[1] ಕೆಲವು ಜನರು ಯೂದಾಯದಿಂದ ಅಂತಿಯೋಕ್ಯಕ್ಕೆ ಬಂದು ಅಲ್ಲಿಯ ಸಹೋದರರಿಗೆ, “ಮೋಶೆ ಬೋಧಿಸಿದ ಪದ್ಧತಿಯಂತೆ ನೀವು ಸುನ್ನತಿ ಹೊಂದದಿದ್ದರೆ ನೀವು ರಕ್ಷಣೆ ಹೊಂದಲಾರಿರಿ,” ಎಂದು ಬೋಧಿಸತೊಡಗಿದರು.
[2] ಇದರಿಂದ ಪೌಲ, ಬಾರ್ನಬರು ಅವರೊಂದಿಗೆ ಭಿನ್ನಾಭಿಪ್ರಾಯವುಳ್ಳವರಾಗಿ ತೀವ್ರ ವಿವಾದವುಂಟಾಯಿತು. ಈ ಪ್ರಶ್ನೆಯ ವಿಷಯದಲ್ಲಿ ಅಪೊಸ್ತಲರನ್ನೂ ಹಿರಿಯರನ್ನೂ ಭೇಟಿಯಾಗಲು, ತಮ್ಮಲ್ಲಿ ಬೇರೆ ಕೆಲವರು ಪೌಲ, ಬಾರ್ನಬರೊಂದಿಗೆ ಯೆರೂಸಲೇಮಿಗೆ ಹೋಗಬೇಕೆಂದು ನಿರ್ಣಯಿಸಲಾಯಿತು.
[3] ಆದ್ದರಿಂದ ಸಭೆಯವರು ಅವರನ್ನು ಸಾಗಕಳುಹಿಸಲು, ಅವರು ಫೊಯಿನಿಕೆಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣ ಮಾಡುವಾಗ, ಯೆಹೂದ್ಯರಲ್ಲದವರ ಪರಿವರ್ತನೆಯನ್ನು ವಿವರವಾಗಿ ಅಲ್ಲಿಯವರೆಗೆ ತಿಳಿಸುತ್ತಾ ಸಹೋದರರೆಲ್ಲರಿಗೂ ಮಹಾಸಂತೋಷವನ್ನುಂಟುಮಾಡಿದರು.
[4] ಅವರು ಯೆರೂಸಲೇಮನ್ನು ತಲುಪಿದಾಗ, ಸಭೆಯವರು, ಅಪೊಸ್ತಲರು ಹಾಗೂ ಹಿರಿಯರು ಅವರನ್ನು ಸ್ವಾಗತಿಸಿದರು. ದೇವರು ತಮ್ಮ ಮುಖಾಂತರವಾಗಿ ಮಾಡಿದ್ದನ್ನು ಅವರು ತಿಳಿಸಿದರು.
[5] ಆದರೆ ಫರಿಸಾಯರ ಪಂಗಡಕ್ಕೆ ಸೇರಿದ ಕೆಲವು ವಿಶ್ವಾಸಿಗಳು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದವರು ಸುನ್ನತಿ ಹೊಂದಬೇಕು ಮತ್ತು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು,” ಎಂದರು.
[6] ಅಪೊಸ್ತಲರು ಮತ್ತು ಹಿರಿಯರು ಈ ವಿಷಯದ ಕುರಿತಾಗಿ ವಿಚಾರಿಸಲು ಸಭೆ ಸೇರಿದರು.
[7] ಬಹಳ ಚರ್ಚೆಯಾಗುತ್ತಿರುವಾಗ ಪೇತ್ರನು ಎದ್ದು ನಿಂತು ಅವರಿಗೆ, “ಸಹೋದರರೇ, ಯೆಹೂದ್ಯರಲ್ಲದವರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂಬ ಉದ್ದೇಶದಿಂದ ನಿಮ್ಮೊಳಗಿಂದ ನನ್ನನ್ನು ದೇವರು ಬಹು ದಿನಗಳ ಹಿಂದೆ ಆಯ್ದುಕೊಂಡರೆಂಬುದು ನಿಮಗೆ ತಿಳಿದೇ ಇದೆ.
[8] ಹೃದಯವನ್ನು ಬಲ್ಲ ದೇವರು, ನಮಗೆ ಪವಿತ್ರಾತ್ಮ ದೇವರನ್ನು ಕೊಟ್ಟಂತೆಯೇ ಯಹೂದ್ಯರಲ್ಲದವರಿಗೂ ದಯಪಾಲಿಸಿ, ಅವರ ಬಗ್ಗೆ ಸಾಕ್ಷಿಕೊಟ್ಟರು.
