Skip to content
Opens in a new window
Listen to this chapter • 9:08

[1] ಕೈಸರೈಯದಲ್ಲಿ ಕೊರ್ನೇಲ್ಯ ಎಂಬುವನಿದ್ದನು. “ಇಟಲಿಯ ದಳ” ಎಂದು ಹೆಸರಿನ ದಳಕ್ಕೆ ಅವನು ಶತಾಧಿಪತಿ.

[2] ಅವನೂ ಅವನ ಕುಟುಂಬದವರು ಭಕ್ತಿವಂತರೂ ದೇವರಿಗೆ ಭಯಪಡುವವರೂ ಆಗಿದ್ದರು. ಅವನು ಕೊರತೆಯಲ್ಲಿರುವವರಿಗೆ ಧಾರಾಳವಾಗಿ ಕೊಡುತ್ತಿದ್ದನು. ಅವನು ಅನುದಿನವೂ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದನು.

[3] ಒಂದು ದಿನ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ ಅವನಿಗೆ ಒಂದು ದರ್ಶನವಾಯಿತು. ತನ್ನ ಬಳಿಗೆ ಒಬ್ಬ ದೇವದೂತನು ಬಂದು, “ಕೊರ್ನೇಲ್ಯನೇ!” ಎಂದು ಕರೆಯುವ ದೇವದೂತನನ್ನು ಸ್ಪಷ್ಟವಾಗಿ ಕಂಡನು.

[4] ಕೊರ್ನೇಲ್ಯನು ಭಯದಿಂದ ದೇವದೂತನನ್ನೇ ದೃಷ್ಟಿಸಿ ನೋಡಿ, “ಏನು ಸ್ವಾಮೀ?” ಎಂದು ಕೇಳಲು, “ನಿನ್ನ ಪ್ರಾರ್ಥನೆಗಳು, ಬಡವರಿಗೆ ನೀನು ಕೊಟ್ಟ ದಾನಗಳು ದೇವರ ಸನ್ನಿಧಿಗೆ ಜ್ಞಾಪಕಾರ್ಥ ಅರ್ಪಣೆಗಳಾಗಿ ಬಂದಿವೆ.

[5] ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ, ಪೇತ್ರ ಎಂದು ಕರೆಯಲಾಗುವ ಸೀಮೋನನನ್ನು ಇಲ್ಲಿಗೆ ಕರೆದುಕೊಂಡು ಬರಲು ಹೇಳು.

[6] ಚರ್ಮಕಾರನಾದ ಸೀಮೋನನ ಮನೆಯಲ್ಲಿ ಅವನು ಇಳಿದುಕೊಂಡಿದ್ದಾನೆ. ಆ ಮನೆ ಸಮುದ್ರ ತೀರದಲ್ಲಿದೆ,” ಎಂದು ದೇವದೂತನು ಹೇಳಿದನು.

[7] ತನ್ನೊಂದಿಗೆ ಮಾತನಾಡಿದ ದೇವದೂತನು ಅದೃಶ್ಯವಾದ ಮೇಲೆ ಕೊರ್ನೇಲ್ಯನು ತನ್ನ ಇಬ್ಬರು ಸೇವಕರನ್ನು ಮತ್ತು ತನ್ನ ಪರಿಚಾರಕರಲ್ಲಿ ಭಕ್ತಿವಂತನಾದ ಒಬ್ಬ ಸಿಪಾಯಿಯನ್ನು ಕರೆದು,

[8] ಸಂಭವಿಸಿದ್ದೆಲ್ಲವನ್ನು ಅವರಿಗೆ ವಿವರಿಸಿ, ಅವರನ್ನು ಯೊಪ್ಪಕ್ಕೆ ಕಳುಹಿಸಿದನು.

[9] ಮಾರನೆಯ ದಿನ ಅವರು ಪ್ರಯಾಣಮಾಡಿ ಮಧ್ಯಾಹ್ನದ ಸಮಯ ಯೊಪ್ಪ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆಗತಾನೇ ಪೇತ್ರನು ಪ್ರಾರ್ಥಿಸಲು ಮಾಳಿಗೆಯ ಮೇಲಕ್ಕೆ ಹೋದನು.

[10] ಅವನಿಗೆ ಹಸಿವಾಗಿ ಏನನ್ನಾದರೂ ತಿನ್ನಬೇಕೆನಿಸಿತು. ಊಟ ಸಿದ್ಧತೆಯಾಗುತ್ತಿದ್ದಾಗ ಅವನು ಧ್ಯಾನ ಪರವಶನಾದನು.

