Skip to content
Opens in a new window
Listen to this chapter • 10:24

[1] ಅಂತಿಯೋಕ್ಯದ ಸಭೆಯಲ್ಲಿ, ಪ್ರವಾದಿಗಳೂ ಬೋಧಕರೂ ಇದ್ದರು. ಅವರು ಯಾರೆಂದರೆ ಬಾರ್ನಬನು, ನೀಗರ ಎಂದು ಕರೆಯಲಾಗುತ್ತಿದ್ದ ಸಿಮೆಯೋನ, ಕುರೇನೆದ ಲೂಕ್ಯ, ಚತುರಾಧಿಪತಿ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಮುಂತಾದವರೇ.

[2] ಇವರೆಲ್ಲರೂ ಕರ್ತದೇವರನ್ನು ಆರಾಧಿಸಿ, ಉಪವಾಸಮಾಡುತ್ತಿದ್ದರು. ಆಗ ಪವಿತ್ರಾತ್ಮ ದೇವರು, “ಬಾರ್ನಬನನ್ನೂ ಸೌಲನನ್ನೂ ನಾನು ಕರೆದಿರುವ ಕಾರ್ಯಕ್ಕಾಗಿ ಅವರನ್ನು ನನಗಾಗಿ ಪ್ರತ್ಯೇಕಿಸಿರಿ,” ಎಂದರು.

[3] ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ, ಅವರಿಬ್ಬರ ಮೇಲೆ ಕೈಗಳನ್ನಿಟ್ಟು ಕಳುಹಿಸಿಬಿಟ್ಟರು.

[4] ಪವಿತ್ರಾತ್ಮ ದೇವರಿಂದ ಕಳುಹಿಸಲಾದ ಅವರಿಬ್ಬರೂ ಸೆಲ್ಯೂಕ್ಯಕ್ಕೆ ಹೋಗಿ ಅಲ್ಲಿಂದ ನೌಕೆಯಲ್ಲಿ ಪ್ರಯಾಣಮಾಡಿ ಸೈಪ್ರಸಿಗೆ ತಲುಪಿದರು.

[5] ಸಲಮೀಸಿಗೆ ಬಂದು, ಅಲ್ಲಿಯ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೋಹಾನನು ಸಹ ಅವರೊಂದಿಗಿದ್ದು ಅವರಿಗೆ ಸಹಾಯಕನಾಗಿದ್ದನು.

[6] ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡಿ ಪಾಫೋಸ್ ಎಂಬಲ್ಲಿಗೆ ಬಂದರು. ಅಲ್ಲಿ ಮಂತ್ರವಾದಿಯೂ ಸುಳ್ಳುಪ್ರವಾದಿಯೂ ಆಗಿದ್ದ “ಬಾರ್ ಯೇಸು” ಎಂಬ ಹೆಸರಿನ ಒಬ್ಬ ಯೆಹೂದ್ಯನನ್ನು ಕಂಡರು.

[7] ಅವನು ರಾಜ್ಯಪಾಲ ಸೆರ್ಗ್ಯಪೌಲನ ಜೊತೆಗಿದ್ದನು. ಈ ರಾಜ್ಯಪಾಲನು ಬುದ್ಧಿವಂತನಾಗಿದ್ದನು. ಇವನು ದೇವರ ವಾಕ್ಯವನ್ನು ಕೇಳುವ ಉದ್ದೇಶದಿಂದ ಬಾರ್ನಬ ಮತ್ತು ಸೌಲರನ್ನು ಕರೆಕಳುಹಿಸಿದನು.

[8] ಆದರೆ ಮಂತ್ರವಾದಿಯಾದ ಎಲುಮನು ಅವರನ್ನು ವಿರೋಧಿಸಿ ರಾಜ್ಯಪಾಲನು ವಿಶ್ವಾಸಿಯಾಗದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. ಎಲುಮ ಎಂಬ ಹೆಸರಿಗೆ ಮಂತ್ರವಾದಿ ಎಂಬುದೇ ಅರ್ಥ.

