[1] ಸೌಲನು ಸ್ತೆಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಯೆರೂಸಲೇಮಿನ ಸಭೆಗೆ ವಿರೋಧವಾಗಿ ಮಹಾಹಿಂಸೆ ಪ್ರಾರಂಭವಾಯಿತು, ಅಪೊಸ್ತಲರನ್ನು ಬಿಟ್ಟು ಉಳಿದವರೆಲ್ಲರೂ ಯೂದಾಯ ಮತ್ತು ಸಮಾರ್ಯ ಪ್ರಾಂತಗಳಿಗೆ ಚದರಿಹೋದರು.
[2] ದೇವಭಕ್ತರು ಸ್ತೆಫನನ ಶವಸಂಸ್ಕಾರ ಮಾಡಿ, ಅವನಿಗಾಗಿ ಬಹಳ ಗೋಳಾಡಿದರು.
[3] ಆದರೆ ಸೌಲನು ಸಭೆಯನ್ನು ಹಾಳುಮಾಡಲು ಪ್ರಾರಂಭಿಸಿದನು. ಅವನು ಮನೆಮನೆಗಳಿಗೆ ಹೋಗಿ ಸ್ತ್ರೀಪುರುಷರನ್ನು ಹೊರಗೆಳೆದು ಅವರನ್ನು ಸೆರೆಮನೆಯಲ್ಲಿ ಹಾಕಿಸಿದನು.
[4] ಚದರಿಹೋದವರು ತಾವು ಹೋದಲ್ಲೆಲ್ಲಾ ವಾಕ್ಯವನ್ನು ಬೋಧಿಸಿದರು.
[5] ಫಿಲಿಪ್ಪನು ಸಮಾರ್ಯದ ಒಂದು ಪಟ್ಟಣಕ್ಕೆ ಹೋಗಿ ಅಲ್ಲಿ ಕ್ರಿಸ್ತ ಯೇಸುವಿನ ಸಂದೇಶ ಸಾರಿದನು.
[6] ಜನಸಮೂಹವು ಫಿಲಿಪ್ಪನ ಬೋಧನೆ ಕೇಳಿ, ಅವನು ಮಾಡಿದ ಸೂಚಕಕಾರ್ಯಗಳನ್ನು ಕಂಡು, ಅವನು ಹೇಳಿದ್ದಕ್ಕೆಲ್ಲಾ ಮನಸ್ಸು ಕೊಟ್ಟರು.
[7] ಅನೇಕರಿಂದ ಅಶುದ್ಧಾತ್ಮಗಳು ಆರ್ಭಟಿಸುತ್ತಾ ಹೊರಗೋಡಿದವು. ಮಾತ್ರವಲ್ಲದೇ ಅನೇಕ ಪಾರ್ಶ್ವವಾಯು ಪೀಡಿತರು, ಅಂಗವಿಕಲರು ಸ್ವಸ್ಥರಾದರು.
[8] ಇದರಿಂದ ಆ ಪಟ್ಟಣದಲ್ಲಿ ಮಹಾ ಸಂತೋಷವಾಯಿತು.
[9] ಆ ಪಟ್ಟಣದಲ್ಲಿ ಕೆಲ ಸಮಯದಿಂದ ಸೀಮೋನ ಎಂಬ ಹೆಸರಿನ ಒಬ್ಬನು ಮಂತ್ರ ವಿದ್ಯೆ ಉಪಯೋಗಿಸಿ ಸಮಾರ್ಯದ ಜನರನ್ನು ಆಶ್ಚರ್ಯಗೊಳಿಸಿದ್ದನು. ತಾನೊಬ್ಬ ಮಹಾವ್ಯಕ್ತಿ ಎಂದು ಕೊಚ್ಚಿಕೊಳ್ಳುತ್ತಿದ್ದನು,
[10] ಆ ಪಟ್ಟಣದಲ್ಲಿಯ ಹಿರಿಯರು, ಕಿರಿಯರು ಎಲ್ಲರೂ ಅವನನ್ನು ಗೌರವಿಸಿ, “ಈ ಮನುಷ್ಯನು ಮಹಾಶಕ್ತಿ ಎನಿಸಿಕೊಂಡ ದೇವರ ಶಕ್ತಿ” ಎಂದು ಹೇಳುತ್ತಿದ್ದರು.
