Skip to content
Opens in a new window
Listen to this chapter • 6:57

[1] ಪೇತ್ರ ಮತ್ತು ಯೋಹಾನರು ಜನರೊಂದಿಗೆ ಮಾತನಾಡುತ್ತಿದ್ದಾಗಲೇ, ಯಾಜಕರೂ ದೇವಾಲಯದ ದಳಪತಿಯೂ ಸದ್ದುಕಾಯರೂ ಅವರ ಬಳಿಗೆ ಬಂದರು.

[2] ಯೇಸುವಿನಲ್ಲಿ ಸತ್ತವರಿಗೆ ಪುನರುತ್ಥಾನ ಉಂಟು ಎಂದು ಅಪೊಸ್ತಲರು ಜನರಿಗೆ ಬೋಧಿಸುತ್ತಿದ್ದರಿಂದ ಅವರು ಬಹಳ ಬೇಸರಗೊಂಡರು.

[3] ಅವರು ಪೇತ್ರ ಯೋಹಾನರನ್ನು ಬಂಧಿಸಿ, ಸಂಜೆಯಾದ್ದರಿಂದ ಮರುದಿನದವರೆಗೆ ಅವರನ್ನು ಸೆರೆಮನೆಯಲ್ಲಿ ಹಾಕಿದರು.

[4] ಆದರೆ ಸಂದೇಶವನ್ನು ಕೇಳಿದವರಲ್ಲಿ ಅನೇಕರು ನಂಬಿದರು. ಅವರ ಸಂಖ್ಯೆ ಸುಮಾರು ಐದು ಸಾವಿರಕ್ಕೇರಿತು.

[5] ಮರುದಿನ ಅಧಿಕಾರಿಗಳು, ಹಿರಿಯರು, ನಿಯಮ ಬೋಧಕರು ಯೆರೂಸಲೇಮಿನಲ್ಲಿ ಸಭೆ ಸೇರಿದರು.

[6] ಮಹಾಯಾಜಕ ಅನ್ನನೂ ಹಾಗೂ ಮಹಾಯಾಜಕನ ಕುಟುಂಬದವರು ಕಾಯಫ, ಯೋಹಾನ ಮತ್ತು ಅಲೆಕ್ಸಾಂದ್ರ ಅಲ್ಲಿದ್ದರು.

[7] ಅವರು ಪೇತ್ರ ಯೋಹಾನರನ್ನು ತಮ್ಮೆದುರಿನಲ್ಲಿ ನಿಲ್ಲಿಸಿ ಅವರಿಗೆ, “ಯಾವ ಶಕ್ತಿಯಿಂದ ಇಲ್ಲವೆ, ಯಾವ ಹೆಸರಿನಿಂದ ನೀವಿದನ್ನು ಮಾಡಿದಿರಿ?” ಎಂದು ಪ್ರಶ್ನಿಸಿದರು.

[8] ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ, “ಜನರ ಅಧಿಕಾರಿಗಳೇ, ಜನರ ಹಿರಿಯರೇ!

[9] ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದದ್ದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ.

[10] ನಿಮಗೂ ಎಲ್ಲಾ ಇಸ್ರಾಯೇಲ್ ಜನರಿಗೂ ಇದು ತಿಳಿದಿರಲಿ: ನೀವು ಯೇಸುವನ್ನು ಶಿಲುಬೆಗೆ ಹಾಕಿದಿರಿ. ಆದರೆ ದೇವರು ಸತ್ತವರೊಳಗಿಂದ ಎಬ್ಬಿಸಿದ ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಿಂದಲೇ ಈ ಮನುಷ್ಯನು ಪೂರ್ಣ ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುವನು.

[11] ಪವಿತ್ರ ವೇದದಲ್ಲಿ, “ ‘ಮನೆ ಕಟ್ಟುವವರಾದ ನೀವು ತಿರಸ್ಕರಿಸಿದ ಕಲ್ಲು ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಬರೆದಿರುವುದು ಈ ಯೇಸುವಿನ ಬಗ್ಗೆಯೇ.

