[1] ನಾವು ಅವರನ್ನು ಅಗಲಿದ ನಂತರ, ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ಎಂಬಲ್ಲಿಗೆ ಹೋಗಿ ಅಲ್ಲಿಂದ ಪತರಕ್ಕೆ ಬಂದೆವು.
[2] ಅಲ್ಲಿ ಫೊಯಿನಿಕೆಗೆ ಹೋಗುವ ನೌಕೆಯನ್ನು ಕಂಡು, ಅದನ್ನೇರಿ ಪ್ರಯಾಣ ಮುಂದುವರಿಸಿದೆವು.
[3] ಸೈಪ್ರಸ್ ಹತ್ತಿರ ಬಂದು ಅದರ ದಕ್ಷಿಣಕ್ಕೆ ಪ್ರಯಾಣಮಾಡಿ ಸಿರಿಯಕ್ಕೆ ಹೋದೆವು. ನಮ್ಮ ನೌಕೆಯಲ್ಲಿದ್ದ ಸರಕುಗಳನ್ನು ಇಳಿಸಬೇಕಾಗಿದ್ದ ಟೈರ್ ಎಂಬಲ್ಲಿ ಬಂದು ಇಳಿದೆವು.
[4] ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಅವರೊಂದಿಗೆ ಏಳು ದಿನ ಇದ್ದೆವು. ಪೌಲನು ಯೆರೂಸಲೇಮಿಗೆ ಹೋಗಬಾರದೆಂದು ಅವರು ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದರು.
[5] ಆದರೆ ನಮ್ಮ ಸಮಯ ಮುಗಿದಾಗ, ನಮ್ಮ ಪ್ರಯಾಣವನ್ನು ಮುಂದುವರಿಸಬೇಕೆಂದಿದ್ದೆವು. ಶಿಷ್ಯರೆಲ್ಲರೂ ಅವರ ಮಡದಿ ಮಕ್ಕಳೂ ಪಟ್ಟಣದ ಹೊರಗಿನವರೆಗೆ ನಮ್ಮೊಂದಿಗೆ ಬಂದರು. ಸಮುದ್ರ ತೀರದಲ್ಲಿ ನಾವು ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
[6] ಪರಸ್ಪರ ಬೀಳ್ಕೊಡುಗೆಯಾದ ನಂತರ, ನಾವು ನೌಕೆಯನ್ನೇರಿದೆವು. ಅವರು ತಮ್ಮ ಮನೆಗೆ ಹೊರಟು ಹೋದರು.
[7] ಟೈರ್ ಪಟ್ಟಣದಿಂದ ನಮ್ಮ ಪ್ರಯಾಣ ಮುಂದುವರಿಸಿ ಪ್ತೊಲೆಮಾಯ ಎಂಬಲ್ಲಿಗೆ ಬಂದಿಳಿದೆವು. ಅಲ್ಲಿಯ ಸಹೋದರರನ್ನು ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು.
[8] ಮರುದಿನ ಹೊರಟು ಕೈಸರೈಯ ಪಟ್ಟಣವನ್ನು ತಲುಪಿದೆವು. ಅಲ್ಲಿ ಏಳು ಜನರಲ್ಲಿ ಒಬ್ಬನಾದ, ಫಿಲಿಪ್ಪನೆಂಬ ಸುವಾರ್ತಿಕನ ಮನೆಯಲ್ಲಿ ತಂಗಿದೆವು.
[9] ಅವನಿಗೆ ಅವಿವಾಹಿತರಾದ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರು. ಅವರು ಪ್ರವಾದಿಸುವವರಾಗಿದ್ದರು.
[10] ನಾವು ಅಲ್ಲಿ ಕೆಲವು ದಿನ ಇದ್ದ ತರುವಾಯ, ಅಗಬ ಎಂಬ ಹೆಸರಿನ ಪ್ರವಾದಿ ಯೂದಾಯದಿಂದ ಬಂದನು.