[11] ಸೀಮೋನನು ತನ್ನ ಮಂತ್ರಶಕ್ತಿಯಿಂದ ಅವರನ್ನು ಆಶ್ಚರ್ಯಗೊಳಿಸಿದ್ದರಿಂದ ಅವರು ಅವನನ್ನು ಹಿಂಬಾಲಿಸುತ್ತಿದ್ದರು.
[12] ಆದರೆ ಫಿಲಿಪ್ಪನು ದೇವರ ರಾಜ್ಯದ ಶುಭವರ್ತಮಾನವನ್ನೂ ಕ್ರಿಸ್ತ ಯೇಸುವಿನ ಹೆಸರನ್ನೂ ಪ್ರಕಟಿಸಿದಾಗ ಅಲ್ಲಿಯ ಸ್ತ್ರೀ ಪುರುಷರು ಅದನ್ನು ನಂಬಿ ದೀಕ್ಷಾಸ್ನಾನವನ್ನು ಹೊಂದಿದರು.
[13] ಸೀಮೋನನು ಸಹ ವಿಶ್ವಾಸವಿಟ್ಟು, ದೀಕ್ಷಾಸ್ನಾನ ಹೊಂದಿದನು. ಫಿಲಿಪ್ಪ ಮಾಡಿದ ಮಹಾಸೂಚಕಕಾರ್ಯಗಳನ್ನು ಮತ್ತು ಅದ್ಭುತಗಳನ್ನು ಕಂಡು, ಬೆರಗಾಗಿ ಅವನು ಹೋದಲ್ಲೆಲ್ಲಾ ಅವನನ್ನು ಹಿಂಬಾಲಿಸುತ್ತಿದ್ದನು.
[14] ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದರು ಎಂಬ ಸಮಾಚಾರ ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೆ ತಲುಪಿದ್ದರಿಂದ, ಅವರ ಬಳಿಗೆ ಪೇತ್ರ ಮತ್ತು ಯೋಹಾನರನ್ನು ಕಳುಹಿಸಿದರು.
[15] ಇವರು ತಲುಪಿದಾಗ, ಅಲ್ಲಿಯವರು ಪವಿತ್ರಾತ್ಮ ದೇವರನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಾರ್ಥನೆ ಮಾಡಿದರು.
[16] ಏಕೆಂದರೆ ಅವರಲ್ಲಿ ಯಾರ ಮೇಲೆಯೂ ಪವಿತ್ರಾತ್ಮ ಬಂದಿರಲಿಲ್ಲ, ಅವರು ಕರ್ತ ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಹೊಂದಿದ್ದರಷ್ಟೇ.
[17] ಆಗ ಪೇತ್ರ ಮತ್ತು ಯೋಹಾನರು ಅವರ ಮೇಲೆ ತಮ್ಮ ಕೈಗಳನ್ನಿಡಲು, ಅವರು ಪವಿತ್ರಾತ್ಮ ವರವನ್ನು ಹೊಂದಿದರು.
[18] ಅಪೊಸ್ತಲರು ತಮ್ಮ ಕೈಗಳನ್ನಿಡಲು ಪವಿತ್ರಾತ್ಮ ದೊರೆತದ್ದನ್ನು ಕಂಡ ಸೀಮೋನನು, ಅವರಿಗೆ ಹಣವನ್ನು ಕೊಟ್ಟು,
[19] “ನಾನು ಯಾರ ಮೇಲೆ ಕೈಗಳನ್ನಿಡುವೆನೋ ಅವರೂ ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಂತೆ ಈ ಶಕ್ತಿಯನ್ನು ಕೊಡಬೇಕು,” ಎಂದು ಕೇಳಿದನು.
[20] ಅದಕ್ಕೆ ಪೇತ್ರನು, “ದೇವರ ವರವನ್ನು ಹಣಕೊಟ್ಟು ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದ್ದರಿಂದ ನೀನು ನಿನ್ನ ಹಣದೊಂದಿಗೆ ನಾಶವಾಗಿಹೋಗು!
[21] ನಿನ್ನ ಹೃದಯವು ದೇವರ ದೃಷ್ಟಿಯಲ್ಲಿ ಸರಿಯಾಗಿಲ್ಲವಾದ್ದರಿಂದ ಈ ಸೇವೆಯಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ.
