Skip to content
Opens in a new window
Listen to this chapter • 6:37

[1] ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನಾಗುವುದಕ್ಕೆ ಕರೆಹೊಂದಿದವನೂ ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಗೊಂಡವನೂ ಆಗಿರುವ ಪೌಲನು ಬರೆಯುವ ಪತ್ರ.

[2] ದೇವರು ಮುಂಚಿತವಾಗಿ ಪವಿತ್ರ ವೇದಗಳಲ್ಲಿ ತಮ್ಮ ಪ್ರವಾದಿಗಳ ಮೂಲಕ ವಾಗ್ದಾನಮಾಡಿದ,

[3] ಈ ಸುವಾರ್ತೆಯು ದೇವಪುತ್ರನ ವಿಷಯವಾದದ್ದು. ಯೇಸು ಮನುಷ್ಯತ್ವದ ಪ್ರಕಾರ ದಾವೀದನ ಸಂತಾನದವರೂ

[4] ಸತ್ತವರೊಳಗಿಂದ ಪುನರುತ್ಥಾನಗೊಂಡು ಪರಿಶುದ್ಧತೆಯ ಆತ್ಮದ ಪ್ರಕಾರ ದೇವಪುತ್ರರೆಂದು ಪ್ರಬಲವಾಗಿ ನಿರ್ಣಯಿಸಲಾದವರೂ ಆಗಿದ್ದಾರೆ. ಇವರೇ ನಮ್ಮ ಕರ್ತ ಯೇಸು ಕ್ರಿಸ್ತ.

[5] ಯೇಸುವಿನ ನಾಮದ ಮಹಿಮೆಗಾಗಿ ಯೆಹೂದ್ಯರಲ್ಲದವರಲ್ಲಿಯೂ ನಂಬಿಕೆಯ ವಿಧೇಯತೆ ಉಂಟಾಗುವುದಕ್ಕಾಗಿ ನಾವು ಯೇಸುವಿನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲರಾಗಿರುವುದನ್ನೂ ಹೊಂದಿದೆವು.

[6] ಯೇಸು ಕ್ರಿಸ್ತನವರಾಗಲು ಕರೆಯಲಾದವರಲ್ಲಿ ಯೆಹೂದ್ಯರಲ್ಲದವರಲ್ಲಿ ನೀವೂ ಸಹ ಸೇರಿದ್ದೀರಿ.

[7] ರೋಮ್ ನಗರದಲ್ಲಿ ದೇವರಿಗೆ ಪ್ರಿಯರೂ ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲಾದವರೂ ಆಗಿರುವವರೆಲ್ಲರಿಗೂ: ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ಕೃಪೆಯೂ ಶಾಂತಿಯೂ ಆಗಲಿ.

[8] ಮೊದಲನೆಯದಾಗಿ, ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಕ್ರಿಸ್ತ ಯೇಸುವಿನ ಮೂಲಕ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

[9] ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ.

[10] ನಾನು ಪ್ರಾರ್ಥನೆ ಮಾಡುವಾಗಲೆಲ್ಲಾ ತಪ್ಪದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತಾ ಇನ್ನು ಮೇಲಾದರೂ ನಿಮ್ಮ ಬಳಿಗೆ ಬರುವುದಕ್ಕೆ ದೇವರ ಚಿತ್ತದಿಂದ ನನಗೆ ಯಾವ ರೀತಿಯಲ್ಲಾದರೂ ಅನುಕೂಲವಾಗಬೇಕೆಂದು ಬೇಡಿಕೊಳ್ಳುತ್ತೇನೆ.

[11] ನಿಮ್ಮನ್ನು ದೃಢಪಡಿಸುವುದಕ್ಕಾಗಿ ನಾನು ನಿಮಗೆ ಕೆಲವು ಆತ್ಮಿಕ ವರಗಳನ್ನು ಕೊಡಲು ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.

[12] ಹೀಗೆ ನಾವು ಒಬ್ಬರಿಂದೊಬ್ಬರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಗೊಳ್ಳಬೇಕು.

[13] ಪ್ರಿಯರೇ, ನನ್ನ ಸೇವೆಯು ಯೆಹೂದ್ಯರಲ್ಲದವರಲ್ಲಿ ಫಲಉಂಟಾದಂತೆ ನಿಮ್ಮಲ್ಲಿಯೂ ಫಲಉಂಟಾಗಬೇಕೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಉದ್ದೇಶಿಸಿದೆನು. ಆದರೆ ಅದಕ್ಕೆ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ.

[14] ಗ್ರೀಕರಿಗೂ ಗ್ರೀಕರಲ್ಲದವರಿಗೂ ಜ್ಞಾನಿಗಳಿಗೂ ಮೂಢರಿಗೂ ನಾನು ಸಾಲಗಾರನಾಗಿದ್ದೇನೆ.

[15] ಹೀಗಿರುವುದರಿಂದ ರೋಮ್ ನಗರದಲ್ಲಿರುವ ನಿಮಗೂ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನು ಉತ್ಸುಕನಾಗಿದ್ದೇನೆ.

