Skip to content
Opens in a new window
Listen to this chapter • 8:36

[1] ನಾವು ಇಟಲಿಗೆ ಸಮುದ್ರ ಪ್ರಯಾಣ ಮಾಡಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಇತರ ಕೈದಿಗಳನ್ನೂ ಯೂಲ್ಯನೆಂಬ ಹೆಸರಿನ ಒಬ್ಬ ಶತಾಧಿಪತಿಗೆ ಒಪ್ಪಿಸಿದರು. ಅವನು ಚಕ್ರವರ್ತಿಯ ದಳಕ್ಕೆ ಸೇರಿದವನು.

[2] ಆಗ ಅದ್ರಮಿತ್ತಿಯದಿಂದ ಬಂದು ಏಷ್ಯಾ ಪ್ರಾಂತದ ಬಂದರುಗಳಿಗೆ ಹೋಗಲು ಸಿದ್ಧವಾಗಿದ್ದ ನೌಕೆಯನ್ನೇರಿ ನಾವು ಪ್ರಯಾಣ ಪ್ರಾರಂಭಿಸಿದೆವು. ಥೆಸಲೋನಿಕದಿಂದ ಬಂದ ಮಕೆದೋನ್ಯದ ಅರಿಸ್ತಾರ್ಕನು ನಮ್ಮೊಂದಿಗಿದ್ದನು.

[3] ಮರುದಿನ ನಾವು ಸೀದೋನಿಗೆ ತಲುಪಿದೆವು. ಪೌಲನಿಗೆ ಯೂಲ್ಯನು ದಯೆತೋರಿ ಅವನು ತನ್ನ ಸ್ನೇಹಿತರ ಬಳಿಗೆ ಹೋಗುವುದಕ್ಕೂ ಅವರಿಂದ ಉಪಚಾರವನ್ನು ಹೊಂದುವುದಕ್ಕೂ ಅನುಮತಿಸಿದನು.

[4] ಅಲ್ಲಿಂದ ಹೊರಟು, ಎದುರುಗಾಳಿ ಬೀಸುತ್ತಿದ್ದದರಿಂದ ನಾವು ಸಮುದ್ರ ಪ್ರಯಾಣಮಾಡಿ ಸೈಪ್ರಸ್ ದ್ವೀಪ ಸಮೀಪವಾಗಿ,

[5] ಕಿಲಿಕ್ಯಯ ಹಾಗೂ ಪಂಫುಲ್ಯ ಪ್ರಾಂತ ತೀರಗಳ ಎದುರಾಗಿರುವ ಸಮುದ್ರವನ್ನು ದಾಟಿ, ಲುಕೀಯ ಪ್ರಾಂತದ ಮುರ ಪಟ್ಟಣ ಎಂಬಲ್ಲಿಗೆ ತಲುಪಿದೆವು.

[6] ಅಲ್ಲಿ ಇಟಲಿಗೆ ಪ್ರಯಾಣಮಾಡುತ್ತಿದ್ದ ಅಲೆಕ್ಸಾಂದ್ರಿಯದ ನೌಕೆಯನ್ನು ಶತಾಧಿಪತಿಯು ಕಂಡು ನಮ್ಮನ್ನು ಆ ನೌಕೆಯಲ್ಲಿ ಹತ್ತಿಸಿದನು.

[7] ಅನೇಕ ದಿನಗಳವರೆಗೆ ನಮ್ಮ ಪ್ರಯಾಣ ನಿಧಾನವಾಗಿ ಸಾಗಿತು. ಕ್ನೀದ ಪಟ್ಟಣ ಎಂಬಲ್ಲಿಗೆ ತಲುಪುವವರೆಗೆ ಬಹಳ ಪ್ರಯಾಸ ಪಡಬೇಕಾಯಿತು. ಎದುರುಗಾಳಿಯು ಅಡ್ಡಿಯಾದದ್ದರಿಂದ, ಸಲ್ಮೋನೆ ಭೂಶಿರವನ್ನು ದಾಟಿ, ಅದರ ಎದುರಾಗಿರುವ ಕ್ರೇತದ್ವೀಪವನ್ನು ತಲುಪಿದೆವು.

