[1] ಫೆಸ್ತನು ಅಧಿಕಾರವಹಿಸಿಕೊಂಡು ಮೂರು ದಿನಗಳ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.
[2] ಅಲ್ಲಿ ಮುಖ್ಯಯಾಜಕರು ಹಾಗೂ ಯೆಹೂದ್ಯ ನಾಯಕರು ಅವರ ಮುಂದೆ ಬಂದು ಪೌಲನಿಗೆ ವಿರೋಧವಾಗಿ ಆರೋಪ ಮಾಡಿದರು.
[3] ತಮಗೆ ದಯೆತೋರಿ ಪೌಲನನ್ನು ಕೂಡಲೇ ಯೆರೂಸಲೇಮಿಗೆ ವರ್ಗಾಯಿಸಬೇಕೆಂದು ಫೆಸ್ತನನ್ನು ಬೇಡಿಕೊಂಡರು. ಏಕೆಂದರೆ ಪೌಲನು ಹಿಂದಿರುಗುವಾಗ ಮಾರ್ಗದಲ್ಲೇ ಅವನನ್ನು ಕೊಲ್ಲಬೇಕೆಂದು ಹೊಂಚುಹಾಕಿಕೊಂಡಿದ್ದರು.
[4] ಆದ್ದರಿಂದ ಫೆಸ್ತನು ಉತ್ತರವಾಗಿ, “ಪೌಲನು ಕೈಸರೈಯದಲ್ಲಿ ಕಾವಲೊಳಗಿದ್ದಾನೆ. ನಾನೇ ಅಲ್ಲಿಗೆ ಬೇಗ ಹೊಗಬೇಕೆಂದಿದ್ದೇನೆ.
[5] ನಿಮ್ಮಲ್ಲಿಯ ಕೆಲವು ನಾಯಕರು ನನ್ನೊಂದಿಗೆ ಅಲ್ಲಿಗೆ ಬರಲಿ. ಅವನೇನಾದರೂ ತಪ್ಪು ಮಾಡಿದ್ದರೆ ಅವನ ಮೇಲಿನ ದೂರುಗಳನ್ನು ಆಪಾದಿಸಲಿ,” ಎಂದನು.
[6] ಎಂಟು ಹತ್ತು ದಿನಗಳನ್ನು ಅವರೊಂದಿಗೆ ಕಳೆದ ತರುವಾಯ ಅವನು ಕೈಸರೈಯಕ್ಕೆ ಹೋದನು. ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ತನ್ನ ಮುಂದೆ ಪೌಲನನ್ನು ಕರೆತರಬೇಕೆಂದು ಆಜ್ಞಾಪಿಸಿದನು.
[7] ಪೌಲನು ಅಲ್ಲಿಗೆ ಬಂದಾಗ, ಯೆರೂಸಲೇಮಿನಿಂದ ಬಂದ ಯೆಹೂದ್ಯರು ಅವನ ಸುತ್ತಲೂ ಎದ್ದು ನಿಂತು, ಅನೇಕ ತೀವ್ರ ಆಪಾದನೆಗಳನ್ನು ಅವನ ವಿರುದ್ಧ ಹೊರಿಸಿದರು. ಆದರೆ ಅವುಗಳನ್ನು ರುಜುವಾತುಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ.
[8] ಆಗ ಪೌಲನು ತನ್ನ ಪ್ರತಿವಾದವನ್ನು ಮುಂದಿಟ್ಟು: “ನಾನು ಯೆಹೂದ್ಯರ ನಿಯಮಕ್ಕೆ ವಿರೋಧವಾಗಲಿ, ದೇವಾಲಯಕ್ಕೆ ವಿರೋಧವಾಗಲಿ, ಕೈಸರನ ವಿರೋಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ,” ಎಂದನು.
[9] ಫೆಸ್ತನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಲು ಬಯಸಿ ಪೌಲನಿಗೆ, “ನೀನು ಯೆರೂಸಲೇಮಿಗೆ ಹೋಗಿ, ಅಲ್ಲಿ ನನ್ನೆದುರಿನಲ್ಲಿ ಈ ದೂರುಗಳ ನ್ಯಾಯವಿಚಾರಣೆಗಾಗಿ ಒಪ್ಪಿಕೊಳ್ಳುವಿಯೋ?” ಎಂದು ಕೇಳಿದನು.
[10] ಅದಕ್ಕೆ ಪೌಲನು, “ಈಗ ನಾನು ಕೈಸರನ ನ್ಯಾಯಾಲಯದ ಎದುರಿನಲ್ಲಿ ನಿಂತುಕೊಂಡಿದ್ದೇನೆ. ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ನೀವೇ ಚೆನ್ನಾಗಿ ತಿಳಿದುಕೊಂಡಿರುವಂತೆ ನಾನು ಯೆಹೂದ್ಯರಿಗೆ ವಿರೋಧವಾಗಿ ಯಾವ ತಪ್ಪನ್ನೂ ಮಾಡಿಲ್ಲ.