[12] ಯೇಸು ಅಲ್ಲದೆ ಬೇರೆ ಯಾರಿಂದಲೂ ರಕ್ಷಣೆಯು ಇಲ್ಲ, ಏಕೆಂದರೆ ಆಕಾಶದ ಕೆಳಗೆ ಮನುಷ್ಯರೊಳಗೆ ಆ ಹೆಸರಲ್ಲದೇ ಬೇರೆ ಯಾವ ಹೆಸರಿನಿಂದಲೂ ರಕ್ಷಣೆಯಾಗುವುದಿಲ್ಲ,” ಎಂದನು.

[13] ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ತಿಳಿದು ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು.

[14] ಆದರೆ ಗುಣಹೊಂದಿದ ಮನುಷ್ಯನು ಅವರೊಂದಿಗೆ ನಿಂತುಕೊಂಡಿದ್ದನ್ನು ಅವರು ಕಂಡಾಗ ಇವರಿಗೆ ವಿರೋಧವಾಗಿ, ಏನನ್ನೂ ಹೇಳಲು ಸಾಧ್ಯವಾಗಲಿಲ್ಲ.

[15] ಆದ್ದರಿಂದ ಇವರನ್ನು ನ್ಯಾಯಸಭೆಯಿಂದ ಹೊರಗೆ ಹೋಗುವಂತೆ ಆಜ್ಞಾಪಿಸಿ ಒಬ್ಬರೊಂದಿಗೊಬ್ಬರು ಚರ್ಚೆಮಾಡಿ,

[16] “ಈ ಮನುಷ್ಯರನ್ನು ನಾವು ಏನು ಮಾಡೋಣ? ಯೆರೂಸಲೇಮಿನ ಪ್ರತಿಯೊಬ್ಬ ನಿವಾಸಿಯೂ ಇವರು ಗಮನಾರ್ಹವಾದ ಅದ್ಭುತವನ್ನು ಮಾಡಿದ್ದಾರೆಂಬುದನ್ನು ತಿಳಿದಿದ್ದಾರೆ. ಇದನ್ನು ನಾವೂ ಅಲ್ಲಗಳೆಯುವುದಕ್ಕಾಗುವುದಿಲ್ಲ.

[17] ಆದರೆ ಈ ವಿಷಯ ಜನರಲ್ಲಿ ಹೆಚ್ಚು ಪ್ರಸಾರವಾಗದಂತೆ ನಿಲ್ಲಿಸಲು, ಇವರು ಈ ನಾಮದಲ್ಲಿ ಇನ್ನೆಂದೂ ಯಾರೊಂದಿಗೂ ಮಾತನಾಡಬಾರದೆಂದು ಇವರಿಗೆ ಎಚ್ಚರಿಕೆ ಕೊಡೋಣ,” ಎಂದು ಯೋಚಿಸಿದರು.

[18] ಅವರು ಶಿಷ್ಯರನ್ನು ಸಭೆಯಲ್ಲಿ ಕರೆದು, “ಯೇಸುವಿನ ಹೆಸರಿನಲ್ಲಿ ಮಾತನಾಡಲೂಬಾರದು, ಬೋಧಿಸಲೂಬಾರದು,” ಎಂದು ಆಜ್ಞಾಪಿಸಿದರು.

[19] ಆದರೆ ಪೇತ್ರ ಮತ್ತು ಯೋಹಾನರು, “ದೇವರಿಗಿಂತ ಹೆಚ್ಚಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ಸರಿಯಾದದ್ದೋ? ಎಂಬುದರ ಬಗ್ಗೆ ನೀವೇ ತೀರ್ಮಾನ ಮಾಡಿಕೊಳ್ಳಿರಿ.