[8] ಆ ದ್ವೀಪದ ಕರಾವಳಿಯಲ್ಲಿಯೇ ಕಷ್ಟದಿಂದ ಮುಂದೆ ಸಾಗುತ್ತಾ, “ಚಂದರೇವುಗಳು” ಎಂದು ಕರೆಯಲಾಗುವ ಸ್ಥಳಕ್ಕೆ ಬಂದೆವು. ಅದು ಲಸಾಯ ಪಟ್ಟಣಕ್ಕೆ ಸಮೀಪದಲ್ಲಿತ್ತು.

[9] ಬಹಳ ಸಮಯ ಕಳೆದುಹೋಯಿತು. ದೋಷಪರಿಹಾರದ ದಿನವು ಸಹ ಮುಗಿದು ಹೋಯಿತು. ಈ ಸಂದರ್ಭದಲ್ಲಿ ಸಮುದ್ರ ಪ್ರಯಾಣ ಅಪಾಯಕರವಾಗಿದ್ದುದರಿಂದ ಪೌಲನು,

[10] “ಸಹೋದರರೇ, ನಮ್ಮ ಸಮುದ್ರ ಪ್ರಯಾಣವು ಅಪಾಯಕಾರಿಯಾಗಿರುವಂತೆ ತೋರುತ್ತದೆ. ಇದರಿಂದ ನಮ್ಮ ನೌಕೆಗೂ ಸರಕಿಗೂ ಅಷ್ಟೇ ಅಲ್ಲ, ನಮ್ಮ ಪ್ರಾಣಗಳಿಗೂ ದೊಡ್ಡ ಹಾನಿ ಬರುವ ಸಂಭವವಿದೆ,” ಎಂದು ಎಚ್ಚರಿಸಿದನು.

[11] ಆದರೆ ಶತಾಧಿಪತಿಯು ಪೌಲನು ಹೇಳಿದ್ದಕ್ಕೆ ಕಿವಿಗೊಡದೆ ನೌಕೆಯ ನಾವಿಕನು ಹಾಗೂ ಯಜಮಾನನು ಹೇಳಿದ ಮಾತುಗಳಿಗೆ ಕಿವಿಗೊಟ್ಟನು.

[12] ಆದರೆ ಚಳಿಗಾಲ ಕಳೆಯಲು ಆ ಬಂದರು ಅನುಕೂಲವಾಗಿರಲಿಲ್ಲ. ಆದ್ದರಿಂದ ಹೆಚ್ಚು ಮಂದಿ ಪ್ರಯಾಣ ಮುಂದುವರಿಸಬೇಕೆಂದು ತೀರ್ಮಾನಿಸಿದರು. ಸಾಧ್ಯವಾದರೆ ಫೊಯಿನಿಕ್ಸನ್ನು ತಲುಪಿ ಅಲ್ಲಿಯೇ ಚಳಿಗಾಲವನ್ನು ಕಳೆಯಬೇಕೆಂಬುದು ಅವರ ಯೋಚನೆಯಾಗಿತ್ತು. ಫೊಯಿನಿಕ್ಸ, ಕ್ರೇತದ್ವೀಪದ ಒಂದು ಬಂದರು. ಇದು ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿತ್ತು.

[13] ದಕ್ಷಿಣ ಸುಳಿಗಾಳಿ ಬೀಸಲು ಪ್ರಾರಂಭಿಸಿದಾಗ, ಅವರು ತಾವು ಬಯಸಿದ್ದು ದೊರೆಯಿತೆಂದು ಭಾವಿಸಿದರು; ಆದ್ದರಿಂದ ಅವರು ಲಂಗರು ಎತ್ತಿಕಟ್ಟಿ ಕ್ರೇತದ್ವೀಪದ ತೀರದ ಸಮೀಪವಾಗಿಯೇ ಸಮುದ್ರ ಪ್ರಯಾಣ ಬೆಳೆಸಿದರು.

[14] ಆದರೆ ಸ್ವಲ್ಪ ಸಮಯದಲ್ಲಿಯೇ “ಈಶಾನ್ಯ ಮಾರುತ” ಎಂಬ ಪ್ರಚಂಡ ಗಾಳಿ ದ್ವೀಪದ ಕಡೆಯಿಂದ ಬೀಸತೊಡಗಿತು.

[15] ನೌಕೆ ಬಿರುಗಾಳಿಗೆ ಸಿಕ್ಕಿಕೊಂಡು ಮುಂದೆ ಹೋಗಲಾರದೆ ಇರಲು, ಗಾಳಿ ಬೀಸಿದ ಕಡೆಗೆ ನೂಕಿಸಿಕೊಂಡು ಹೋದೆವು.

[16] ಕ್ಲೌಡ ಎಂಬ ಪುಟ್ಟ ದ್ವೀಪದ ಮರೆಯಲ್ಲಿ ಹೋಗುತ್ತಿದ್ದಾಗ, ಜೀವರಕ್ಷಕ ದೋಣಿಯನ್ನು ಸರಿಪಡಿಸಿಕೊಂಡು ಹೋಗುವುದು ನಮಗೆ ಕಷ್ಟಕರವಾಯಿತು.

[17] ನೌಕೆಯವರು ಅದನ್ನು ಮೇಲಕ್ಕೆಳೆದು ಹಗ್ಗಗಳಿಂದ ನೌಕೆಯ ಕೆಳಭಾಗಕ್ಕೆ ಬಿಗಿಯಾಗಿ ಕಟ್ಟಿದರು. ಸುರ್ತಿಸ್ ಎಂಬ ಉಸುಬಿನಲ್ಲಿ ನೌಕೆ ಸಿಕ್ಕಿಕೊಳ್ಳಬಹುದೆಂಬ ಭಯದಿಂದ ಅವರು ನೌಕೆಯ ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಗೆ ನೌಕೆ ತೇಲುವಂತೆ ಬಿಟ್ಟರು.

[18] ಚಂಡಮಾರುತದಿಂದ ನಾವು ಬಹಳ ಹೊಯ್ದಾಡಿದ್ದರಿಂದ ಮರುದಿನ ಅವರು ಸರಕುಗಳನ್ನು ನೌಕೆಯಿಂದ ಹೊರಗೆ ಎಸೆಯಲು ಪ್ರಾರಂಭಿಸಿದರು.

[19] ಮೂರನೆಯ ದಿನ ನೌಕೆಯ ಅಡ್ಡ ಮರವನ್ನು ತಮ್ಮ ಕೈಗಳಿಂದಲೇ ಎತ್ತಿ ಹೊರಗೆ ಎಸೆದರು.

[20] ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ, ನಕ್ಷತ್ರಗಳನ್ನಾಗಲಿ ಕಾಣದೆ ಚಂಡಮಾರುತ ಬೀಸುತ್ತಲೇ ಇದ್ದುದರಿಂದ ನಾವು ತಪ್ಪಿಸಿಕೊಳ್ಳುವ ಎಲ್ಲಾ ನಿರೀಕ್ಷೆಯನ್ನು ಕಳೆದುಕೊಂಡೆವು.

[21] ಬಹಳ ದಿನಗಳವರೆಗೆ ಜನರು ಊಟ ಮಾಡದೇ ಇದ್ದಾಗ, ಪೌಲನು ಅವರ ಮುಂದೆ ಎದ್ದು ನಿಂತುಕೊಂಡು ಹೀಗೆ ಹೇಳಿದನು: “ಸ್ನೇಹಿತರೇ, ನೀವು ಕ್ರೇತದಿಂದ ಮುಂದೆ ಪ್ರಯಾಣ ಮಾಡಬಾರದೆಂದು ಹೇಳಿದ ನನ್ನ ಮಾತಿಗೆ ವಿಧೇಯರಾಗಿದ್ದರೆ ಈ ಕಷ್ಟನಷ್ಟವನ್ನು ತಡೆಯಬಹುದಿತ್ತು.

[22] ಈಗಲಾದರೂ ನೀವು ಧೈರ್ಯ ಕಳೆದುಕೊಳ್ಳಬೇಡಿರಿ ಎಂದು ನಿಮಗೆ ಸಲಹೆ ಕೊಡುತ್ತೇನೆ. ನಿಮ್ಮಲ್ಲಿ ಯಾರಿಗೂ ಪ್ರಾಣ ಹಾನಿಯಾಗುವುದಿಲ್ಲ. ನೌಕೆ ಮಾತ್ರವೇ ನಾಶವಾಗಿ ಹೋಗುವುದು.

[23] ನಾನು ಯಾವ ದೇವರಿಗೆ ಸೇರಿದ್ದೇನೋ ಮತ್ತು ಯಾರನ್ನು ಸೇವೆ ಮಾಡುತ್ತಿದ್ದೇನೋ ಆ ದೇವರ ದೂತನೊಬ್ಬನು ನಿನ್ನೆ ರಾತ್ರಿ ನನ್ನ ಬಳಿ ನಿಂತುಕೊಂಡು,

[24] ‘ಪೌಲನೇ, ಭಯಪಡಬೇಡ. ನೀನು ಕೈಸರನ ಮುಂದೆ ನಿಲ್ಲಬೇಕು. ಇಗೋ, ದೇವರು ನಿನ್ನೊಂದಿಗೆ ಪ್ರಯಾಣ ಮಾಡುತ್ತಿರುವವರ ಪ್ರಾಣಗಳನ್ನು ನಿನಗೆ ಉಳಿಸಿಕೊಟ್ಟಿದ್ದಾರೆ,’ ಎಂದನು.

[25] ಆದ್ದರಿಂದ ಗೆಳೆಯರೇ, ಧೈರ್ಯಗೊಳ್ಳಿರಿ, ನನಗೆ ಹೇಳಿದಂತೆಯೇ ಸಂಭವಿಸುವುದೆಂದು ನಾನು ದೇವರನ್ನು ನಂಬುತ್ತೇನೆ.

[26] ಆದರೆ ನಾವು ಯಾವುದೋ ಒಂದು ದ್ವೀಪದ ದಡದಲ್ಲಿ ಅಪ್ಪಳಿಸುತ್ತೇವೆ,” ಎಂದನು.

[27] ಹದಿನಾಲ್ಕನೇ ರಾತ್ರಿ ಬಂದ ಮೇಲೆ ನಾವು ಆದ್ರಿಯ ಸಮುದ್ರದಲ್ಲಿ ಬಿರುಗಾಳಿಯು ನಮ್ಮನ್ನು ಹೊಯ್ದಾಡಿಸುತ್ತಿದ್ದಾಗ, ಸುಮಾರು ಮಧ್ಯರಾತ್ರಿಯಲ್ಲಿ ನಾವು ನೆಲವನ್ನು ತಲುಪುತ್ತಿದ್ದೇವೆಂದು ನಾವಿಕರು ಭಾವಿಸಿ,

[28] ನೀರಿನ ಆಳವನ್ನು ಪರೀಕ್ಷಿಸಿದಾಗ, ಅದು ನೂರಿಪ್ಪತ್ತು ಅಡಿ ಆಳವೆಂದು ಕಂಡುಕೊಂಡರು. ಸ್ವಲ್ಪ ಸಮಯದ ತರುವಾಯ ಆಳ ನೋಡಿದಾಗ, ಅದು ತೊಂಬತ್ತು ಅಡಿಯಿತ್ತು.

[29] ನಾವು ಬಂಡೆಗಳಿಗೆ ಅಪ್ಪಳಿಸಬಹುದೆಂಬ ಭಯದಿಂದ, ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಕೆಳಗಿಳಿಸಿ, ಬೆಳಗಾಗಲೆಂದು ಹಾರೈಸುತ್ತಿದ್ದೆವು.

[30] ನೌಕೆಯಿಂದ ತಪ್ಪಿಸಿಕೊಂಡು ಹೋಗಲು ನಾವಿಕರು ನೌಕೆಯ ಮುಂಭಾಗದಲ್ಲಿದ್ದ ಲಂಗರುಗಳನ್ನು ಕೆಳಗಿಳಿಸುವ ನೆಪದಿಂದ ದೋಣಿಯನ್ನು ಸಮುದ್ರದಲ್ಲಿ ಇಳಿಸಿದರು.

[31] ಆಗ ಪೌಲನು ಶತಾಧಿಪತಿಗೂ ಸೈನಿಕರಿಗೂ, “ಈ ಜನರು ನೌಕೆಯಲ್ಲಿ ಉಳಿದುಕೊಳ್ಳದಿದ್ದರೆ ನೀವು ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ,” ಎಂದನು.

[32] ಆದ್ದರಿಂದ ಸೈನಿಕರು ದೋಣಿಗೆ ಕಟ್ಟಿದ್ದ ಹಗ್ಗಗಳನ್ನು ಕಡಿದುಹಾಕಿ ಅದು ಸಮುದ್ರದ ಪಾಲಾಗುವಂತೆ ಮಾಡಿದರು.

[33] ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರೂ ಏನನ್ನಾದರೂ ತಿನ್ನಬೇಕೆಂದು ಒತ್ತಾಯ ಮಾಡಿ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಕಾದುಕೊಂಡವರಾಗಿ ಊಟವನ್ನೇ ಮಾಡಿಲ್ಲ.

[34] ಆದ್ದರಿಂದ ಊಟಮಾಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿಯೇ. ನೀವು ಜೀವದಿಂದ ಉಳಿಯಬೇಕು. ಏಕೆಂದರೆ ನಿಮ್ಮ ತಲೆಕೂದಲು ಒಂದಾದರೂ ನಾಶವಾಗುವುದಿಲ್ಲ,” ಎಂದನು.

[35] ಹೀಗೆ ಹೇಳಿದ ನಂತರ ಅವನು ರೊಟ್ಟಿಯನ್ನು ತೆಗೆದುಕೊಂಡು ಅವರೆಲ್ಲರ ಎದುರಿನಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ಅದನ್ನು ಮುರಿದು ತಿನ್ನಲು ಪ್ರಾರಂಭಿಸಿದನು.

[36] ಅವರೆಲ್ಲರೂ ಧೈರ್ಯಹೊಂದಿ ಊಟಮಾಡಿದರು.

[37] ಅಲ್ಲಿ ನೌಕೆಯಲ್ಲಿ ನಾವೆಲ್ಲಾ ಒಟ್ಟು ಇನ್ನೂರ ಎಪ್ಪತ್ತಾರು ಜನರಿದ್ದೆವು.

[38] ಎಲ್ಲರೂ ಸಾಕಷ್ಟು ಊಟಮಾಡಿದ ಮೇಲೆ ಗೋಧಿಯನ್ನು ಸಮುದ್ರದಲ್ಲಿ ಎಸೆದು ನೌಕೆಯ ಭಾರವನ್ನು ಹಗುರಗೊಳಿಸಿದರು.

[39] ಬೆಳಗಾದ ಮೇಲೆ ನೆಲವನ್ನು ಗುರುತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ದಡವನ್ನು ಕಂಡು ಸಾಧ್ಯವಾದರೆ ಅಲ್ಲಿ ನೌಕೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದರು.

[40] ಲಂಗರುಗಳನ್ನು ಸಡಿಲಗೊಳಿಸಿ ಅವುಗಳನ್ನು ಸಮುದ್ರದಲ್ಲಿ ಬಿಟ್ಟರು. ಚುಕ್ಕಾಣಿಗಳಿಗೆ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿದರು. ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ನೌಕೆ ದಡದ ಕಡೆಗೆ ಚಲಿಸುವಂತೆ ಮಾಡಿದರು.

[41] ಆದರೆ ನೌಕೆ ಮಧ್ಯದಲ್ಲಿ ಮರುಳು ದಿಬ್ಬಕ್ಕೆ ಅಪ್ಪಳಿಸಿ ಮುಳುಗಲಿಕ್ಕೆ ಪ್ರಾರಂಭಿಸಿತು. ನೌಕೆಯ ಮುಂಭಾಗ ಮರಳಲ್ಲಿ ಸಿಕ್ಕಿ ಅಲ್ಲಾಡದೇ ನಿಂತಿತು; ಹಿಂಭಾಗ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಮುರಿದುಹೋಯಿತು.

[42] ಆಗ ಕೈದಿಗಳು ಈಜಿಕೊಂಡು ತಪ್ಪಿಸಿಕೊಳ್ಳದಂತೆ ಸೈನಿಕರು ಅವರನ್ನು ಕೊಲ್ಲಲು ಯೋಚನೆ ಮಾಡಿದರು.

[43] ಆದರೆ ಶತಾಧಿಪತಿಯು ಪೌಲನನ್ನು ಉಳಿಸಬೇಕೆಂದು ಬಯಸಿ, ಸೈನಿಕರು ಹಾಗೆ ಮಾಡದಂತೆ ನೋಡಿಕೊಂಡು, ಈಜಲು ಬಲ್ಲವರು ಮೊದಲು ಸಮುದ್ರದಲ್ಲಿ ಜಿಗಿದು ಭೂಮಿಯನ್ನು ತಲುಪಬೇಕೆಂದು ಆಜ್ಞಾಪಿಸಿದನು.

[44] ಕೆಲವರು ಹಲಗೆಗಳ ಮೇಲೆ ಮತ್ತು ಕೆಲವರು ನೌಕೆಯ ತುಂಡುಗಳ ಸಹಾಯದಿಂದ ದಡ ಸೇರಬೇಕೆಂದು ಆಜ್ಞಾಪಿಸಿದನು. ಹೀಗೆ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದರು.

ಅಪೊಸ್ತಲರ ಕೃತ್ಯಗಳು — Chapters