[11] ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳಿಗೆ ಅದನ್ನು ಕಟ್ಟಿಕೊಂಡು, “ಪವಿತ್ರಾತ್ಮರು ಇಂತೆನ್ನುತ್ತಾರೆ, ‘ಈ ನಡುಪಟ್ಟಿ ಯಾರದೋ ಆ ಮನುಷ್ಯನನ್ನು ಯೆರೂಸಲೇಮಿನ ಯೆಹೂದ್ಯರು ಈ ರೀತಿಯಲ್ಲಿ ಬಂಧಿಸಿ, ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು,’ ” ಎಂದನು.
[12] ಇದನ್ನು ನಾವು ಕೇಳಿದಾಗ, ನಾವೂ ಅಲ್ಲಿಯ ಜನರೂ ಯೆರೂಸಲೇಮಿಗೆ ಹೋಗಬಾರದೆಂದು ಪೌಲನನ್ನು ಬೇಡಿಕೊಂಡೆವು.
[13] ಆಗ ಪೌಲನು, “ನೀವೇಕೆ ಅತ್ತು ನನ್ನ ಹೃದಯ ಒಡೆಯುತ್ತೀರಿ? ಬಂಧಿತನಾಗಲಷ್ಟೇ ಅಲ್ಲ, ನಮ್ಮ ಕರ್ತ ಯೇಸುವಿನ ಹೆಸರಿನ ನಿಮಿತ್ತ ಯೆರೂಸಲೇಮಿನಲ್ಲಿ ನಾನು ಸಾಯಲಿಕ್ಕೂ ಸಿದ್ಧನಾಗಿದ್ದೇನೆ,” ಎಂದನು.
[14] ಪೌಲನು ಸಮ್ಮತಿಸದೆ ಇದ್ದ ಕಾರಣ, “ಕರ್ತ ಯೇಸುವಿನ ಚಿತ್ತ ನೆರವೇರಲಿ,” ಎಂದು ಹೇಳಿ ನಾವು ಸುಮ್ಮನಾದೆವು.
[15] ಇದಾದನಂತರ ನಾವು ಸಿದ್ಧರಾಗಿ ಯೆರೂಸಲೇಮಿಗೆ ಹೋದೆವು.
[16] ಕೈಸರೈಯದಿಂದ ಕೆಲವು ಶಿಷ್ಯರು ನಮ್ಮೊಂದಿಗೆ ಬಂದು, ಮ್ನಾಸೋನ ಎಂಬುವನ ಮನೆಗೆ ನಾವು ಇಳಿದುಕೊಳ್ಳುವಂತೆ ಕರೆದುಕೊಂಡು ಹೋದರು. ಅವನು ಸೈಪ್ರಸ್ ದಿಂದ ಬಂದ ಪ್ರಥಮ ಶಿಷ್ಯರಲ್ಲಿ ಒಬ್ಬನಾಗಿದ್ದನು.
[17] ನಾವು ಯೆರೂಸಲೇಮನ್ನು ತಲುಪಿದಾಗ, ಸಹೋದರರು ನಮ್ಮನ್ನು ಸಂತೋಷದಿಂದ ಸ್ವೀಕರಿಸಿದರು.
[18] ಮರುದಿನ ನಾವೆಲ್ಲರೂ ಪೌಲನೊಂದಿಗೆ ಯಾಕೋಬನನ್ನು ನೋಡಲು ಹೋದೆವು. ಅಲ್ಲಿ ಎಲ್ಲಾ ಸಭೆಹಿರಿಯರೂ ಇದ್ದರು.
[19] ಪೌಲನು ಅವರನ್ನು ವಂದಿಸಿ, ತನ್ನ ಸೇವೆಯ ಮೂಲಕ ದೇವರು ಯೆಹೂದ್ಯರಲ್ಲದವರ ಮಧ್ಯದಲ್ಲಿ ಮಾಡಿದ ಕಾರ್ಯಗಳನ್ನು ವಿವರಿಸಿದನು.
