ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನ ನೆರವೇರುವ ಕಾಲವು ಹತ್ತಿರ ಬಂದಾಗ, ಈಜಿಪ್ಟಿನಲ್ಲಿ ನಮ್ಮ ಜನರ ಸಂಖ್ಯೆ ಬಹಳ ಹೆಚ್ಚಾಯಿತು.
[18] ಆಗ, ‘ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು.’
[19] ಆ ಅರಸನು ನಮ್ಮ ಜನರೊಂದಿಗೆ ಕುಯುಕ್ತಿಯಿಂದ ವರ್ತಿಸುತ್ತಾ, ಅವರ ಕೂಸುಗಳು ಸಾಯುವಂತೆ ಬಿಸಾಡಿಬಿಡಬೇಕೆಂದು, ನಮ್ಮ ಪಿತೃಗಳನ್ನು ಕಠಿಣವಾಗಿ ಹಿಂಸಿಸಿದನು.
[20] “ಆ ಸಮಯದಲ್ಲಿಯೇ ಮೋಶೆ ಜನಿಸಿದನು. ಅವನು ದೇವರ ದೃಷ್ಟಿಯಲ್ಲಿ ಸುಂದರನಾಗಿದ್ದನು. ಮೂರು ತಿಂಗಳುಗಳ ಕಾಲ ಅವನು ತನ್ನ ತಂದೆಯ ಮನೆಯಲ್ಲೇ ಬೆಳೆದನು.
[21] ಆಮೇಲೆ ಅವನನ್ನು ಮನೆಯಿಂದ ಹೊರಗೆ ಹಾಕಿದಾಗ, ಫರೋಹನ ಮಗಳು ಅವನನ್ನು ತೆಗೆದುಕೊಂಡು ತನ್ನ ಸ್ವಂತ ಮಗನಂತೆ ಬೆಳೆಸಿದಳು.
[22] ಮೋಶೆಯು ಈಜಿಪ್ಟಿನವರ ಸಕಲ ವಿದ್ಯೆಗಳಲ್ಲಿ ತರಬೇತಿ ಹೊಂದಿ, ಮಾತಿನಲ್ಲಿಯೂ ಕೃತ್ಯದಲ್ಲಿಯೂ ಸಮರ್ಥನಾದನು.
[23] “ಮೋಶೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಬಂಧುಗಳಾದ ಇಸ್ರಾಯೇಲ್ ಪುತ್ರರನ್ನು ಸಂದರ್ಶಿಸಬೇಕೆಂದು ತೀರ್ಮಾನಿಸಿದನು.
[24] ತನ್ನ ಬಂಧುಗಳಲ್ಲಿ ಒಬ್ಬನನ್ನು ಈಜಿಪ್ಟಿನವನೊಬ್ಬನು ಹೊಡೆಯುತ್ತಿರುವುದನ್ನು ಕಂಡು, ಮೋಶೆ ಆ ಈಜಿಪ್ಟಿನವನನ್ನು ಕೊಂದುಹಾಕಿ ಸೇಡು ತೀರಿಸಿದನು.
[25] ದೇವರು ಸ್ವಜನರಿಗೆ ತನ್ನ ಮೂಲಕವಾಗಿ ಬಿಡುಗಡೆಯನ್ನು ಕೊಡುವನೆಂದು ಅವರು ಅರ್ಥ ಮಾಡಿಕೊಳ್ಳುವರೆಂದು ಮೋಶೆ ಭಾವಿಸಿದ್ದನು. ಸ್ವಜನರೋ, ಇದನ್ನು ಅರ್ಥಮಾಡಿಕೊಳ್ಳಲಿಲ್ಲ.