[9] ಆಗ ಪೌಲನೆಂದೂ ಕರೆಯಲಾಗುತ್ತಿದ್ದ ಸೌಲನು, ಪವಿತ್ರಾತ್ಮಭರಿತನಾಗಿ, ಎಲುಮನನ್ನು ನೇರವಾಗಿ ದೃಷ್ಟಿಸಿ,

[10] “ಎಲೈ ಸೈತಾನನ ಮಗನೇ, ನೀತಿಗೆಲ್ಲಾ ವೈರಿಯೇ, ನಿನ್ನಲ್ಲಿ ಎಲ್ಲಾ ತರದ ಮೋಸವೂ ಕುತಂತ್ರವೂ ತುಂಬಿವೆ. ಕರ್ತದೇವರ ಸನ್ಮಾರ್ಗಗಳಿಗೆ ಅಡ್ಡಿಯಾಗುವುದನ್ನು ನೀನೆಂದೂ ನಿಲ್ಲಿಸುವುದಿಲ್ಲವೋ?

[11] ಇಗೋ ಕರ್ತದೇವರ ಹಸ್ತ ನಿನಗೆ ವಿರೋಧವಾಗಿದೆ. ಈಗ ನೀನು ಕುರುಡನಾಗಿ, ಸ್ವಲ್ಪ ಕಾಲ ಸೂರ್ಯನ ಬೆಳಕನ್ನು ಕಾಣದೇ ಹೋಗುವೆ,” ಎಂದನು. ತಕ್ಷಣವೇ ಅವನ ಮೇಲೆ ಮಂಜು ಮುಸುಕಿ ಕತ್ತಲೆ ಆವರಿಸಿತು. ಅವನು ತಡವರಿಸುತ್ತಾ ತನ್ನನ್ನು ಯಾರಾದರೂ ಕೈಹಿಡಿದು ನಡೆಸುವರೋ ಎಂದು ಹುಡುಕಾಡಿದನು.

[12] ಸಂಭವಿಸಿದ್ದೆಲ್ಲವನ್ನೂ ರಾಜ್ಯಪಾಲನು ಕಂಡು, ಕರ್ತ ಯೇಸುವಿನ ವಿಷಯವಾಗಿದ್ದ ಬೋಧನೆಯ ಬಗ್ಗೆ ಆಶ್ಚರ್ಯಪಟ್ಟು ವಿಶ್ವಾಸವನ್ನಿಟ್ಟನು.

[13] ಪಾಫೋಸಿನಿಂದ, ಪೌಲ ಮತ್ತು ಅವನ ಸಂಗಡಿಗರು ಪಂಫುಲ್ಯಕ್ಕೆ ಸೇರಿದ ಪೆರ್ಗೆ ಎಂಬಲ್ಲಿಗೆ ನೌಕೆಯಲ್ಲಿ ಪ್ರಯಾಣಮಾಡಿದರು, ಅಲ್ಲಿ ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿ ಹೋದನು.

[14] ಉಳಿದವರು ಪೆರ್ಗೆದಿಂದ ಪಿಸಿದ್ಯದ ಅಂತಿಯೋಕ್ಯಕ್ಕೆ ಹೋದರು. ಸಬ್ಬತ್ ದಿನ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.

[15] ನಿಯಮ ಮತ್ತು ಪ್ರವಾದಿಗಳ ಗ್ರಂಥವು ಪಾರಾಯಣವಾದ ತರುವಾಯ, ಸಭಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಪ್ರೋತ್ಸಾಹ ಕೊಡುವ ಸಂದೇಶ ನಿಮ್ಮಲ್ಲಿದ್ದರೆ, ಮಾತನಾಡಿರಿ,” ಎಂದು ಕೇಳಿಕೊಂಡರು.

[16] ಪೌಲನು ಎದ್ದು ನಿಂತು, ಕೈಸನ್ನೆ ಮಾಡಿ ಹೀಗೆ ಹೇಳಿದನು: “ಇಸ್ರಾಯೇಲ್ ಜನರೇ, ದೇವರಲ್ಲಿ ಭಯಭಕ್ತಿಯುಳ್ಳವರೇ, ಕೇಳಿರಿ!