[22] ಈ ದುಷ್ಟತನಕ್ಕಾಗಿ ಪಶ್ಚಾತ್ತಾಪಪಟ್ಟು ಕರ್ತ ಯೇಸುವನ್ನು ಬೇಡಿಕೋ, ಒಂದು ವೇಳೆ ಅವರು ನಿನ್ನ ಹೃದಯದಲ್ಲಿದ್ದ ಈ ವಿಚಾರವನ್ನು ಕ್ಷಮಿಸಬಹುದು.
[23] ನೀನು ಕಹಿತನದಿಂದ ತುಂಬಿರುವೆ; ಪಾಪ ಬಂಧನದಲ್ಲಿರುವೆ ಎಂದು ಕಾಣುತ್ತಿದ್ದೇನೆ,” ಎಂದನು.
[24] ಆಗ ಸೀಮೋನನು, “ನೀವು ಹೇಳಿದ ಯಾವುದೂ ನನಗೆ ಸಂಭವಿಸದಂತೆ ನನಗೋಸ್ಕರ ಕರ್ತ ಯೇಸುವಿನಲ್ಲಿ ಪ್ರಾರ್ಥಿಸಿರಿ,” ಎಂದು ಬೇಡಿಕೊಂಡನು.
[25] ಪೇತ್ರ ಯೋಹಾನರು ಕರ್ತದೇವರ ವಾಕ್ಯದ ಸಾಕ್ಷಿ ಹೇಳಿ ಬೋಧನೆ ಮಾಡಿದ ತರುವಾಯ ಸಮಾರ್ಯದ ಅನೇಕ ಗ್ರಾಮಗಳಲ್ಲಿ ಸುವಾರ್ತೆ ಸಾರಿ, ಯೆರೂಸಲೇಮಿಗೆ ಹಿಂದಿರುಗಿದರು.
[26] ದೇವದೂತನೊಬ್ಬನು ಫಿಲಿಪ್ಪನಿಗೆ, “ದಕ್ಷಿಣ ದಿಕ್ಕಿಗೆ ಹೋಗುವ ಮಾರ್ಗದಲ್ಲಿ ಹೋಗು, ಅದು ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದು ಹೇಳಿದನು.
[27] ಅದರಂತೆ ಅವನು ಹೋಗುತ್ತಿದ್ದಾಗ, ಮಾರ್ಗದಲ್ಲಿ ಐಥಿಯೋಪ್ಯದ ರಾಣಿ ಕಂದಾಕೆಯ ಹಣಕಾಸಿನ ಮುಖ್ಯ ಅಧಿಕಾರಿಯಾಗಿದ್ದ ಕಂಚುಕಿಯನ್ನು ಭೇಟಿಯಾದನು. ಈ ಮನುಷ್ಯನು ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿದ್ದನು.
[28] ಈಗ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
[29] ಆಗ, “ನೀನು ಹೋಗಿ ಆ ರಥದ ಜೊತೆಯಲ್ಲಿಯೇ ನಡೆ,” ಎಂದು ಪವಿತ್ರಾತ್ಮರು ಫಿಲಿಪ್ಪನಿಗೆ ಹೇಳಿದರು.
[30] ಫಿಲಿಪ್ಪನು ರಥದ ಹತ್ತಿರಕ್ಕೆ ಓಡಿದನು. ಆ ಮನುಷ್ಯನು ಪ್ರವಾದಿ ಯೆಶಾಯನ ಗ್ರಂಥ ಓದುತ್ತಿರುವುದನ್ನು ಕೇಳಿಸಿಕೊಂಡು, “ನೀವು ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?” ಎಂದು ಫಿಲಿಪ್ಪನು ಪ್ರಶ್ನಿಸಿದನು.
[31] ಅವನು, “ಯಾರಾದರೊಬ್ಬರು ಅದನ್ನು ವಿವರಿಸದಿದ್ದರೆ ನನಗೆ ಅರ್ಥವಾಗುವುದು ಹೇಗೆ?” ಎಂದು ಹೇಳಿ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಮಂತ್ರಿಸಿದನು.