[26] ಮರುದಿನ ಇಬ್ಬರು ಇಸ್ರಾಯೇಲರು ಜಗಳವಾಡುತ್ತಿರುವುದನ್ನು ಮೋಶೆ ಕಂಡು, ‘ಗೆಳೆಯರೇ, ನೀವು ಸಹೋದರರಲ್ಲವೇ; ಒಬ್ಬರಿಗೊಬ್ಬರು ಏಕೆ ಜಗಳಮಾಡುತ್ತಿದ್ದೀರಿ?’ ಎಂದು ಹೇಳಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದನು.
[27] “ಆದರೆ ಹೊಡೆಯುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?
[28] ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ ಎಂದು ಕೇಳಿದನು.
[29] ಮೋಶೆ ಇದನ್ನು ಕೇಳಿ, ಮಿದ್ಯಾನಿಗೆ ಓಡಿಹೋದನು. ಅಲ್ಲಿ ಪರದೇಶದವನಂತೆ ಬದುಕಿ, ಇಬ್ಬರು ಗಂಡು ಮಕ್ಕಳನ್ನು ಪಡೆದನು.
[30] “ನಲವತ್ತು ವರ್ಷಗಳು ಗತಿಸಿದ ತರುವಾಯ ಸೀನಾಯಿ ಪರ್ವತದ ಮರುಭೂಮಿಯಲ್ಲಿ ಉರಿಯುವ ಪೊದೆಯಲ್ಲಿ ದೇವದೂತನೊಬ್ಬನು ಮೋಶೆಗೆ ದರ್ಶನ ಕೊಟ್ಟನು.
[31] ಇದನ್ನು ಮೋಶೆ ಕಂಡಾಗ ಆ ನೋಟಕ್ಕೆ ಅತ್ಯಾಶ್ಚರ್ಯಪಟ್ಟನು. ಅದನ್ನು ಸಮೀಪದಿಂದ ನೋಡಲು ಹೊರಟಾಗ, ಕರ್ತದೇವರ ಧ್ವನಿಯನ್ನು ಅವನು ಕೇಳಿಸಿಕೊಂಡನು.
[32] ‘ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ, ಇಸಾಕನ, ಯಾಕೋಬನ ದೇವರು,’ ಎಂಬ ವಾಣಿಯನ್ನು ಕೇಳಿಸಿಕೊಂಡ ಮೋಶೆ ಭಯದಿಂದ ನಡುಗುತ್ತಾ ನೇರವಾಗಿ ದೃಷ್ಟಿಸಲು ಧೈರ್ಯಗೊಳ್ಳಲಿಲ್ಲ.
[33] “ಆಗ ಕರ್ತದೇವರು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದಿಡು. ನೀನು ನಿಂತಿರುವ ಸ್ಥಳ ಪರಿಶುದ್ಧ ಭೂಮಿ.
[34] ಈಜಿಪ್ಟಿನಲ್ಲಿ ನನ್ನ ಜನರ ದುರವಸ್ಥೆಯನ್ನು ನಾನು ಕಂಡಿದ್ದೇನೆ. ಅವರ ನರಳಾಟವನ್ನು ಕೇಳಿಸಿಕೊಂಡಿದ್ದೇನೆ. ಅವರನ್ನು ಬಿಡುಗಡೆ ಮಾಡಲು ನಾನಿಳಿದು ಬಂದಿದ್ದೇನೆ. ಇಲ್ಲಿ ಬಾ, ನಾನು ನಿನ್ನನ್ನು ಹಿಂದಿರುಗಿ ಈಜಿಪ್ಟಿಗೆ ಕಳುಹಿಸುತ್ತೇನೆ,’ ಎಂದರು.
[35] “ ‘ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?’ ಎಂಬ ಮಾತುಗಳಿಂದ ಇಸ್ರಾಯೇಲರು ತಿರಸ್ಕರಿಸಿದಂಥ ಆ ಮೋಶೆಯೇ ಇವನು. ಉರಿಯುವ ಪೊದೆಯಲ್ಲಿ ದರ್ಶನ ಕೊಟ್ಟು ದೇವದೂತನ ಮುಖಾಂತರವಾಗಿ ದೇವರೇ ಇವನನ್ನು ಅವರ ಅಧಿಕಾರಿಯನ್ನಾಗಿಯೂ ವಿಮೋಚಕನ್ನಾಗಿಯೂ ಕಳುಹಿಸಿದರು.