[17] ಈ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃಗಳನ್ನು ಆಯ್ದುಕೊಂಡರು; ಈಜಿಪ್ಟಿನಲ್ಲಿ ನಮ್ಮ ಜನರು ವಾಸಿಸುತ್ತಿದ್ದಾಗ; ಅವರನ್ನು ಪ್ರಬಲರನ್ನಾಗಿ ಮಾಡಿ ತಮ್ಮ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಅವರನ್ನು ಬಿಡಿಸಿ ಕರೆತಂದರು;

[18] ಅರಣ್ಯದಲ್ಲಿ ಸುಮಾರು ನಲವತ್ತು ವರ್ಷ ಅವರ ನಡತೆಯನ್ನು ಸಹಿಸಿಕೊಂಡರು.

[19] ಕಾನಾನ್ ದೇಶದಲ್ಲಿದ್ದ ಏಳು ರಾಜ್ಯಗಳನ್ನು ಜಯಿಸಿ, ಅವರ ದೇಶವನ್ನು ತಮ್ಮ ಜನರಿಗೆ ಬಾಧ್ಯವಾಗಿ ದಯಪಾಲಿಸಿದರು.

[20] ಇದಕ್ಕೆ ನಾನೂರ ಐವತ್ತು ವರ್ಷಗಳ ಕಾಲ ಹಿಡಿಯಿತು. “ಇದಾದನಂತರ, ದೇವರು ಅವರಿಗೆ ಪ್ರವಾದಿ ಸಮುಯೇಲನ ಸಮಯದವರೆಗೆ ನ್ಯಾಯಸ್ಥಾಪಕರನ್ನು ದಯಪಾಲಿಸಿದರು.

[21] ಅನಂತರ ಜನರು ಒಬ್ಬ ಅರಸನು ತಮಗೆ ಬೇಕೆಂದು ಕೇಳಿಕೊಳ್ಳಲು, ದೇವರು ಬೆನ್ಯಾಮೀನ್ ಗೋತ್ರದ ಕೀಷನ ಮಗ ಸೌಲನನ್ನು ಅವರಿಗೆ ಕೊಟ್ಟರು. ಇವನು ನಲವತ್ತು ವರ್ಷ ಆಳ್ವಿಕೆ ಮಾಡಿದನು.

[22] ದೇವರು ಸೌಲನನ್ನು ಅರಸುತನದಿಂದ ತೆಗೆದುಹಾಕಿ, ದೇವರು ದಾವೀದನನ್ನು ಅವರ ಅರಸನನ್ನಾಗಿ ಎಬ್ಬಿಸಿದರು. ಇವನನ್ನು ಕುರಿತು, ‘ಇಷಯನ ಮಗ ದಾವೀದನು ನನಗೆ ಸಿಕ್ಕಿದನು. ನನ್ನ ಹೃದಯಕ್ಕೆ ತಕ್ಕಂಥ ಮನುಷ್ಯನು; ಇವನು ನಾನು ಅಪೇಕ್ಷಿಸುವುದೆಲ್ಲವನ್ನೂ ಮಾಡುವನು,’ ಎಂದು ದೇವರು ತಾವೇ ಸಾಕ್ಷಿಕೊಟ್ಟರು.

[23] “ಈ ದಾವೀದನ ಸಂತತಿಯಲ್ಲಿಯೇ ದೇವರು ಇಸ್ರಾಯೇಲಿಗೆ ತನ್ನ ವಾಗ್ದಾನದಂತೆ ರಕ್ಷಕ ಯೇಸುವನ್ನು ತಂದರು.

[24] ಯೇಸು ಬರುವ ಮೊದಲು, ಸ್ನಾನಿಕ ಯೋಹಾನನು ಎಲ್ಲಾ ಇಸ್ರಾಯೇಲರಿಗೆ ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನದ ಬಗ್ಗೆ ಸಾರಿದನು.