[11] ಪರಲೋಕವು ತೆರೆಯಲಾಗಿ ನಾಲ್ಕು ಮೂಲೆಗಳನ್ನು ಹಿಡಿದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವದನ್ನು ಕಂಡನು.

[12] ಎಲ್ಲಾ ಜಾತಿಯ ನಾಲ್ಕು ಕಾಲಿನ ಪ್ರಾಣಿಗಳು, ಭೂಮಿಯ ಮೇಲೆ ಹರಿದಾಡುವ ಸರೀಸೃಪಗಳು, ಹಾರಾಡುವ ಪಕ್ಷಿಗಳು ಅದರಲ್ಲಿದ್ದವು.

[13] ಆಗ, “ಪೇತ್ರನೇ, ಎದ್ದೇಳು, ಕೊಂದು ತಿನ್ನು,” ಎಂಬ ವಾಣಿ ಅವನಿಗೆ ಕೇಳಿಸಿತು.

[14] ಆದರೆ ಪೇತ್ರನು, “ಸ್ವಾಮಿ, ನನ್ನಿಂದಾಗದು! ಅಶುದ್ಧವಾದದ್ದನ್ನೂ ನಿಷಿದ್ಧವಾದದ್ದನ್ನೂ ನಾನೆಂದೂ ತಿಂದವನಲ್ಲ,” ಎಂದನು.

[15] ವಾಣಿಯು ಎರಡನೆಯ ಬಾರಿಗೆ, “ದೇವರು ಶುದ್ಧೀಕರಿಸಿದ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.

[16] ಹೀಗೆ ಮೂರು ಸಾರಿ ನಡೆದಮೇಲೆ, ಕೂಡಲೇ ಆ ಜೋಳಿಗೆಯನ್ನು ಪರಲೋಕಕ್ಕೆ ಎತ್ತಿಕೊಳ್ಳಲಾಯಿತು.

[17] ಈ ದರ್ಶನದ ಅರ್ಥವೇನೆಂದು ಪೇತ್ರನು ಯೋಚಿಸುತ್ತಿರಲು, ಇಗೋ, ಕೊರ್ನೇಲ್ಯನು ಕಳುಹಿಸಿದ ಜನರು ಸೀಮೋನನ ಮನೆಯನ್ನು ಕಂಡುಕೊಂಡು ಅಲ್ಲಿ ದ್ವಾರದ ಬಳಿಯಲ್ಲಿ ನಿಂತಿದ್ದರು.

[18] ಅವರು ಪೇತ್ರನು ಎಂದು ಕರೆಯಲಾಗುವ ಸೀಮೋನ ಅಲ್ಲಿ ಇಳಿದುಕೊಂಡಿರುವನೋ ಎಂದು ವಿಚಾರಿಸಿದರು.

[19] ಪೇತ್ರನು ಇನ್ನೂ ಆ ದರ್ಶನದ ಬಗ್ಗೆ ಯೋಚಿಸುತ್ತಿರಲು, ಪವಿತ್ರಾತ್ಮ ದೇವರು ಅವನಿಗೆ, “ಸೀಮೋನನೇ ಇಗೋ, ಮೂವರು ನಿನ್ನನ್ನು ಹುಡುಕುತ್ತಾ ಬಂದಿದ್ದಾರೆ.

[20] ಎದ್ದೇಳು, ಕೆಳಗಿಳಿದು ಹೋಗು. ಅವರ ಜೊತೆಯಲ್ಲಿ ಹೋಗಲು ಹಿಂಜರಿಯಬೇಡ, ನಾನೇ ಅವರನ್ನು ಕಳುಹಿಸಿರುವೆ,” ಎಂದರು.

[21] ಪೇತ್ರನು ಕೆಳಗಿಳಿದು ಹೋಗಿ, ಅವರಿಗೆ, “ನೀವು ಹುಡುಕುತ್ತಿರುವವನು ನಾನೇ. ನೀವು ಬಂದಿರುವ ಕಾರಣವೇನು?” ಎಂದು ಕೇಳಿದನು.

[22] ಅವರು, “ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನು, ದೇವರಿಗೆ ಭಯಪಡುವವನು, ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನೀನು ಹೇಳುವಂಥದ್ದನ್ನು ಕೇಳಲಿಕ್ಕಾಗಿ ನಿನ್ನನ್ನು ಅಲ್ಲಿಗೆ ಕರೆಯಿಸಬೇಕೆಂದು ಒಬ್ಬ ಪರಿಶುದ್ಧ ದೇವದೂತನಿಂದ ಆದೇಶಪಡೆದಿದ್ದಾನೆ,” ಎಂದರು.