[36] ಈ ಮೋಶೆಯೇ ಇಸ್ರಾಯೇಲರನ್ನು ಈಜಿಪ್ಟಿನಿಂದ ಹೊರಗೆ ನಡೆಸಿಕೊಂಡು ಬಂದನು. ಈಜಿಪ್ಟಿನಲ್ಲಿ, ಕೆಂಪುಸಮುದ್ರದ ಬಳಿಯಲ್ಲಿ, ಅರಣ್ಯದಲ್ಲಿ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ನಲವತ್ತು ವರ್ಷಗಳ ಕಾಲ ನಡೆಸಿದನು.
[37] “ ‘ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ಸ್ವಂತ ಜನರೊಳಗಿಂದಲೇ ದೇವರು ನಿಮಗೆ ಕಳುಹಿಸುವರು,’ ಎಂದು ಇಸ್ರಾಯೇಲರಿಗೆ ಹೇಳಿದವನು ಈ ಮೋಶೆಯೇ.
[38] ಇವನು ಇಸ್ರಾಯೇಲರು ಅರಣ್ಯದಲ್ಲಿ ದೊಡ್ಡಗುಂಪಾಗಿದ್ದಾಗ ಅವರ ಮಧ್ಯದಲ್ಲಿದ್ದವನು. ಸೀನಾಯಿ ಬೆಟ್ಟದ ಮೇಲೆ ಅವನೊಂದಿಗೆ ಮಾತನಾಡಿದ ದೇವದೂತನೊಂದಿಗಿದ್ದವನು. ಇವನು ನಮ್ಮ ಪಿತೃಗಳೊಂದಿಗೂ ಮಧ್ಯಸ್ಥನಾಗಿ ಇದ್ದವನು. ನಮಗೆ ಕೊಡುವುದಕ್ಕಾಗಿ ಜೀವ ವಾಕ್ಯಗಳನ್ನು ಸ್ವೀಕರಿಸಿದವನು ಈ ಮೋಶೆಯೇ.
[39] “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ಅವರು ಅವನನ್ನು ತಿರಸ್ಕರಿಸಿ, ತಮ್ಮ ಹೃದಯಗಳಲ್ಲಿ ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗಬೇಕೆಂದಿದ್ದರು.
[40] ಅವರು ಆರೋನನಿಗೆ, ‘ನಮಗೆ ಮುಂದಾಗಿ ಹೋಗುವುದಕ್ಕಾಗಿ ನಮಗೆ ದೇವರುಗಳನ್ನು ಮಾಡಿಕೊಡು, ನಮ್ಮನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು,’ ಎಂದರು.
[41] ಆ ಸಮಯದಲ್ಲಿ ಅವರು ಕರುವಿನ ರೂಪದಲ್ಲಿ ಒಂದು ವಿಗ್ರಹ ಮಾಡಿಕೊಂಡರು. ಅದರ ಮುಂದೆ ತಮ್ಮ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಲ್ಲಿ ಹರ್ಷಗೊಂಡರು.
[42] ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ಗ್ರಹಗಳನ್ನೇ ಆರಾಧಿಸುವಂತೆ ಅವರನ್ನು ಬಿಟ್ಟುಬಿಟ್ಟರು. ಇದರ ವಿಷಯವಾಗಿ ಪ್ರವಾದಿಗಳ ಗ್ರಂಥದಲ್ಲಿ: “ ‘ಇಸ್ರಾಯೇಲಿನ ಮನೆತನದವರೇ, ನಲವತ್ತು ವರ್ಷ ಅರಣ್ಯದಲ್ಲಿ ಯಜ್ಞಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಿದ್ದು ನನಗಲ್ಲ.