[16] ನಾನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ. ಏಕೆಂದರೆ ಅದು ಮೊದಲು ಯೆಹೂದ್ಯರಿಗೆ ಆಮೇಲೆ ಯೆಹೂದ್ಯರಲ್ಲದವರಿಗೆ, ಹೀಗೆ ನಂಬುವವರೆಲ್ಲರಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ.

[17] ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ಪ್ರಕಟವಾಗಿದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನು,” ಎಂದು ಬರೆದಿರುವ ಪ್ರಕಾರ, ಆ ನೀತಿಯು ಪ್ರಾರಂಭದಿಂದ ಕೊನೆಯವರೆಗೆ ನಂಬಿಕೆಯಿಂದಲೇ ಆದದ್ದು.

[18] ದುಷ್ಟತನದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆ ಹಾಗೂ ದುಷ್ಟತನದ ಮೇಲೆ ದೇವರ ರೌದ್ರವು ಪರಲೋಕದಿಂದ ಪ್ರಕಟವಾಗುತ್ತಿದೆ.

[19] ದೇವರ ವಿಷಯವಾಗಿ ತಿಳಿಯಬಹುದಾದದ್ದನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. ಏಕೆಂದರೆ ಅದನ್ನು ಅವರಿಗೆ ದೇವರೇ ಪ್ರಕಟಿಸಿದರು.

[20] ಹೇಗೆಂದರೆ ಕಣ್ಣಿಗೆ ಕಾಣದ ಗುಣಲಕ್ಷಣಗಳಾಗಿರುವ ದೇವರ ಗುಣವೂ ನಿತ್ಯಶಕ್ತಿಯೂ ದೈವಸ್ವಭಾವವೂ ಜಗದ ಸೃಷ್ಟಿ ದಿನದಿಂದ ಅವರು ಸೃಷ್ಟಿಸಿದವುಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿವೆ. ಹೀಗಿರುವುದರಿಂದ ಜನರಿಗೆ ತಪ್ಪಿಸಿಕೊಳ್ಳಲು ನೆಪ ಇಲ್ಲವಾಗಿದೆ.

[21] ಏಕೆಂದರೆ ದೇವರನ್ನು ಅವರು ತಿಳಿದಿದ್ದರೂ ದೇವರೆಂದು ಮಹಿಮೆ ಪಡಿಸಲಿಲ್ಲ, ದೇವರ ಉಪಕಾರ ಸ್ಮರಿಸಲಿಲ್ಲ. ಆದರೆ ಅವರು ತಮ್ಮ ವಿಚಾರಗಳಲ್ಲಿ ವ್ಯರ್ಥರಾದರು. ವಿವೇಕವಿಲ್ಲದ ಅವರ ಹೃದಯವು ಕತ್ತಲಾಯಿತು.

[22] ತಾವು ಜ್ಞಾನಿಗಳೆಂದು ಹೇಳಿಕೊಂಡರೂ ಮೂಢರಾಗಿದ್ದಾರೆ.

[23] ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು.

[24] ಆದಕಾರಣ ಅವರು ತಮ್ಮ ಹೃದಯದ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಲಿನ ಮಾಡಿಕೊಳ್ಳಲಿ ಎಂದು ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿಬಿಟ್ಟರು.

[25] ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್.

[26] ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗೆ ಒಪ್ಪಿಸಿಬಿಟ್ಟರು. ಹೇಗೆಂದರೆ ಅವರ ಸ್ತ್ರೀಯರು ಸಹ ಸ್ವಾಭಾವಿಕವಾದ ಭೋಗವನ್ನು ಬಿಟ್ಟು, ಅಸ್ವಾಭಾವಿಕವಾದದ್ದನ್ನು ಅನುಸರಿಸಿದರು.

[27] ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರೊಂದಿಗೊಬ್ಬರು ಕಾಮಾತುರದಿಂದ ತಾಪಗೊಂಡರು. ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣ ಕೃತ್ಯಗಳನ್ನು ನಡೆಸಿ ತಮ್ಮ ತಪ್ಪಿಗೆ ತಕ್ಕ ದಂಡನೆಯನ್ನು ಹೊಂದುವವರಾದರು.

[28] ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.

[29] ಅವರು ಸಕಲ ವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ, ದುಷ್ಟತ್ವ, ಹೊಟ್ಟೆಕಿಚ್ಚು, ಕೊಲೆ, ಜಗಳ, ಕಪಟ, ಹಗೆತನಗಳಿಂದಲೂ ತುಂಬಿದವರಾದರು.

[30] ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿ ಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ

[31] ವಿವೇಚನೆಯಿಲ್ಲದವರೂ ನಂಬಿಕೆಯಿಲ್ಲದವರೂ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ ಆದರು.

[32] ಇಂಥವುಗಳನ್ನು ನಡೆಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೈವವಿಧಿಯನ್ನು ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಹಾಗೆ ಮಾಡುವವರನ್ನು ಮೆಚ್ಚುತ್ತಾರೆ.

ರೋಮಾಪುರದವರಿಗೆ — Chapters