[23] ಪೇತ್ರನು ಅವರನ್ನು ತನ್ನ ಅತಿಥಿಗಳಾಗಿರಲು ಮನೆಯೊಳಗೆ ಕರೆದನು. ಮರುದಿನ ಪೇತ್ರನು ಅವರೊಂದಿಗೆ ಪ್ರಯಾಣ ಬೆಳೆಸಿದನು. ಯೊಪ್ಪದಲ್ಲಿಯ ಕೆಲವು ಸಹೋದರರು ಅವನೊಂದಿಗೆ ಹೊರಟರು.

[24] ಮರುದಿನ ಅವನು ಕೈಸರೈಯವನ್ನು ತಲುಪಿದನು ಮತ್ತು ಕೊರ್ನೇಲ್ಯನು ಅವರಿಗಾಗಿ ಕಾಯುತ್ತಿದ್ದನು. ತನ್ನ ಬಂಧುಗಳನ್ನು ಹತ್ತಿರದ ಸ್ನೇಹಿತರನ್ನು ಕರೆಯಿಸಿದ್ದನು.

[25] ಆಗ ಪೇತ್ರನು ಮನೆಯಲ್ಲಿ ಪ್ರವೇಶಿಸುತ್ತಿದ್ದಂತೆ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಮುಂದೆ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಮಾಡಿದನು.

[26] ಆದರೆ ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದೇಳು, ನಾನೂ ಒಬ್ಬ ಮನುಷ್ಯನೇ,” ಎಂದು ಹೇಳಿದನು.

[27] ಅವನೊಂದಿಗೆ ಮಾತನಾಡುತ್ತಾ ಪೇತ್ರನು ಮನೆಯೊಳಗೆ ಹೋಗಿ ಅಲ್ಲಿ ಜನರ ದೊಡ್ಡ ಗುಂಪೇ ಇರುವುದನ್ನು ಕಂಡನು.

[28] ಪೇತ್ರನು ಅವರಿಗೆ: “ಯೆಹೂದ್ಯನು ಯೆಹೂದ್ಯರಲ್ಲದವರೊಂದಿಗೆ ಸೇರಿ, ಅವರನ್ನು ಭೇಟಿ ಮಾಡುವುದಾಗಲಿ ನಮ್ಮ ಯೆಹೂದಿ ನಿಯಮಕ್ಕೆ ವಿರೋಧವಾದದ್ದು ಎಂದು ನಿಮಗೆಲ್ಲರಿರೂ ತಿಳಿದೇ ಇದೆ. ಆದರೆ ಯಾವ ಮನುಷ್ಯನನ್ನೂ ಅಶುದ್ಧನು ಇಲ್ಲವೆ ನಿಷಿದ್ಧವಾದವನು ಎಂದು ಕರೆಯಬಾರದು ಎಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ.

[29] ಆದ್ದರಿಂದ ನನ್ನನ್ನು ಕರೆಕಳುಹಿಸಿದಾಗ ಯಾವ ಆಕ್ಷೇಪಣೆ ಮಾಡದೆ ಇಲ್ಲಿಗೆ ಬಂದಿದ್ದೇನೆ. ನನ್ನನ್ನು ಕರೆಕಳುಹಿಸಿದ ಕಾರಣವನ್ನು ಈಗ ನಾನು ತಿಳಿಯಬಹುದೋ?” ಎಂದನು.

[30] ಆಗ ಕೊರ್ನೇಲ್ಯನು, “ನಾಲ್ಕು ದಿನಗಳ ಹಿಂದೆ ಈ ಸಮಯದಲ್ಲಿ ಅಂದರೆ, ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ನಾನು ನನ್ನ ಮನೆಯಲ್ಲಿದ್ದುಕೊಂಡು ಪ್ರಾರ್ಥನೆ ಮಾಡುತ್ತಿದ್ದೆನು. ಆಗ ಫಕ್ಕನೆ ಹೊಳೆಯುತ್ತಿರುವ ವಸ್ತ್ರ ಧರಿಸಿದ್ದ ಒಬ್ಬನು ನನ್ನೆದುರು ಬಂದು ನಿಂತುಕೊಂಡನು.