[25] ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ, ‘ನನ್ನನ್ನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ಅವರು ನಾನಲ್ಲ, ಇಗೋ, ಅವರು ನನ್ನ ನಂತರ ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.

[26] “ಅಬ್ರಹಾಮನ ವಂಶದವರಾದ ಸಹೋದರರೇ, ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ರಕ್ಷಣೆಯ ಸಂದೇಶ ಕಳುಹಿಸಿರುವುದು ನಮಗಾಗಿಯೇ.

[27] ಯೆರೂಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿಗಳೂ ಯೇಸುವನ್ನು ಯಾರೆಂದು ಗುರುತಿಸಿಲಿಲ್ಲ. ಆದರೂ ಅವರು ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ವಾಕ್ಯಗಳನ್ನೂ ಗ್ರಹಿಸಲಿಲ್ಲ. ಅವರು ಯೇಸುವನ್ನು ಅಪರಾಧಿಯೆಂದು ತೀರ್ಪು ಮಾಡಿ, ಪ್ರವಾದಿಗಳ ವಾಕ್ಯಗಳನ್ನು ನೆರವೇರಿಸಿದರು.

[28] ಮರಣದಂಡನೆ ವಿಧಿಸಲು ಯಾವುದೇ ಕಾರಣ ಸಿಗದಿದ್ದರೂ ಯೇಸುವನ್ನು ಕೊಲ್ಲಬೇಕೆಂದು ಪಿಲಾತನನ್ನು ಕೇಳಿಕೊಂಡರು.

[29] ಪವಿತ್ರ ವೇದದಲ್ಲಿ ಯೇಸುವನ್ನು ಕುರಿತು ಬರೆದಿರುವ ಪ್ರಕಾರ ನೆರವೇರಿದ ನಂತರ, ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು.

[30] ಆದರೆ ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದರು.

[31] ಯೇಸುವಿನೊಡನೆ ಗಲಿಲಾಯದಿಂದ ಯೆರೂಸಲೇಮಿನವರೆಗೆ ಮುಂಚೆ ಬಂದಿದ್ದವರಿಗೆ ಯೇಸು ಅನೇಕ ದಿನಗಳವರೆಗೆ ಕಾಣಿಸಿಕೊಂಡರು. ಈಗ ಅವರೇ ನಮ್ಮ ಜನರಿಗೆ ಯೇಸುವಿನ ಸಾಕ್ಷಿಗಳಾಗಿದ್ದಾರೆ.

[32] “ನಾವು ನಿಮಗೆ, ದೇವರು ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ್ದನ್ನು ಶುಭವರ್ತಮಾನವನ್ನಾಗಿ ಹೇಳುತ್ತಿದ್ದೇವೆ.

[33] ದೇವರು ಯೇಸುವನ್ನು ಎಬ್ಬಿಸುವುದರ ಮೂಲಕ ಅವರ ಸಂತತಿಯಾದ ನಮಗಿಂದು ಆ ವಾಗ್ದಾನವನ್ನು ನೆರವೇರಿಸಿದ್ದಾರೆ; ಮಾತ್ರವಲ್ಲದೆ ಎರಡನೆಯ ಕೀರ್ತನೆಯಲ್ಲಿ ಹೀಗೆ ಬರೆಯಲಾಗಿದೆ: “ ‘ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ.’

[34] ಹೀಗೆ ಯೇಸುವನ್ನು ಸಮಾಧಿಯಲ್ಲಿ ಕೊಳೆಯಲು ಬಿಡದೇ ದೇವರು ಅವರನ್ನು ಜೀವಂತವಾಗಿ ಎಬ್ಬಿಸಿದ ಸತ್ಯವು ಈ ಮಾತುಗಳಲ್ಲಿ ಬಂದಿದೆ: “ ‘ನಾನು ದಾವೀದನಿಗೆ ವಾಗ್ದಾನ ಮಾಡಿದ ಪವಿತ್ರ ಹಾಗೂ ನಿಶ್ಚಯವಾದ ಆಶೀರ್ವಾದಗಳನ್ನು ನಿಮಗೆ ಕೊಡುವೆನು’

[35] ಇನ್ನೊಂದು ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ: “ ‘ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ.’