[9] ದೇವರು ಅವರಿಗೂ ನಮಗೂ ಮಧ್ಯದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೆ, ವಿಶ್ವಾಸದ ಮೂಲಕ ಅವರ ಹೃದಯಗಳನ್ನು ಶುದ್ಧೀಕರಿಸಿದರು.
[10] ಆದ್ದರಿಂದ ನಾವಾಗಲಿ, ನಮ್ಮ ಪಿತೃಗಳಾಗಲಿ, ಹೊರಲಾರದ ನೊಗವನ್ನು ಯೆಹೂದ್ಯರಲ್ಲದ ಶಿಷ್ಯರ ಹೆಗಲ ಮೇಲೆ ಹಾಕಿ, ಈಗ ಏಕೆ ದೇವರನ್ನು ಪರೀಕ್ಷಿಸಲು ಪ್ರಯತ್ನಿಸುತ್ತೀರಿ?
[11] ಆದರೆ ನಾವು ರಕ್ಷಣೆ ಹೊಂದಿದ್ದು ನಮ್ಮ ಕರ್ತ ಯೇಸುವಿನ ಕೃಪೆಯಿಂದಲೇ, ಹಾಗೆಯೇ ಅವರೂ ಹೊಂದುವರು ಎಂಬುದು ನಮ್ಮ ನಂಬಿಕೆ,” ಎಂದನು.
[12] ಇದಕ್ಕೆ ಜನರು ಮೌನವಾಗಿದ್ದು, ಯೆಹೂದ್ಯರಲ್ಲದವರ ಮಧ್ಯದಲ್ಲಿ ದೇವರು ತಮ್ಮ ಮೂಲಕ ಮಾಡಿದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಕುರಿತು ಬಾರ್ನಬ ಮತ್ತು ಪೌಲ ಹೇಳುವುದನ್ನು ಕೇಳಿಸಿಕೊಂಡರು.
[13] ಅವರು ಹೇಳಿ ಮುಗಿಸಿದಾಗ, ಯಾಕೋಬನು ಮಾತನಾಡಿ, “ಸಹೋದರರೇ, ನನ್ನ ಮಾತುಗಳನ್ನು ಆಲಿಸಿರಿ,
[14] ದೇವರು ಯೆಹೂದ್ಯರಲ್ಲದವರೊಳಗಿಂದ ತಮ್ಮ ಹೆಸರಿಗಾಗಿ ಜನರನ್ನು ಆರಿಸಿಕೊಳ್ಳಲು ಹೇಗೆ ದಯೆತೋರಿಸಿದರೆಂದು ಸೀಮೋನನು ಈಗಾಗಲೇ ನಮಗೆ ವಿವರಿಸಿದ್ದಾನೆ.
[15] ಪ್ರವಾದಿಗಳು ಬರೆದಿರುವ ಮಾತುಗಳು ಇದಕ್ಕೆ ಸರಿಹೊಂದುತ್ತವೆ:
[16] “ ‘ಇದಾದನಂತರ ನಾನು ಮರಳಿ ಬರುವೆನು. ಬಿದ್ದುಹೋದ ದಾವೀದನ ಗುಡಾರವನ್ನು ಕಟ್ಟುವೆನು. ಪಾಳುಬಿದ್ದದ್ದನ್ನು ಜೀರ್ಣೋದ್ಧಾರ ಮಾಡಿ, ಅದನ್ನು ಪುನರುಜ್ಜೀವನಗೊಳಿಸುವೆನು.
[17] ಆಗ ಉಳಿದಿರುವ ಜನರಲ್ಲಿ ಯೆಹೂದ್ಯರಲ್ಲದವರೂ ನನ್ನ ಹೆಸರೆತ್ತಿ ಕರೆಯುವವರೂ ಸಹ ಕರ್ತದೇವರನ್ನು ಹುಡುಕುವರು,’
[18] ಎಂದು ನಿತ್ಯತ್ವವನ್ನು ತಿಳಿದಿರುವವರೂ ಇವುಗಳನ್ನೆಲ್ಲಾ ಮಾಡುವವರೂ ಆಗಿರುವ ದೇವರು ಹೇಳುತ್ತಾರೆ.
[19] “ಆದ್ದರಿಂದ, ದೇವರ ಕಡೆಗೆ ತಿರುಗುತ್ತಿರುವ ಯೆಹೂದ್ಯರಲ್ಲದವರಿಗೆ ನಾವು ತೊಂದರೆ ಮಾಡಬಾರದು ಎಂಬುದೇ ನನ್ನ ತೀರ್ಮಾನ.