[11] ಆದರೂ ಮರಣಶಿಕ್ಷೆಗೆ ಯೋಗ್ಯವಾದದ್ದೇನಾದರೂ ಮಾಡಿದ ಅಪರಾಧಿ ನಾನಾಗಿದ್ದರೆ, ಸಾಯಲಿಕ್ಕೂ ನಾನು ಹಿಂಜರಿಯುವುದಿಲ್ಲ. ಆದರೆ ಯೆಹೂದ್ಯರು ನನ್ನ ವಿರೋಧವಾಗಿ ತಂದಿರುವ ಆಪಾದನೆಗಳು ಸುಳ್ಳಾದವುಗಳಾದದ್ದರಿಂದ, ನನ್ನನ್ನು ಅವರಿಗೆ ಒಪ್ಪಿಸಲು ಯಾರಿಗೂ ಅಧಿಕಾರವಿಲ್ಲ. ನಾನು ನೇರವಾಗಿ ಕೈಸರನಿಗೇ ಮನವಿ ಮಾಡಿಕೊಳ್ಳುತ್ತೇನೆ,” ಎಂದು ಉತ್ತರಕೊಟ್ಟನು.
[12] ಆಗ ಫೆಸ್ತನು ತನ್ನ ನ್ಯಾಯಸಭೆಯೊಂದಿಗೆ ಸಮಾಲೋಚನೆ ಮಾಡಿ, “ನೀನು ಕೈಸರನಿಗೆ ಮನವಿ ಮಾಡಿಕೊಂಡಿರುವೆ, ಕೈಸರನ ಬಳಿಗೇ ಹೋಗು!” ಎಂದು ಉತ್ತರಿಸಿದನು.
[13] ಕೆಲವು ದಿನಗಳ ನಂತರ ಫೆಸ್ತನನ್ನು ಅಭಿನಂದಿಸಲು ರಾಜ ಅಗ್ರಿಪ್ಪನು ಬೆರ್ನಿಕೆಯಳೊಂದಿಗೆ ಕೈಸರೈಯಕ್ಕೆ ಬಂದನು.
[14] ಅವರು ಅಲ್ಲಿ ಅನೇಕ ದಿನಗಳನ್ನು ಕಳೆಯುತ್ತಿದ್ದಾಗ, ಫೆಸ್ತನು ಪೌಲನ ವಿಷಯವನ್ನು ರಾಜನೊಂದಿಗೆ ಚರ್ಚಿಸಿ, “ಕೈದಿಯಾಗಿ ಫೇಲಿಕ್ಸನು ಬಿಟ್ಟುಹೋದ ಒಬ್ಬ ಮನುಷ್ಯನಿದ್ದಾನೆ.
[15] ನಾನು ಯೆರೂಸಲೇಮಿಗೆ ಹೋದಾಗ ಮುಖ್ಯಯಾಜಕರೂ ಹಾಗೂ ಯೆಹೂದ್ಯರ ಹಿರಿಯರೂ ಅವನ ಮೇಲೆ ಆಪಾದನೆಗಳನ್ನು ತಂದು ಅವನಿಗೆ ವಿರೋಧವಾಗಿ ದಂಡನೆ ವಿಧಿಸಬೇಕೆಂದು ಕೇಳಿಕೊಂಡರು.
[16] “ಆಪಾದಿತನು ಆಪಾದನೆ ಹೊರಿಸುವವರ ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಹೊರಿಸಲಾದ ಆಪಾದನೆಗಳಿಗೆ ಪ್ರತಿವಾದ ಮಾಡಿಕೊಳ್ಳುವ ಮೊದಲು ಯಾವ ಮನುಷ್ಯನನ್ನೂ ಒಪ್ಪಿಸಿಕೊಡುವುದು ರೋಮ್ ಪದ್ಧತಿಯಲ್ಲ ಎಂದು ನಾನು ಅವರಿಗೆ ಹೇಳಿದೆನು.
[17] ಅವರು ನನ್ನೊಂದಿಗೆ ಇಲ್ಲಿಗೆ ಬಂದದ್ದರಿಂದ ನ್ಯಾಯವಿಚಾರಣೆಯನ್ನು ತಡಮಾಡದೆ ಪ್ರಾರಂಭಿಸಿದೆ. ಮರುದಿನ ನ್ಯಾಯವಿಚಾರಣೆ ನಡೆಸಿ ಪೌಲನೆಂಬ ಆ ಮನುಷ್ಯನನ್ನು ತರಬೇಕೆಂದು ಆಜ್ಞಾಪಿಸಿದೆ.
[18] ಅವನ ಮೇಲೆ ಆಪಾದನೆ ಹೊರಿಸುವವರು ಮಾತನಾಡಲು ಎದ್ದು ನಿಂತಾಗ, ನಾನು ಭಾವಿಸಿದ ಯಾವುದೇ ಅಪರಾಧವನ್ನು ಅವರು ಅವನ ಮೇಲೆ ಹೊರಿಸಲಿಲ್ಲ.