[20] ಅವರು ಅದನ್ನು ಕೇಳಿ, ದೇವರನ್ನು ಕೊಂಡಾಡಿದರು. ಅನಂತರ ಪೌಲನಿಗೆ, “ಸಹೋದರನೇ, ಸಾವಿರಾರು ಜನ ಯೆಹೂದ್ಯರು ನಂಬಿರುವುದನ್ನು ಕಾಣುತ್ತೀಯಲ್ಲಾ, ಅವರೆಲ್ಲರೂ ಮೋಶೆಯ ನಿಯಮದ ಅಭಿಮಾನಿಗಳಾಗಿದ್ದರು.
[21] ನೀನು ಯೆಹೂದ್ಯರಲ್ಲದವರ ಮಧ್ಯದಲ್ಲಿ ವಾಸಿಸುತ್ತಿರುವ ಯೆಹೂದ್ಯರಿಗೆ, ‘ನೀವು ಮೋಶೆಯ ನಿಯಮವನ್ನು ಅನುಸರಿಸಬೇಡಿರಿ, ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಬೇಡಿರಿ,’ ಎಂದು ಬೋಧಿಸುವುದಾಗಿ ನಿನ್ನ ವಿಷಯದಲ್ಲಿ ಅವರಿಗೆ ತಿಳಿದು ಬಂದಿದೆ.
[22] ಹೀಗಿರುವಲ್ಲಿ ನಾವೇನು ಮಾಡೋಣ? ನೀನು ಇಲ್ಲಿಗೆ ಬಂದಿರುವ ವಿಷಯವೂ ಅವರಿಗೆ ಗೊತ್ತಾಗುವುದು.
[23] ಆದ್ದರಿಂದ ನಾವು ನಿನಗೆ ಹೇಳುವಂತೆ ಮಾಡು, ಹರಕೆ ಹೊತ್ತ ನಾಲ್ವರು ನಮ್ಮಲ್ಲಿ ಇದ್ದಾರೆ.
[24] ನೀನು ಇವರನ್ನು ಕರೆದುಕೊಂಡು ಹೋಗಿ, ಅವರೊಂದಿಗೆ ನಿನ್ನನ್ನು ಶುದ್ಧಿಮಾಡಿಕೊಂಡು, ಅವರು ತಮ್ಮ ಕ್ಷೌರ ಮಾಡಿಸಿಕೊಳ್ಳುವ ಖರ್ಚನ್ನು ನೀನೇ ಪೂರೈಸು. ಆಗ ನಿನ್ನ ವಿಷಯದಲ್ಲಿ ಕೇಳಿರುವ ಸಂಗತಿಗಳು ನಿಜವಲ್ಲ ಮತ್ತು ನೀನು ಮೋಶೆಯ ನಿಯಮಕ್ಕನುಸಾರವಾಗಿ ನಡೆದುಕೊಳ್ಳುತ್ತೀ ಎಂದು ಎಲ್ಲರಿಗೂ ತಿಳಿದುಬರುವುದು.
[25] ಯೆಹೂದ್ಯರಲ್ಲದವರಿಂದ ಬಂದ ವಿಶ್ವಾಸಿಗಳಿಗಾದರೋ, ಅವರು ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕೆಂದು ನಾವು ಬರೆದ ನಮ್ಮ ತೀರ್ಮಾನವನ್ನು ತಿಳಿಸಿದ್ದೇವೆ,” ಎಂದರು.
[26] ಮರುದಿನ ಪೌಲನು ಆ ನಾಲ್ವರೊಂದಿಗೆ ತನ್ನನ್ನು ಶುದ್ಧೀಕರಿಸಿಕೊಂಡನು. ಅನಂತರ ಶುದ್ಧಾಚಾರ ಮುಗಿಯುವ ದಿನಗಳ ಬಗ್ಗೆ ತಿಳಿಸುವುದಕ್ಕಾಗಿ ದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಅರ್ಪಣೆಯು ಆಗಬೇಕೆಂಬುದರ ಬಗ್ಗೆಯೂ ಸೂಚಿಸಿದನು.