[31] ಅವನು ನನಗೆ, ‘ಕೊರ್ನೇಲ್ಯನೇ, ದೇವರು ನಿನ್ನ ಪ್ರಾರ್ಥನೆ ಕೇಳಿದ್ದಾರೆ. ಬಡವರಿಗೆ ಕೊಟ್ಟ ನಿನ್ನ ದಾನಗಳನ್ನು ಜ್ಞಾಪಿಸಿಕೊಂಡಿದ್ದಾರೆ.

[32] ಪೇತ್ರನೆಂದು ಹೆಸರಿನ ಸೀಮೋನನನ್ನು ಕರೆದುಕೊಂಡು ಬರಲು ಯೊಪ್ಪಕ್ಕೆ ಕೆಲವರನ್ನು ಕಳುಹಿಸು. ಪೇತ್ರನು ಸಮುದ್ರ ತೀರದಲ್ಲಿರುವ ಚರ್ಮಕಾರನಾದ ಸೀಮೋನನ ಮನೆಯಲ್ಲಿ ಇಳಿದುಕೊಂಡಿದ್ದಾನೆ,’ ಎಂದು ಹೇಳಿದನು.

[33] ಆದ್ದರಿಂದ ನಾನು ನಿನ್ನನ್ನು ಕೂಡಲೇ ಕರೆದುಕೊಂಡು ಬರಲು ಕೆಲವರನ್ನು ಕಳುಹಿಸಿದೆ. ನೀನು ಬಂದಿರುವುದು ಒಳ್ಳೆಯದೇ ಆಯಿತು. ಕರ್ತ ಯೇಸು ನಮಗೆ ಏನು ಹೇಳಬೇಕೆಂದು ನಿನಗೆ ಆಜ್ಞಾಪಿಸಿರುವರೋ ಅದೆಲ್ಲವನ್ನು ಕೇಳಲು ಈಗ ನಾವು ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.

[34] ಆಗ ಪೇತ್ರನು ಮಾತನಾಡಲು ಪ್ರಾರಂಭಿಸಿ: “ದೇವರು ಪಕ್ಷಪಾತಿಯಲ್ಲವೆಂದು ಈಗ ನನಗೆ ಮನದಟ್ಟಾಗಿದೆ.

[35] ದೇವರು ಪ್ರತಿಯೊಂದು ದೇಶದಲ್ಲಿಯೂ ತಮಗೆ ಭಯಪಡುವ ಮತ್ತು ಸರಿಯಾದದ್ದನ್ನು ಮಾಡುವ ಜನರನ್ನು ಸ್ವೀಕರಿಸುತ್ತಾರೆ.

[36] ಸರ್ವಸೃಷ್ಟಿಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಸಮಾಧಾನದ ಶುಭಸಮಾಚಾರ ಹೇಳುತ್ತಾ, ಇಸ್ರಾಯೇಲ್ ಜನರಿಗೆ ದೇವರು ಕಳುಹಿಸಿದ ವಾಕ್ಯವನ್ನು ನೀವು ತಿಳಿದಿದ್ದೀರಿ.

[37] ಯೋಹಾನನು ದೀಕ್ಷಾಸ್ನಾನದ ಬಗ್ಗೆ ಬೋಧಿಸಿದ ನಂತರ ಗಲಿಲಾಯದಲ್ಲಿ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಏನು ಸಂಭವಿಸಿತೆಂಬುದನ್ನೂ ನೀವು ತಿಳಿದಿದ್ದೀರಿ.

[38] ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮರಿಂದಲೂ ಶಕ್ತಿಯಿಂದಲೂ ಅಭಿಷೇಕಿಸಿದ್ದರು. ಮಾತ್ರವಲ್ಲದೆ, ದೇವರು ಯೇಸುವಿನೊಡನೆ ಇದ್ದುದರಿಂದ, ಅವರು ಬೇರೆ ಬೇರೆ ಕಡೆಗಳಿಗೆ ಹೋಗಿ ಒಳಿತನ್ನು ಮಾಡಿ, ಪಿಶಾಚನಿಂದ ಪೀಡಿತರಾದವರನ್ನು ಗುಣಪಡಿಸುತ್ತಾ ಸಂಚರಿಸಿದ್ದನ್ನು ನೀವು ಬಲ್ಲಿರಿ.

[39] “ಯೆಹೂದ್ಯರ ನಾಡಿನಲ್ಲಿ ಮತ್ತು ಯೆರೂಸಲೇಮ ಪಟ್ಟಣದಲ್ಲಿಯೂ ಯೇಸು ಮಾಡಿದ ಪ್ರತಿಯೊಂದಕ್ಕೂ ನಾವು ಸಾಕ್ಷಿಗಳು. ಮರದ ಕಂಬಕ್ಕೆ ತೂಗುಹಾಕಿ ಯೇಸುವನ್ನು ನಾಯಕರು ಕೊಂದುಹಾಕಿದರು,

[40] ಆದರೆ ಮೂರನೆಯ ದಿನದಲ್ಲಿ ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಏಳುವಂತೆ ಮತ್ತು ಕಾಣಿಸಿಕೊಳ್ಳುವಂತೆ ಮಾಡಿದರು.