[19] ಆದರೆ ಅವರಿಗೆ ತಮ್ಮ ಸಂಪ್ರದಾಯದ ಬಗ್ಗೆಯೂ ಸತ್ತು ಹೋಗಿದ್ದ ಯೇಸು ಎಂಬ ಮನುಷ್ಯನು ಜೀವಿಸುತ್ತಿದ್ದಾನೆಂದೂ ಪೌಲ ಹೇಳುವಂಥದ್ದರ ಬಗ್ಗೆ ವಾದವಿವಾದವಿತ್ತು.
[20] ನಾನು ಅಂಥಾ ವಿಚಾರಗಳ ಬಗ್ಗೆ ಅವನು ಯೆರೂಸಲೇಮಿಗೆ ಹೋಗಿ ಈ ಆಪಾದನೆಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಮನಸ್ಸಿದೆಯೋ ಎಂದು ಅವನನ್ನು ಕೇಳಿದೆನು.
[21] ಆದರೆ ಪೌಲನು ತನ್ನ ಬೇಡಿಕೆಯನ್ನು ನೇರವಾಗಿ ಕೈಸರನ ಬಳಿಗೆ ಕಳುಹಿಸುವವರೆಗೆ ಅವನನ್ನು ಕಾವಲಲ್ಲಿಡಬೇಕೆಂದು ಆಜ್ಞಾಪಿಸಿದ್ದೇನೆ,” ಎಂದು ಫೆಸ್ತನು ಹೇಳಿದನು.
[22] ಆಗ ಅಗ್ರಿಪ್ಪ ರಾಜನು, “ಈ ಮನುಷ್ಯನು ಹೇಳುವುದನ್ನು ನಾನೂ ಕೇಳಬೇಕೆಂದಿದ್ದೇನೆ,” ಎಂದು ಫೆಸ್ತನಿಗೆ ಹೇಳಿದನು. “ನಾಳೆಯೇ ಪೌಲನ ಬೇಡಿಕೆಯನ್ನು ಕೇಳುವಿರಿ,” ಎಂದು ಫೆಸ್ತನು ಉತ್ತರಕೊಟ್ಟನು.
[23] ಮರುದಿನ ಅಗ್ರಿಪ್ಪನು ಹಾಗೂ ಬೆರ್ನಿಕೆಯು ಮಹಾ ವೈಭವದಿಂದ ಸೈನ್ಯಾಧಿಕಾರಿಗಳೊಂದಿಗೂ ಪಟ್ಟಣದ ಗಣ್ಯವ್ಯಕ್ತಿಗಳೊಂದಿಗೂ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯಂತೆ ಪೌಲನನ್ನು ಕರೆದುಕೊಂಡು ಬಂದರು.
[24] ಆಗ ಫೆಸ್ತನು, “ಅಗ್ರಿಪ್ಪ ರಾಜನೇ, ನಮ್ಮ ಸಂಗಡ ಇಲ್ಲಿ ಸೇರಿ ಬಂದಿರುವವರೇ, ನೀವು ಕಾಣುತ್ತಿರುವ ಈ ಮನುಷ್ಯನು ಜೀವದಿಂದ ಉಳಿಯಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯೆಹೂದ್ಯರೆಲ್ಲರೂ ನನ್ನನ್ನು ಬೇಡಿಕೊಂಡಿದ್ದಾರೆ.
[25] ಇವನು ಮರಣದಂಡನೆಗೆ ಯೋಗ್ಯವಾದ ಯಾವುದೇ ಅಪರಾಧ ಮಾಡಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದರೆ ಇವನು ನೇರವಾಗಿ ಚಕ್ರವರ್ತಿಗೇ ತನ್ನ ಬೇಡಿಕೆ ಸಲ್ಲಿಸಿದ್ದರಿಂದ ಇವನನ್ನು ರೋಮ್ ನಗರಕ್ಕೆ ಕಳುಹಿಸಲು ತೀರ್ಮಾನಿಸಿದ್ದೇನೆ.
[26] ಆದರೂ ಇವನ ಬಗ್ಗೆ ಖಚಿತವಾಗಿ ತಮಗೆ ಬರೆಯಲು ನನಗೇನು ಇಲ್ಲದಿರುವುದರಿಂದ, ಅಗ್ರಿಪ್ಪ ರಾಜನೇ, ಇವನನ್ನು ತಮ್ಮ ಮುಂದೆ ತಂದಿದ್ದೇನೆ. ಹೀಗೆ ಈ ವಿಚಾರಣೆಯ ಮೂಲಕ ಬರೆಯಲು ನನಗೇನಾದರೂ ಸಿಕ್ಕಬಹುದು.
[27] ಏಕೆಂದರೆ ನಿಶ್ಚಿತವಾದ ಅಪರಾಧಗಳನ್ನು ಸೂಚಿಸದೆ ಒಬ್ಬ ಸೆರೆಯಾಳನ್ನು ಕಳುಹಿಸುವುದು ಸರಿಯಲ್ಲ ಎಂದು ನನಗನಿಸುತ್ತದೆ,” ಎಂದನು.