[20] ಏಕೆಂದರೆ ಕಂಡಿದ್ದನ್ನೂ ಕೇಳಿದ್ದನ್ನೂ ಕುರಿತು ನಾವು ಮಾತನಾಡದೆ ಇರಲಾರೆವು,” ಎಂದು ಉತ್ತರಕೊಟ್ಟರು.

[21] ಅನಂತರ ನ್ಯಾಯಸಭೆಯವರು ಅವರನ್ನು ಬೆದರಿಸಿ ಕಳುಹಿಸಿಬಿಟ್ಟರು. ಅಲ್ಲಿ ಸಂಭವಿಸಿದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಾ ಇದ್ದುದರಿಂದ, ಪೇತ್ರ ಯೋಹಾನರನ್ನು ಹೇಗೆ ದಂಡಿಸಬೇಕೆಂಬುದನ್ನು ಅವರು ನಿರ್ಣಯಿಸಲಾರದೆ ಹೋದರು.

[22] ಅದ್ಭುತ ರೀತಿಯಲ್ಲಿ ಸ್ವಸ್ಥತೆ ಹೊಂದಿದ ಆ ಮನುಷ್ಯನು ನಾಲ್ವತ್ತಕ್ಕಿಂತಲೂ ಹೆಚ್ಚು ವರ್ಷ ವಯಸ್ಸಿನವನಾಗಿದ್ದನು.

[23] ಬಿಡುಗಡೆ ಹೊಂದಿದ, ಪೇತ್ರ ಮತ್ತು ಯೋಹಾನರು ವಿಶ್ವಾಸಿಗಳ ಬಳಿಗೆ ಹೋಗಿ, ತಮಗೆ ಮುಖ್ಯಯಾಜಕರೂ ಹಿರಿಯರೂ ಹೇಳಿದ್ದೆಲ್ಲವನ್ನೂ ವರದಿಮಾಡಿದರು.

[24] ಇದನ್ನು ಕೇಳಿ ಅವರೆಲ್ಲರೂ ಒಟ್ಟಾಗಿ ಸ್ವರವೆತ್ತಿ ದೇವರಿಗೆ ಪ್ರಾರ್ಥನೆ ಮಾಡಿದರು: “ಕರ್ತದೇವರೇ, ನೀನು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿರುವಿರಿ.

[25] ಪವಿತ್ರಾತ್ಮ ದೇವರ ಮೂಲಕ ನಿಮ್ಮ ಸೇವಕನೂ ನಮ್ಮ ಪಿತೃವೂ ಆದ ದಾವೀದನ ಮುಖಾಂತರ ನೀವು ಮಾತನಾಡಿ: “ ‘ರಾಷ್ಟ್ರಗಳು ರೋಷಗೊಳ್ಳುವುದೇಕೆ? ಜನರು ವ್ಯರ್ಥವಾಗಿ ಕಲ್ಪಿಸಿಕೊಂಡದ್ದೇಕೆ?

[26] ಕರ್ತ ದೇವರಿಗೂ ಅವರ ಅಭಿಷಿಕ್ತನಿಗೂ ವಿರೋಧವಾಗಿ ಭೂಲೋಕದ ಅರಸರೂ ಅಧಿಪತಿಗಳೂ ಒಂದಾಗಿ ಕೂಡಿಕೊಳ್ಳುತ್ತಿರುವರು.’

[27] ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕ ಯೇಸುವಿನ ವಿರೋಧವಾಗಿ ದುರಾಲೋಚನೆ ಮಾಡಲು ಹೆರೋದನು ಮತ್ತು ಪೊಂತ್ಯ ಪಿಲಾತನು, ಯೆಹೂದ್ಯರಲ್ಲದವರೊಂದಿಗೂ ಇಸ್ರಾಯೇಲರೊಂದಿಗೂ ಈ ಪಟ್ಟಣದಲ್ಲೇ ಸೇರಿ ಬಂದಿದ್ದರು.

[28] ನಿಮ್ಮ ಶಕ್ತಿಯೂ ಚಿತ್ತವೂ ಮುಂಚಿತವಾಗಿಯೇ ಏನಾಗಬೇಕೆಂದು ನಿರ್ಣಯಿಸಿದ್ದನ್ನೇ ಅವರು ಮಾಡಿದರು.