[43] ಮೊಲೋಖನ ಗುಡಾರವನ್ನೂ ರೊಂಫಾ ದೇವತೆಯ ನಕ್ಷತ್ರವನ್ನೂ ನೀವು ನಿರ್ಮಿಸಿಕೊಂಡ ವಿಗ್ರಹಗಳನ್ನೂ ಪೂಜಿಸಿದಿರಿ. ಆದ್ದರಿಂದ ಬಾಬಿಲೋನಿನ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ,’ ಎಂದು ಬರೆದಿರುವ ಪ್ರಕಾರ ಇದು ನೆರವೇರಿತು.
[44] “ಅರಣ್ಯದಲ್ಲಿ ದೇವದರ್ಶನ ಗುಡಾರ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ದೇವರು ಮೋಶೆಗೆ ಆಜ್ಞಾಪಿಸಿದಂತೆ, ಅವನಿಗೆ ತೋರಿಸಿದ ಮಾದರಿಯಂತೆ ಅದನ್ನು ರೂಪಿಸಲಾಗಿತ್ತು.
[45] ನಮ್ಮ ಪಿತೃಗಳು ದೇವದರ್ಶನ ಗುಡಾರವನ್ನು ಪಡೆದುಕೊಂಡು, ಯೆಹೋಶುವನ ನಾಯಕತ್ವದ ಕೆಳಗೆ ದೇವರು ಅವರೆದುರಿನಲ್ಲಿ ಹೊರದೊಬ್ಬಿದ ದೇಶಗಳ ನಾಡನ್ನು ವಶಪಡಿಸಿಕೊಂಡಾಗ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದರು. ದಾವೀದನ ಕಾಲದವರೆಗೂ ಆ ಗುಡಾರವು ಅಲ್ಲಿಯೇ ಇತ್ತು.
[46] ದಾವೀದನು ದೇವರ ದಯೆಯನ್ನು ಹೊಂದಿದವನಾಗಿ ಯಾಕೋಬನ ದೇವರಿಗೆ ದೇವಾಲಯ ಕಟ್ಟಲು ತನಗೆ ಅಪ್ಪಣೆಯಾಗಬೇಕೆಂದು ದೇವರಿಗೆ ಕೇಳಿಕೊಂಡನು.
[47] ಆದರೆ ದೇವರಿಗಾಗಿ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.
[48] “ಹೀಗಿದ್ದರೂ ಮಹೋನ್ನತ ದೇವರು ಮಾನವರು ನಿರ್ಮಿಸಿದ ಆಲಯಗಳಲ್ಲಿ ವಾಸಮಾಡುವುದಿಲ್ಲ. ಪ್ರವಾದಿಯು ಹೇಳಿದಂತೆ:
[49] “ ‘ಆಕಾಶವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದ ಪೀಠ. ನೀವು ನನಗಾಗಿ ಎಂಥಾ ಆಲಯವನ್ನು ಕಟ್ಟುವಿರಿ? ಎಲ್ಲಿ ನನ್ನ ವಿಶ್ರಾಂತಿಯ ಸ್ಥಳ?
[50] ಇವುಗಳನ್ನೆಲ್ಲಾ ನಿರ್ಮಿಸಿದ್ದು ನನ್ನ ಕೈಯಿಂದ ಅಲ್ಲವೇ?’ ಎಂದು ಕರ್ತದೇವರು ಪ್ರಶ್ನಿಸುತ್ತಾರೆ.
[51] “ಹಟಮಾರಿಗಳೇ! ಹೃದಯದಲ್ಲಿಯೂ ಕಿವಿಯಲ್ಲಿಯೂ ಸುನ್ನತಿ ಹೊಂದದವರೇ, ನೀವು ಸಹ ನಿಮ್ಮ ಪಿತೃಗಳಂತೆಯೇ ಯಾವಾಗಲೂ ಪವಿತ್ರಾತ್ಮ ದೇವರನ್ನು ಎದುರಿಸುತ್ತೀರಿ!