[20] ಅದರ ಬದಲಾಗಿ ನಾವು ಅವರಿಗೆ, ದೇವರಲ್ಲದವುಗಳಿಂದ ಮಲಿನವಾದ ಆಹಾರದಿಂದಲೂ ಅನೈತಿಕತೆಯಿಂದಲೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ರಕ್ತದಿಂದಲೂ ದೂರವಿರಬೇಕು.
[21] ಏಕೆಂದರೆ ಆರಂಭ ಕಾಲದಿಂದಲೂ ಪ್ರತಿಯೊಂದು ಪಟ್ಟಣದಲ್ಲಿ ಮೋಶೆಯ ಗ್ರಂಥವನ್ನು ಬೋಧಿಸಲಾಗುತ್ತದೆ ಹಾಗೂ ಪ್ರತಿ ಸಬ್ಬತ್ ದಿನ ಸಭಾಮಂದಿರಗಳಲ್ಲಿ ಓದಲಾಗುತ್ತದೆ,” ಎಂದು ಹೇಳಿದನು.
[22] ಆಗ ಅಪೊಸ್ತಲರು ಮತ್ತು ಹಿರಿಯರು ಇಡೀ ಸಭೆಯ ಸಮ್ಮತಿ ಪಡೆದು, ಸಹೋದರರಲ್ಲಿ ನಾಯಕರಾಗಿದ್ದ ಬಾರ್ಸಬನೆಂದು ಕರೆಯಲಾದ ಯೂದ ಮತ್ತು ಸೀಲ ಎಂಬಿಬ್ಬರನ್ನು ಆಯ್ದುಕೊಂಡರು. ಅವರನ್ನು ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಲು ನಿರ್ಧರಿಸಿದರು.
[23] ಅವರ ಕೈಯಿಂದ ಬರೆದು ಕೊಟ್ಟದ್ದೇನೆಂದರೆ: ಅಪೊಸ್ತಲರು ಹಾಗೂ ಹಿರಿಯ ಸಹೋದರರು, ಅಂತಿಯೋಕ್ಯ, ಸಿರಿಯ ಮತ್ತು ಕಿಲಿಕ್ಯದಲ್ಲಿ ವಾಸಿಸುವ ಯೆಹೂದ್ಯರಲ್ಲದವರೊಳಗಿನ ಸಹೋದರರಿಗೆ: ವಂದನೆಗಳು.
[24] ನಮ್ಮಿಂದ ಕೆಲವರು ನಮ್ಮ ಅಪ್ಪಣೆಯಿಲ್ಲದೆ ತಮ್ಮ ಮಾತುಗಳಿಂದ ನಿಮ್ಮ ಮನಸ್ಸಿಗೆ ತೊಂದರೆ ಕೊಟ್ಟರೆಂದು ನಾವು ಕೇಳಿದೆವು.
[25] ಆದ್ದರಿಂದ ಕೆಲವರನ್ನು ಆಯ್ದುಕೊಂಡು ಅವರನ್ನು ನಮ್ಮ ಪ್ರಿಯರಾದ ಬಾರ್ನಬ ಮತ್ತು ಪೌಲರೊಂದಿಗೆ ನಿಮ್ಮ ಬಳಿಗೆ ಕಳುಹಿಸುವುದು ಯುಕ್ತವೆಂದು ಒಂದೇ ಮನಸ್ಸಾಗಿರುವ ನಮಗೆ ತೋಚಿತು.
[26] ಅವರು ನಮ್ಮ ಕರ್ತ ಕ್ರಿಸ್ತ ಯೇಸುವಿನ ಹೆಸರಿನ ಪರವಾಗಿ ತಮ್ಮ ಪ್ರಾಣಗಳನ್ನೇ ಬಿಟ್ಟು ಕೊಡುವವರಾಗಿದ್ದಾರೆ.
[27] ಆದ್ದರಿಂದ ನಾವು ಈ ಸಂಗತಿಗಳನ್ನು ಬಾಯಿಮಾತುಗಳಿಂದ ಪ್ರಕಟಿಸುವುದಕ್ಕಾಗಿ ಯೂದ ಮತ್ತು ಸೀಲರನ್ನು ಕಳುಹಿಸುತ್ತಿದ್ದೇವೆ.
[28] ಈ ಅಗತ್ಯವಾದವುಗಳನ್ನು ಬಿಟ್ಟು ಬೇರೆಯವುಗಳನ್ನು ನಿಮ್ಮ ಮೇಲೆ ಹೊರೆಯಾಗಿ ಹಾಕಬಾರದೆಂಬುದು, ಪವಿತ್ರಾತ್ಮರಿಗೂ ನಮಗೂ ಒಳ್ಳೆಯದೆಂದು ತೋಚಿತು.