[41] ಯೇಸುವನ್ನು ಎಲ್ಲರೂ ನೋಡಲಿಲ್ಲ. ಆದರೆ ದೇವರು ಮೊದಲೇ ನೇಮಿಸಿಕೊಂಡ ಸಾಕ್ಷಿಗಳಾಗಿರುವ ನಮಗೆ ಕಾಣಿಸಿಕೊಂಡರು. ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದು ಬಂದ ತರುವಾಯ ಅವರೊಡನೆ ಊಟ, ಪಾನಮಾಡಿದ ನಮಗೆ ಕಾಣಿಸಿಕೊಂಡರು.

[42] ಜೀವಿಸುವವರಿಗೂ ಸತ್ತವರಿಗೂ ನ್ಯಾಯಾಧೀಶರಾಗಿ ದೇವರಿಂದ ನೇಮಕವಾದವರು ಯೇಸುವೇ ಎಂದು ನಾವು ಜನರಿಗೆ ಬೋಧಿಸಿ ಸಾಕ್ಷಿ ಕೊಡಬೇಕೆಂದೂ ಕ್ರಿಸ್ತ ಯೇಸು ನಮಗೆ ಆಜ್ಞಾಪಿಸಿದ್ದಾರೆ.

[43] ಯೇಸುವಿನಲ್ಲಿ ನಂಬಿಕೆಯನ್ನಿಡುವ ಪ್ರತಿಯೊಬ್ಬನು ಅವರ ಹೆಸರಿನ ಮುಖಾಂತರ ಪಾಪಗಳ ಕ್ಷಮಾಪಣೆ ಹೊಂದುವನು ಎಂದು ಅವರ ಬಗ್ಗೆ ಎಲ್ಲಾ ಪ್ರವಾದಿಗಳು ಸಾಕ್ಷಿಕೊಟ್ಟಿದ್ದಾರೆ,” ಎಂದನು.

[44] ಪೇತ್ರನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ, ಆ ಸಂದೇಶವನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮ ದೇವರು ಇಳಿದು ಬಂದರು.

[45] ಯೆಹೂದ್ಯರಲ್ಲದವರ ಮೇಲೆಯೂ ಪವಿತ್ರಾತ್ಮ ದೇವರು ವರವನ್ನು ಸುರಿಸಿದ್ದಕ್ಕೆ ಪೇತ್ರನೊಂದಿಗೆ ಸುನ್ನತಿಯಾದ ವಿಶ್ವಾಸಿಗಳು ಅತ್ಯಾಶ್ಚರ್ಯಪಟ್ಟರು.

[46] ಏಕೆಂದರೆ ಅವರು ಅನ್ಯಭಾಷೆಗಳಲ್ಲಿ ಮಾತನಾಡುತ್ತಾ ದೇವರನ್ನು ಕೊಂಡಾಡುತ್ತಿದ್ದುದನ್ನು ಅವರು ಕೇಳಿಸಿಕೊಂಡರು, ಆಗ ಪೇತ್ರನು,

[47] “ನೀರಿನಿಂದ ದೀಕ್ಷಾಸ್ನಾನವನ್ನು ಹೊಂದದಂತೆ ಯಾರಾದರೂ ಅಡ್ಡಿಮಾಡುವವರಿದ್ದಾರೋ? ನಾವು ಹೊಂದಿದಂತೆಯೇ ಇವರು ಸಹ ಪವಿತ್ರಾತ್ಮ ದೇವರನ್ನು ಹೊಂದಿಕೊಂಡಿದ್ದಾರಲ್ಲಾ?” ಎಂದು ಹೇಳಿದನು.

[48] ಆಗ ಅವರು ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದುವಂತೆ ಆಜ್ಞಾಪಿಸಿದನು. ಅನಂತರ ಕೆಲವು ದಿನ ಅಲ್ಲಿಯೇ ಇರಬೇಕೆಂದು ಅವರು ಪೇತ್ರನನ್ನು ಕೇಳಿಕೊಂಡರು.

ಅಪೊಸ್ತಲರ ಕೃತ್ಯಗಳು — Chapters