[36] “ದಾವೀದನು ತನ್ನ ಜೀವಮಾನದಲ್ಲಿ ದೇವರ ಉದ್ದೇಶಕ್ಕೆ ಅನುಗುಣವಾಗಿ ಸೇವೆಮಾಡಿ ಮರಣಹೊಂದಿದನು. ಅವನ ಪಿತೃಗಳೊಂದಿಗೆ ಅವನನ್ನು ಸೇರಿಸಿದರು. ಅವನ ದೇಹ ಕೊಳೆತುಹೋಯಿತು.

[37] ಆದರೆ ದೇವರು ಮರಣದಿಂದ ಎಬ್ಬಿಸಿದ ಈ ಯೇಸು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.

[38] “ಆದ್ದರಿಂದ, ನನ್ನ ಸಹೋದರರೇ, ಯೇಸುವಿನ ಮೂಲಕವೇ ಪಾಪಕ್ಷಮಾಪಣೆ ಸಾಧ್ಯವೆಂದು ನಿಮಗೆ ಸಾರಲಾಗುತ್ತಿದೆಯೆಂದು ನೀವು ತಿಳಿಯಬೇಕೆಂಬುದೇ ನನ್ನ ಅಪೇಕ್ಷೆ.

[39] ಮೋಶೆಯ ನಿಯಮದ ಮೂಲಕವಾಗಿ ನೀತಿವಂತರೆಂದು ನಿರ್ಣಯಿಸಲಾಗದ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ, ಯೇಸುವನ್ನು ನಂಬುವ ಪ್ರತಿಯೊಬ್ಬರೂ ಯೇಸುವಿನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರಾಗುವರು.

[40] ಆದ್ದರಿಂದ ಪ್ರವಾದಿಗಳು ಹೇಳಿದ ಮಾತುಗಳು ನಿಮ್ಮಲ್ಲಿ ನಡೆಯದಂತೆ ಜಾಗರೂಕರಾಗಿರಿ:

[41] “ ‘ತಿರಸ್ಕಾರ ಮಾಡುವವರೇ, ಗಮನಿಸಿರಿ, ಆಶ್ಚರ್ಯಪಟ್ಟು, ಚದುರಿ ಹೋಗಿರಿ, ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ ಆ ಕಾರ್ಯವನ್ನು ಯಾರಾದರೂ ವಿವರಿಸಿ ಹೇಳಿದರೂ ನೀವದನ್ನು ಎಂದಿಗೂ ನಂಬುವುದೇ ಇಲ್ಲ,’” ಎಂದು ಹೇಳಿದನು.

[42] ಪೌಲ ಬಾರ್ನಬರು ಸಭಾಮಂದಿರವನ್ನು ಬಿಟ್ಟು ಹೊರಡುವಾಗ, “ಬರುವ ಸಬ್ಬತ್ ದಿನವೂ ಬಂದು ಇದೇ ವಿಷಯಗಳನ್ನು ಕುರಿತು ಮಾತನಾಡಿರಿ,” ಎಂದು ಜನರು ಅವರನ್ನು ಕೇಳಿಕೊಂಡರು.

[43] ಸಭೆಯು ಮುಗಿದ ತರುವಾಯ ಅನೇಕ ಯೆಹೂದ್ಯರೂ ದೇವಭಕ್ತಿವುಳ್ಳ ಯೆಹೂದಿ ಮಾರ್ಗದ ವಿಶ್ವಾಸಿಗಳು ಪೌಲ ಬಾರ್ನಬರನ್ನು ಹಿಂಬಾಲಿಸಿದರು. ಪೌಲ ಬಾರ್ನಬರು ತಮ್ಮೊಂದಿಗೆ ಬಂದವರ ಜೊತೆ ಮಾತನಾಡಿ ದೇವರ ಕೃಪೆಯಲ್ಲಿ ಮುಂದುವರಿಯಲು ಅವರನ್ನು ಒಡಂಬಡಿಸಿದರು.