[27] ಏಳು ದಿನಗಳ ಅವಧಿ ಮುಗಿಯುತ್ತಿದ್ದಾಗ, ಏಷ್ಯಾ ಪ್ರಾಂತದ ಕೆಲವು ಯೆಹೂದ್ಯ ಜನರು ದೇವಾಲಯದಲ್ಲಿ ಪೌಲನನ್ನು ಕಂಡರು. ಅವರು ಇಡೀ ಜನಸಮೂಹವನ್ನು ಉದ್ರೇಕಿಸಿ ಪೌಲನನ್ನು ಹಿಡಿದರು.
[28] “ಇಸ್ರಾಯೇಲರೇ, ನಮಗೆ ಸಹಾಯಮಾಡಿರಿ! ನಮ್ಮ ಜನರಿಗೂ ನಮ್ಮ ನಿಯಮಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲಾ ಜನರಿಗೆ ಬೋಧಿಸುತ್ತಿರುವ ಮನುಷ್ಯನು ಇವನೇ. ಅಷ್ಟೇ ಅಲ್ಲ, ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪವಿತ್ರ ಸ್ಥಳವನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿ ಹೇಳಿದರು.
[29] ಅವರು ಮೊದಲು ಪಟ್ಟಣದಲ್ಲಿ ಪೌಲನೊಂದಿಗೆ ಎಫೆಸದ ತ್ರೊಫಿಮ ಎಂಬವನು ಇದ್ದುದನ್ನು ಕಂಡಿದ್ದರಿಂದ, ಪೌಲನು ಈಗ ಅವನನ್ನು ದೇವಾಲಯದೊಳಗೆ ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು.
[30] ಇಡೀ ಪಟ್ಟಣದಲ್ಲೇ ಕೋಲಾಹಲವೆದ್ದಿತು. ಜನರು ಎಲ್ಲಾ ದಿಕ್ಕುಗಳಿಂದ ಓಡೋಡುತ್ತಾ ಬಂದು. ಪೌಲನನ್ನು ಹಿಡಿದುಕೊಂಡು ದೇವಾಲಯದೊಳಗಿಂದ ಹೊರಗೆಳೆದುಕೊಂಡು ಹೋದರು. ಕೂಡಲೇ ದ್ವಾರಗಳನ್ನು ಮುಚ್ಚಿಬಿಟ್ಟರು.
[31] ಅವರು ಪೌಲನನ್ನು ಕೊಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾಗ, ಯೆರೂಸಲೇಮ ಪಟ್ಟಣದಲ್ಲೆಲ್ಲಾ ಗೊಂದಲವೆದ್ದಿದೆ ಎಂಬ ಸುದ್ದಿ ಅಲ್ಲಿದ್ದ ರೋಮ್ ಸಹಸ್ರಾಧಿಪತಿಗೆ ತಲುಪಿತು.
[32] ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ಕರೆದುಕೊಂಡು ಜನಸಮೂಹದ ಬಳಿಗೆ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ ಅವನ ಸೈನಿಕರನ್ನೂ ಕಂಡಾಗ ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು.
[33] ಸಹಸ್ರಾಧಿಪತಿ ಅಲ್ಲಿಗೆ ಬಂದು ಪೌಲನನ್ನು ಬಂಧಿಸಿ, ಅವನನ್ನು ಎರಡು ಸರಪಣಿಗಳಿಂದ ಕಟ್ಟಬೇಕೆಂದು ಆಜ್ಞಾಪಿಸಿದನು. ಅನಂತರ “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು.