[29] ಕರ್ತದೇವರೇ, ಈಗ ಅವರ ಬೆದರಿಕೆಯನ್ನು ನೋಡಿರಿ; ಬಹುಧೈರ್ಯದಿಂದ ನಿಮ್ಮ ವಾಕ್ಯವನ್ನು ಹೇಳಲು ನಿಮ್ಮ ಸೇವಕರನ್ನು ಬಲಪಡಿಸಿರಿ.

[30] ನಿಮ್ಮ ಪವಿತ್ರ ಸೇವಕ ಯೇಸುವಿನ ನಾಮದ ಮೂಲಕವಾಗಿ ಗುಣಪಡಿಸಲು, ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಮಾಡಲು ದೇವರೇ, ನಿಮ್ಮ ಹಸ್ತವನ್ನು ಚಾಚಿರಿ.”

[31] ಹೀಗೆ ಪ್ರಾರ್ಥನೆ ಮಾಡಿದ ತರುವಾಯ ಅವರು ನೆರೆದಿದ್ದ ಸ್ಥಳವು ಕಂಪನಗೊಂಡಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ಧೈರ್ಯದಿಂದ ದೇವರ ವಾಕ್ಯವನ್ನು ಸಾರತೊಡಗಿದರು.

[32] ವಿಶ್ವಾಸಿಗಳೆಲ್ಲರ ಹೃದಯ ಹಾಗೂ ಮನಸ್ಸುಗಳು ಒಂದಾಗಿದ್ದವು. ಯಾವನೂ ತನ್ನ ಆಸ್ತಿಯನ್ನು ತನ್ನದೇ ಎಂದು ಹಕ್ಕು ಸಾಧಿಸಲಿಲ್ಲ. ಆದರೆ ಅವರೆಲ್ಲರೂ ತಮಗಿದ್ದ ಎಲ್ಲವನ್ನು ಹಂಚಿಕೊಂಡರು.

[33] ಮಹಾಶಕ್ತಿಯಿಂದ ಅಪೊಸ್ತಲರು ಕರ್ತ ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಕೊಟ್ಟರು. ಅವರೆಲ್ಲರ ಮೇಲೆ ದೇವರ ಮಹಾಕೃಪೆಯಿತ್ತು.

[34] ಅವರಲ್ಲಿ ಕೊರತೆಯಿದ್ದವರು ಇರಲಿಲ್ಲ. ಏಕೆಂದರೆ ಹೊಲಗದ್ದೆಯಿದ್ದವರೂ ಮನೆಗಳಿದ್ದವರೆಲ್ಲರೂ ಅವುಗಳನ್ನು ಮಾರಿ ಹಣವನ್ನು ತಂದು,

[35] ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು. ಅಪೊಸ್ತಲರು ಅದನ್ನು ಅಗತ್ಯವಿದ್ದವರಿಗೆ ತಕ್ಕಂತೆ ಹಂಚುತ್ತಿದ್ದರು.

[36] ಸೈಪ್ರಸ್ ಎಂಬಲ್ಲಿ ಹುಟ್ಟಿದ ಒಬ್ಬ ಲೇವಿಯನು ಇದ್ದನು, ಅವನ ಹೆಸರು ಯೋಸೇಫ, ಅಪೊಸ್ತಲರು ಅವನನ್ನು “ಬಾರ್ನಬ” ಎಂದು ಕರೆದರು. ಬಾರ್ನಬ ಅಂದರೆ “ಆದರಣೆಯ ಪುತ್ರನು” ಎಂದು ಅರ್ಥ.

[37] ಅವನು ತನ್ನ ಸ್ವಂತ ಹೊಲವನ್ನು ಮಾರಿ, ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.

ಅಪೊಸ್ತಲರ ಕೃತ್ಯಗಳು — Chapters