[44] ಮುಂದಿನ ಸಬ್ಬತ್ ದಿನ ಕರ್ತದೇವರ ವಾಕ್ಯ ಕೇಳಲು ನಗರದ ಜನರೆಲ್ಲರೂ ಹೆಚ್ಚಾಗಿ ಕೂಡಿಬಂದರು.

[45] ಜನಸಮೂಹಗಳನ್ನು ಯೆಹೂದ್ಯರು ಕಂಡಾಗ ಅಸೂಯೆಗೊಂಡು ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು.

[46] ಆಗ ಪೌಲ, ಬಾರ್ನಬರು ಧೈರ್ಯದಿಂದ ಅವರಿಗೆ ಉತ್ತರಕೊಟ್ಟರು: “ದೇವರ ವಾಕ್ಯವನ್ನು ನಾವು ಮೊದಲು ನಿಮಗೆ ಹೇಳುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಳ್ಳಿಬಿಟ್ಟಿದ್ದರಿಂದಲೂ ನಿತ್ಯಜೀವಕ್ಕೆ ನೀವು ಅಯೋಗ್ಯರೆಂದು ತೀರ್ಮಾನಿಸಿಕೊಂಡಿದ್ದೀರಿ. ಆದುದರಿಂದ ಇಗೋ, ನಾವೀಗ ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇವೆ.

[47] ಕರ್ತದೇವರು ನಮಗೆ ಆಜ್ಞಾಪಿಸಿದ್ದು ಇಂತಿದೆ: “ ‘ಭೂಲೋಕದ ಕಟ್ಟಕಡೆಯವರೆಗೆ ನೀನು ರಕ್ಷಣೆಯನ್ನು ತರುವಂತೆ ನಾನು ಯೆಹೂದ್ಯರಲ್ಲದವರಿಗೆ ನಿನ್ನನ್ನು ಬೆಳಕನ್ನಾಗಿ ನೇಮಿಸಿರುವೆನು.’ ”

[48] ಯೆಹೂದ್ಯರಲ್ಲದವರು ಇದನ್ನು ಕೇಳಿದಾಗ, ಬಹಳ ಹರ್ಷಗೊಂಡು ಕರ್ತದೇವರ ವಾಕ್ಯವನ್ನು ಘನಪಡಿಸಿದರು. ನಿತ್ಯಜೀವಕ್ಕೆ ನೇಮಕರಾದ ಎಲ್ಲರೂ ವಿಶ್ವಾಸವನ್ನಿಟ್ಟರು.

[49] ಆ ಪ್ರದೇಶದಲ್ಲೆಲ್ಲಾ ಕರ್ತದೇವರ ವಾಕ್ಯವು ಪ್ರಸಾರವಾಗುತ್ತಾ ಬಂತು.

[50] ಆದರೆ ಯೆಹೂದ್ಯರು, ಆರಾಧಕರಾಗಿದ್ದ ಮಾನ್ಯರಾದ ಸ್ತ್ರೀಯರನ್ನೂ ನಗರದ ಗಣ್ಯ ನಾಯಕರನ್ನೂ ಪ್ರೇರೇಪಿಸಿ, ಪೌಲ, ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ತಮ್ಮ ಪ್ರದೇಶದಿಂದ ಹೊರಗೋಡಿಸಿದರು.

[51] ಆಗ ಅವರಿಗೆ ವಿರೋಧವಾಗಿ ಪೌಲ, ಬಾರ್ನಬರು ತಮ್ಮ ಪಾದದ ಧೂಳನ್ನು ಝಾಡಿಸಿ ಇಕೋನ್ಯಕ್ಕೆ ಹೊರಟು ಹೋದರು.

[52] ಶಿಷ್ಯರು ಬಹಳ ಸಂತೋಷದಿಂದಲೂ ಪವಿತ್ರಾತ್ಮ ದೇವರಿಂದಲೂ ತುಂಬಿದವರಾದರು.

ಅಪೊಸ್ತಲರ ಕೃತ್ಯಗಳು — Chapters