[29] ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕು. ಇವುಗಳಿಂದ ನಿಮ್ಮನ್ನು ಕಾಪಾಡಿಕೊಳ್ಳುವುದರಿಂದ ನಿಮಗೆ ಒಳಿತಾಗುವುದು. ನಿಮಗೆ ಶುಭವಾಗಲಿ.
[30] ಅವರು ಹೊರಟುಹೋಗಿ ಅಂತಿಯೋಕ್ಯವನ್ನು ತಲುಪಿದರು. ಅಲ್ಲಿ ದೇವಸಭೆಯನ್ನು ಕೂಡಿಸಿ ಆ ಪತ್ರವನ್ನು ಕೊಟ್ಟರು.
[31] ಸಭೆಯವರು ಅದನ್ನು ಓದಿ ಅದರಲ್ಲಿದ್ದ ಆದರಣೆ ಮಾತುಗಳಿಗಾಗಿ ಸಂತೋಷಪಟ್ಟರು.
[32] ಯೂದ ಮತ್ತು ಸೀಲರು ಸ್ವತಃ ಪ್ರವಾದಿಗಳಾಗಿದ್ದುದರಿಂದ ಅಲ್ಲಿದ್ದ ವಿಶ್ವಾಸಿಗಳನ್ನು ಅನೇಕ ಬುದ್ಧಿವಾದಗಳಿಂದ ಬಲಪಡಿಸಿದರು.
[33] ಅವರು ಕೆಲವು ದಿನಗಳು ಇದ್ದ ನಂತರ ಅಲ್ಲಿಯ ವಿಶ್ವಾಸಿಗಳನ್ನು ಬೀಳ್ಕೊಟ್ಟು ತಮ್ಮನ್ನು ಕಳುಹಿಸಿಕೊಟ್ಟವರ ಬಳಿಗೆ ಹಿಂದಿರುಗಿದರು.
[34] ಸೀಲನು ಅಲ್ಲಿಯೇ ಇರಲು ತೀರ್ಮಾನಿಸಿದನು.
[35] ಆದರೆ ಪೌಲನು ಮತ್ತು ಬಾರ್ನಬರು ಅಂತಿಯೋಕ್ಯದಲ್ಲಿಯೇ ಉಳಿದುಕೊಂಡು ಅನೇಕರಿಗೆ ಕರ್ತ ಯೇಸುವಿನ ವಾಕ್ಯವನ್ನು ಬೋಧಿಸುತ್ತಾ ಸುವಾರ್ತೆ ಸಾರಿದರು.
[36] ಕೆಲವು ದಿನಗಳ ನಂತರ ಪೌಲನು ಬಾರ್ನಬನಿಗೆ, “ನಾವು ಕರ್ತ ಯೇಸುವಿನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ಹೋಗಿ ಅಲ್ಲಿದ್ದ ವಿಶ್ವಾಸಿಗಳನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ,” ಎಂದು ಹೇಳಿದನು.
[37] ಬಾರ್ನಬನು ಮಾರ್ಕ ಎಂಬ ಹೆಸರಿನ ಯೋಹಾನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದು ಬಯಸಿದನು,
[38] ಆದರೆ ಪಂಫುಲ್ಯದಲ್ಲಿ ತಮ್ಮನ್ನು ಬಿಟ್ಟು ತಮ್ಮೊಂದಿಗೆ ಸೇವೆಗೆ ಸಹಕರಿಸದೆ ಹೋದ ಮಾರ್ಕನನ್ನು ಕರೆದುಕೊಂಡು ಹೋಗುವುದು ಸರಿಯಲ್ಲವೆಂದು ಪೌಲನು ಭಾವಿಸಿದನು.
[39] ಇದರಿಂದ ಅವರಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾಗಿ ಹೋಗಬೇಕಾಯಿತು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸೈಪ್ರಸ್ ದ್ವೀಪಕ್ಕೆ ಪ್ರಯಾಣಮಾಡಿದನು,
[40] ಆದರೆ ಪೌಲನು ಸೀಲನನ್ನು ಆರಿಸಿಕೊಂಡು ಹೋದನು. ವಿಶ್ವಾಸಿಗಳಿಂದ ಅವನನ್ನು ಕರ್ತ ಯೇಸುವಿನ ಕೃಪೆಗೆ ಒಪ್ಪಿಸಿ, ಕಳುಹಿಸಿಕೊಟ್ಟುರು.
[41] ಪೌಲನು ಸಿರಿಯ ಮತ್ತು ಕಿಲಿಕ್ಯ ಸೀಮೆಗಳನ್ನು ಹಾದುಹೋಗುತ್ತಾ, ಅಲ್ಲಿದ್ದ ಸಭೆಗಳ ನಂಬಿಕೆಯನ್ನು ಬಲಪಡಿಸಿದನು.