[52] ನಿಮ್ಮ ಪಿತೃಗಳು ಹಿಂಸೆಪಡಿಸದೆ ಇದ್ದ ಪ್ರವಾದಿ ಒಬ್ಬನಾದರೂ ಇರುವನೇ? ನೀತಿವಂತರಾಗಿರುವ ಒಬ್ಬರು ಬರಲಿದ್ದಾರೆಂದು ಮುಂತಿಳಿಸಿದವರನ್ನು ಸಹ ಅವರು ಕೊಂದುಹಾಕಿದರು. ಈಗ ನೀವೇ ಅವರನ್ನು ಹಿಡಿದುಕೊಟ್ಟು ಕೊಲೆಮಾಡಿದ್ದೀರಿ.
[53] ದೇವದೂತರ ಮುಖಾಂತರವಾಗಿ ಜಾರಿಗೆ ಬಂದ ಮೋಶೆಯ ನಿಯಮವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ,” ಎಂದು ಹೇಳಿದನು.
[54] ಈ ಮಾತುಗಳನ್ನು ಕೇಳಿದಾಗ ಅವರು ರೋಷವುಳ್ಳವರಾಗಿ, ಅವನ ಕಡೆಗೆ ನೋಡಿ, ತಮ್ಮ ಹಲ್ಲುಗಳನ್ನು ಕಡಿದರು.
[55] ಆದರೆ ಪವಿತ್ರಾತ್ಮಭರಿತನಾದ ಸ್ತೆಫನನು ಪರಲೋಕದ ಕಡೆಗೆ ನೋಡಿ, ದೇವರ ಮಹಿಮೆಯನ್ನೂ ದೇವರ ಬಲಗಡೆಯಲ್ಲಿ ಯೇಸು ನಿಂತುಕೊಂಡಿರುವುದನ್ನೂ ಕಂಡನು.
[56] “ನೋಡಿರಿ, ಪರಲೋಕ ತೆರೆದಿರುವುದನ್ನೂ ಮನುಷ್ಯಪುತ್ರ ಆಗಿರುವ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ಕಾಣುತ್ತಿದ್ದೇನೆ,” ಎಂದನು.
[57] ಈ ಮಾತಿಗೆ ಅವರು ತಮ್ಮ ಕಿವಿಗಳನ್ನು ಮುಚ್ಚಿಕೊಂಡು, ಆರ್ಭಟಿಸುತ್ತಾ, ಅವನ ಕಡೆಗೆ ಓಡಿಹೋಗಿ ಅವನನ್ನು ಹೊಡೆದರು.
[58] ಅವನನ್ನು ಪಟ್ಟಣದ ಹೊರಗೆ ಎಳೆದುಕೊಂಡು ಹೋಗಿ ಅವನ ಮೇಲೆ ಕಲ್ಲೆಸೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸಾಕ್ಷಿಗಳು ತಮ್ಮ ಬಟ್ಟೆಗಳನ್ನು ಸೌಲ ಎಂಬ ಹೆಸರಿನ ಒಬ್ಬ ಯುವಕನ ಪಾದಗಳ ಬಳಿಯಲ್ಲಿಟ್ಟಿದ್ದರು.
[59] ನ್ಯಾಯಸಭೆಯವರು ಕಲ್ಲೆಸೆಯುತ್ತಿದ್ದಾಗ, ಸ್ತೆಫನನು, “ಕರ್ತ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿರಿ,” ಎಂದು ಪ್ರಾರ್ಥಿಸಿದನು.
[60] ಅನಂತರ ಮೊಣಕಾಲೂರಿ, “ಕರ್ತ ಯೇಸುವೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ,” ಎಂದು ಗಟ್ಟಿಯಾಗಿ ಕೂಗಿದನು. ಇದನ್ನು ಹೇಳಿದ ಮೇಲೆ, ಪ್ರಾಣಬಿಟ್ಟನು.