[32] ಕಂಚುಕಿ ಈ ವಾಕ್ಯಭಾಗವನ್ನು ಓದುತ್ತಿದ್ದನು: “ವಧಿಸಲಿಕ್ಕೆ ಒಯ್ದ ಕುರಿಯಂತೆ ಅವರನ್ನು ಕರೆದುಕೊಂಡು ಹೋದರು. ಉಣ್ಣೆ ಕತ್ತರಿಸುವವರ ಮುಂದೆ ಇರುವ ಕುರಿಮರಿಯಂತೆ ಅವರು ಮೌನವಾಗಿದ್ದರು. ಇನ್ನು ಅವರು ತಮ್ಮ ಬಾಯಿ ತೆರೆಯಲೇ ಇಲ್ಲ.
[33] ಅವರ ಅವಮಾನದಲ್ಲಿ ನ್ಯಾಯವು ಅವರಿಂದ ತೆಗೆಯಲಾಯಿತು. ಭೂಮಿಯಿಂದ ಆತನ ಜೀವವನ್ನು ತೆಗೆದೇಬಿಟ್ಟರಲ್ಲವೇ, ಆತನ ಸಂತತಿಯವರ ಬಗ್ಗೆ ಮಾತನಾಡಬಲ್ಲವರು ಯಾರು?”
[34] ನಂತರ ಕಂಚುಕಿಯು, “ಪ್ರವಾದಿ ಇಲ್ಲಿ ಯಾರ ಬಗ್ಗೆ ಮಾತನಾಡುತ್ತಿದ್ದಾನೆ, ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ? ನನಗೆ ಹೇಳು,” ಎಂದು ಫಿಲಿಪ್ಪನನ್ನು ಕೇಳಿದನು.
[35] ಪವಿತ್ರ ವೇದದ ಆ ಭಾಗದಿಂದಲೇ ಪ್ರಾರಂಭಿಸಿ ಫಿಲಿಪ್ಪನು ಅವನಿಗೆ ಯೇಸುವಿನ ಕುರಿತಾದ ಶುಭವಾರ್ತೆಯನ್ನು ತಿಳಿಸಿದನು.
[36] ಮಾರ್ಗದಲ್ಲಿ ಅವರು ಮುಂದೆ ಪ್ರಯಾಣ ಮಾಡುತ್ತಿದ್ದಾಗ, ನೀರಿದ್ದ ಸ್ಥಳಕ್ಕೆ ಬಂದರು. ಆಗ ಕಂಚುಕಿ, “ಇಗೋ ಇಲ್ಲಿ ನೀರಿದೆ. ನನಗೆ ಏಕೆ ದೀಕ್ಷಾಸ್ನಾನ ಕೊಡಬಾರದು?” ಎಂದನು.
[37] “ನೀನು ಪೂರ್ಣಹೃದಯದಿಂದ ನಂಬಿದರೆ ನಿನಗೆ ದೀಕ್ಷಾಸ್ನಾನವಾಗಬಹುದು,” ಎಂದು ಫಿಲಿಪ್ಪನು ಹೇಳಿದನು. “ಕ್ರಿಸ್ತ ಯೇಸುವೇ ದೇವಪುತ್ರರು ಎಂದು ನಾನು ನಂಬುತ್ತೇನೆ,” ಎಂದು ಕಂಚುಕಿಯು ಪ್ರಕಟಿಸಿದನು.
[38] ರಥವನ್ನು ನಿಲ್ಲಿಸಲು ಅಪ್ಪಣೆಕೊಟ್ಟ ನಂತರ ಫಿಲಿಪ್ಪನು ಮತ್ತು ಕಂಚುಕಿ ಇಬ್ಬರೂ ನೀರೊಳಗೆ ಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.
[39] ಅವರು ನೀರಿನಿಂದ ಹೊರಗೆ ಬಂದಾಗ, ತಕ್ಷಣವೇ ಕರ್ತದೇವರ ಆತ್ಮರು ಫಿಲಿಪ್ಪನನ್ನು ತೆಗೆದುಕೊಂಡು ಹೋದರು. ಆಮೇಲೆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಕಂಚುಕಿಯು ಸಂತೋಷಪಡುತ್ತಾ ತನ್ನ ಮಾರ್ಗದಲ್ಲಿ ಹೊರಟುಹೋದನು.
[40] ಫಿಲಿಪ್ಪನು, ಅಜೋತಿನಲ್ಲಿ ಕಾಣಿಸಿಕೊಂಡು, ಕೈಸರೈಯ ತಲುಪುವ ತನಕ ಎಲ್ಲಾ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಪ್ರಯಾಣಮಾಡಿದನು.