[34] ಜನಸಮೂಹದಲ್ಲಿದ್ದ ಇತರರು ವಿವಿಧ ರೀತಿಯಿಂದ ಕೂಗುತ್ತಿರಲು ಗಲಭೆಯ ನಿಮಿತ್ತ ಸಹಸ್ರಾಧಿಪತಿಗೆ ಸತ್ಯಾಂಶ ತಿಳಿಯಲಾಗಲಿಲ್ಲ. ಆದ್ದರಿಂದ ಪೌಲನನ್ನು ಸೈನಿಕ ಪಾಳ್ಯದೊಳಗೆ ತೆಗೆದುಕೊಂಡು ಹೋಗಲು ಆಜ್ಞಾಪಿಸಿದನು.
[35] ಪೌಲನನ್ನು ಮೆಟ್ಟಲುಗಳವರೆಗೆ ತೆಗೆದುಕೊಂಡು ಹೋದಾಗ ಜನರ ರೋಷ ಇನ್ನೂ ಬಲವಾದುದ್ದರಿಂದ ಸೈನಿಕರು ಅವನನ್ನು ಹೊತ್ತುಕೊಂಡು ಹೋಗಬೇಕಾಯಿತು.
[36] ಏಕೆಂದರೆ ಮುನ್ನುಗ್ಗುತ್ತಿದ್ದ ಜನರ ಗುಂಪು, “ಅವನನ್ನು ಕೊಲ್ಲಿರಿ!” ಎಂದು ಆರ್ಭಟಿಸುತ್ತಿತ್ತು.
[37] ಸೈನಿಕರು ಪೌಲನನ್ನು ಅವರ ಪಾಳ್ಯದೊಳಗೆ ಒಯ್ಯುತ್ತಿದ್ದಾಗ, ಅವನು ಸಹಸ್ರಾಧಿಪತಿಗೆ, “ನಾನು ನಿನ್ನೊಡನೆ ಸ್ವಲ್ಪ ಮಾತನಾಡುವುದಕ್ಕೆ ಅಪ್ಪಣೆಯಾದೀತೇ?” ಎಂದು ಕೇಳಲು, ಅದಕ್ಕೆ ಅವನು, “ನಿನಗೆ ಗ್ರೀಕ್ ಭಾಷೆಯೂ ಗೊತ್ತಿದೆಯೋ?”
[38] “ಹಾಗಾದರೆ ಕೆಲವು ಸಮಯದ ಹಿಂದೆ ದಂಗೆಯೆಬ್ಬಿಸಿ ನಾಲ್ಕು ಸಾವಿರ ಉಗ್ರಗಾಮಿಗಳನ್ನು ಅರಣ್ಯಕ್ಕೆ ಕರೆದುಕೊಂಡುಹೋದ ಈಜಿಪ್ಟಿನವನು ನೀನಲ್ಲವೋ?” ಎಂದನು.
[39] ಅದಕ್ಕೆ ಪೌಲನು, “ನಾನೊಬ್ಬ ಯೆಹೂದ್ಯನು, ಕಿಲಿಕ್ಯದ ತಾರ್ಸದವನು, ಪ್ರಸಿದ್ಧ ಪಟ್ಟಣದ ನಾಗರಿಕನು. ದಯವಿಟ್ಟು ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಕೊಡಬೇಕು,” ಎಂದು ಸಹಸ್ರಾಧಿಪತಿಯನ್ನು ಬೇಡಿಕೊಂಡನು.
[40] ಸಹಸ್ರಾಧಿಪತಿಯ ಅಪ್ಪಣೆ ಪಡೆದುಕೊಂಡು, ಪೌಲನು ಮೆಟ್ಟಲುಗಳ ಮೇಲೆ ನಿಂತುಕೊಂಡು ಜನಸಮೂಹಕ್ಕೆ ಸುಮ್ಮನಿರುವಂತೆ ಸನ್ನೆಮಾಡಲು, ಅವರು ಬಹು ನಿಶ್ಶಬ್ದರಾದಾಗ ಅವನು ಹೀಬ್ರೂ ಭಾಷೆಯಲ್ಲಿ ಅವರಿಗೆ ಹೀಗೆಂದನು: