Skip to content
Opens in a new window
Listen to this chapter • 6:07

[1] “ಸಹೋದರರೇ, ತಂದೆಗಳೇ, ಈಗ ನಾನು ನಿಮಗೆ ಮಾಡುವ ಪ್ರತಿವಾದಕ್ಕೆ ಕಿವಿಗೊಡಿರಿ,” ಎಂದು ಪ್ರಾರಂಭಿಸಿದನು.

[2] ಅವನು ತಮ್ಮೊಂದಿಗೆ ಹೀಬ್ರೂ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದಾಗ ಅವರು ಮತ್ತಷ್ಟು ನಿಶ್ಶಬ್ದರಾದರು. ಆಗ ಪೌಲನು:

[3] “ನಾನು ಕಿಲಿಕ್ಯದ ತಾರ್ಸದಲ್ಲಿ ಜನಿಸಿದ ಯೆಹೂದ್ಯನು, ಈ ಪಟ್ಟಣದಲ್ಲಿಯೇ ಬೆಳೆದವನು, ಗಮಲಿಯೇಲನ ಪಾದ ಸನ್ನಿಧಿಯಲ್ಲಿ ನಮ್ಮ ಪಿತೃಗಳ ನಿಯಮವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದೆ. ದೇವರ ವಿಷಯದಲ್ಲಿ, ಇಂದು ನೀವೆಲ್ಲರೂ ಇರುವಂತೆಯೇ ನಾನೂ ಆಸಕ್ತಿವುಳ್ಳವನಾಗಿದ್ದೆನು.

[4] ಈ ಮಾರ್ಗದವರನ್ನು ಸಾಯುವಷ್ಟು ಹಿಂಸಿಸಿದೆನು. ಸ್ತ್ರೀಪುರುಷರೆನ್ನದೆ ಅವರನ್ನು ಬಂಧಿಸಿ ಅವರನ್ನು ಸೆರೆಮನೆಗೆ ಹಾಕಿಸುತ್ತಿದ್ದೆನು,

[5] ಮಹಾಯಾಜಕನೂ ಹಿರಿಸಭೆಯವರೆಲ್ಲರೂ ಇದಕ್ಕೆ ಸಾಕ್ಷಿ. ಅವರಿಂದಲೇ ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ದಂಡಿಸುವುದಕ್ಕಾಗಿಯೂ ಸೆರೆಹಿಡಿದು ಯೆರೂಸಲೇಮಿಗೆ ತರುವುದಕ್ಕಾಗಿಯೂ ದಮಸ್ಕಕ್ಕೆ ಪ್ರಯಾಣಮಾಡಿದೆನು.

[6] “ಸುಮಾರು ಮಧ್ಯಾಹ್ನದ ಸಮಯಕ್ಕೆ ನಾನು ದಮಸ್ಕದ ಹತ್ತಿರದಲ್ಲಿದ್ದೆನು. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕು ನನ್ನ ಸುತ್ತಲೂ ಹೊಳೆಯಿತು.

[7] ನಾನು ನೆಲದ ಮೇಲೆ ಬಿದ್ದೆನು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ?’ ಎಂದು ಒಂದು ಸ್ವರವು ನನಗೆ ಹೇಳುವುದನ್ನು ಕೇಳಿಸಿಕೊಂಡೆನು.

[8] “ನಾನು, ‘ಸ್ವಾಮಿ, ತಾವು ಯಾರು?’ ಎಂದು ಕೇಳಲು, “ ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದು ಅವರು ನನಗೆ ಹೇಳಿದರು.

[9] ನನ್ನ ಜೊತೆಯಲ್ಲಿದ್ದವರು ಬೆಳಕನ್ನು ಕಂಡರು. ಆದರೆ ನನ್ನ ಕೂಡ ಮಾತನಾಡುತ್ತಿದ್ದ ಸ್ವರವು ಅವರಿಗೆ ಕೇಳಿಸಲಿಲ್ಲ.

[10] “ಆಗ ನಾನು, ‘ಸ್ವಾಮಿ, ನಾನೇನು ಮಾಡಬೇಕು?’ ಎಂದು ಕೇಳಲು, “ ‘ಎದ್ದೇಳು, ದಮಸ್ಕದೊಳಗೆ ಹೋಗು, ನೀನು ಏನೇನು ಮಾಡಬೇಕಾಗಿದೆಯೋ ಅದೆಲ್ಲವನ್ನು ನಿನಗೆ ಅಲ್ಲಿ ಹೇಳಲಾಗುವುದು,’ ಎಂದು ಕರ್ತ ಯೇಸು ನನಗೆ ಹೇಳಿದರು.

[11] ಆ ಬೆಳಕಿನ ಉಜ್ವಲ ಪ್ರಕಾಶದ ನಿಮಿತ್ತ ನನ್ನ ಕಣ್ಣು ಕುರುಡಾಗಿದ್ದರಿಂದ ನನ್ನ ಜೊತೆಯಲ್ಲಿದ್ದವರು ನನ್ನ ಕೈಹಿಡಿದು ದಮಸ್ಕದೊಳಗೆ ನಡೆಸಿಕೊಂಡು ಹೋದರು.

[12] “ಅನನೀಯ ಎಂಬ ಹೆಸರಿನವನೊಬ್ಬನು ನನ್ನ ಬಳಿ ಬಂದನು. ಅವನು ಮೋಶೆಯ ನಿಯಮಕ್ಕನುಗುಣವಾಗಿ ಭಕ್ತಿವಂತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ ಸಾಕ್ಷಿಹೊಂದಿದವನೂ ಆಗಿದ್ದನು.

[13] ಅವನು ನನ್ನ ಬಳಿ ನಿಂತುಕೊಂಡು, ‘ಸಹೋದರ ಸೌಲನೇ, ನೀನು ದೃಷ್ಟಿಯನ್ನು ಪಡೆದುಕೋ,’ ಎಂದನು. ಆ ಗಳಿಗೆಯಲ್ಲಿಯೇ ನಾನು ದೃಷ್ಟಿಯನ್ನು ಪಡೆದು ಅವನನ್ನು ಕಂಡೆನು.

[14] “ಆಗ ಅವನು, ‘ನಮ್ಮ ಪಿತೃಗಳ ದೇವರು ತಮ್ಮ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕಾಗಿಯೂ ನೀತಿವಂತ ಆಗಿರುವ ಒಬ್ಬರನ್ನು ಕಾಣುವುದಕ್ಕಾಗಿಯೂ ಅವರ ಬಾಯಿಂದ ಒಂದು ಮಾತನ್ನು ಕೇಳುವುದಕ್ಕಾಗಿಯೂ ನಿನ್ನನ್ನು ಮುಂದಾಗಿಯೇ ನೇಮಿಸಿದ್ದಾರೆ.

[15] ಏಕೆಂದರೆ ನೀನು ಕಂಡದ್ದಕ್ಕೂ ಕೇಳಿದ್ದಕ್ಕೂ ಎಲ್ಲಾ ಜನರಿಗೆ ಅವರ ಸಾಕ್ಷಿಯಾಗಿರುವೆ.

[16] ಈಗ ನೀನು ತಡಮಾಡುವುದೇಕೆ? ಎದ್ದೇಳು, ಅವರ ಹೆಸರನ್ನು ಕರೆದು, ದೀಕ್ಷಾಸ್ನಾನವನ್ನು ಹೊಂದಿ ನಿನ್ನ ಪಾಪಗಳನ್ನು ತೊಳೆದುಕೋ,’ ಎಂದನು.

[17] “ನಾನು ಯೆರೂಸಲೇಮಿಗೆ ಹಿಂದಿರುಗಿ ಬಂದು ದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಆತ್ಮಪರವಶನಾದೆನು.

[18] ಆಗ ಕರ್ತ ಯೇಸು ನನ್ನೊಂದಿಗೆ ಮಾತನಾಡುತ್ತಿರುವುದನ್ನು ಕಂಡೆನು. ಅವರು, ‘ತಡಮಾಡದೆ! ತಕ್ಷಣವೇ ಯೆರೂಸಲೇಮನ್ನು ಬಿಟ್ಟು ಹೊರಟು ಹೋಗು, ಏಕೆಂದರೆ ನೀನು ನನ್ನನ್ನು ಕುರಿತು ಹೇಳುವ ಸಾಕ್ಷಿಯನ್ನು ಅವರು ಸ್ವೀಕರಿಸುವುದಿಲ್ಲ,’ ಎಂದರು.

[19] “ಅದಕ್ಕೆ ನಾನು, ‘ಸ್ವಾಮಿ, ಎಲ್ಲಾ ಸಭಾಮಂದಿರಗಳಲ್ಲಿಯೂ ನಿಮ್ಮಲ್ಲಿ ನಂಬಿಕೆಯಿಟ್ಟವರನ್ನು ಬಂಧಿಸಿ, ಹೊಡೆದು ಸೆರೆಮನೆಗೆ ಹಾಕಿಸುತ್ತಿದ್ದೇನೆಂದು ಈ ಜನರು ಬಲ್ಲರು.

[20] ನಿಮ್ಮ ಸಾಕ್ಷಿಯಾದ ಸ್ತೆಫನನ ರಕ್ತ ಸುರಿಸಿದಾಗ ಅದಕ್ಕೆ ನಾನೂ ಸಮ್ಮತಿ ಕೊಟ್ಟು ಅವನನ್ನು ಕೊಲ್ಲುವವರ ಬಟ್ಟೆಗಳನ್ನು ಕಾಯುತ್ತಾ ನಿಂತಿದ್ದೆನು,’ ಎಂದೆನು.

[21] “ಆಗ ಕರ್ತ ಯೇಸುವು, ‘ಹೋಗು, ನಾನು ಯೆಹೂದ್ಯರಲ್ಲದವರ ಬಳಿಗೆ ನಿನ್ನನ್ನು ದೂರಪ್ರದೇಶಗಳಿಗೆ ಕಳುಹಿಸುವೆನು,’ ಎಂದು ನನಗೆ ಹೇಳಿದರು.”

[22] ಇದನ್ನು ಹೇಳುವವರೆಗೆ ಜನರು ಪೌಲನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಅನಂತರ ಅವರು ತಮ್ಮ ಸ್ವರವೆತ್ತಿ, “ಇಂಥವನನ್ನು ಭೂಲೋಕದಿಂದ ತೊಲಗಿಸಿರಿ! ಇವನು ಜೀವಿಸುವುದಕ್ಕೆ ಯೋಗ್ಯನಲ್ಲ!” ಎಂದು ಕೂಗಿದರು.

[23] ಅವರು ಅರಚುತ್ತ ತಮ್ಮ ಮೇಲಂಗಿಗಳನ್ನು ಹರಿಯುತ್ತ ಗಾಳಿಯಲ್ಲಿ ಮಣ್ಣು ತೂರುತ್ತಿರಲು,

[24] ಸಹಸ್ರಾಧಿಪತಿಯು ಪೌಲನನ್ನು ಸೈನಿಕರ ಪಾಳ್ಯದೊಳಗೆ ಒಯ್ಯಬೇಕೆಂದು, ಅವನನ್ನು ಕೊರಡೆಗಳಿಂದ ಹೊಡೆದು ಯಾವ ಅಪರಾಧಕ್ಕಾಗಿ ಜನರು ಅವನಿಗೆ ವಿರೋಧವಾಗಿ ಅರಚುತ್ತಿದ್ದರು ಎಂಬುದನ್ನು ಅವನಿಂದ ವಿಚಾರಿಸಬೇಕೆಂದು ಆಜ್ಞಾಪಿಸಿದನು.

[25] ಆದರೆ ಅವರು ಅವನನ್ನು ಹೊಡೆಯುವುದಕ್ಕೆ ಬಾರುಕೋಲನ್ನು ಚಾಚಿದಾಗ ಪೌಲನು ಅಲ್ಲಿ ನಿಂತಿದ್ದ ಶತಾಧಿಪತಿಗೆ, “ಅಪರಾಧಿಯೆಂದು ಸಿದ್ಧವಾಗುವ ಮೊದಲೇ ರೋಮ್ ಪೌರನನ್ನು ಕೊರಡೆಗಳಿಂದ ಹೊಡೆಯುವುದು ನ್ಯಾಯವಾದದ್ದೋ?” ಎಂದು ಕೇಳಿದನು.

[26] ಶತಾಧಿಪತಿ ಈ ಮಾತುಗಳನ್ನು ಕೇಳಿದಾಗ, ಸಹಸ್ರಾಧಿಪತಿಯ ಬಳಿಗೆ ಹೋಗಿ ಇದನ್ನು ವರದಿ ಮಾಡಿ, “ಇವನು ರೋಮ್ ಪೌರನು. ಈಗ ನೀನೇನು ಮಾಡಬೇಕೆಂದಿದ್ದೀ?” ಎಂದು ಅವನನ್ನು ಪ್ರಶ್ನಿಸಿದನು.

[27] ಸಹಸ್ರಾಧಿಪತಿಯು ಪೌಲನ ಬಳಿಗೆ ಹೋಗಿ, “ನೀನು ರೋಮ್ ಪೌರನೋ, ಹೇಳು?” ಎಂದು ಕೇಳಿದ್ದಕ್ಕೆ, ಅವನು, “ಹೌದು,” ಎಂದನು.

[28] “ನಾನು ಈ ಪೌರತ್ವ ಪಡೆಯಬೇಕಾದರೆ ಅದಕ್ಕೆ ನಾನು ಬಹಳ ಹಣ ಕೊಡಬೇಕಾಯಿತು,” ಎಂದು ಸಹಸ್ರಾಧಿಪತಿಯು ಹೇಳಲು, ಪೌಲನು, “ಆದರೆ ನಾನು ಹುಟ್ಟಿದ ದಿನದಿಂದಲೇ ರೋಮಿನ ಪೌರನಾಗಿದ್ದೇನೆ,” ಎಂದನು.

[29] ಪೌಲನನ್ನು ಪ್ರಶ್ನಿಸಲು ಬಂದವರು ತಕ್ಷಣವೇ ಬಿಟ್ಟುಹೋದರು. ಮಾತ್ರವಲ್ಲದೆ ಪೌಲನು ರೋಮ್ ಪೌರನೆಂದು ಗ್ರಹಿಸಿದ ಅವನನ್ನು ಬೇಡಿಗಳಿಂದ ಬಂಧಿಸಿದ್ದರಿಂದ ಸಹಸ್ರಾಧಿಪತಿಯೂ ಭಯಪಟ್ಟನು.

[30] ಯೆಹೂದ್ಯರು ಪೌಲನ ವಿರುದ್ಧ ಏಕೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಜಸಂಗತಿಯನ್ನು ಕಂಡುಹಿಡಿಯಲು ಸಹಸ್ರಾಧಿಪತಿಯು ಅಪೇಕ್ಷೆಪಟ್ಟನು. ಮರುದಿನ ಪೌಲನನ್ನು ಬಿಡುಗಡೆ ಮಾಡಿ, ಮುಖ್ಯಯಾಜಕರೂ ನ್ಯಾಯಸಭೆಯೂ ಕೂಡಿಬರಬೇಕೆಂದು ಅಪ್ಪಣೆಮಾಡಿದನು. ಆಮೇಲೆ ಪೌಲನನ್ನು ತಂದು ಅವರ ಎದುರಿನಲ್ಲಿ ನಿಲ್ಲಿಸಿದರು.

ಅಪೊಸ್ತಲರ ಕೃತ್ಯಗಳು — Chapters